ಡಾ. ಜನಾರ್ದನ ಹೆಗಡೆಗೆ ಡಿ.ಲಿಟ್ ಪದವಿ

Inbox

ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿರುವ ಕವಿಕುಲಗುರು ಕಾಲಿದಾಸ ಸಂಸ್ಕೃತ ವಿಶ್ವವಿದ್ಯಾಲಯವು ಡಾ. ಜನಾರ್ದನ ಹೆಗಡೆ ಅವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದೆ. ವ್ಯಾಕರಣ ವಿಷಯದಲ್ಲಿ ಇವರು ಮಂಡಿಸಿದ “ಶುದ್ಧಿತತ್ವಬೋಧಿನೀ” (ಸಿದ್ಧಾಂತಕೌಮುದ್ಯಾಃ ತತ್ವಬೋಧಿನೀವ್ಯಾಖ್ಯಾಯಾಂ ಸ್ಥಿತಾನಾಂ ಪ್ರಯೋಗಾಣಾಂ ಸಮರ್ಥನಪ್ರಕಾರಾಣಾಂ ಸಂಗ್ರಹಃ) ಎಂಬ ಪ್ರೌಢಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿಯನ್ನು ನೀಡಿ ಗೌರವಿಸಿದೆ.  

ವಿದ್ವಾನ್ ಜನಾರ್ದನ ಹೆಗಡೆ ಅವರು “ಸಂಭಾಷಣ ಸಂದೇಶಃ” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು. ವಿದ್ವಾನ್ ಜನಾರ್ದನ ಹೆಗಡೆಯವರು ಸಂಸ್ಕೃತಭಾಷೆಯನ್ನು ಜನಭಾಷೆಯಾಗುವಲ್ಲಿ ಅನವರತವೂ ಶ್ರಮಿಸುತ್ತಿರುವ “ಸಂಸ್ಕೃತ ಭಾರತಿ” ಸಂಸ್ಥೆಯ ಹಿರಿಯ ಸಂಸ್ಥಾಪಕರಲ್ಲೊಬ್ಬರು.

ಡಾ. ಜನಾರ್ದನ ಹೆಗಡೆ

ಇವರು ಸಂಸ್ಕೃತ ಭಾಷಾಭ್ಯಾಸ ಹಾಗೂ ವ್ಯಾಕರಣ ಕಲಿಕೆಗೆ ಸಂಬಂಧಿಸಿದಂತೆ ಸುಮಾರು 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಮಾನ್ಯ ವ್ಯಾಕರಣಾಭ್ಯಾಸಕ್ಕೆ ಬೇಕಾದ ‘ಅಭ್ಯಾಸದರ್ಶಿನಿ’, ‘ಶುದ್ಧಿಕೌಮುದಿ’ಯಿಂದ ಆರಂಭಿಸಿ ಪ್ರೌಢ ಗ್ರಂಥಗಳಾದ ‘ಭಾಷಾಪಾಕಃ’, ‘ಧಾತುರೂಪನಂದಿನೀ’, ‘ಕೃದಂತರೂಪನಂದಿನೀ’ ಮುಂತಾದವು ಇವರ ಇತ್ತೀಚಿನ ಕೃತಿಗಳು.

ಸಮಕಾಲೀನ ಸಂಸ್ಕೃತ ಸಾಹಿತ್ಯಸೃಷ್ಟಿಯಲ್ಲಿಯೂ ಇವರದು ಗಣನೀಯ ಸೇವೆ. ಸಂಸ್ಕೃತ ಚಂದಮಾಮಾವನ್ನು ಸುಮಾರು 25 ವರ್ಷ ನಡೆಸಿದ ಹೆಗ್ಗಳಿಕೆ ಇವರದು. ಕತೆ ಕಾದಂಬರಿ ಮುಂತಾದ ಸಾಹಿತ್ಯಪ್ರಕಾರಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಬಾಲಕಥಾಸಾಹಿತ್ಯಪ್ರಕಾರದಲ್ಲಿ ಇವರು ರಚಿಸಿದ “ಬಾಲಕಥಾಸಪ್ತತಿಃ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ “ಬಾಲ ಸಾಹಿತ್ಯ ಪುರಸ್ಕಾರ” (2015) ಸಂದಿದೆ. ಕನ್ನಡದ ಪ್ರಖ್ಯಾತ ಕಾದಂಬರಿಕಾರರಾದ ಶ್ರೀ ಎಸ್.ಎಲ್.ಭೈರಪ್ಪನವರ ‘ಧರ್ಮಶ್ರೀ’ ಕಾದಂಬರಿಯ ಸಂಸ್ಕೃತಾನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ “ಅನುವಾದ ಪುರಸ್ಕಾರ” (2005) ಲಭಿಸಿದೆ. ಇದಿಷ್ಟೇ ಅಲ್ಲದೇ, ದೃಷ್ಟಿದಾನ, ವಂಶವೃಕ್ಷ, ಕನಕ ಮುಸುಕು, ಸಿಂಹಾವಲೋಕನ, ಇವರು ಅನುವಾದಿಸಿರುವ ಕಾದಂಬರಿಗಳಲ್ಲಿ ಪ್ರಮುಖವಾದವು. ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಧಿಕಾರದ “ಗೌರವ ಪುರಸ್ಕಾರ” (2011-12), ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ “ಪ್ರೊ. ಎಂ. ಹಿರಿಯಣ್ಣ ಸಂಸ್ಕೃತ ಗ್ರಂಥ ಪುರಸ್ಕಾರ” (2011), ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠ (ಮಾನಿತ ವಿಶ್ವವಿದ್ಯಾಲಯ)ದಿಂದ “ಸಂಸ್ಕೃತ ಸೇವಾವತಂಸ” ಬಿರುದು (2000), ಗುಜರಾತಿನ ಶ್ರೀ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದಿಂದ “ಗೌರವ ಡಿ.ಲಿಟ್” ಉಪಾಧಿ (2014) ಮುಂತಾದವು ಅವರ ಪ್ರತಿಭೆ ಹಾಗೂ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಂತಿವೆ.

ಸಂಸ್ಕೃತಶಿಕ್ಷಕರ ಪ್ರಶಿಕ್ಷಣ ಕ್ಷೇತ್ರದಲ್ಲಿಯೂ ಇವರ ಸೇವೆ ಅಪಾರ. ಸುಮಾರು 30 ವರ್ಷಗಳಿಂದಲೂ ಭಾರತದ ವಿವಿಧ ರಾಜ್ಯಗಳಲ್ಲಿ ಹಾಗೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಮೆರಿಕಾ ಮುಂತಾದ ಹೊರದೇಶದಲ್ಲಿ ನಡೆದ ಶಿಕ್ಷಕ ಪ್ರಶಿಕ್ಷಣ ವರ್ಗಗಳಲ್ಲಿ ಸತತವಾಗಿ ಸಂಸ್ಕೃತ ಪ್ರಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್ ಮುಂತಾದ ಅನೇಕ ಸಮಿತಿಗಳ ಸದಸ್ಯರೂ ಆಗಿರುವ ಇವರು ಪ್ರಸ್ತುತ, “ಸಂಭಾಷಣ ಸಂದೇಶ:” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಭಾರತ ಕಂಡ ಶ್ರೇಷ್ಠ ಕ್ರಾಂತಿಕಾರಿ ಭಾಯಿ ಪರಮಾನಂದರು

Wed Dec 8 , 2021
ಭಾಯಿ ಪರಮಾನಂದರು.. ಭಾರತ ಕಂಡ ಶ್ರೇಷ್ಠ ಕ್ರಾಂತಿಕಾರಿ. ಪಂಜಾಬಿನ ಝೇಲಮ್ಮಿನಲ್ಲಿ ಹುಟ್ಟಿದ ಇವರು, ತಂದೆ ತಾರಾ ಚಂದ್ ಮೋಹ್ಯಾಲರ ಕಾರಣದಿಂದ ಬಹಳ ಕಿರಿಯ ವಯಸ್ಸಿನಲ್ಲೇ ಆರ್ಯ ಸಮಾಜದ ಪ್ರಭಾವಕ್ಕೆ ಒಳಪಡುತ್ತಾರೆ. ಆರ್ಯ ಸಮಾಜದ ಕಾರ್ಯಗಳ  ಪ್ರಚಾರಕ್ಕಾಗಿ 1905ರ ನಂತರದಲ್ಲಿ  ಆಫ್ರಿಕಾ, ಅಮೇರಿಕಾ ಖಂಡಗಳಲ್ಲೂ ಅನೇಕ ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಹಾಗಿರುವಾಗಲೇ ಕೇವಲ ಧಾರ್ಮಿಕ ಸುಧಾರಣೆ ಮಾತ್ರವಲ್ಲ ರಾಷ್ಟ್ರದ ಮುಕ್ತಿಯೂ  ಆರ್ಯ ಸಮಾಜದ ಜವಾಬ್ದಾರಿ ಎಂಬುದನ್ನ ಮನಗಂಡ ಪಂಜಾಬಿನ ಆರ್ಯ […]