ವಿಕ್ಷಿಪ್ತ ಮನಸ್ಸಿನ ಅಲೆಸ್ಟರ್ ಕ್ರೌಲಿ ಕಥೆಯಲ್ಲಿ ಆನಂದ ಕುಮಾರಸ್ವಾಮಿಗೆ ಮರಣದಂಡನೆ?!

ಆನಂದ ಕುಮಾರಸ್ವಾಮಿಗೆ ಮರಣದಂಡನೆ

ಆಗಸ್ಟ್ ೨೨ – ಇಂದು ಆನಂದ ಕುಮಾರಸ್ವಾಮಿಯವರು ಹುಟ್ಟಿದ ದಿನ. ಭಾರತೀಯ ಕಲಾತತ್ತ್ವವನ್ನು ವಿದೇಶಿ ವಿದ್ವದ್ದ್ವಲಯಕ್ಕೆ ಅವರಷ್ಟು ಪರಿಣಾಮಕಾರಿಯಾಗಿ ತಲುಪಿಸಿದವರು ವಿರಳ. ಸಾವಿರಕ್ಕೂ ಮಿಕ್ಕಿ ವಿದ್ವಲ್ಲೇಖನಗಳನ್ನು ಬರೆದಿರುವ ಸ್ವಾಮಿಯವರ ವೈಯುಕ್ತಿಕ ಜೀವನದ ಬಗ್ಗೆ ತೀರ ಕಡಿಮೆ ಮಾಹಿತಿ ದೊರೆಯುತ್ತದೆ.

ಅವರ ಬಗ್ಗೆ ಶ್ರಿಲಂಕಾದ ರೋಹನ್ ಪಿಯದಾಸ್ ಮತ್ತು ಬಂಗಾಳದ ಚಿದಾನಂದ ದಾಸ್‌ಗುಪ್ತಾ ಸಕ್ಷ್ಯಚಿತ್ರಗಳನ್ನು ಮಾಡಿದ್ದಾರಾದರೂ ಅವುಗಳಲ್ಲೂ ಅವರ ಪಾಂಡಿತ್ಯ, ಬರಹಗಳ ಬಗ್ಗೆಯೇ ಚರ್ಚೆ ಇದೆ.

Ananda Coomaraswamy

ಗುಪ್ತಾರವರು ಚಿತ್ರ ನಿರ್ಮಿಸುವಾಗ ತಮಗಾದ ಅನುಭವಗಳನ್ನು ಬರೆದಿದ್ದಾರೆ. ಸ್ವಾಮಿಯವರ ಬಗ್ಗೆ ಮಾಹಿತಿ ಕಲೆಹಾಕಲು ತುಂಬ ಕಷ್ಟವಾಯಿತಂತೆ. ಅಲ್ಲದೆ ಚಿತ್ರ ನಿರ್ಮಾಣಕ್ಕೆ ಹೂಡಿಕೆದಾರರನ್ನು ಹುಡುಕುತ್ತಿದ್ದಾಗ ಅಂಥ ನೀರಸ ವ್ಯಕ್ತಿಯ ಬಗ್ಗೆ ಚಿತ್ರ ಏಕೆ ಮಾಡುತ್ತೀರಿ ಎಂಬ ಪ್ರಶ್ನೆ ಎದುರಾಗುತ್ತಿತ್ತಂತೆ. ಆಗೆಲ್ಲಾ ಗುಪ್ತಾರವರು ‘ನೋಡಲು ಸುಂದರನಾದ, ಹೆಂಗಳೆಯರ ಗುಂಪುಗಳಲ್ಲಿ ಜನಪ್ರಿಯನಾದ, ನಾಲ್ಕು ಬಾರಿ ಮದುವೆಯಾದ ವ್ಯಕ್ತಿ ನೀರಸನಾಗಿರುವುದಕ್ಕೆ ಹೇಗೆ ಸಾಧ್ಯ’ ಎಂದು ಯೊಚಿಸುತ್ತಿದ್ದರಂತೆ.

ಕನ್ನಡದಲ್ಲಿ ಕುಮಾರಸ್ವಾಮಿಯವರ ಬಗ್ಗೆ ಕೆಲವು ಪುಸ್ತಕಗಳು ಬಂದಿವೆ. ಭೈರಪ್ಪನವರು ತಮ್ಮ ಧರ್ಮಶ್ರೀ ಕೃತಿಯನ್ನು ಸ್ವಾಮಿಯವರಿಗೆ ‘ಭಕ್ತಿ ಪೂರ್ವಕವಾಗಿ’ ಅರ್ಪಿಸಿದ್ದಾರೆ. ಅವರ ವಂಶವೃಕ್ಷದಲ್ಲಿ ಬರುವ ಸದಾಶಿವರಾಯರ ಪಾತ್ರ ಸ್ವಲ್ಪ ಮಟ್ಟಿಗೆ ಸ್ವಾಮಿಯವರ ಜೀವನವನ್ನಧರಿಸಿದಂತೆ ತೋರುತ್ತದೆ.

ಸಾರ್ವಜನಿಕ ವಲಯದಲ್ಲಿ ಜನಪ್ರಿಯರಲ್ಲದ ಕುಮಾರಸ್ವಾಮಿಯವರ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲದಿರುವುದು ಆಶ್ಚರ್ಯವೇನಲ್ಲ. ಅಲ್ಲದೆ ಕುಮಾರಸ್ವಾಮಿ ತಮ್ಮ ಜೀವನದ ಬಗ್ಗೆ ಬರೆಯುವುದಾಗಲಿ ಬರೆಸುವುದಾಗಲಿ ‘ಅಸ್ವರ್ಗ್ಯ’ ಎಂದು ಭಾವಿಸಿದ್ದರು.

ಇಂಥ ಸ್ವಾಮಿಯವರ ಜೀವನದ ಕೆಲವು ಘಟನೆಗಳನ್ನಾಧರಿಸಿ ಅವರ ಸುತ್ತಲೇ ಹೆಣೆದಿರುವ ಕಥೆಯೊಂದು ನೂರು ವರ್ಷಗಳಷ್ಟು ಹಿಂದೆಯೇ ಪ್ರಕಟವಾಗಿತ್ತೆನ್ನುವುದ ಸೋಜಿಗದ ಸಂಗತಿ. ಆ ಕಥೆ ಏನೆಂದು ತಿಳಿಯುವ ಮೊದಲು ಅದರ ಹಿನ್ನೆಲೆಯನ್ನು ಸ್ವಲ್ಪ ನೋಡೋಣ.

ಜಗತ್ತಿನಲ್ಲಿ ಹಲವಾರು ಜನ ಸತ್ಯಶೋಧನೆಗಾಗಿ ವಾಮಾಚಾರ, ಅತೀಂದ್ರಿಯ ಶಕ್ತಿಗಳ ಆರಾಧನೆ ಇತ್ಯಾದಿಗಳನ್ನು ಮಾಡಿಕೊಂಡಿರುವುದು ವಿದಿತ. ಈ ವಿಷಯಗಳಲ್ಲಿ ಎಲ್ಲರಿಗೂ ಕುತೂಹಲವಿರುತ್ತದಾದರೂ ಅದರ ಪ್ರಯೋಗಗಳಲ್ಲಿ ತೊಡಗಲು ಹುಂಬ ಧೈರ್ಯ ಬೇಕಾಗುವುದರಿಂದ ಆಚರಿಸುವವರು ವಿರಳ. ಅಂಥ ವಿರಳರಲ್ಲಿ ಅಲೆಸ್ಟರ್ ಕ್ರೌಲಿ ಒಬ್ಬ. ಕಳೆದ ಶತಮಾನದ ಅತಿ (ಕು)ಪ್ರಸಿದ್ಧ ಅಕಲ್ಟಿಸ್ಟ್ (occultist) ಎಂದರೆ ಇವನೇ ಇರಬಹುದು. ಜೀವನದುದ್ದಕ್ಕೂ ಹಲವಾರು ತಂತ್ರ, ಜಾದು, ವಾವಾಚರಗಳಲ್ಲಿ ಪ್ರಯೋಗಗಳನ್ನು ಮಾಡುತ್ತಾ, ಅತೀಂದ್ರಿಯತ್ವದ ಬೆನ್ನು ಹತ್ತಿ ಜಗತ್ತಿನೆಲ್ಲೆಡೆ ತಿರುಗುತ್ತಾ, ಅದರ ಬಗ್ಗೆ ಬರೆಯುತ್ತಾ, ತನ್ನದೇ ಒಂದು ಮತವನ್ನೂ ಸ್ಥಾಪನೆ ಮಾಡಿದ್ದಾತ ಇವನು.

ಅಲೆಸ್ಟರ್ ಕ್ರೌಲಿ

ಇಂಥ ವಿಷಯಗಳ ಬಗ್ಗೆ ಆಸಕ್ತಿ ಇರುವವರು ಭಾರತಕ್ಕೆ ಬರದಿದ್ದರೆ ಹೇಗೆ? ಹಾಗೆ ಇವನೂ ಭಾರತಕ್ಕೆ ಬಂದು ಶೈವತಂತ್ರಗಳನ್ನು ಅಭ್ಯಾಸ ಮಾಡಿದ. ನಂತರ ಬೌದ್ಧಧರ್ಮದ ಬಗ್ಗೆ ತಿಳಿಯಲು ಶ್ರೀಲಂಕಾಗೆ ಹೋದ. ಅಲ್ಲಿ ಇವನಿಗೆ ಲಂಕಾದ ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಪ್ರಭಾವಿಯಾಗಿದ್ದ ಪೊನ್ನಂಬಲಂ ಮನೆತನದ ಪರಿಚಯವಾಯಿತು. ಆ ಮನೆತನದಲ್ಲಿ ಕುಮಾರಸ್ವಾಮಿಯೂ ಒಬ್ಬರು. ಕ್ರೌಲಿ ತನ್ನ ಆತ್ಮ ಕಥೆಯಲ್ಲಿ ಸ್ವಾಮಿಯೊಂದಿಗಿನ ತನ್ನ ನಂಟಿನ ಬಗ್ಗೆ ಬರೆದಿದ್ದಾನೆ.

೧೯೧೬ ರ ಹೊತ್ತಿಗೆ ಕುಮಾರಸ್ವಾಮಿಯವರು ತಮ್ಮ ಎರಡನೇ ಹೆಂಡತಿ ಆಲಿಸ್ ಳೊಡನೆ ಅಮೆರಿಕಾಗೆ ಬರುತ್ತಾರೆ. ವಿದೇಶಿಯಳಾದರೂ ಭಾರತೀಯ ಸಂಗೀತದಲ್ಲಿ ಪರಿಣತಿ ಹೊಂದಿದ್ದ ಆಲಿಸ್, ರತನ್‌ದೇವಿ ಎಂದು ಮರುನಾಮಕರಣ ಮಾಡಿಕೊಂಡು ಅಮೆರಿಕಾದಲ್ಲಿ ಕಛೇರಿಗಳನ್ನು ಕೊಡುತ್ತಿದ್ದಳು. ಆ ಕಛೇರಿಗಳಲ್ಲಿ ಸ್ವಾಮಿ ಭಾರತೀಯ ಸಂಗೀತದ ಬಗ್ಗೆ ಪರಿಚಯಾತ್ಮಕ ವಿವರಣೆಗಳನ್ನು ನೀಡುತ್ತಿದ್ದರು. ಈ ಕಾರ್ಯಕ್ರಮಗಳಿಗೆ ಇನ್ನಷ್ಟು ಹಣಮನ್ನಣೆ ಸಿಗಲು ಅವರಿಗೆ ಯಾರಾದರು ಪ್ರಭಾವಿ ವ್ಯಕ್ತಿಯ ಸಹಾಯ ಬೇಕಿತ್ತು. ಹಾಗಾಗಿ ಸ್ವಾಮಿ ಕ್ರೌಲಿಯನ್ನು ಕೇಳಿಕೊಂಡರು. ಕ್ರೌಲಿ ಅದಕ್ಕೊಪ್ಪಿ ರತನ್‌ದೇವಿಯ ಸಂಗೀತವನ್ನು ಹೊಗಳಿ ʼವ್ಯಾನಿಟಿ ಫ಼ೇರ್ʼ ಎಂಬ ಪತ್ರಿಕೆಯಲ್ಲಿ ಲೇಖನವನ್ನು ಬರೆದ. ಅಲ್ಲದೆ ಸ್ವಾಮಿ ಮತ್ತು ದೇವಿಯ ಬಗ್ಗೆ ಪರಿಚಯ ಪತ್ರ ಬರೆದು ನ್ಯೂಯಾರ್ಕ್ ನಗರದ ಪ್ರತಿಷ್ಠಿತ ವ್ಯಕ್ತಿಗಳಿಗೆ ನೀಡಿದ. ಇವುಗಳಿಂದಾಗಿ ಕಛೇರಿಗಳಿಗೆ ಆದಾಯ ಮತ್ತು ಜನಜಂಗುಳಿ ಎರಡೂ ಹೆಚ್ಚಿದವು.

ಇವೆಲ್ಲ ಆಗುವ ಹೊತ್ತಿಗೆ ಕ್ರೌಲಿ ಮತ್ತು ದೇವಿಯ ನಡುವೆ ಕಾಮಾಂಕುರವಾಗಿತ್ತು. ಇದರ ಬಗ್ಗೆ ಸ್ವಾಮಿಗೆ ತಿಳಿದಿದ್ದರೂ ಕ್ರೌಲಿಯಿಂದ ಆಗುತ್ತಿದ್ದ ಉಪಯೋಗಗಳನ್ನು ನೆನೆದು ಸುಮ್ಮನಿದ್ದುಬಿಟ್ಟರು. ಅಲ್ಲದೆ ಐಶಾರಾಮಿ ಅಭ್ಯಾಸಗಳಿಂದ ಬರಿಗೈಯಾಗಿದ್ದ ಸ್ವಾಮಿಯವರಿಗೆ ದೇವಿಯೊಡನೆ ಸಂಸಾರ ತೂಗಿಸುವುದೇ ದುಸ್ತರವಾಗತೊಡಗಿತ್ತು. ಹಾಗಾಗಿ ಅವಳ ಖರ್ಚನ್ನು ಕ್ರೌಲಿಯೇ ನೋಡಿಕೊಳ್ಳತೊಡಗಿದ್ದು ಸ್ವಾಮಿಗೆ ಅನುಕೂಲವೇ ಆಗಿತ್ತು.

ಕ್ರೌಲಿ ರತನ್ ದೇವಿಯೊಡನೆ ಬೆಳೆಸಿದ್ದು ಸುಮ್ಮನೆ ಒಂದು ವಿವಾಹೇತರ ಸಂಬಂಧವಾಗಿರಲಿಲ್ಲ, ಅವನು ಅವಳೊಡನೆ ʼಸೆಕ್ಸ್ ಮ್ಯಾಜಿಕ್ʼ ಎಂಬ ತಾಂತ್ರಿಕ ಕಾಮಾಚರಣೆಯಲ್ಲಿ ತೊಡಗಿದ್ದ. ತನ್ನ ಜೀವನದ ಒಟ್ಟು ಆಶಯಗಳಿಗೆ ರಕ್ತ ಮಾಂಸ ರೂಪ ಕೊಡಲು ಅವನಿಗೆ ಒಂದು ಗಂಡು ಮಗು ಬೇಕಿತ್ತು. ಅದಕ್ಕಾಗಿ ಸರಿಯಾದ ಹೆಣ್ಣನ್ನು ಅವನು ಅರಸುತ್ತಿದ್ದ. ದೇವಿಯೊಡನೆ ಸಂಬಂಧ ಬೆಳೆದ ಮೇಲೆ ತನ್ನ ಮಗುವಿಗೆ ಇವಳೇ ಸೂಕ್ತ ತಾಯಿ ಎಂದು ನಿರ್ಧರಿಸಿ ಅವಳಲ್ಲಿ ಆ ಬೇಡಿಕೆ ಇಟ್ಟ. ದೇವಿಯೂ ಒಪ್ಪಿದಳು. ಗರ್ಭವತಿಯಾದಳು.

 ಕುಮಾರಸ್ವಾಮಿ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಇಂಗ್ಲೆಂಡಿನಲ್ಲಿ ವಾಸಿಸತೊಡಗಿದ್ದರು. ಆದರೆ ಅಷ್ಟರಲ್ಲಿ ದೇವಿಯ ಕಛೇರಿಗಳು ಅತಿ ಜನಪ್ರಿಯತೆ ಪಡೆದುಕೊಂಡು ಬೇಕಾದಷ್ಟು ಹಣ ಬರತೊಡಗಿತ್ತು. ಆಗ ಮೆಲ್ಲನೆ ಸ್ವಾಮಿ ಮತ್ತೆ ದೇವಿಗೆ ಪತ್ರಬರೆಯತೊಡಗಿದರು. ತನ್ನೊಡನೆ ಇರಲು ಇಂಗ್ಲೆಂಡಿಗೆ ಆಹ್ವಾನಿಸಿದರು. ಅದನ್ನು ಮನ್ನಿಸಿದ ದೇವಿ ಕ್ರೌಲಿಯ ಅರೆಮನಸ್ಸಿನ ಒಪ್ಪಿಗೆಯ ನಡುವೆ ಇಂಗ್ಲೆಂಡಿಗೆ ಹೊರಟಳು. ಆದರೆ ದಾರಿಯ ನಡುವೆ ಅವಳಿಗೆ ಗರ್ಭಪಾತವಾಯಿತು. ಈ ಘಟನೆಗಳಿಂದ ಕ್ರೌಲಿಗೆ ಸ್ವಾಮಿಯ ಮೇಲೆ ಕೋಪ ಬಂದು ಈ ಪಿರ್ಕಿಗಳ ಸಹವಾಸವೆ ಬೆಡವೆಂದು ತನ್ನ ಎಂದಿನ ಪ್ರಯೋಗಶೀಲ ಬದುಕನ್ನು ಮುಂದುವರೆಸಿದ.

 ಇತ್ತ ಕುಮಾರಸ್ವಾಮಿ ಮತ್ತು ರತನ್ ದೇವಿಯೂ ಒಟ್ಟಿಗೆ ಇರಲಾಗದೆ ವಿಚ್ಛೇದನ ತೆಗೆದುಕೊಂಡರು. ನಂತರ ಸ್ವಾಮಿ ನೃತ್ಯಗಾರ್ತಿ ಸ್ಟೆಲ್ಲಾ ಬ್ಲಾಚ್ ಳನ್ನು ಮದುವೆಯಾದರು. ರತನ್ ದೇವಿ ಅಮೆರಿಕದ ಭೌತವಿಜ್ಞಾನಿ ಫ್ರಾನ್ಸಿಸ್‌ ಬಿಟ್ಟರ್ ನನ್ನು ಮದುವೆಯಾದಳು. ನಂತರ ಸ್ವಾಮಿ ಮತ್ತು ಬ್ಲಾಚ್ ಬೇರ್ಪಟ್ಟರು. ನಂತರ ಬ್ಲಾಚ್ ಗೀತರಚನಕಾರ ಎಡ್ವರ್ಡ ಎಲಿಸ್ಕು ನನ್ನು ಮದುವೆಯಾದರೆ ಸ್ವಾಮಿ ಲುಯಿಸಾ ರನ್ಸಟೀನ್‌ ಳನ್ನು ವಿವಾಹವಾದರು. ಒಟ್ಟಿನಲ್ಲಿ ಇವರೆಲ್ಲ ಒಂದೈದು ಮಾರ್ಕ್ಸಿನ ಹೊಂದಿಸಿ ಬರೆಯಿರಿಗಾಗುವಷ್ಟು ವಿಚ್ಛೇದನ, ಮದುವೆಗಳಾಗಿ ಬಾಳು ಸವೆಸಿದರು….

ಆದರೆ ವಿಷಯ ಅದಲ್ಲ, ವಿಷಯ ಕುಮಾರಸ್ವಾಮಿಯ ಕಥೆಯದ್ದು.

ಅಲೆಸ್ಟರ್ ಕ್ರೌಲಿ ಒಬ್ಬ ವಿಕ್ಷಿಪ್ತ ವ್ಯಕ್ತಿಯಾಗಿದ್ದ. ತನಗಾದ ನೋವು ಸಿಟ್ಟುಗಳನ್ನು ಅಷ್ಟು ಸುಲಭವಾಗಿ ಅವನು ಮರೆಯುತ್ತಿರಲಿಲ್ಲ. ಯಾರೇ ಅವನಿಗೆ ನೋವು ಮಾಡಿದರೂ ಅವರ ಬಗ್ಗೆ ಕಥೆ ಕವನಗಳನ್ನು ಬರೆದು ತನ್ನ ಸಿಟ್ಟನ್ನು ಅಲ್ಲಿ ತೀರಿಸಿಕೊಳ್ಳುತ್ತಿದ್ದ.

ತನ್ನ ಕನಸಿನ ಸಂತಾನಕ್ಕೆ ಕುಮಾರಸ್ವಾಮಿಯಿಂದಲೇ ಭಂಗ ಬಂತೆಂದು ಕ್ರುದ್ಧನಾಗಿದ್ದ. ರತನ್ ದೇವಿಗೆ ಸಮುದ್ರಯಾನ ಒಗ್ಗುವುದಿಲ್ಲ ಎಂದು ತಿಳಿದಿದ್ದ ಸ್ವಾಮಿ, ಬೇಕೆಂದೇ ಅವಳನ್ನು ಹಡಗಿನಲ್ಲಿ ಕರೆಸಿಕೊಂಡು ಗರ್ಭಪಾತವಾಗುವಂತೆ ಮಾಡಿ ತನಗೆ ಮೋಸವೆಸಗಿದ್ದಾನೆಂದು ತೀವ್ರ ಸಿಟ್ಟಿನಲ್ಲಿದ್ದ. ಹಾಗಾಗಿಯೇ ಸ್ವಾಮಿಯ ಬಗ್ಗೆ ಅವನು ಬರೆಯುವಾಗಲೆಲ್ಲ ಅವರ ಹೆಸರನ್ನು ಬಳಸದೆ ಕ್ರಿಮಿ, ಕೊಲೆಗಾರ, ಬೆರಕೆ, ದಗಲ್ಬಾಜಿ ಇತ್ಯಾದಿ ‘ವಿಶೇಷಣಗಳನ್ನು’ ಬಳಸಿದ್ದಾನೆ. ʼಡಾನ್ಸ್ ಆಫ಼್ ಶಿವʼ ಪುಸ್ತಕ ಬಂದಾಗ ಅದರ ವಿಮರ್ಶೆ ಬರೆದು ಕುಮಾರಸ್ವಾಮಿಯನ್ನು ಹಿಗ್ಗಾಮುಗ್ಗಾ ಬೈದಿದ್ದಾನೆ. ಆ ಇಡೀ ಪುಸ್ತಕ ವಿಮರ್ಶೆಯಲ್ಲಿ ಪುಸ್ತಕದ ಪ್ರಸ್ತಾಪವೇ ಇಲ್ಲ! ಕ್ರೌಲಿ ಬರವಣಿಗೆಗಳಲ್ಲಿ ಸ್ವಾಮಿಯ ಬಗ್ಗೆ ಎಲ್ಲೇ ಪ್ರಸ್ತಾಪ ಬಂದರೂ  ಸುತ್ತಿ ಬಳಸಿ ತನ್ನ ಮಗುವಿನ ಕೊಲೆಗಾರ ಸ್ವಾಮಿ ಎಂಬ ಅಂಶಕ್ಕೆ ಮರಳಿ ಅವರನ್ನು ಬಯ್ಯಲು ತೊಡಗುತ್ತಾನೆ.

ಇಷ್ಟಾದರೂ ಅವನಿಗೆ ತೃಪ್ತಿಯಾಗದಿದ್ದಾಗ, ತನ್ನ ಹಳೇ ಚಾಳಿಯಂತೆ ಸ್ವಾಮಿಯ ಬಗ್ಗೆ ಕಥೆಯೊಂದನ್ನು ಬರೆದ. ʼನಾಟ್‌ ಗುಡ್‌ ಇನಫ್‌ʼ ಎಂಬ ಆ ಕಥೆ ಅವನ ಸೈಮನ್ ಇಫ್ ಎಂಬ ಪತ್ತೇದಾರಿ ಕಥೆಗಳ ಸರಣಿಯಲ್ಲಿ ಬರುತ್ತದೆ.

ಸೈಮನ್ ಇಫ್ ಎಂಬುವವನು ಕ್ರೌಲಿ ಸೃಷ್ಟಿಸಿದ್ದ ಶರ್ಲಾಕ್ ಹೋಂಸ್ ನಂತಹ ಪಾತ್ರ. ಆದರೆ ಸೈಮನ್ ಇಫ್ ಯಾವುದೇ ಸುಳಿವುಗಳನ್ನಾಗಲಿ, ಸಾಕ್ಷಗಳನ್ನಾಗಲಿ ಪರಿಶೀಲಿಸದೆ, ಆಪಾದಿತನ ಮನಸ್ಥಿತಿಯನ್ನು ವಿಶ್ಲೇಷಿಸಿ, ಇಂಥ ಮನಸ್ಥಿತಿ ಮತ್ತು ನೈತಿಕತೆ ಇರುವ ಮನುಷ್ಯ ಈ ರೀತಿಯ ಅಪರಾಧಗಳನ್ನು ಮಾಡಬಲ್ಲನೇ ಇಲ್ಲವೇ ಎಂದು ಅವಲೋಕನ ಮಾಡಿ, ಅವನು ತಪ್ಪಿತಸ್ಥನೋ ಅಲ್ಲವೋ ಎಂಬುದನ್ನು ನಿರ್ಧರಿಸುತ್ತಾನೆ. ಅದಕ್ಕೆ ಅವನು ನೀಡುವ ಕಾರಣಗಳು ಚಿತ್ರವಿಚಿತ್ರವಾಗಿರುತ್ತವಾದರೂ ಕೊನೆಗೆ ಅವನ ತೀರ್ಪೇ ಸರಿಯಾಗಿ ಅವನು ಹೇಳಿದವರೇ ಅಪರಾಧಿಯಾಗಿರುತ್ತಾರೆ ಮತ್ತು ಅವನು ಹೇಳಿದಂತೆಯೇ ಅಪರಾಧ ನಡೆದಿರುತ್ತದೆ.

ʼನಾಟ್‌ ಗುಡ್‌ ಇನಫ್‌ʼ ನಲ್ಲೂ  ಇದೇ ಆಗುತ್ತದೆ . ತನ್ನ ಮತ್ತು ಸ್ವಾಮಿಯ ನಡುವೆ ನಡೆದ ಘಟನೆಗಳಿಗೇ ಒಂದಿಷ್ಟು ಬಣ್ಣ ಕಟ್ಟಿ, ಸ್ವಾಮಿಯನ್ನು ಹೀಗಳೆದು ಕಥೆ ಬರೆದಿದ್ದಾನೆ. ಆ ಕಥೆಯಲ್ಲಿ ಬರುವ ಸ್ವಾಮಿಯ ಮನೆ ವಿಳಾಸ, ವೃತ್ತಿ ಇತ್ಯಾದಿ ಗಳೆಲ್ಲವೂ ನಿಜ. ಆದರೆ ಒಂದು ಪ್ರಮುಖ ಬದಲಾವಣೆಯನ್ನು ಮಾಡಿದ್ದಾನೆ. ʼಆನಂದ ಕುಮಾರಸ್ವಾಮಿʼ ಎಂಬ ಹೆಸರನ್ನು ಬದಲಿಸಿ ʼಆನಂದ ಹರಾಮಜಾದ ಸ್ವಾಮಿʼ ಎಂದು ಮಾಡಿದ್ದಾನೆ. ಹರಾಮಜಾದ ಎಂದರೆ ಜಾರಿಣಿಯ ಮಗ.

ಕಥೆಯ ಸಾರಾಂಶ:

ನಗರದಲ್ಲಿ ಸಿಬಿಲ್ ಳ ಕೊಲೆಯಾಗಿರುತ್ತದೆ. ಅವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹರಾಮಜಾದ ಸ್ವಾಮಿಯೇ ಅವಳನ್ನು ಕೊಂದು, ಒಡವೆಗಳನ್ನು ದೋಚಿಕೊಂಡು ಹೋಗಿರುವುದಾಗಿ ಸೈಮನ್‌ ಇಫ್‌ ಗೆ ಪೋಲಿಸರು ತಿಳಿಸುತ್ತಾರೆ.

ಅದಕ್ಕೆ ಸೈಮನ್‌, “ ಸ್ವಾಮಿ  ಇತ್ತೀಚೆಗೆ ಬೌದ್ಧ ಧರ್ಮದ ಬಗ್ಗೆ  ಒಂದು ಪುಸ್ತಕ ಬರೆದಿದ್ದಾನೆ. ಅದರಲ್ಲಿ  ʼಬುದ್ಧ ಭೋಗವಾದಿಯಾದ್ದರಿಂದಲೇ ದುಃಖದ ಮೂಲ ಹುಡುಕಿದʼ ಎಂದು ಬರೆದಿದ್ದಾನೆ. ಹಾಗಾಗಿ ಅವನು ಕೊಲೆ ಮಾಡಿರಲು ಸಾಧ್ಯವೇ ಇಲ್ಲಎನ್ನುತ್ತಾನೆ.

ವಿತರ್ಕವನ್ನು ಪೋಲಿಸರು ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದಾಗ ನ್ಯಾಯಾಲಯದಿಂದ ಒಂದು ಸುದ್ದಿ ಬರುತ್ತದೆ. ಸ್ವಾಮಿ ತಾನೇ ಕೊಲೆ ಮಾಡಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವುದರಿಂದ ಅವನಿಗೆ ಮರಣದಂಡನೆ ವಿಧಿಸಲಾಗಿದೆ”.

ಅಂದು ಸಂಜೆ ಸೈಮನ್ ಪೊಲೀಸ್ ಅಧಿಕಾರಿಯೊಂದಿಗೆ ಕುಡಿಯುತ್ತಾ ಕುಳಿತಿದ್ದಾಗ ಮತ್ತೆ ಸ್ವಾಮಿ ಈ ಕೊಲೆಯನ್ನು ಮಾಡಿರಲು ಸಾಧ್ಯವೇ ಇಲ್ಲ’ ಎಂದು ಹೇಳುತ್ತಾನೆ.

ಆಗ ಪೊಲೀಸ್ ಅಧಿಕಾರಿ ‘ನಿಮಗೆ ಸ್ವಾಮಿಯ ಬಗ್ಗೆ ಗೊತ್ತಿಲ್ಲ. ಅವನೊಬ್ಬ ತುಂಬಾ ಕೀಳು ಮನುಷ್ಯ. ಈ ಮೊದಲು ತನ್ನ ಹೆಂಡತಿಯನ್ನೇ ಕೊಲ್ಲಲು ವಿಧವಿಧವಾಗಿ ಪ್ರಯತ್ನಿಸಿದ್ದಾನೆ. ಅವಳಿಗೆ  ಸಮುದ್ರ ಯಾನ ಆಗಿಬರುವುದಿಲ್ಲ ಎಂದು ಅರಿತಿದ್ದ ಸ್ವಾಮಿ ಬಲವಂತವಾಗಿ ಹಡಗಿನಲ್ಲಿ ಕರೆದುಕೊಂಡು ಹೋಗಿದ್ದ. ಅದು ಹೇಗೋ ಅವಳು ಬದುಕುಳಿದಳು. ಹೆಂಡತಿಗೇ ಹೀಗೆ ಮಾಡಿದವನು ಪ್ರೇಯಸಿಯನ್ನು ಹಣಕ್ಕಾಗಿ ಕೊಲ್ಲುವುದಿಲ್ಲವೆ?’ ಎಂದು ಕೇಳುತ್ತಾರೆ.

ಅದಕ್ಕೆ ಸೈಮನ್ ‘ ಅಲ್ಲೇ ನೀವು ಎಡವುತ್ತಿರುವುದು., ಸ್ವಾಮಿಗೆ ಬುದ್ಧ ಹೇಗೆ ಅರ್ಥವಾಗಿಲ್ಲವೋ ಹಾಗೆ ನಿಮಗೂ ಸ್ವಾಮಿ ಅರ್ಥವಾಗುತ್ತಿಲ್ಲ.’ ಎನ್ನುತ್ತಾನೆ. ‘ಸ್ವಾಮಿಯನ್ನು ನೀವು ಯಾವ ಆಧಾರದ ಮೇಲೆ ಬಂಧಿಸಿದಿರಿ ?’  ಎಂದು ಕೇಳುತ್ತಾನೆ.

ಅಧಿಕಾರಿ ವಿವರಿಸುತ್ತಾರೆ ನಮಗೆ ಕೊಲೆಯ ಮಾಹಿತಿ ಬಂದಾಗ, ಸ್ಥಳಕ್ಕೆ ಹೋದೆವು. ಅಲ್ಲಿ ನಾವು ಪರಿಶೀಲನೆ ನಡೆಸುತ್ತಿದ್ದಾಗ ಸ್ವಾಮಿ ಇದ್ದಕ್ಕಿದ್ದಂತೆ ಬಂದ. ನಮ್ಮನ್ನು ನೋಡಿದವನೇ ವಿವರ್ಣನಾಗಿ ಬಿದ್ದುಬಿಟ್ಟ. ಆಗಲೇ ನಮಗೆ ಖಾತ್ರಿಯಾಗಿತ್ತು. ಈಗ ಅವನೇ ಒಪ್ಪಿಕೊಂಡಿದ್ದಾನೆ ಅಷ್ಟೇ’  

ಅಷ್ಟರಲ್ಲಿ ಸಿಬಿಲ್ ಳ ಗಂಡ ಬ್ರೂಕ್ ನಿಂದ ಒಂದು ಪತ್ರ ಬರುತ್ತದೆ.

ಅದು ಅವನ ತಪ್ಪೊಪ್ಪಿಗೆ ಪತ್ರ.

ಸ್ವಾಮಿಗೂ  ಸಿಬಿಲ್ ಗೂ ಅಕ್ರಮ ಸಂಬಂಧವಿತ್ತು. ಹಣದ ಸಮಸ್ಯೆಯಿಂದ ತತ್ತರಿಸಿದ್ದ ಸ್ವಾಮಿ ಬಲವಂತವಾಗಿ ಸಿಬಿಲ್ ಬಳಿ ಇದ್ದ ಒಡವೆಯನ್ನು ಮಾರಲು ತೆಗೆದುಕೊಂಡು ಹೋದ. ಆ ವಿಷಯವಾಗಿ ನಗೂ ಸಿಬಿಲ್ ಗು ಜಗಳವಾಯಿತು. ಕೋಪದಲ್ಲಿ ನನಗೇ ಅರಿವಿಲ್ಲದಂತೆ ನಾನು ಅವಳ ಹಣೆಗೆ ಹೊಡೆದೆ. ಅವಳು ರಕ್ತ ಸ್ರಾವ ದಿಂದ ಸತ್ತೇ ಹೋದಳು. ನಂತರ ನಾನು ಹೊರಗೆ ಬಂದು ರಸ್ತೆ ಬದಿಯಲ್ಲಿ ಅವಿತಿದ್ದಾಗ ಪೋಲಿಸರು ಬಂದರು. ಇನ್ನು  ನನ್ನನ್ನು ಬಂಧಿಸಲು ಹೆಚ್ಚು ಸಮಯ ಬೇಕಿಲ್ಲ ಎಂದು ನಾನು ಆಲೋಚಿಸುತ್ತಿದ್ದಾಗ ಸ್ವಾಮಿ ಅಲ್ಲಿಗೆ ಬಂದ. ಪೊಲೀಸರು ಅವನನ್ನು ಎಳೆದುಕೊಂಡು ಹೋದರು. ಈಗ ನೋಡಿದರೆ ತಾನು ಮಾಡದ ಅಪರಾಧವನ್ನು ಸ್ವಾಮಿ ಒಪ್ಪಿಕೊಡಿದ್ದಾನೆ. ನಿಮ್ಮ ಬಳಿ ಸತ್ಯ ಹೇಳಬೇಕೆನಿಸಿದ್ದರಿಂದ ಈ ಪತ್ರ ಬರೆದಿದ್ದೇನೆ. ಮುಂದಿನದು ನಿಮ್ಮ ಇಚ್ಛೆ

ಪೊಲೀಸ್ ಅಧಿಕಾರಿ ಚಕಿತನಾಗಿ ನೀವು ಹೇಳಿದ್ದೇ ಸರಿಯಾಯಿತಲ್ಲ. ಆದರೆ ಸ್ವಾಮಿ ಏಕೆ ತಪ್ಪನ್ನು ಒಪ್ಪಿಕೊಂಡ ? ಈಗೇನು ಮಾಡೋಣ ಎಂದು ಸೈಮನ್ ನನ್ನು ಕೇಳುತ್ತಾನೆ.

ಒಟ್ಟು ಪ್ರಕರಣಕ್ಕೆ ಸೈಮನ್ ಈ ರೀತಿ ಷರಾ ಬರೆಯುತ್ತಾನೆ –

ಬುದ್ಧನು ಮಾಡಿದ್ದ ಸಾಧನೆಗಳು ಅತ್ಯಂತ ದುಸ್ತರವಾಗಿದ್ದವು. ಅವುಗಳನ್ನು ಸಾಧಿಸಲು ತುಂಬಾ ಧೈರ್ಯ ಬೇಕು. ಅಂಥ ಧೈರ್ಯವನ್ನು  ಗುರುತಿಸಲೂ ಆರದೆ ಬುದ್ಧನನ್ನು ಭೋಗವಾದಿ ಎನ್ನುವ ಸ್ವಾಮಿ ಥರದವರಿಗೆ ಕೊಲೆ ಮಾಡುವ ಧೈರ್ಯ ಬರುವುದಿಲ್ಲ. ನೀವೇ ಹೇಳಿದಂತೆ ಅವನು ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ, ಕೊಲ್ಲಲಿಲ್ಲ. ಅದೂ ಅವಳು ತಾನಾಗೇ ಸಾಯಲಿ ಎಂದು ಹಡಗಿನ ಪ್ರಯಾಣ ಮಾಡಿಸಿದ್ದಾನೆ. ಅಂದರೆ ತಾನೇ ಕೊಲ್ಲಲೂ ಅವನಿಗೆ ಧೈರ್ಯವಿಲ್ಲ. ಆ ಪುಕ್ಕಲುತನದಿಂದಲೇ ಅವನಿಗೆ ಬುದ್ಧ ಅರ್ಥವಾಗಲಿಲ್ಲ. ಆದರೆ ಅಂಥ ಪುಕ್ಕಲರು ತಾವು ಇಲ್ಲಿ ಮಾಡಿದ ಪಾಪಗಳಿಂದ ಬಿಡುಗಡೆ ಹೊಂದಿ ಸ್ವರ್ಗ ಸೇರಲು ಬೇರೊಬ್ಬರ ತಪ್ಪನ್ನು ತಮ್ಮ ಮೇಲೆ ಹಾಕಿಕೊಳ್ಳುತ್ತಾರೆ. ಈ ವರದಿಯನ್ನು ಒಪ್ಪಿಸಿ ಸ್ವರ್ಗದಲ್ಲಿ ಪ್ರವೇಶ ಪಡೆಯಲು ಈ ನಾಟಕ ಅಷ್ಟೇ. ಹಾಗಾಗಿ ಸ್ವಾಮಿ ನಿರಪರಾಧಿಯೇ ಆಗಿದ್ದರೂ ಅಂಥವರಿಗೆ ಮರಣ ದಂಡನೆ ಕೊಟ್ಟಿರುವುದು ಕಾನೂನಿನಲ್ಲಿ ಆದ ಅಚಾತುರ್ಯವೇ ಹೊರತು ನ್ಯಾಯಕ್ಕೆ ಎಸಗಿದ ಅಪಚಾರವಲ್ಲ. ಮತ್ತು ಬ್ರೂಕ್ ಕೊಲೆಗಾರನಾಗಿದ್ದರೂ ಪ್ರಾಮಾಣಿಕ, ಅಲ್ಲದೆ ಬುದ್ಧಿಯ ಅರಿವಿಗೆ ಬರುವ ಮೊದಲೇ, ಅಂದರೆ ಹೃದಯ ಹೇಳಿದಂತೆ ಕೊಲೆ ಮಾಡಿದ್ದಾನೆ. ಇಂಥ ಹೃದಯವಂತರೇ ನಮ್ಮ ಮುಂದಿನ ಪೀಳಿಗೆಯನ್ನು ಮುನ್ನಡೆಸಬೇಕು. ಹೀಗಾಗಿ  ಬ್ರೂಕ್ ನನ್ನು ರಾಜ್ಯದ ಶಿಕ್ಷಣ ಸಚಿವನನ್ನಾಗಿ  ನೇಮಿಸಬೇಕು. ಆನಂದ ಹರಾಮಜಾದ ಸ್ವಾಮಿಯನ್ನು ಗಲ್ಲಿಗೇರಿಸಬೇಕು.”

ಇಲ್ಲಿಗೀ ಕಥೆ ಮುಗಿಯಿತು.

ಇದು ಕಥೆಯ ಸಂಗ್ರಹಾನುವಾದ ಅಷ್ಟೇ. ಪೂರ್ಣಪಾಠದಲ್ಲಿ ಕ್ರೌಲಿ ಕುಮಾರಸ್ವಾಮಿಯವರನ್ನು ಮನಸೋಇಚ್ಛೆ ಆಡಿಕೊಂಡಿದ್ದಾನೆ. ತೇಜೋವಧೆ, ಜನಾಂಗೀಯ ನಿಂದನೆಯ ಮಾತುಗಳು ಕಥೆಯ ಉದ್ದಕ್ಕೂ ಬರುತ್ತವೆ.

ಆದರೆ ಈ ಘಟನೆಗಳ ಬಗ್ಗೆ ನಮಗೆ ಸಿಗುವುದು ಕ್ರೌಲಿಯ ಮೂಗಿನ ನೇರದ ದಾಖಲೆಗಳು ಮಾತ್ರ. ಕುಮಾರಸ್ವಾಮಿಯವರು ಇವನ್ನೆಲ್ಲಾ ಹೇಗಿದ್ದರೂ ‘ಅಸ್ವರ್ಗ್ಯ’ ಎಂದು ಭಾವಿಸಿದ್ದರಿಂದ, ಎಲ್ಲೂ ದಾಖಲಿಸಲು ಹೋಗಿಲ್ಲ.

ಅರುಣ ಭಾರದ್ವಾಜ್

ನಿರ್ದೇಶಕ, ರಾಷ್ಟ್ರೋತ್ಥಾನ ಸಂಶೋಧನಾ ಕೇಂದ್ರ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Ananda Coomaraswamy - A Rare Polymath and a Warrior of Dharma

Sun Aug 22 , 2021
Ananda Coomaraswamy – A Rare Polymath and a Warrior of Dharma August 22 is the date, the man known by the name Ananda Coomaraswamy was born on, almost 150 years ago. Although born in Sri Lanka, then Ceylon, Ananda Kentish Muthu Coomaraswamy, after losing his Srilankan Tamil father at the […]