ಸ್ವದೇಶೀ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

ಹಲವು ದಶಕಗಳ ಹಿಂದೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ಭಾರತದ ಆರ್ಥಿಕ, ರಾಜತಾಂತ್ರಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿ ಸ್ವದೇಶೀ ಚಿಂತನೆಯ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್.

ಅದು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಮಾರುಕಟ್ಟೆಯಲ್ಲಿ ವಿಝ್ರಂಭಿಸುತ್ತಿದ್ದ ಸಮಯ. ಆಧುನಿಕ ಜೀವನ ಶೈಲಿ, ಪ್ರತಿಭಾ ಪಲಾಯನ, ಭಾರತದ ವಿದೇಶೀ ಸಾಲ, ರೂಪಾಯಿ ಅಪಮೌಲ್ಯ, ಕಾಳಧನ ಮತ್ತು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳಿಂದಾಗುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆರಂಭಿಸಿದರು.


ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ಬದಲಾಗುತ್ತಿದ್ದ ಪರಿಣಾಮ ಮತ್ತು ಅಭಿವೃದ್ಧಿಗೆ ಮಾರಕವೆನಿಸಿದ್ದ ಪ್ರತಿಭಾ ಪಲಾಯನದಂತಹ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಮುಂದಾದರು.
ಉತ್ತರ ಪ್ರದೇಶದ ಆಲಿಘಢ ಸಮೀಪದ ಗ್ರಾಮವೊಂದರ ರೈತರ ಕುಟುಂಬದಲ್ಲಿ ಜನಿಸಿದ ರಾಜೀವ್ ಸ್ವಗ್ರಾಮದಲ್ಲಿ ಆರಂಭಿಕ ಶಿಕ್ಷಣ ಪಡೆದರು.


ಮುಂದೆ ಎಲೆಕ್ಟ್ರಾನಿಕ್ ಎಂಜಿನೀಯರಿಂಗ್ ಪದವಿಯೊಂದಿಗೆ ಸಂಶೋಧನೆಯಲ್ಲೂ ಉನ್ನತ ಶ್ರೇಣಿ ಪಡೆದರು.
ಭಾರತದ ಪ್ರತಿಷ್ಠಿತ ಸಿ.ಎಸ್.ಐ.ಆರ್. ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ ಅವರಿಗೆ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದಿಂದ ಬದಲಾಗುತ್ತಿದ್ದ ದೇಶದ ಸ್ಥಿತಿ ಚಿಂತೆಗೀಡುಮಾಡಿತು.


ರಾಜೀವರು ವೃತ್ತಿಯನ್ನು ಕೈಬಿಟ್ಟು, ಗುರುಗಳಾದ ಶ್ರೀ ಧರ್ಮಪಾಲ್ ಮತ್ತು ಶತಾಯುಷಿ ಶ್ರೀ ಸುಧಾಕರ ಚತುರ್ವೇದಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರದ ಪುರ್ನನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.


ಹಲವಾರು ದೇಶಗಳಿಗೆ ಭೇಟಿಯಿತ್ತ ಅವರು ಇಂಗ್ಲೆಂಡಿನ ಬ್ರಿಟಿಷರ ಲೈಬ್ರರಿಯಲ್ಲಿದ್ದ ಭಾರತದ ಇತಿಹಾಸದ ದಾಖಲೆಗಳ ಸಂಶೋಧನೆ ಮಾಡಿದರು. ಸ್ವಾತಂತ್ರ ಪೂರ್ವ ಮತ್ತು ನಂತರದ ಭಾರತದ ಇತಿಹಾಸ, ಅರ್ಥವ್ಯವಸ್ಥೆ, ಶಿಕ್ಷಣ ವ್ಯವಸ್ಥೆಗಳನ್ನು ಕುರಿತು ಸಂಶೋಧನೆ ಮಾಡಿದರು.


ಸ್ವದೇಶೀ ಸಂಘಟನೆ “ಆಚಾದೀ ಬಚಾವೋ ಅಂದೋಲನ” ಸಂಸ್ಥೆಯ ಮುಖ್ಯ ಪ್ರಭಾರಿಗಳಾಗಿ ಜವಾಬ್ದಾರಿ ಹೊತ್ತರು.
ಸಾಲದ ಬಾಧೆಗೆ ತುತ್ತಾದ ರೈತರ ಆತ್ಮಹತ್ಯೆಗೆ ಪರಿಹಾರ ಕಂಡುಕೊಳ್ಳುತ್ತಾ ವಿಶ್ವ ವ್ಯಾಪಾರ ಒಕ್ಕೂಟದ ನಿಲುವಿನ ವಿರುದ್ಧ, ಗ್ಯಾಟ್ ಒಪ್ಪಂದದ ವಿರುದ್ಧ, ವಿದೇಶೀ ಕಂಪನಿಗಳ ವಿರುದ್ಧ ವೈಚಾರಿಕ ಸಮರ ಸಾರಿದರು.


ಬರಹ ಮತ್ತು ಪ್ರವಚನಗಳಿಂದ ಸ್ವದೇಶೀ ಚಿಂತನೆ ಮತ್ತು ಭಾರತೀಯತೆಯ ಜಾಗೃತಿ ಮೂಡಿಸಲಾರಂಭಿಸಿದರು.
ರಾಸಾಯನಿಕಯುಕ್ತ ಕೀಟನಾಶಕ, ಎಂಡೋಸಲ್ಫಾನ್, ಫಾಸ್ಟ್ ಫುಡ್, ಪೆಪ್ಸಿ-ಕೋಕ್‌ಗಳ ಷಡ್ಯಂತ್ರವನ್ನು ಬಯಲಿಗೆಳೆದರು.
ದೇಶದ ಉದ್ದಗಲಕ್ಕೂ ಸಂಚರಿಸಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಮ್ಮ ಉಪನ್ಯಾಸಗಳಿಂದ ಎಲ್ಲರನ್ನೂ ಎಚ್ಚರಿಸಿದರು.
ಗಾಂಧೀಜಿಯವರ ಖಾದೀ-ಗ್ರಾಮ ಸ್ವರಾಜ್ಯಯ ಚಿಂತನೆಗಳು ಎಂದಿಗೂ ಪ್ರಸ್ತುತವೆಂದರು.


ಸಾವಯವ ಕೃಷಿ, ಮತ್ತು ಗೋಸಂಪತ್ತಿನ ರಕ್ಷಣೆಯೊಂದಿಗೆ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಾಮ, ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆಯ ಸಂಶೋಧನೆ ಮಾಡಿದರು.
ಬ್ರಿಟಿಷರ ಕಾಲದಿಂದ ಇರುವ ಕಾನೂನುಗಳು, ತೆರಿಗೆ ಪದ್ಧತಿಯ ಬದಲಾವಣೆಗಳ ಕುರಿತು ಮಾಹಿತಿ, ಸಂಪತ್‌ಶಕ್ತಿಗಳ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟರು.


ಪ್ರತಿಭಾ ಪಲಾಯನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಗೋವುಗಳು ಪರಿವಾರದ ಸದಸ್ಯರಂತೆ, ಗೋರಕ್ಷಣೆ ನಮ್ಮ ಹೊಣೆಯೆಂದರು.


ನಮ್ಮ ಪುರಾಣ, ಇತಿಹಾಸ ಮತ್ತು ಪ್ರಾಚೀನ ಕಾಲದ ದೊರೆಗಳಿಂದ ಹಿಡಿದು ಭಾರತದಲ್ಲಿದ್ದ ಬಹಾದೂರ್ ಶಾ: ಝಫರ್ ಕಾಲದಲ್ಲಿ ಗೋಹತ್ಯೆ ಇರಲಿಲ್ಲವೆಂದು ಪ್ರತಿಪಾದಿಸಿದರು. ಆದರೆ ಸ್ವತಂತ್ರ ಭಾರತದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಆಗ್ರಹಿಸಿದರು.


ವಿದೇಶೀ ಬ್ಯಾಂಕುಗಳಲ್ಲಿರುವ ಕಪ್ಪು ಹಣ ವಾಪಸಾತಿಗಾಗಿ ಹಸ್ತಾಕ್ಷರ ಸಂಗ್ರಹ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಾದಿಯಲ್ಲಿ ಲೋಕ್‌ಪಾಲ್‌ನಂತಹ ವ್ಯವಸ್ಥೆ, ನಾಗರೀಕರ ಹಕ್ಕುಗಳ ಕುರಿತು “ರೈಟ್ ಟು ರಿಕಾಲ್”ನಂತಹ ಆಲೋಚನೆಗಳನ್ನಿಟ್ಟರು.
ದೇಶದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ತಮ್ಮ ದಿಟ್ಟ ನಿಲುವುಗಳಿಂದ ಸಮಸ್ಯೆಯ ಮೂಲವನ್ನು ಎಳೆ ಎಳೆಯಾಗಿ ವಿಷ್ಲೇಶಿಸುವ ಚಾಕಚಕ್ಯತೆ ಅವರಲ್ಲಿತ್ತು.


ಉಪನ್ಯಾಸಗಳಿಂದ ಯುವಜನತೆಯ ಮನಸ್ಸನ್ನು ಆಕರ್ಷಿಸಿದ್ದ ಸ್ವದೇಶೀ ಐಕಾನ್ ರಾಜೀವ್ ದೀಕ್ಷಿತರು ಯುವಕರಿಗೆ ತಮ್ಮ ದೇಶವನ್ನು ನಾಡು-ನುಡಿಯನ್ನು ಪ್ರೀತಿಸಲು ಕಲಿಸಿದರು. ಅಪರಿಮಿತ ಮೇಧಾಶಕ್ತಿ, ಸರಳತೆ, ವಿಷಯ ಮಂಡನೆಯ ಗಾಂಭೀರ್ಯ, ಪ್ರವಾಸಗಳಲ್ಲಿ ಸ್ಥಳೀಯ ಭಾಷೆಯ ಬಳಕೆಯೊಂದಿಗೆ ಸರಳತೆ ಅವರ ಮೇರು ವ್ಯಕ್ತಿತ್ವದ ಕುರುಹುಗಳು.


ಬಾಬಾ ರಾಮದೇವರ “ಭಾರತ್ ಸ್ವಾಭಿಮಾನ್ ಟ್ರಸ್ಟ್”ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡು ಸತತವಾಗಿ ಭಾರತದೆಲ್ಲೆಡೆ ಸಂಚರಿಸಿ ತಮ್ಮ ಜ್ಞಾನದ ದರ್ಶನ ನೀಡಿದರು.
ನವೆಂಬರ್ ೩೦, ೨೦೧೦ರಂದು ಛತ್ತೀಸಗಢದ ಭಿಲಾಯ್ ಸಮೀಪದಲ್ಲಿ ಭಾರತ ಸ್ವಾಭಿಮಾನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾಗ ವಿಧಿವಶರಾದರು.


ಭಾರತವನ್ನು ಭ್ರಷ್ಟಾಚಾರಮುಕ್ತ ಸ್ವಾವಲಂಬೀ, ಸಧೃಢ ಮತ್ತು ಸ್ವದೇಶೀ ದೇಶವನ್ನಾಗಿಸುವ ಕನಸು ಅವರದಾಗಿತ್ತು.
ರಾಜೀವ ದೀಕ್ಷಿತರ ಜನ್ಮದಿನ ನವೆಂಬರ್ ೩೦ “ಸ್ವದೇಶೀ ದಿನ” ಎಂದು ಆಚರಿಸಲಾಗುತ್ತದೆ.

ಮಯೂರಲಕ್ಷ್ಮಿ

ಪ್ರಾಧ್ಯಾಪಕರು, ಮೈಸೂರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಡಾ. ಜನಾರ್ದನ ಹೆಗಡೆಗೆ ಡಿ.ಲಿಟ್ ಪದವಿ

Mon Dec 6 , 2021
Inbox ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿರುವ ಕವಿಕುಲಗುರು ಕಾಲಿದಾಸ ಸಂಸ್ಕೃತ ವಿಶ್ವವಿದ್ಯಾಲಯವು ಡಾ. ಜನಾರ್ದನ ಹೆಗಡೆ ಅವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದೆ. ವ್ಯಾಕರಣ ವಿಷಯದಲ್ಲಿ ಇವರು ಮಂಡಿಸಿದ “ಶುದ್ಧಿತತ್ವಬೋಧಿನೀ” (ಸಿದ್ಧಾಂತಕೌಮುದ್ಯಾಃ ತತ್ವಬೋಧಿನೀವ್ಯಾಖ್ಯಾಯಾಂ ಸ್ಥಿತಾನಾಂ ಪ್ರಯೋಗಾಣಾಂ ಸಮರ್ಥನಪ್ರಕಾರಾಣಾಂ ಸಂಗ್ರಹಃ) ಎಂಬ ಪ್ರೌಢಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿಯನ್ನು ನೀಡಿ ಗೌರವಿಸಿದೆ.   ವಿದ್ವಾನ್ ಜನಾರ್ದನ ಹೆಗಡೆ ಅವರು “ಸಂಭಾಷಣ ಸಂದೇಶಃ” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು. ವಿದ್ವಾನ್ ಜನಾರ್ದನ ಹೆಗಡೆಯವರು ಸಂಸ್ಕೃತಭಾಷೆಯನ್ನು […]