ಭಾರತ ಮಾತೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು

ಭರತ ಖಂಡವನ್ನು ಅರಿಯ ಬೇಕಾದರೆ ಸ್ವಾಮಿ ವಿವೇಕಾನಂದರನ್ನು ಅರಿತರೆ ಸಾಕು ಅವರೇ ಸಂಕ್ಷಿಪ್ತ ಭರತ ಖಂಡ… ಎಂಬ ಮಾತೇ ಭಾರತಕ್ಕೂ ವಿವೇಕಾನಂದರಿಗೂ ನಡುವೆ ಇರುವ ಉತ್ಕೃಷ್ಟ ಸಂಬಂಧದ ಶ್ರೇಷ್ಠತೆಯನ್ನು ಸೂಚಿಸುತ್ತದೆ. ಅಧಃಪತನದತ್ತ ಸಾಗುತ್ತಿರುವ ಭರತಖಂಡದ ವೈಭೋಗವನ್ನು ಮರುಳಿಸಲು ತಮ್ಮ ಆಧ್ಯಾತ್ಮ ಚಿಂತನೆಯಿಂದ ಸಾಫಲ್ಯ ಗೊಳಿಸಿದ ಧೀಮಂತರು.ಈ ನಿಟ್ಟಿನಲ್ಲಿ ಅವರ ಪರಿಶ್ರಮ ಕೊಡುಗೆ ಅಪಾರ. ಪಥನದಿಂದ ಅಭ್ಯುದಯದ ಕಡೆಗೆ ಪ್ರಯಾಣ ಮಾಡುತ್ತಿರುವ ಭರತಖಂಡದ ರಥವನ್ನು ಎತ್ತಿ ಹಿಡಿದು,ಜಗದ ನಿಕೃಷ್ಟ ದೃಷ್ಟಿಗೆ ಪಾತ್ರವಾದ ಭರತಖಂಡಕ್ಕೆ ಗೌರವ ತಂದರು.

ಆದರ್ಶ ಪುರುಷ

———————————

1867ನೇ ಇಸವಿ ಜನವರಿ 12ರಂದು ಜನಿಸಿದ ವಿವೇಕಾನಂದರದ್ದು ಸುಸಂಸ್ಕೃತ ಜೀವ ಮಹಾಜ್ಞಾನಿ. ಹೊಮ್ಮುವ ಮೇರೆ ಮೀರಿದ ಕಾಂತಿ. ಅಪಾರ ಅನುಭವದ ದಿವ್ಯಶಕ್ತಿ ಹೊಂದಿದ ಇವರು ಕೇವಲ 39ವರ್ಷ 6 ತಿಂಗಳು ಮಾತ್ರ ಬದುಕಿದ್ದರೂ ಜಗತ್ತು ಕಂಡ ಮಹಾಪುರುಷರಲ್ಲಿ ಒಬ್ಬರೆನಿಸಿಕೊಂಡರು.

ಮಾತೃಭೂಮಿಯನ್ನು ಆಮೂಲಾಗ್ರವಾಗಿ ಜಾಗೃತಗೊಳಿಸುವುದು, ನಮ್ಮ ದೇಶದ ಅಧ್ಯಾತ್ಮಿಕತೆಯನ್ನು 

ಉತ್ತುಂಗಕ್ಕೇರಿಸುವುದು ತುಂಬಿ ತುಳುಕುತ್ತಿರುವ ದಾರಿದ್ರ್ಯವನ್ನು ಹೋಗಲಾಡಿಸುವುದು ,ಭರತಖಂಡವನ್ನು ಕಾರ್ಯೋನ್ಮುಖ ಗೊಳಿಸಿ ಜಗತ್ತನ್ನು ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಗೆಲ್ಲುವುದು ವಿವೇಕಾನಂದರ ಗುರಿಯಾಗಿತ್ತು .

ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶ ಭರತ ಖಂಡದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಎಲ್ಲಾ ದೇಶ ಭಾಷೆಗಳ ಮೂಲಕವಾಗಿ ಹಬ್ಬಿ ಹರಡುತ್ತಿದೆ.

ನರೇಂದ್ರ ತಮ್ಮ ಗುರುಗಳಾಣತಿಯನ್ನು ಪಾಲಿಸುವುದಕ್ಕೆ ವಿವೇಕಾನಂದರಾದರು.ಭರತಖಂಡದಲ್ಲಿ ತಲೆಯಿಂದ ಕಾಲಿನವರೆಗೆ ಅಲೆದರು. ಜನರ ದೌರ್ಬಲ್ಯವೇನು ಈ ದೇಶದಲ್ಲಿ ಎಂತಹ ಅದರ್ಶ ಹಿಂದೆ ಇತ್ತು.ಈಗ ಎಂತಹಾ ಅದೋಗತಿಗೆ ಇಳಿದಿರುವರು ಅವರನ್ನು ಮೇಲೆತ್ತಬೇಕಾದರೆ ಏನು ಮಾಡಬೇಕು ಎಂಬುದನ್ನೆಲ್ಲಾ ಕನ್ಯಾಕುಮಾರಿಯ ಕೊನೆಯ ಬಂಡೆಯ ಮೇಲೆ ಕುಳಿತು ವಿಹಂಗಮ ದೃಷ್ಟಿಯಲ್ಲಿ ಅಲೋಚಿಸಿದರು. ತಾವು ಏನು ಮಾಡಬೇಕೆಂದು ನಿರ್ಧರಿಸಿದರು.ಅಮೆರಿಕಾ ದೇಶಕ್ಕೆ ಹೋಗಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿ ಹೊಸ ಅಲೆಯನ್ನೇ ಎಬ್ಬಿಸಿದ್ದರು.

ಬಾಲ್ಯ ಯವ್ವನ

———————

ಭಾಲ್ಯದಿಂದಲೂ ಕರುಣಾಮಯಿಯೂ,ಪರೋಪಕಾರಿಯೂ,ಪ್ರಾಣಿ ಪಕ್ಷಿ ಹಾಗೂ ದುರ್ಬಲರ ಮೇಲೆ ವಿಶೇಷ ಅಕ್ಕರೆಯುಳ್ಳವರಾಗಿದ್ದರು.

  ಅಂಜಿಕೆ ಅಳುಕಿಲ್ಲದ ದೈರ್ಯವಂತರೂ ಆಗಿದ್ದ ಇವರು ದಿವ್ಯ ತೇಜಸ್ಸು ಹೊಂದಿದ್ದರು.ಗರಡಿ ಮನೆಯಲ್ಲಿ ಪಳಗಿ ಕುಸ್ತಿ,ಬೈಠಕ್,ಲಾಠಿ ಈಜುವುದು ದೋಣಿ ಚಾಲನೆಯನ್ನು ಕಲಿತಿದ್ದರು.ಪಾಶ್ಚ್ಯಾತ,ವಿಜ್ಞಾನ,ತತ್ವ,ಸಾಹಿತ್ಯ ಮುಂತಾದವುಗಳನ್ನು ಹೀರಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು.

ಆದರೆ ಲೌಕಿಕ ಜೀವನದತ್ತ ಆಕರ್ಷಿತರಾಗದ ನರೇಂದ್ರ ಹರೆಯದಲ್ಲಿ ಮದುವೆಯನ್ನು ನಿರಾಕರಿಸಿದರು. ವೈರಾಗ್ಯ ಅವರಿಗೆ ಜನ್ಮದಿಂದಲೇ ಬಂದ ಗುಣವಾಗಿತ್ತು.

 ಆಪ್ತ ಗುರುಗಳಾದ  ರಾಮಕೃಷ್ಣ ಪರಮಹಂಸರ ಜೊತೆಗಿನ ಸಂಬಂಧ

—————————————

ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರದ್ದು ಅನ್ಯೋನ್ಯ,ಪವಿತ್ರ  ಗುರು- ಶಿಷ್ಯ, ತಂದೆ-ಮಗನ ಸಂಬಂದ.

 ರಾಮಕೃಷ್ಣ ಪರಮಹಂಸರು ಅವರನ್ನು ತಾವು ಅಧ್ಯಾತ್ಮಿಕ ಜೀವನದಲ್ಲಿ ಯಾವ ಶಿಖರ ಮುಟ್ಟಿದರೋ ಅದೇ ಎತ್ತರಕ್ಕೆ ಕರೆದೊಯ್ದು ತಮ್ಮ ತಪ ಶಕ್ತಿಯನ್ನು ಧಾರೆಯೆರೆದವರು.ನರೇಂದ್ರನನ್ನು ಸ್ಪರ್ಶಮಾಡಿ ಇಂದ್ರಿಯಾತೀತ ಅನುಭವಕ್ಕೆ ಕಳಿಸುತ್ತಿದ್ದರು.

ಸನ್ಯಾಸ ಸ್ವೀಕಾರ

———————-

ವಿವೇಕಾನಂದರು ಭರತ ಖಂಡದ ಜನರ ಮತ್ತು ಸ್ಥಳಗಳ ಪ್ರತ್ಯಕ್ಷ ಅನುಭವವನ್ನು ಪಡೆಯ ಬಯಸಿ ಪಾರಿವ್ರಾಜಕರಾಗಿ ಹೊರಟರು.ಆಗಿನ್ನೂ ಜಗದ್ವಿಖ್ಯಾತಿ ಯಾಗದ ಸಾಮಾನ್ಯ ಸನ್ಯಾಸಿಗಳಲ್ಲಿ ಇವರೂ ಒಬ್ಬರಾಗಿದ್ದರು. ಕೆಲವು ವೇಳೆ ರಾಜರ ಅತಿಥಿಗಳಾಗುತ್ತಿದ್ದರು.ಮತ್ತೆ ಕೆಲವು ವೇಳೆ ಬಡವರ ಜೋಪಡಿಯಲ್ಲಿ ತಂಗುತ್ತಿದ್ದರು.ಕೆಲವೊಮ್ಮೆ ಘನ ವಿದ್ವಾಂಸರೊಡನೆ ಕೆಲವೊಮ್ಮೆ ನಿರಕ್ಷರರೊಂದಿಗೆ,ಹೀಗೆ ಎಲ್ಲಾ ವರ್ಗದ ಜನರೊಡನೆ ಬೆರೆತು ಅನುಭವ ಪಡೆಯುತ್ತಿದ್ದರು.

ಒಮ್ಮೊಮ್ಮೆ ತಿರಸ್ಕಾರ,ಅವಮಾನ,ಉಪವಾಸ,ಹೀಗೆ ಭರತ ಖಂಡದಲ್ಲಿ ಅರಮನೆಯಿಂದ ಗುಡಿಸಿಲವರೆಗೆ ,ಪಂಡಿತರಿಂದ ಪಾಮರರವರೆಗೆ ಪ್ರತ್ಯಕ್ಷ ಅನುಭವ ಸಂಪಾದಿಸಿದರು.

ಹಿಂದೆ ಧರ್ಮಕ್ಕೆ ಧಾನಕ್ಕೆ, ತಪಸ್ಸಿಗೆ ತವರೂರಾದ ಭರತಖಂಡ ಇಂದು ಅಜ್ಞಾನಿಗಳ ಕೊಂಪೆಯಾಗಿರುವುದನ್ನು ನೋಡಿ ಅವರ ಹೃದಯ ಕರಗಿ, ಹೇಗಾದರೂ ಮಾಡಿ ಭರತಖಂಡವನ್ನು ಪುನಃ ಮೇಲೆತ್ತಬೇಕೆಂಬ ಆಸೆಯೊಂದು ಅವರ ಮನಸ್ಸನ್ನು ಆವರಿಸಿತು.

ಹಸಿದವನಿಗೆ ಧರ್ಮ ಭೋದಿಸುವುದು ತರವಲ್ಲ.ಬಡವರು ಪಶುಗಳಂತೆ ಜೀವಿಸುತ್ತಿರುವರು,ಅದಕ್ಕೆ ಅಜ್ಞಾನವೇ ಕಾರಣ ಹಿಂದೆ ಬಿದ್ದವರನ್ನು ಉದ್ಧರಿಸಬೇಕು ನಾವು ಜನಾಂಗದ ವ್ಯಕ್ತಿತ್ವವನ್ನು ಕಳೆದುಕೊಂಡಿರುವೆವು.ಅದೇ ಭರತ ಖಂಡದಲ್ಲಿ ಎಲ್ಲಾ ವಿಪತ್ತಿಗೂ ಕಾರಣ.ಕಳೆದುಕೊಂಡ ವ್ಯಕ್ತಿತ್ವವನ್ನು ದೇಶಕ್ಕೆ ಪುನಃ ಕೊಡಬೇಕು.ಹಿಂದೆ ಬಿದ್ದವರನ್ನು ಉದ್ಧರಿಸಬೇಕು ಎಂದು ನಿರ್ಧರಿಸಿದರು.ಎಂದು ನಿರ್ಧರಿಸಿದರು.ಭಗವಂತನ ಸಾಕ್ಷಿಯಾಗಿ ಎಲ್ಲರೆದುರಿಗೆ ಸನ್ಯಾಸ ಸ್ವೀಕರಿಸಿ ಶಾರದಾನಂದ,ಅದ್ಭುತಾನಂದ,ಯೋಗಾನಂದ,ಪ್ರೇಮಾನಂದ,ನಿರಂಜನಾನಂದ ರಾಮಕ್ರಷ್ಣನಂದ ಮುಂತಾದ ಹೆಸರನ್ನು ಹೊಂದಿದರು.

ವಿದೇಶಕ್ಕೆ ಹೊರಡುವ ಮುಂದೆ ವಿವೇಕಾನಂದ ಎಂಬ ಹೆಸರನ್ನು ಇಟ್ಟುಕೊಂಡರು.

ಕಾಡು ಮೇಡೆನ್ನದೆ ತನ್ನ ಸಹಚರ ರೊಡನೆ ಕಾಲ್ನಡಿಗೆಯಲ್ಲಿ ಅಲೆದರು,ಕಾಶಿ,ಬಾರಾನಗರ ಮಠ, ರಾಮನ ಜನ್ಮಸ್ಥಳವಾದ ಅಯೋದ್ಯೆ,,ಲಕ್ನೋ, ತಾಜ್ ಮಹಲ್ ಅನ್ನು  ಹೊಂದಿದ ಆಗ್ರಾ,ಭಾಗಲ್ಪುರ ,ಮೀರತ್, ದೆಹಲಿ,ಆಳ್ವಾಸ್,ಜಯಪುರ,ಅಹಮದಾಬಾದ್,ವಾಗ್ದಾನ್, ಪೋರಬಂದರ್ ,ಹೀಗೆ ಎಲ್ಲ ಕಡೆ ತಂಗಿ ಬಿಕ್ಷೆಯಿಂದ ಜೀವಿಸುತ್ತಿದ್ದರು,ಭೋದಿಸುತ್ತಿದ್ದರು,ಪ್ರತಿಯೊಂದು ಸ್ಥಳದಲ್ಲಿಯೂ ಭೋದಿಸಲು ಹೊಸ ವಿಷಯ ಅನುಭವ ದೊರಕುತಿತ್ತು.

ಬರೋಡಾ ಬಾಂಬೆ ಕೊಲ್ಲಾಪುರದಲ್ಲೆಲ್ಲಾ ತಂಗಿ ಬೆಳಗಾವಿಗೆ ಬಂದರು.ಹೀನ ಸ್ಥಿತಿಯಲ್ಲಿರುವ ನಮ್ಮ ಬಡವರಿಗೆ ವಿದ್ಯೆಯನ್ನು  ನೀಡಿ  ಪುನಃ ಮಾನವರಾಗಿ ಮಾಡಲು ವೈಭವೋಪೇತ ರಾಷ್ಟ್ರ ನಿರ್ಮಾಣಕ್ಕೆ ನಾವು ಮಾಡಬೇಕಾದುದೇನು ಎಂಬುದೆಲ್ಲ ಮನನ ಮಾಡುತ್ತಾ ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಭರತಖಂಡದ ಅದಃ ಪಥನಕ್ಕೆ ಮೂಲ ಕಾರಣವನ್ನು ಯೋಚಿಸತೊಡಗಿದರು.ಸ್ವಾಮೀಜಿಯವರನ್ನು ಮಹಾ ಸಾಧಕರಾಗುವಂತೆ ಮಾಡಿದ ಸ್ಥಳವೇ ಇದು.

ಸರ್ವ ಧರ್ಮ ಸಮ್ಮೇಳನ

———————————

ಪೋರಬಂದರಿನ ದಿವಾನರಾದ ವೈದಿಕ ವಿದ್ವಾಂಸರ ಸಲಹೆಯಂತೆ ಪಾಶ್ಚ್ಯಾತ್ಯ ದೇಶಕ್ಕೆ ಹೋಗಿ ನಮ್ಮ ಸನಾತನ ಧರ್ಮ ಭೋದಿಸಿ ಅವರ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಲು ಮುಂದಾದರು.ಇದರ ಪ್ರತಿಫಲವೇ ಚಿಕಾಗೋ ನಗರದಲ್ಲಿ ನೆಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗಿಯಾದದ್ದು.ಎಲ್ಲಾ ಧರ್ಮದವರನ್ನು ಒಟ್ಟುಗೂಡಿಸಿ ಒಬ್ಬರು ಇನ್ನೊಬ್ಬರ ಅಭಿಪ್ರಾಯವನ್ನು ತಿಳಿದು ಜಾತಿ ದ್ವೇಷಗಳನ್ನು ಕಡಿಮೆ ಮಾಡಬೇಕೆಂಬುದು ಈ ಸಮ್ಮೇಳನದ ಉದ್ದೇಶವಾಗಿತ್ತು.

ಧರ್ಮವೇ ಭಾರತೀಯರ ಪ್ರಾಣದ ಉಸಿರು.ಧರ್ಮ ಜಾಗೃತಿಯ ಮೂಲಕ ಭರತ ಖಂಡ ಉದ್ದಾರವಾಗಬೇಕು ಎಂದು ಅರಿತ ಅವರು ಕೆಲವು ಸಹೃದಯಿ ರಾಜರುಗಳ ಸಹಾಯದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಿ ಚಿಕಾಗೋ ನಗರದಲ್ಲಿ ನೆಡೆದ ಮಹಾ ಸಮ್ಮೇಳನದಲ್ಲಿ ಭಾಗವಹಿಸಿ,ಜಗತ್ತಿನ ನಾನಾ ಭಾಗಗಳಿಂದ ಆಯಾ ಧರ್ಮಕ್ಕೆ ಸೇರಿದ ಹಲವು ವಿದ್ವಾಂಸರ ಸಮ್ಮುಖದಲ್ಲಿ ತಮ್ಮ ಸರದಿ ಬಂದಾಗ ಸಭೆಯನ್ನು ಉದ್ದೇಶಿಸಿ  *ಅಮೆರಿಕಾದ ಸಹೋದರ ಸಹೋದರಿಯರೇ*  ಎಂದು ಸಂಬೋಧಿಸಿದರು

ಸುಂದರ ತೇಜಸ್ವಿ,ಯಾದ ವಿವೇಕರ ಈ ಅಪ್ಯಾಯಮಾನವಾದ ಮಾತಿಗೆ ಸಿಡಿಲಿನ ಗದ್ದಲದಂತೆ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತು.ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮದ ತತ್ವವನ್ನು ,ನಾಗರೀಕತೆ ಸಂಸ್ಕೃತಿಯ ಮಹತ್ವವನ್ನು ಸಿಂಹವಾಣಿಯಲ್ಲಿ  ಬೋಧಿಸಿದರು.ನಮ್ಮ ದೇಶ ಯಾವ ದೇಶಕ್ಕೂ ಕೀಳಲ್ಲ ಎಂದು ಸಾರಿದರು. ಎಲ್ಲಾ ದೇಶಗಳ ಎದುರು ನಮ್ಮ ದೇಶ ಗೌರವದಿಂದ ಎತ್ತಿ ನಿಲ್ಲುವಂತೆ ಮಾಡಿದರು.ಅವರ ಭಾಷಣದ ಶೈಲಿ ,ಭಾವಗಳು ಎಲ್ಲರನ್ನು ಆಕರ್ಷಿಸಿತು.ಭರತ ಖಂಡವೆಂದರೆ ಅದೊಂದು ಕಾಡು ಜನರು ಇರುವ ದೇಶವೆಂದು ತಿಳಿದಿದ್ದರು. ಈ ಕಳಂಕವನ್ನು ವಿವೇಕಾನಂದರು ಹೋಗಲಾಡಿಸಿದರು.

ಮರಳಿ ಭಾರತಕ್ಕೆ

————————–

ಮೂರು ವರ್ಷಗಳ ಕಾಲ ಅಮೆರಿಕಾದಲ್ಲಿ ಉಪನ್ಯಾಸ ಮಾಡಿ,ರಾಮಕೃಷ್ಣ ಪರಮಹಂಸರ ಸಂದೇಶವನ್ನು ಜಗತ್ತಿಗೆ ಸಾರಿ ನಂತರ ಭಾರತಕ್ಕೆ ಮರುಳಿದ ಸ್ವಾಮೀಜಿ ಪ್ರಚಂಡ ಬಿರುಗಾಳಿಯಂತೆ ಸಂಚರಿಸಿದರು.ಯುವ ಜನತೆಗೆ *ಏಳಿ ಎದ್ದೇಳಿ  ಎಚ್ಚರಗೊಳ್ಳಿ ಪುರುಷ ಸಿಂಹರಾಗಿ* ಎಂದು ಎಚ್ಚರಿಸಿದರು.

ಶತಮಾನಗಳ ಮೂಢನಂಬಿಕೆಯನ್ನು ಹೋಗಲಾಡಿಸಿ ಬಾಲ್ಯವಿವಾಹದಂತ ಪೈಶಾಚಿಕ ಸಂಪ್ರದಾಯವನ್ನು,ಅಸ್ಪ್ರಶ್ಯತೆಯನ್ನು ಬೇರು ಸಮೇತ ಕಿತ್ತು ಹಾಕುವಂತೆ ತಿಳಿಸಿದರು ಸ್ತ್ರೀಯರಿಗೆ .ಗೌರವ,ವಿದ್ಯಾಭ್ಯಾಸ,ಬಡವರಿಗೆ ವಾಸಿಸಲುಮನೆ,ಬಟ್ಟೆಬರೆ,ವೈದ್ಯರ ಶುಶ್ರೂಷೆ ನೀಡಬೇಕೆಂದು ಕರೆನೀಡಿದರು.ಜಾತಿ ಭೇದವನ್ನು ಹೋಗಲಾಡಿಸಿ ಎಲ್ಲಾ ಜಾತಿ ಮತವನ್ನು ಗೌರವಿಸಬೇಕೆಂದು ಭೋದಿಸಿದರು.

ಮಹಾ ಸಂಘ ಸ್ಥಾಪನೆ

———————————–

ರಾಮಕೃಷ್ಣ ಮಹಾಸಂಘವನ್ನು ಸ್ಥಾಪಿಸಿ ಭರತಖಂಡದ ನಾನಾ ಕಡೆಗಳಲ್ಲಿ ಅದರ ಶಾಖೆಯನ್ನು ತೆರೆದರು . ಪರೋಪಕಾರಕ್ಕಾಗಿ ಸ್ವಾಮೀಜಿ ಹಲವು ಸಂಸ್ಥೆಗಳ ಅವಶ್ಯಕತೆಯನ್ನು ಮನಗೊಂಡು. ವಿದ್ಯಾ ಸಂಸ್ಥೆಗಳು,ಆಸ್ಪತ್ರೆಗಳು,ತಾಂತ್ರಿಕ-ಔದ್ಯೋಗಿಕ ಶಿಕ್ಷಕಾಲಯಗಳು ಮುಂತಾದವುಗಳನ್ನು ತೆರೆದರು.ಅನ್ನದಾನ,ವಿದ್ಯಾದಾನ ಜ್ಞಾನಧಾನಗಳ ಕಡೆಗೆ ಗಮನ ಸೆಳೆದರು.ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗಗಳ ಮೇಲೆ ಉಪನ್ಯಾಸ ನೀಡಿ,ದೇಶಭಕ್ತಿಯಿಂದ ತುಂಬಿ ತುಳುಕುವ ಸಂದೇಶ ನೀಡಿದರು.ಹಗಲು ರಾತ್ರಿ ದುಡಿದು ದೇಶಕ್ಕೆ ಒಂದು ನವಸಂದೇಶ ಸಾರಿದರು.ಮಲಗಿದ್ದ ಭರತಖಂಡವನ್ನು ಎಚ್ಚರಿಸಿದರು.ಭಾರತಾಂಬೆ ಬಂಜೆ ಆಗಿಲ್ಲ.ಹಿಂದೆ ಹೇಗೆ ದೊಡ್ಡ ಮಹಾತ್ಮರಿಗೆ ಜನ್ಮವಿತ್ತಳೋ ಹಾಗೆಯೇ ಈಗಲೂ ನೀಡುತ್ತಿರುವಳು ಮುಂದೆಯೂ ಅನೇಕರಿಗೆ ನೀಡುವಳು.ಭಾರತಾಂಬೆ ಅನ್ಯರೆದುರಿಗೆ ತಲೆ ತಗ್ಗಿಸಬೇಕಾಗಿಲ್ಲ ಹೆಮ್ಮೆಯಿಂದ ತಲೆ ಎತ್ತಬೇಕು.ಸ್ವಾಮಿ ವಿವೇಕಾನಂದರು ಕುಗ್ಗಿಹೋಗಿದ್ದ ಜನಾಂಗಕ್ಕೆ ಆತ್ಮಗೌರವ ಒದಗಿಸಿಕೊಟ್ಟರು.ಜನಮನದಲ್ಲಿ ಚಿರಸ್ಥಾಯಿಯಾದರು.

ಉಷಾ ದಿನೇಶ್ ಶೇಟ್ 

ಶಿವಮೊಗ್ಗ

ಉಷಾ ದಿನೇಶ್ ಶೇಟ್

ಗೃಹಿಣಿ,ಶಿವಮೊಗ್ಗ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮತಾಂಧತೆ ಕೊನೆಗೊಳ್ಳಲಿ, ಮಾನವತೆ ಮೇಳೈಸಲಿ!

Fri Jan 14 , 2022
ರೋಮನ್ನರು ಜೆರುಸಲೇಂ ಮೇಲೆ ಆಕ್ರಮಣ ನಡೆಸಿ, ಹತ್ಯಾಕಾಂಡಕ್ಕೆ ಇಳಿದಾಗ ಯಹೂದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ತಾವಿದ್ದ ನೆಲವನ್ನು ತೊರೆಯಲೇಬೇಕಿತ್ತು. ಅನಿವಾರ್ಯವಾಗಿ ಗುಂಪು ಗುಂಪಾಗಿ ದೇಶಾಂತರ ಹೊರಟರು. ಆಗ ಯಹೂದಿಗಳ ಒಂದು ತಂಡ ಭಾರತದ ಕೇರಳವನ್ನು ಅರಸಿ ಬಂತು. ಆ ವೇಳೆಗಾಗಲೇ, ಯಹೂದಿಗಳು ಕೇರಳದ ಜತೆ ಅನೇಕ ವರ್ಷಗಳಿಂದ ಸಮುದ್ರ ಮಾರ್ಗದ ಮೂಲಕ ವ್ಯಾಪಾರ-ವ್ಯವಹಾರದ ಸಂಬಂಧ ಹೊಂದಿದ್ದರು. ಹಾಗಾಗಿ ಭಾರತದಲ್ಲಿ ಆಸರೆ ಸಿಗಬಹುದು, ಅನ್ನ-ನೀರು-ಸೂರು ಸಿಕ್ಕರೆ ಹೇಗೋ ಬಾಳ್ವೆ ಮಾಡಬಹುದು ಎಂಬ […]