ನಿರ್ಮಮ ಕಾಯಕಯೋಗಿಗೆ ತುಂಬಿತು ನವತಿ

ನಿರ್ಮಮ ಕಾಯಕಯೋಗಿಗೆ ತುಂಬಿತು ನವತಿ

ಕಳೆದ 65 ವರ್ಷಗಳಿಂದ ಪ್ರಚಾರಕರಾಗಿ ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕಾ. ಶ್ರೀ. ನಾಗರಾಜರು ಕಳೆದ ಸೋಮವಾರದಂದು 90ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ತನ್ನಿಮಿತ್ತ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

1932ನೇ ಇಸವಿಯ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ಜನಿಸಿದ ಕಾಶ್ಯಪಗೋತ್ರ ಶ್ರೀಕಂಠಯ್ಯ ನಾಗರಾಜರು ಅವರ ತಂದೆ-ತಾಯಿಗೆ ಮೂರನೇ ಮಗ. ತಂದೆ ಬೂಕನಕೆರೆ ಶ್ರೀಕಂಠಯ್ಯನವರು ಪ್ರೈಮರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು, ತಾಯಿಗುಂಡಮ್ಮ.

ಕಾ. ಶ್ರೀ. ನಾಗರಾಜರಿಗೆ ಓರ್ವ ಅಕ್ಕ ಗುಂಡಮ್ಮ. ಓರ್ವಅಣ್ಣ ವೆಂಕಟಸುಬ್ಬಯ್ಯ, ಪ್ರಾಥಮಿಕ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಇಬ್ಬರು ತಮ್ಮಂದಿರು, ರಾಮಣ್ಣ ಹಾಗೂ ಸತ್ಯನಾರಾಯಣ. ಸತ್ಯನಾರಾಯಣರವರು ಭಾರತ ಸರಕಾರದ ಉದ್ಯಮವೊಂದರಲ್ಲಿ ಹಿರಿಯ ಅಧಿಕಾರಿ ಯಾಗಿ ನಿವೃತ್ತರು. ಇದೀಗ ಅಮೇರಿಕಾದಲ್ಲಿದ್ದಾರೆ. ತಂಗಿ ಶಾರದೆ ಲಂಡನ್‍ನಲ್ಲಿ ಶಿಕ್ಷಕಿಯಾಗಿದ್ದಾರೆ.

ಕಾ. ಶ್ರೀ ನಾಗರಾಜರು ಹೊಳೆನರಸೀಪುರದಲ್ಲಿ ಪ್ರೈಮರಿ ಮತ್ತು ಮಿಡ್ಲ್ ಸ್ಕೂಲ್ ಶಿಕ್ಷಣ ಪೂರೈಸಿ ಹಾಸನದಲ್ಲಿ ಎಂಟನೇ ತರಗತಿಗೆ ದಾಖಲಾದರು. ನಂತರ 1945ರಲ್ಲಿ ಮೈಸೂರಿನಲ್ಲಿ ಶಾರದಾ ವಿಲಾಸ್ ಹೈಸ್ಕೂಲ್ ಮತ್ತುಕಾಲೇಜಿನಲ್ಲಿ ವಿದ್ಯಾಭ್ಯಾಸ
.
1947 ರಿಂದ 1950ರ ತನಕ ಮಂಡ್ಯದ ಕೊತ್ತತ್ತಿಯಲ್ಲಿ ಪ್ರೈಮರಿ ಶಾಲಾಶಿಕ್ಷಕರಾಗಿ ಹಾಗೂ ನಂತರದ ದಿನಗಳಲ್ಲಿ ಇತರ ಒಂದಷ್ಟು ವೃತ್ತಿಯಲ್ಲಿ ತೊಡಗಿದ್ದ ಕಾ. ಶ್ರೀ. ನಾಗರಾಜರಿಗೆ ಆರೆಸ್ಸೆಸ್ ಸಂಪರ್ಕವಾದದ್ದು 1948ರಲ್ಲಿ.

1948ರಲ್ಲಿ ಮೈಸೂರಿನಲ್ಲಿ ಸುಬ್ಬರಾಯನಕೆರೆಯ ಪ್ರತಾಪ ಶಾಖೆಯ ಸ್ವಯಂಸೇವಕರಾಗಿ ಸಕ್ರಿಯರಾದ ಕಾ. ಶ್ರೀ. ನಾಗರಾಜರು ನಂತರ ಸಂಘವನ್ನೇ ಬದುಕಿನ ಉಸಿರನ್ನಾಗಿಸಿದರು. ಆಗಿನ ಕಾಲದಲ್ಲಿ ಸಂಘ ಕಾರ್ಯ ಕರ್ನಾಟಕದಲ್ಲಿ ಇನ್ನೂ ಬೆಳೆಯುತ್ತಿದ್ದ ಆರಂಭಿಕ ವರ್ಷಗಳದು. ಆ ವೇಳೆಯಲ್ಲೇ, ತನ್ನ 16ನೇ ವಯಸ್ಸಿನ ತಾರುಣ್ಯದಲ್ಲಿ, ಜೀವನ ಪೂರ್ತಿ ಸಂಘದ ಕಾರ್ಯಕರ್ತನಾಗುವ ಸಂಕಲ್ಪತೊಟ್ಟರು. ಸಂಘ ಕಾರ್ಯ ಒಂದು ತಪಸ್ಸು, ಅದನ್ನು ಜೀವನ ಪರ್ಯಂತ ಮಾಡುವ ತೀರ್ಮಾನಕೈಗೊಂಡರು. 1948ರ ಸಂದರ್ಭದಲ್ಲಿ ಗಾಂಧೀ ಹತ್ಯೆಯ ಮಿಥ್ಯಾರೋಪ ಹೊರಿಸಿ ಸಂಘದ ಮೇಲೆ ನಿರ್ಬಂಧ ಹೇರಲಾಗಿತ್ತು. ಆ ಸಂದರ್ಭದಲ್ಲಿ ಸತ್ಯಾಗ್ರಹ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಾಲ್ಕು ತಿಂಗಳು ಜೈಲುವಾಸ.

ಕಾ. ಶ್ರೀ ನಾಗರಾಜರು

1950 ರಿಂದ 1956ರ ವರೆಗೆ ಮೈಸೂರಿನ ರೈಲ್ವೇ ಆಡಿಟ್‍ಆಫೀಸ್‍ನಲ್ಲಿ ಕ್ಲರ್ಕ್ ಆಗಿ ವೃತ್ತಿಯಲ್ಲಿದ್ದರು. ಈ ವೇಳೆ ಸಂಘದ ಮುಖ್ಯ ಶಿಕ್ಷಕ್, ಕಾರ್ಯವಾಹ ಸೇರಿದಂತೆ ವಿವಿಧ ಜವಾಬ್ದಾರಿಗಳ ನಿರ್ವಹಣೆ.

1956ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ತಾರುಣ್ಯದ 24ನೇ ವಯಸ್ಸಿನಲ್ಲಿ ಸಂಘದ ಪ್ರಚಾರಕರಾದರು. ಜೀವನಪೂರ್ತಿ ಸಂಘಕಾರ್ಯವನ್ನೇ ಧ್ಯೇಯವಾಗಿರಿಸಿ, ಇದೀಗ ಕಳೆದ 65 ಸುದೀರ್ಘ ವರ್ಷಗಳಿಂದ ಪ್ರಚಾರಕರಾಗಿದ್ದಾರೆ. ಪ್ರಚಾರಕರಾಗಲು ಮುಖ್ಯ ಪ್ರೇರಣೆ ಆಗ ಕರ್ನಾಟಕದ ಪ್ರಾಂತ ಪ್ರಚಾರಕರಾಗಿದ್ದ ಯಾದವ್‍ರಾವ್ ಜೋಷಿ. ಪ್ರತಿ ವರ್ಷವೂ ಮೂರ್ನಾಲ್ಕು ಬಾರಿ ಮೈಸೂರಿಗೆ ಬರುತ್ತಿದ್ದ ಯಾದವರಾಯರ ಆತ್ಮೀಯತೆಯ ಮಾತುಗಳು, ಮೇಲ್ಪಂಕ್ತಿ, ಸಂಘಕಾರ್ಯದ ಮಹತ್ವ ಇತ್ಯಾದಿಗಳು ಯುವ ಮನಸ್ಸಿನ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದನ್ನು ಕಾ. ಶ್ರೀ. ನಾಗರಾಜರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅಂತೆಯೇ ಆಗ ಪ್ರಾಂತಕಾರ್ಯವಾಹರಾಗಿದ್ದ ಪ್ರಚಾರಕರಾದ ಹೊ. ವೆ. ಶೇಷಾದ್ರಿಗಳು ಹಾಗೂ ಮೈಸೂರು ಸ್ಟೇಟ್‍ನ ಪ್ರಚಾರಕರಾಗಿದ್ದ ಕೃ. ಸೂರ್ಯನಾರಾಯಣರಾವ್ ಇವರಿಬ್ಬರ ಪ್ರೇರಣೆಯ ಮಾತುಗಳು, ಕಾರ್ಯವೈಖರಿ ಹಾಗೂ ಆತ್ಮೀಯತೆಯ ಒಡನಾಟ- ಇವುಗಳೂ ತಾನು ಪ್ರಚಾರಕ್ ಆಗಲು ಪ್ರೇರಣೆ ನೀಡಿದ ಅಂಶಗಳು ಎನ್ನುತ್ತಾರೆ ಕಾ. ಶ್ರೀ. ನಾಗರಾಜ್.

1956ರಲ್ಲಿ ಪ್ರಚಾರಕರಾಗಿ ಮೊದಲ ನಿಯುಕ್ತಿ ಹಾಸನ ಜಿಲ್ಲೆಗೆ. ಎರಡು ವರ್ಷಗಳ ಕಾಲ ಹಾಸನ ಜಿಲ್ಲೆ ಹಾಗೂ ಚಿಕ್ಕಮಗಳೂರಿನ ಮೂಡಿಗೆರೆ, ಚಿಕ್ಕಮಗಳೂರು, ಕಡೂರು ತಾಲೂಕುಗಳನ್ನೊಳಗೊಂಡ ಪ್ರದೇಶದಲ್ಲಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದರು, ನಂತರ 1958ರಿಂದ 1966ರ ವರೆಗೆಚಿತ್ರದುರ್ಗದಲ್ಲಿ ಮೊದಲ 6 ವರ್ಷಗಳ ಕಾಲ ಜಿಲ್ಲಾ ಪ್ರಚಾರಕರಾಗಿ ನಂತರ 3 ವರ್ಷಗಳ ಕಾಲ ಹರಪನಹಳ್ಳಿ ಪ್ರದೇಶಗಳಲ್ಲಿ ಪ್ರಚಾರಕರಾಗಿ ಸಂಘಕಾರ್ಯವಿಸ್ತಾರ.

1966 ಹಾಗೂ 1967 ರಲ್ಲಿ ಕೊಪ್ಪಳವನ್ನು ಒಳಗೊಂಡ ಬಳ್ಳಾರಿ ಜಿಲ್ಲೆಯಲ್ಲಿ ಪ್ರಚಾರಕರಾಗಿ ನಿಯುಕ್ತರಾದರು. 1968 ರಿಂದ 1969ರ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯ ನಿಮಿತ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‍ನಲ್ಲಿ ವಿಶ್ರಾಂತಿ ಪಡೆದರು.

1969ರಲ್ಲಿ ಸಂಘದ ಯೋಜನೆಯಂತೆ ವಿಶ್ವ ಹಿಂದೂ ಪರಿಷತ್‍ನ ಐತಿಹಾಸಿಕ ಸಂತ ಸಮ್ಮೇಳನದ ಆಯೋಜನೆಯ ಕಾರ್ಯದ ತಂಡದಲ್ಲಿ ನಿಯುಕ್ತರಾದರು. ಉಡುಪಿಯಲ್ಲಿ ನಡೆದ ಈ ಸಂತ ಸಮ್ಮೇಳನಕ್ಕೆ ಯೋಜನೆಯ ನೊಗ ಹೊತ್ತಿದ್ದ ಕೃ. ಸೂರ್ಯನಾರಾಯಣರಾಯರಿಗೆ ಆಪ್ತ ಸಹಾಯಕರಾಗಿ ಸುಮಾರು 9 ತಿಂಗಳು ನಿರಂತರವಾಗಿ ಬಿರುಸಿನ ಓಡಾಟ ಮಾಡಿದ್ದ ಆ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ ಕಾ. ಶ್ರೀ. ನಾಗರಾಜರು. ಈ ಕಾರ್ಯಕ್ರಮದ ನಂತರ ಸ್ವಾಮೀ ಚಿನ್ಮಯಾನಂದ ಸೇರಿದಂತೆ ಅನೇಕ ಗಣ್ಯರ ಸಂದರ್ಶನ, ಅದರ ಲೇಖನರೂಪೀ ದಾಖಲೀಕರಣ ಇತ್ಯಾದಿ ಕೆಲಸಗಳು.

1969 ಅಕ್ಟೋಬರ್‍ನಿಂದ 1970ರ ಮೇ ತನಕ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮ ನಿಮಿತ್ತ ವಿಶೇಷ ನಿಯೋಜನೆ. 1970ರ ಮೇ ತಿಂಗಳಿನಿಂದ 1972ರ ತನಕ ರಾಯಚೂರು ಜಿಲ್ಲೆಯ ಜಿಲ್ಲಾ ಪ್ರಚಾರಕರಾಗಿ ನಿಯುಕ್ತರಾದರು.

1973ರಲ್ಲಿ ಬೆಂಗಳೂರಿನ ಕೇಶವಕೃಪಾ ಪ್ರಾಂತ ಕಾರ್ಯಾಲಯಕ್ಕೆ ಬಂದ ಕಾ. ಶ್ರೀ. ನಾಗರಾಜರು, ಹಿರಿಯರಾದ ಹೊ. ವೆ. ಶೇಷಾದ್ರಿಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೊ. ವೆ. ಶೇಷಾದ್ರಿಗಳದ್ದು ಬಹುಮುಖ ಪ್ರತಿಭೆ. ವೈಚಾರಿಕ ಹಾಗೂ ಬೌದ್ಧಿಕ ವಲಯದಲ್ಲಿ ಮುಂಚೂಣಿಯ ಹೆಸರು. ಸಂಘಟನಾತ್ಮಕವಾಗಿ ಸಾವಿರಾರು ಕಾರ್ಯಕರ್ತರಿಗೆ ಮೇಲ್ಪಂಕ್ತಿ. ಶೇಷಾದ್ರಿಗಳ ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ವಿವಿಧ ಜಿಲ್ಲೆಗಳಿಗೆ ಪ್ರವಾಸದ ಸಂದರ್ಭದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾ.ಶ್ರೀ ನಾಗರಾಜರಿಗೆ ಅನೇಕ ವಿಶಿಷ್ಟ ಅನುಭವಗಳಾಯಿತು. ಇದೇ ವರ್ಷಗಳಲ್ಲಿ ಶೇಷಾದ್ರಿಗಳ ಸಾಹಿತ್ಯ ರಚನೆಯ ಅನೇಕ ಕಾರ್ಯಗಳಿಗೆ ಹೆಗಲು ನೀಡಿದರು. ಶೇಷಾದ್ರಿಗಳು ತಿಳಿಸುತ್ತಿದ್ದ ಅನೇಕ ವಿಚಾರಗಳು, ಸುದ್ದಿಗಳ ಕುರಿತು ಮಾಹಿತಿ ಕಲೆಹಾಕುವುದು, ಅಧ್ಯಯನದ ವರದಿ ಸಿದ್ಧಪಡಿಸುವುದು, ಲೇಖನಗಳ ಅನುವಾದ, ಗ್ರಂಥಾಲಯಗಳಿಗೆ ಭೇಟಿ ನೀಡುವುದು, ಆಕರ ಪುಸ್ತಕಗಳನ್ನು ತರಿಸುವುದು, ಸಂದರ್ಶನಗಳು ಸೇರಿದಂತೆ ಅನೇಕ ರೀತಿಯ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಶೇಷಾದ್ರಿಗಳು ಸ್ವಭಾವದಲ್ಲಿ ಬಹಳ ಪರ್ಫೆಕ್ಷನಿಸ್ಟ್ ಅಂದರೆ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಆದ್ದರಿಂದ ಶೇಷಾದ್ರಿಗಳು ವಹಿಸುತ್ತಿದ್ದ ಎಲ್ಲಾ ಕೆಲಸಗಳನ್ನು ಯಾವುದೇ ತಪ್ಪಿಲ್ಲದೆ, ಅಚ್ಚುಕಟ್ಟಾಗಿ ಮಾಡುತ್ತಾ ಅನೇಕ ವರ್ಷಅವರಜತೆಗಿದ್ದರು. ದೇಶ ವಿಭಜನೆಯ ದುರಂತಕಥೆ, ಆ ಕಾಳರಾತ್ರಿಯ ಪ್ರಶ್ನೆ-ಇತ್ಯಾದಿ ಪುಸ್ತಕ ಹೊರತರುವಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದರು.

1975ರಲ್ಲಿ ತುರ್ತು ಪರಿಸ್ಥಿತಿಯ ವೇಳೆಡಿ.ಆರ್.ಐ. ಆಕ್ಟ್ ಅಡಿಯಲ್ಲಿ ಬಂಧಿಸಲ್ಪಟ್ಟರು. ಜೈಲಿನಲ್ಲಿ ಸ್ವಾಗತಿಸಿದವರೇ ಅಟಲ್ ಬಿಹಾರಿ ವಾಜಪೇಯಿ ಕಹಾಂ ಸೇ ಆಯೇ?' ಎಂದಾಗಕೇಶವಕೃಪಾ’ ಎಂದಿದ್ದ ಕಾ. ಶ್ರೀ. ನಾಗರಾಜರು, ಔರ್ ಸಂಕಷ್ಟ್ ಆನೇ ವಾಲಾ ಹೈ' ಎಂದು ವಾಜಪೇಯಿ ಹೇಳಿದ್ದ ಆ ಕ್ಷಣವನ್ನು ಇಂದಿಗೂ ಸ್ಮರಿಸುತ್ತಾರೆ. ಲಾಲ್‍ಕೃಷ್ಣ ಅಡ್ವಾಣಿಯವರು ಪಕ್ಕದರೂಂನಲ್ಲೇ ಜೈಲೊಳಗಿದ್ದರು. ಸೆಪ್ಟಂಬರ್ 10 ರಂದು ಬಿಡುಗಡೆ, ಬಳಿಕ ಮತ್ತೆ ಕಾಡಿದ ಆರೋಗ್ಯ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು; ನಂತರ ಬೇಗನೇ ಚೇತರಿಸಿ, ಮೈಕೊಡವಿ ಎದ್ದ ಕಾ. ಶ್ರೀ. ನಾಗರಾಜರು ಎಮರ್ಜನ್ಸಿ ಕಾರ್ಯಾಲಯದ ನಿರ್ವಹಣೆಯ ಜವಾಬ್ದಾರಿ ಹೊತ್ತರು. ಜೈಲುಗಳಿಗೆ ಭೇಟಿ, ಮಹತ್ವದ ಪತ್ರ ವ್ಯವಹಾರ ಮಾಡುತ್ತಿದ್ದರು. ಆಗ ನರೇಂದ್ರ ಮೋದಿಯವರು ದೆಹಲಿಯ ಎಮರ್ಜೆನ್ಸಿ ಕಾರ್ಯಾಲಯದ ಪ್ರಮುಖರಾಗಿದ್ದರು. ಈ ಕುರಿತು, ಈಗ ಆರೆಸ್ಸಸ್‍ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾಗಿರುವ ಸುನಿಲ್ ಅಂಬೇಕರ್ ತಮ್ಮ ಪುಸ್ತಕದಿ ಆರೆಸ್ಸೆಸ್: ರೋಡ್‍ಮ್ಯಾಪ್ಸ್ ಫಾರ್‍ದ ಟ್ವೆಂಟಿ ಫಸ್ಟ್ ಸೆಂಚುರಿ’ ಪುಸ್ತಕದಲ್ಲಿ ಬರೆದಿದ್ದಾರೆ.

ತುರ್ತು ಪರಿಸ್ಥಿತಿಯ ನಂತರ ಆ ಐತಿಹಾಸಿಕ ಹೋರಾಟದ ದಿನಗಳ ಕುರಿತು ರಚಿತವಾದ ‘ಭುಗಿಲು’ ಕೃತಿ ರಚನೆಯ ಸಂಪಾದಕೀಯ ತಂಡದಲ್ಲೂ ಕಾರ್ಯನಿರ್ವಹಿಸಿದರು.

1977ರ ಮಾರ್ಚ್ ನಂತರ ಶೇಷಾದ್ರಿಗಳ ಸೂಚನೆಯ ಮೇರೆಗೆ ದೆಹಲಿಗೆ ತೆರಳಿದ ಕಾ. ಶ್ರೀ. ನಾಗರಾಜರು ಹಿರಿಯರಾಗಿದ್ದ ದತ್ತೋಪಂತ ಠೇಂಗಡಿಯವರ ಜತೆಗೆ ಸಹಾಯಕರಾಗಿ ಅಲ್ಪಕಾಲ ಜವಾಬ್ದಾರಿ ನಿರ್ವಹಿಸಿದರು. `ಆಪತ್ಕಾಲೀನ್ ಸಂಘರ್ಷ್’ ಪುಸ್ತಕಕ್ಕೆ ಬೇಕಾದ ಕರ್ನಾಟಕ ಹಾಗೂ ದಕ್ಷಿಣ ಭಾರತದ ಮಾಹಿತಿಗಳನ್ನು ಒದಗಿಸಿದ್ದರು ಕಾ. ಶ್ರೀ. ನಾಗರಾಜರು.

1977ರಲ್ಲಿ `ಪುಂಗವ’ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರ ಸಂಸ್ಥಾಪಕ ಪ್ರಕಾಶಕರಾಗಿ, ಸಂಪಾದಕರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.

1982ರಲ್ಲಿ ಹಿಂದೂ ತರುಣ ಶಿಬಿರದ ನಂತರದ ಮತ್ತೆ ಸಂಘ ಕ್ಷೇತ್ರದ ಜವಾಬ್ದಾರಿ. 1982ರಿಂದ 1984ರ ತನಕ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಗರ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. 1984 ರಿಂದ 86ರ ತನಕ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು.
1986ರಿಂದ ಮತ್ತೆ ಕೇಶವಕೃಪಾ ಕಾರ್ಯಾಲಯಕ್ಕೆ ಮರಳಿದ ಕಾ. ಶ್ರೀ. ನಾಗರಾಜರು ಇಂದಿಗೂ ಕೇಶವಕೃಪಾ ಕೇಂದ್ರಿತವಾಗಿ ಸಕ್ರಿಯ ಬರವಣಿಗೆ, ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

1987-88ರಲ್ಲಿ ಕೇಶವ ಕೃಪಾದ ಅಭಿಲೇಖಾಗಾರದ (ಡಾಕ್ಯುಮೆಂಟೇಷನ್) ಜವಾಬ್ದಾರಿ ನಿವರ್ಹಿಸಿದರು. ಇದೇ ವೇಳೆ ಶೇಷಾದ್ರಿಗಳ ಜೊತೆ ದೇಶಾದ್ಯಂತ ಪ್ರವಾಸದ ಸಂದರ್ಭದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಈ ವೇಳೆ ಒರಿಸ್ಸಾ ಹಾಗೂ ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.

ಮಹತ್ವದ ಕೃತಿಗಳು ಈ ಕೆಳಗಿನಂತಿದೆ.

 1. ಮಹಾಭಾರತ ಕಥಾಲೋಕ
 2. ರಾಮಾಯಣ ಕಥಾಮಾಲಾ
 3. ಝಾನ್ಸಿರಾಣಿ ಲಕ್ಷ್ಮೀಬಾಯಿ
 4. ಹೈದರಾಬಾದ್ ಮುಕ್ತಿಗಾಥೆ
 5. ಶ್ರೀಮತ್ ಭಗವತ್‍ಗೀತಾ ಸರಸ್ವತಿ
 6. ದಿಗ್ಗಜರ ದಿಕ್ಸೂಚಿ (1, 11)
 7. ಭಕ್ತಿ ಮುಕ್ತಿ ಶೌರ್ಯ ಸಂಪದ
 8. ಸಿಡಿದೆದ್ದ ಭಾರತ
 9. ಛತ್ರಪತಿ ಶಿವಾಜಿ ಕಥಾಲೋಕ
 10. ಹಿಂದು ವಿಜಯ ಸೌರಭ
 11. ಏಕರಸ ಭಾರತ
 12. ಯುಗಯಾತ್ರೀ ಮಹಾಭಾರತ
 13. ರಾಮಚರಿತಮಾನಸ (ಗಧ್ಯಧಾರಾ
 14. ಅಗ್ನಿಕನ್ಯೆ ನಿವೇದಿತಾ (ಶ್ಲೋಕ ಮತ್ತು ಅರ್ಥ) ಮತ್ತು 12 ಇತರ ಕೃತಿಗಳು
 15. ಶ್ರೀಮತ್ ವಿವೇಕಾನಂದರ ಜೀವನಗಂಗಾ
 16. ನಾರೀ ಶುಭಂಕರೀ
 17. ವ್ಯಾಸ ಭಾರತ ಕಥಾಮೃತ-1
 18. ಯುವ ಸಂಕುಲದೊಡನೆ ಸಂವಾದ – 1, 11, 111
 19. ಮಹಾರಾಣಾ ಪ್ರತಾಪಸಿಂಹ
 20. ಛೇ! ಇಂದಿರಾ ಸರ್ವಾಧಿಕಾರ
 21. ಶ್ರೀರಾಮಚರಣ ಬೆಂಬತ್ತಿ
 22. ಅಯೋಧ್ಯೆಯ ವಿಜಯಧ್ವನಿ
 23. ವಿವೇಕಾನಂದ ಶಿಲಾಸ್ಮಾರಕ-ನಿರ್ಮಾಣಗಾಥೆ
 24. ಶ್ರೀರಾಮ ಸದ್ಗುಣ ಸೌರಭ
 25. ಸಿಡಿದೆದ್ದ ಭಾರತ-8 (ರಾಷ್ಟ್ರೀಯ ಅಪಮಾನ, ಸಂಮಾನಗಳು)
 26. ರಾಷ್ಟ್ರೀಯ ಪುನರುತ್ಥಾನ ಬಿಳಿಲು-ಹೊಳಹು (ಆರೆಸ್ಸಸ್ ಶತಮಾನಸಂಭ್ರಮದತ್ತ)
 27. ಮಹರ್ಷಿ ವ್ಯಾಸ ರಸದೌತಣ
 28. ಸ್ವರಾಜ್ಯಸ್ಥಾಪಕ ಶಿವಛತ್ರಪತಿ
 29. ಏಕರಸ ಭಾರತ (ಸಂಕ್ಷಿಪ್ತ)
 30. ಭಾರತ ಮೂರಾಬಟ್ಟೆ
 31. ಧರ್ಮಸಂಸ್ಥಾಪಕ ಶ್ರೀಕೃಷ್ಣ
 32. ಜಗದಗಲ ಝಗಮಗ
 33. ಧರ್ಮಸಂರಕ್ಷಕ ಶ್ರೀಕೃಷ್ಣ

ಹಿಂದಿಯಿಂದ ಕನ್ನಡಕ್ಕೆ

 1. ಅಜ್ಞಾತ ಬಲಿದಾನಗಳ ವೀರಗಾಥೆ
 2. ಸಂತ ತುಲಸೀದಾಸರ ರಾಮಚರಿತಮಾನಸ
 3. ಬೆಳಗಿದರು ಪ್ರಾಣದೀಪದಾರತಿ – 1, 11

  ಇಂಗ್ಲೀಷಿನಿಂದ ಕನ್ನಡಕ್ಕೆ
 4. ದೇವಿಭಜನೆಯ ದುರಂತ ಕಥೆ
 5. ಪ್ರಾಣಾಯಾಮ ದೀಪಿಕಾ
 6. ಇಂಗ್ಲೀಷ್: Foot Prints Bare Witness

ಆರೆಸ್ಸಸಿನ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿಯವರಿಂದ ಮೊದಲ್ಗೊಂಡು ಈಗಿನ ಸರಸಂಘಚಾಲಕ ಡಾ. ಮೋಹನ್ ಭಾಗವತ್‍ರ ತನಕ ಎಲ್ಲ ಸರಸಂಘಚಾಲಕರ ಜೊತೆಗೆ ಆತ್ಮೀಯ ಸಂಬಂಧ, ತಮ್ಮದೇ ವಿಶಿಷ್ಟ ಶೈಲಿಯ ಸಂಪರ್ಕ, ಸದಾಕ್ರಿಯಾಶೀಲ ವ್ಯಕ್ತಿತ್ವ, ಪ್ರತಿನಿತ್ಯ ಪತ್ರಿಕೆಯ ಓದು, ಟಿ.ವಿ ವೀಕ್ಷಣೆ. ರಾಷ್ಟ್ರೀಯ, ರಾಜಕೀಯ, ಸಾಮಾಜಿಕ ಸುದ್ದಿಗಳ ನಿಖರ ಮಾಹಿತಿ ಸಂಗ್ರಹದ ಕೌಶಲ್ಯ, ಕೇಶವಕೃಪಾಕ್ಕೆ ಬಂದ ಎಲ್ಲಾ ಕಾರ್ಯಕರ್ತರೊಂದಿಗೆ ಆತ್ಮೀಯ ಮಾತುಕತೆ. ಶಂಕರ ಶಾಖೆಯ ಪುಟಾಣಿಗಳಿಗೆಲ್ಲ ನೆಚ್ಚಿನ ಹಿರಿಯಜ್ಜ. ಪ್ರತಿನಿತ್ಯ ಶಾಖೆ, ಪ್ರಾರ್ಥನೆ, ಸಂಘದ ಎಲ್ಲಾ ಉತ್ಸವ, ಅಪೇಕ್ಷಿತ ಎಲ್ಲಾ ಬೈಠಕ್‍ಗಳಲ್ಲಿ ಉಪಸ್ಥಿತಿ. ಪುಂಗವ, ವಿಕ್ರಮ, ಉತ್ಥಾನ, ಆರ್ಗನೈಸರ್, ಹೊಸದಿಗಂತ, ಸೇರಿದಂತೆ ಪತ್ರಿಕೆಗಳಲ್ಲಿ ನಿಯಮಿತ ಲೇಖನಗಳು. ಕೊರೋನಾದ ಲಾಕ್‍ಡೌನ್ ಸಂದರ್ಭದಲ್ಲೂ ಅವಿರತ ಬರವಣಿಗೆಗಳು, ಹೊಸಪುಸ್ತಕಗಳು ರಚನೆಯಲ್ಲಿ ಮಗ್ನ – ಹೀಗೆ ಲವಲವಿಕೆಯ ಜೀವನೋತ್ಸಾಹ, ಕಾರ್ಯಚಟುವಟಿಕೆ ಕಾ. ಶ್ರೀ. ನಾಗರಾಜರದ್ದು.

ಯುವಜನ ಪ್ರೇರಕ ಉಪನ್ಯಾಸ ಮಾಲೆ, ಗಾಯತ್ರಿ ಮಂತ್ರ ಪಠಣ-ಬೋಧನೆ ಕಾರ್ಯಕ್ರಮಗಳು ಸೇರಿದಂತೆಡ ಅನೇಕ ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೇರಿದಂತೆ ಅನೇಕ ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದೀಗ 90ನೇ ವಸಂತಕ್ಕೆ ಕಾಲಿಡುತ್ತಿರುವ ಕಾ. ಶ್ರೀ. ನಾಗರಾಜರಿಗೆ ಅವರ ಎಲ್ಲಾ ಹಿತೈಷಿಗಳ ಪರವಾಗಿ ಅಭಿನಂದನೆಗಳು.

– ರಾಜೇಶ್ ಪದ್ಮಾರ್

ರಾಜೇಶ್ ಪದ್ಮಾರ್

ಪ್ರಾಂತ ಸಹಪ್ರಚಾರ ಪ್ರಮುಖರು, ಆರೆಸ್ಸೆಸ್

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಜಕಾರಣದೊಳಗಿನ ದಾರ್ಶನಿಕ ವ್ಯಕ್ತಿತ್ವ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ

Sat Sep 25 , 2021
ರಾಜಕಾರಣದೊಳಗಿನ ದಾರ್ಶನಿಕ ವ್ಯಕ್ತಿತ್ವ ಪಂಡಿತ್ ದೀನ್‌ದಯಾಳ್ ರಾಷ್ಟ್ರವೆಂಬ ಚಿಂತನೆಯ ಬೆಳಕಿಂಡಿ ತೋರಿದವರು (ಕೃಪೆ: ವಿಜಯ ಕರ್ನಾಟಕ) ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಏಕಾತ್ಮಮಾನವ ದರ್ಶನದ ಮೂಲಕ ಭಾರತವನ್ನು ನೋಡಬೇಕಾದ ಭಾರತೀಯ ದೃಷ್ಟಿಯನ್ನು ತೋರಿಸಿಕೊಟ್ಟವರು.ರಾಷ್ಟ್ರೀಯತೆಯನ್ನು ಕುರಿತಾದ ಅವರ ಚಿಂತನೆಗಳು ಭಾರತೀಯರು ಕಂಡುಕೊಂಡ ರಾಷ್ಟ್ರೀಯತೆಯ ಸ್ವರೂಪ ವೈಶಿಷ್ಟ್ಯವನ್ನು ಪ್ರತಿಪಾದಿಸಿದೆ. ಪಶ್ಚಿಮ ದೇಶಗಳ ಸಿದ್ಧಾಂತಗಳಿಗೆ ಹೋಲಿಸಿದರೆ ಇವೆರಡೂ ಸಂಘರ್ಷರಹಿತವಾದ, ಮನುಕುಲದ ಏಳ್ಗೆಯ ಹಾಗೂ ಲೋಕದ ಸೃಷ್ಟಿಯ ಸಮಸ್ತದೊಂದಿಗೆ ಸಮನ್ವಯವನ್ನು ಸಾಧಿಸುವ ಸಿದ್ದಾಂತವಾಗಿದೆ. ದೀನ್‌ದಯಾಳ್ ಉಪಾಧ್ಯಾಯರು ಭಾರತ […]