ಸರ್ಕಾರಗಳು ಕೊಡಲಿ ಬಿಡಲಿ ಸಾವರ್ಕರ್ ಭಾರತ ರತ್ನವೇ

Swatantrya Veer Vinayak Damodar Savarkar

ಪ್ರೀತಿಯಿಂದ ಬಾಬಾ ಎಂದು ಕರೆಯುತ್ತಿದ್ದ ಅಣ್ಣ ಅಂಡಮಾನಿನ ಕರಿನೀರಿನ ರೌರವ ನರಕದಲ್ಲಿದ್ದಾನೆ. ತಮ್ಮ ಬಾಳ ಕೂಡ ಜೈಲಿಗೆ ಹೋಗುತ್ತಾನೆ. ಮನೆಯ ಜವಬ್ದಾರಿ ಪೂರ್ತಿ ಅತ್ತಿಗೆಯ ಮೇಲೆ ಬೀಳುತ್ತದೆ. ದುಡಿಯುವ ಕೈಗಳಿಲ್ಲದೇ ಕಂಗಾಲಾದ ಅತ್ತಿಗೆ ಇಂಗ್ಲೆಂಡಿನಲ್ಲಿರುವ ಮೈದುನನಿಗೆ ಪತ್ರ ಬರೆದು ಮನೆಯ ಪರಿಸ್ಥಿತಿ ವಿವರಿಸಿ ಭಾರತಕ್ಕೆ ವಾಪಾಸ್ಸಾಗಲು ಹೇಳುತ್ತಾರೆ.

ತಾಯಿ ಸಮಾನರಾದ ಅತ್ತಿಗೆಯ ಪತ್ರಕ್ಕೆ ಉತ್ತರ ಬರೆಯುತ್ತಾ ಮೈದುನ ಹೇಳುತ್ತಾರೆ “ ಪ್ರಿಯ ಅತ್ತಿಗೆ ಪ್ರತಿನಿತ್ಯ ಸಾವಿರಾರು ಹೂಗಳು ಅರಳುತ್ತವೆ ಬಾಡಿ ಹೋಗುತ್ತವೆ, ಅವನ್ನು ಯಾರು ಲೆಕ್ಕಿಸುತ್ತಾರೆ? ಆದರೆ ಶ್ರೀಹರಿಯ ಪೂಜೆಗೆಂದು ಗಜೇಂದ್ರನು ಕಿತ್ತು ಅರ್ಪಿಸಿದ ಆ ತಾವರೆಯೇ ಧನ್ಯ” ಹಾಗೆಯೇ ನನ್ನ ಜೀವನ ಕೂಡ ತಾಯಿ ಭಾರತಿಯ ಸೇವೆಗೆ ಅರ್ಪಿಸುವ ಮೂಲಕ ಮೋಕ್ಷವನ್ನು ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಾರೆ. ಆ ಪತ್ರವನ್ನೋದಿ ಪ್ರೇರೇಪಿತರಾದ ಅವರತ್ತಿಗೆ ಮತ್ತು ಹೆಂಡತಿ ಇಬ್ಬರೂ ಕೂಡ ಒಪ್ಪಿ ನಿಮ್ಮ ಕೆಲಸ ಮುಂದುವರೆಸಿ ಮನೆ ನಾವು ನೋಡಿಕೊಳ್ಳತ್ತೇವೆ ಎಂಬ ಧೈರ್ಯ ನೀಡುತ್ತಾರೆ.

ಹೀಗಾಗಿ ಕ್ರಾಂತಿಕಾರಿಯೋರ್ವನನ್ನು ಹೋರಾಟದಿಂದ ವಿಮುಖಗೊಳಿಸುವ ಬ್ರಿಟಿಷ್ ಸರ್ಕಾರದÀ ಯೋಜನೆಯೇ ತಲೆಕೆಳಗಾಗಿ ಹೋಗಿತ್ತು. ಆ ಕ್ರಾಂತಿಕಾರಿಯೇ ವಿನಾಯಕ ದಾಮೋದರ ಸಾವÀರ್ಕÀರ್


ಸ್ವತಂತ್ರ ಹೋರಾಟದ ಇತಿಹಾಸದಲ್ಲಿ ಎಲ್ಲಾ ಹೋರಾಟವನ್ನು ಒಂದು ತಕ್ಕಡಿಯಲ್ಲಿಟ್ಟರೆ ವೀರ ಸಾವರ್ಕರ್ ಅವರ ಹೋರಾಟದ ತೂಕವೇ ಹೆಚ್ಚು. ಯಾಕಂದರೆ ಸಾವರ್ಕರ್ ಅನೇಕ ಕ್ರಾಂತಿಕಾರಿಗಳ ಮಾರ್ಗದರ್ಶಕರು. ಮದನ್ ಲಾಲ್ ಧಿಂಗ್ರಾ, ಸುಭಾಷ್ ಚಂದ್ರ ಬೋಸರಂತ ಕ್ರಾಂತಿ ಸಿಂಹಗಳಿಗೆ ದಿಗ್ಧರ್ಶನ ಮಾಡಿದ ಮಾಹಾಗುರು. ಎಲ್ಲಕ್ಕಿಂತ ಹೆಚ್ಚಾಗಿ ಹೊರಗಿದ್ದಾಗ ಬ್ರಿಟನ್ ಸರಕಾರಕ್ಕೆ ನೇರಾನೇರಾ ಸಡ್ಡು ಹೊಡೆಯುವ ಸಾವರ್ಕರ್ ಜೈಲಿಗೆ ಹಾಕಿದಾಗ ಬೇಡಿಯನ್ನೇ ಪೆನ್ನು ಗೋಡೆಯನ್ನೇ ಹಾಳೆಯನ್ನಾಗಿ ಮಾಡಿಕೊಂಡು ದೇಶಭಕ್ತಿಯ ಹಾಡುಗಳನ್ನು ಬರೆಯುವ ಮೂಲಕ ಕೋಟ್ಯಾಂತರ ಜನರು ಸ್ವಾತಂತ್ರ್ಯ ಜ್ವಾಲೆಯಲ್ಲಿ ಧುಮುಕುವಂತೆ ಮಾಡಿದವರು. ಇವರು ಕವಿಯೂ ಹೌದು, ಕಲಿಯೂ ಹೌದು!

1857 ರ ಸ್ವಾತಂತ್ರ್ಯ ಸಂಗ್ರಾಮವನ್ನು ಸಿಪಾಯಿ ದಂಗೆ ಎನ್ನುವಾಗ ಅದನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆದು, ಮಹಾ ಗ್ರಂಥವನ್ನೇ ಕಡೆದರು. ಇದು ಕ್ರಾಂತಿಕಾರಿಗಳ ಪಾಲಿನ ಭಗವದ್ಗೀತೆಯಾದರೆ, ಬ್ರಿಟಿಷರ ಎದೆ ನಡುಗಿ ಬಿಡುಗಡೆಗೂ ಮುನ್ನವೇ ಭಾರತ ಮತ್ತು ಇಂಗ್ಲೆಂಡಿನಲ್ಲಿ ನಿಷೇಧ ಮಾಡಿ ಬಿಡುತ್ತಾರೆ. ಬಿಡುಗಡೆಗೂ ಮುನ್ನವೇ ನಿಷೇಧಿಸಬೇಕಾದರೆ ಸಾವರ್ಕರ್ ಅವರ ಲೇಖನಿಗೆ ಬ್ರಿಟನ್ ಸರ್ಕಾರ ಅದೆಷ್ಟು ಬೆದರಿತ್ತು ಯೋಚನೆ ಮಾಡಿ!
ಒಬ್ಬ ವ್ಯಕ್ತಿಗೆ ಎಷ್ಟು ಜೀವಾವಧಿ ಶಿಕ್ಷೆ ಕೊಡಬಹುದು?
ಒಂದೇ. ಅದಕ್ಕಿಂತ ಹೆಚ್ಚು ಕೊಟ್ಟಿದ್ದನ್ನು ಜಗತ್ತು ಕಂಡಿಲ್ಲ, ಸಾವರ್ಕರ್ ಪ್ರಕರಣ ಹೊರತುಪಡಿಸಿ! ತನ್ನ 27 ನೆಯ ವಯಸ್ಸಿಗೆ 25 ವರ್ಷಗಳ ಎರಡೆರಡು ಜೀವಾವಧಿ ಶಿಕ್ಷೆ ವಿಧಿಸುತ್ತದೆ ಬ್ರಿಟಿಷ್ ಸರಕಾರ. ಬ್ರಿಟಿಷ್ ಸಾಮ್ರಾಜ್ಯವನ್ನು ಕಿತ್ತೊಗೆಯಲು ಪಣ ತೊಟ್ಟ ವೀರನಿಗೆ ಕಂಡು ಕೇಳರಿಯದ ಚಿತ್ರಹಿಂಸೆ ಕೊಡಬೇಕೆಂಬುವುದೇ ಈ ಶಿಕ್ಷೆಯ ಉದ್ದೇಶವಾಗಿತ್ತು. ಅದುವೇ ಅಂಡಮಾನಿನ ಸೆಲ್ಯುಲಾರ್ ಜೈಲು. ಕೈದಿಗಳ ಪಾಲಿನ ಡೆಡ್ ಜೋನ್.

ಎಣ್ಣೆಯ ಗಾಣಕ್ಕೆ ಎತ್ತಿನ ಬದಲು ಮನುಷ್ಯರನ್ನು ಹೂಡುವ ಕ್ರೂರ ಶಿಕ್ಷೆ ಇಲ್ಲಿ ನೀಡಲಾಗುತ್ತಿತ್ತು. ಏನಕೇನ ಪ್ರಕಾರೇಣ ದಿನಕ್ಕೆ ನಿಗದಿ ಮಾಡಿದಷ್ಟು ಎಣ್ಣೆ ತೆಗೆಯಲೇ ಬೇಕಿತ್ತು! ತಿರುಗಿ ತಿರುಗಿ ಸುಸ್ತಾದರೂ ತಲೆ ಸುತ್ತಿ ಬಿದ್ದರೂ ಎಚ್ಚರಾದಾದ ಮತ್ತೆ ತಿರುಗುಸಬೇಕಿತ್ತು. ಉರಿ ಬಿಸಿಲು ಅಥವಾ ಜಡಿ ಮಳೆ ಈ ಸಮಯದಲ್ಲಿ ಊಟ ನೀಡಲಾಗುತ್ತಿತ್ತು. ಕಡಿಮೆಯಾಯಿತೆಂದು ಕೇಳುವ ಹಾಗಿಲ್ಲ. ಹೆಚ್ಚಾಯಿತೆಂದು ಚೆಲ್ಲುವ ಹಾಗಿಲ್ಲ. ಅನ್ನ ಚೆಲ್ಲಿದರೆ ವರ್ಷಕ್ಕೊಮ್ಮ ಮನೆಯವರಿಗೆ ಪತ್ರ ಬರೆಯುವ ಅವಕಾಶÀವನ್ನು ರದ್ದು ಮಾಡುವ ಶಿಕ್ಷೆ! ಇನ್ನೂ ಊಟ ರುಚಿಯಂತೂ ಕೇಳುವುದೇ ಬೇಡ. ಅರೆಬೆಂದ ಅನ್ನದಲ್ಲಿ ಹುಳು, ಗೆದ್ದಲು, ಕೊಳೆತ ಹಾವುನ ಚೂರುಗಳು ಸಿಗುತ್ತಿದ್ದವು.

ಇಂತಹ ರೌರವ ನರಕದಲ್ಲೂ ಸಾವರ್ಕರ್ ಎಂಬ ಜೀವ ಕ್ಷಣಕ್ಷಣವೂ ಯೋಚನೆ ಮಾಡುತ್ತಿದ್ದು ತಾಯಿ ಭಾರತಿಯ ಬಗ್ಗೆ ಮಾತ್ರ, ಜೈಲಿನ ಗೋಡೆಗಳ ಮೇಲೆಯೇ ಸಾಹಸ್ರಾರು ಸಾಲುಗಳ ಕವನಗಳನ್ನು ಗೀಚುತ್ತಾರೆ. ಅದನ್ನಲೆಲ್ಲಾ ಸ್ಮರಣೆಯಲ್ಲಿಟ್ಟುಕೊಂಡು ಭಾರತಕ್ಕೆ ಬಂದ ಮೇಲೆ ಪುಸ್ತಕವನ್ನಾಗಿ ಮಾಡುತ್ತಾರೆ. ಹೀಗೆ ಸಾವರ್ಕರ್ ಜೀವನದ ಪುಟ ತಿರುವುತ್ತಾ ಹೋದರೆ ಪುಟಪುಟವೂ ವಿಸ್ಮಯವೇ!

ಅಂಡಮಾನಿನ ಜೈಲಿನಲ್ಲಿ ಮುಸಲ್ಮಾನ ಕೈದಿಗಳು ಹಿಂದೂಗಳ ತಟ್ಟೆಗೆ ಉಗುಳುವ ಮೂಲಕ ಅವರನ್ನು ಮತಾಂತರ ಮಾಡುವ ಧೂರ್ತ ಯತ್ನಕ್ಕೆ ಕೈಹಾಕುತ್ತಾರೆ. ಸಾಲದೆಂಬಂತೆ ಬ್ರಿಟಿಷ್ ಅಧಿಕಾರಿಗಳ ಪ್ರೋತ್ಸಾಹವೂ ಬೇರೆ. ಆಗ ಆ ಮತಾಂತರದ ವಿರುದ್ಧ ಸಟೆದು ನಿಂತು ಶುದ್ಧಿ ಚಳುವಳಿ ಮಾಡಿದವರು ಇದೇ ಸಾವರ್ಕರ್. ಜೈಲಿನಲ್ಲಿದ್ದ ಹಿಂದೂಗಳನ್ನು ಸಂಘಟಿಸಿ ಮತಾತಂತರದ ವಿರುದ್ಧ ಜಾಗೃತಿ ಮೂಡಿಸುತ್ತಾ
“ಆಸಿಂಧು ಸಿಂಧೂ ಪರ್ಯಂತಸ್ಯ ಭಾರತ ಭೂಮಿಕಾ|
ಪಿತೃಭೂಮಿ ಪುಣ್ಯ ಭೂಶ್ಚೈವ ಸ ವೈ ಹಿಂದು ರಿತಿಸ್ಮøತಿಃ||
ಅಂದರೆ ಸಿಂಧುವಿನಿಂದ ಸಾಗರದವರೆಗೆ ಹಬ್ಬಿರುವುದೇ ಈ ಭಾರತವರ್ಷ, ಇಲ್ಲಿ ವಾಸಿಸುವ ಎಲ್ಲರೂ ಹಿಂದುಗಳೇ ಎಂದು ಸಾರುತ್ತಾರೆ. ಮುಂದೆ ಇದನ್ನೇ ಆಧಾರವಾಗಿಟ್ಟು ಕೊಂಡು ಹಿಂದುತ್ವ; ಹೂ ಈಸ್ ಹಿಂದು? ಎನ್ನುವ ಪುಸ್ತಕವನ್ನೇ ಬರೆಯುತ್ತಾರೆ. ಹಿಂದುಯಿಸಂ, ಬೌದ್ಧಿಸಂ, ಜೈನಿಸಂ, ಸಿಖ್ಖಿಸಂ ಇದೆಲ್ಲವೂ ಒಂದೆ ಎಂದು ಪ್ರತಿಪಾದಿಸಿದ ಯುಗ ಪ್ರವರ್ತಕ ಸಾವರ್ಕರ್.
ಮುಂದೆ ಷರತ್ತಿನ ಅಂಡಮಾನಿನ ಕರಿನೀರಿನ ನರಕದಿಂದ ಬಿಡುಗಡೆಯಾದ ಸಾವರ್ಕರ್ ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಾರೆ. ಬೇರೆಲ್ಲಾ ನಾಯಕರುಗಳು ಜಾತಿ ನಾಶದ ಬಗ್ಗೆ ಪುಂಖಾನುಗಟ್ಟಲೆ ಬರೆದು ಭಾಷಣ ಮಾಡಿದರೆ, ಸಾವರ್ಕರ್ ಪತಿತ ಪಾವನ ಮಂದಿರದ ಮೂಲಕ ಎಲ್ಲಾ ಜಾತಿಗಳಿಗೂ ದೇವಸ್ಥಾನಕ್ಕೆ ಮುಕ್ತ ಪ್ರವೇಶ ಕಲ್ಪಿಸುತ್ತಾರೆ. ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಕಾಂಗ್ರೆಸ್ ನ ಮುಸ್ಲಿಂ ತುಷ್ಟೀಕರಣವನ್ನು ಖಂಡತುಂಡವಾಗಿ ವಿರೋಧಿಸುತ್ತಾರೆ. ಗಾಂಧಿ ಪ್ರಣ ೀತ ಕಾಂಗ್ರೆಸ್ಸು ಸ್ವಾತಂತ್ರ್ಯ ಚಳುವಳಿಗೆ ಮುಸ್ಲಿಮರನ್ನು ಬನ್ನಿ ಬನ್ನಿ ಎಂದು ಬೇಡಿಕೊಳ್ಳುತ್ತಿದ್ದರೆ ಸಾವರ್ಕರ್,
“ನೀವು ಬಂದರೆ ನಿಮ್ಮ ಜೊತೆ
ಬರದಿದ್ದರೆ ನಿಮ್ಮನ್ನು ಬಿಟ್ಟು
ವಿರೋಧಿಸಿದರೆ ನಿಮ್ಮನ್ನು ಮೆಟ್ಟಿ
ನಾವು ಸ್ವಾತಂತ್ರ್ಯ ಗಳಿಸುತ್ತೇವೆ ಎಂದಿದ್ದರು.

ಸಾವರ್ಕರ್ ಒಬ್ಬರೇ ಅಲ್ಲ, ಅವರ ಅಣ್ಣ ಅಂಡಮಾನಿನ ಕರಿನೀರಿನ ಶಿಕ್ಷೆಗೆ ಗುರಿಯಾದವರು. ಅವರ ತಮ್ಮ ಕೂಡ ಸ್ವಾತಂತ್ರ್ಯ ಸಮಿಧೆಗೆ ಅರ್ಪಿಸಿಕೊಂಡವರು. ಹೀಗೆ ಇಡೀ ಕುಟುಂಬವೇ ಭಾರತಮಾತೆಗೆ ತಮ್ಮನ್ನು ಅರ್ಪಿಸಿಕೊಂಡರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶವಾಸಿಗಳಿಂದಲೇ ಆ ಕುಟುಂಬ ನೋವು ಅಪಮಾನಗಳಿಗೆ ಒಳಗಾಗಬೇಕಾಯಿತು. ಇವತ್ತು ಇಲಿಯ ಬಾಲಕ್ಕೆ ಬಾಂಬು ಕಟ್ಟಿದೆ ಅಂತ ಪುಂಗಿದವರೆಲ್ಲಾ ಎಲ್ಲಾ ಸರ್ಕಾರಿ ಗೌರವ ಮರ್ಯಾದೆಗಳನ್ನು ಪಡೆದುಕೊಂಡರೆ ಕಂಡು ಕೇಳರಿಯದ ಅಂಡಮಾನಿನ ಕರಿನೀರಿನ ರೌರವಕ್ಕೆ ತುತ್ತಾದ ವೀರ ಸಾವರ್ಕರ್ ಗೆ 1950 ರ ಸ್ವಾತಂತ್ರ್ಯ ದಿನಾಚರಣೆಯ ದಿನ ತನ್ನ ಮನೆಯ ಮೇಲೆ ತಿರಂಗಾ ಹಾರಿಸುವುದಕ್ಕೂ ಅನುಮತಿ ಬೇಡುವ ಅವಮಾನಕ್ಕೆ ಅಂದಿನ ದೈನೇಸಿ ಸಕಾರ ಗುರಿಮಾಡಿತ್ತು!


ಗಾಂಧಿ ಹತ್ಯೆಯ ನೆಪವಿಟ್ಟುಕೊಂಡು ಸಾವರ್ಕರ್ ಎಂಬ ದೈತ್ಯ ಶಕ್ತಿಯನ್ನು ಶಾಶ್ವತವಾಗಿ ಮುಗಿಸುವ ಕೃತಿಮ ಆಲೋಚನೆಗೆ ನೆಹರೂ ಸರ್ಕಾರ ಕೈ ಹಾಕಿದರೆ ಅವರ ಅನುಯಾಯಿಗಳು ಸಾವರ್ಕರ್ ತಮ್ಮನಿಗೆ ಕಲ್ಲು ಹೊಡೆದರು. ಅಲ್ಲಿಂದ ಮುಂದುವರಿದ ಕಾಂಗ್ರೆಸ್ಸಿನ ಪರಂಪರೆ ಇಂದೂ ಕೂಡ ಸಾವರ್ಕರ್ ನ್ನು ಜರಿಯುವುದರಲ್ಲೇ ನಿರತವಾಗಿದೆ. ಇದು ಈ ದೇಶ ಕಂಡ ಚಾರಿತ್ರಿಕ ಅನ್ಯಾಯವೂ ರಾಜಕೀಯ ದುರಂತವೂ ಹೌದು!


ತನ್ನ ವಂಶಾವಳಿಗೆ ತನಗೆ ತಾನೆ ಭಾರತರತ್ನ ಕೊಟ್ಟುಕೊಂಡ ಹೇಸಿಗೆಯನ್ನು ಈ ದೇಶ ಕಂಡಿದೆ. ಆದರೆ ಸಾವರ್ಕರ್ ಅನ್ನುವ ಭಾರತಮಾತೆಯ ನಿಜಪುತ್ರಗೆ ಕೊಡಲು ಇನ್ನೂ ಮೀನಮೇಷ ಎಣ ಸುತ್ತಿರುವುದು ದುರಂತವೇ ಸರಿ. ಆದರೆ ಒಂದಂತೂ ಸತ್ಯ ಸಾವರ್ಕರ್ ಬದುಕೇ ಒಂದು ಹೋರಾಟ. ರಾಷ್ಟ್ರ ಸಮರ್ಪಿತ ಬಾಳು ಬದುಕಿದರÀವರು. ಹೋರಾಟದಲ್ಲಿ ಅವರಿಟ್ಟ ಒಂದೊಂದು ಹೆಜ್ಜೆಯೂ ಮೊದಲುಗಳೇ. ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಕಾಡಿದ ವೀರ ಸಾವರ್ಕರ್ ಸ್ವಾಂತಂತ್ರ್ಯನಂತರ ತನ್ನ ದೇಶದ ಜನರೇ ಕಾಡಿದಾಗ ಅವುಡುಗಚ್ಚಿ ಸಹಿಸಿದರು. ಬದುಕಿನ ಕೊನೆಯವರೆಗೂ
ಜಯೋಸ್ತುತೇ ಶ್ರೀ ಮಹಾನ್ಮಂಗಲೆ
ಶಿವಾಸ್ಪದೇ ಶುಭದೇ|
ಸ್ವತಂತ್ರತೇ ಭಗವತೀ ತ್ವಾಮಹಂ
ಯಶೋಯುತಾಂ ವಂದೇ||
ಎಂದು ಬದುಕಿದವರು ಸಾವರ್ಕರ್. ಅಂದಹಾಗೆ ಸರ್ಕಾರಗಳು ಕೊಡಲಿ ಬಿಡಲಿ ಸಾವರ್ಕರ್ ಭಾರತ ರತ್ನವೇ!
ಈ ಭಾರತ ರತ್ನ ಹುಟ್ಟಿ ಇಂದಿಗೆ 138 ವರ್ಷ.

ಪ್ರಶಾಂತ್ ಅರೇಶಿರೂರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Vir Savarkar, a revolutionary whose legacy cannot be forgotten

Fri May 28 , 2021
Veer Savarkar, a revolutionary whose legacy cannot be forgotten– Shambu Nashipudi, IT Professional The American president Calvin Coolidge, once said, “A nation that forgets its heroes will itself soon be forgotten.” and it reflects in the way we look at our own History. Its more about the missing Nationalist Heroes […]