ರಣಧುರಂದರ – ಚಿಮಾಜಿ ಅಪ್ಪ

ಪೇಶ್ವ ಬಾಜಿರಾವ್ – ಈ ಹೆಸರು ಕೇಳದವರ್ಯಾರು? ಛತ್ರಪತಿ ಶಿವಾಜಿ ಮಹಾರಾಜರ ನಂತರ ಮರಾಠ ಸಾಮ್ರಾಜ್ಯವನ್ನು ದೆಹಲಿಯವರೆಗೆ ಕೊಂಡೊಯ್ದು, ಮೊಘಲರು ಹಾಗೂ ಇತರ ಮುಸ್ಲಿಂ ದೊರೆಗಳನ್ನು ಹುಟ್ಟಡಗಿಸಿದ ಧೀರ ಮರಾಠ ಅವನು. 1700-1740 ರವರೆಗೆ ಜೀವಿಸಿದ್ದ ಬಾಜಿರಾವ್ ಸುಮಾರು 44 ಯುದ್ಧಗಳನ್ನು ಸಾರಿ, ಪ್ರತಿಯೊಂದರಲ್ಲೂ ವಿಜಯಿಯಾಗಿ ಅಜೇಯನಾದವನು. ಇಂತಹ ವೀರನ ನೆರಳಾಗಿ ಇದ್ದು ಅವನ ಪ್ರತಿಯೊಂದು ಜೈತ್ರ ಯಾತ್ರೆಯಲ್ಲಿ ಶ್ರೀರಾಮನಿಗೆ ಲಕ್ಷ್ಮಣನಿದ್ದಂತೆ ಇದ್ದವನೇ ಬಾಲಾಜಿ ವಿಶ್ವನಾಥರ ಎರಡನೇ ಮಗ ಹಾಗೂ ಬಾಜಿರಾವ್ ತಮ್ಮ – ಚಿಮಾಜಿ ಅಪ್ಪ. ಡಿಸೆಂಬರ್ 17 ಚಿಮಾಜಿ ಗತಿಸಿದ ದಿನ. ಅವನ ಪುಣ್ಯತಿಥಿಯಂದು ಆ ವೀರನ ಯಶೋಗಾಥೆ ಹಾಗೂ ಅವನು ಹಿಂದು ಸಮಾಜಕ್ಕಾಗಿ ಕಾದಿದ ಪರಿಯನ್ನು ತಿಳಿಯೋಣ.

ಬಾಲಾಜಿ ವಿಶ್ವನಾಥರು ಮೂಲತ: ಮಹಾರಾಷ್ಟ್ರದ ಕೊಂಕಣ ಪಟ್ಟಿಯ ಒಂದು ಪುಟ್ಟ ಗ್ರಾಮ ಶ್ರೀವರ್ಧನದವರು. ನವಾಬರು ಹಿಂದುಗಳಿಗೆ ಕೊಡುತ್ತಿದ್ದ ಚಿತ್ರಹಿಂಸೆಗೆ ಬೇಸತ್ತು ಮರಾಠ ಸಾಮ್ರಾಜ್ಯಕ್ಕೆ ವಲಸೆ ಬಂದರು. ಕಾಲ ಕಳೆದಂತೆ ಛತ್ರಪತಿ ಸಾಹು ಮಹಾರಾಜನ ಪೇಶ್ವೆಯಾಗಿ ನಿಯುಕ್ತಿಗೊಂಡರು. ಚಿಮಾಜಿ ಹುಟ್ಟಿದ್ದು 1707 ಆಸುಪಾಸಿನಲ್ಲಿ. ಬಾಲ್ಯದಿಂದಲೇ ಅಣ್ಣ ಬಾಜಿರಾವ್ ನಂತೆ ತಂದೆಯೊಂದಿಗೆ ದೇಶದ ಬೇರೆ ಬೇರೆ ಕಡೆ ಯುದ್ಧಕ್ಕೋ ಅಥವಾ ರಾಜಕೀಯ ಮಾತುಕತೆಗಳಿಗೆ ತೆರಳುತ್ತಿದ್ದನು. ಯುದ್ಧ ಕೌಶಲ್ಯ ಚಿಮಾಜಿಗೆ ಸ್ವಾಭಾವಿಕವಾಗಿ ಕರಗತವಾಯಿತು. 1718-19 ರಲ್ಲಿ ತಂದೆಯೊಡನೆ ದೆಹಲಿಗೆ ತೆರಳುವ ಅವಕಾಶವೂ ಸಿಕ್ಕಿತು. ಹೀಗೆ ಸಣ್ಣ ವಯಸ್ಸಿನಲ್ಲಿಯೇ ಅಣ್ಣತಮ್ಮಂದಿರಿಬ್ಬರಿಗೂ ಯುದ್ಧದ ತರಬೇತಿಗಳಿಂದ ಹುರಿಗೊಂಡರು. ರಾಜಕಾರಣದ ಒಳ ಹೊರಹುಗಳ ಪರಿಚಯವೂ ಆಯಿತು.

1720 ರಲ್ಲಿ ಬಾಲಾಜಿ ವಿಶ್ವನಾಥರು ಕಾಲವಾದರು. ಛತ್ರಪತಿ ಶಾಹು ಮಹಾರಾಜನಿಗೆ (ಶಾಹು ಶಿವಾಜಿ ಮಹಾರಾಜರ ಮೊಮ್ಮಗ) ತುಂಬಲಾರದ ನಷ್ಟ ಇದಾಯಿತು. ಪೇಶ್ವೆ ಅಂದರೆ ಪ್ರಧಾನಿ ಸ್ಥಾನವನ್ನು ಬಹಳ ದಿನಗಳವರೆಗೆ ಖಾಲಿ ಬಿಡುವಂತಿರಲಿಲ್ಲ. ಹೀಗಿರಲು ರಾಜನ ಆಸ್ಥಾನದಲ್ಲಿ ಸಾಕಷ್ಟು ಜನ ಈ ಪದವಿಗೆರಲು ತವಕದಲ್ಲಿದ್ದರು. ಇವರೆಲ್ಲರ ಆಸೆಗೆ ತಣ್ಣೀರು ಎರಚುವಂತೆ ಶಾಹು ಮಹಾರಾಜ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಬಾಜಿರಾವ್ ಬಳಿ ಹೋಗಿ ನೀನೇ ನನ್ನ ಪೇಶ್ವೆ ಪದವಿಗೆ ಸೂಕ್ತ ಆಯ್ಕೆ ಎಂದು ಕರೆದೊಯ್ದು ಪಟ್ಟ ಕಟ್ಟಿದನು. ಹಿರಿಯ ಆಸ್ಥಾನಿಕರು, ಸೈನ್ಯಾಧಿಕಾರಿಗಳು ಹಾಗೂ ಇತರೆ ವೀರರಿಗೆ ಈ ಸಣ್ಣ ಹುಡುಗನನ್ನು ರಾಜನ ಸಮಾನಾದ ಆ ಪದವಿಗೆ ನಿಯುಕ್ತಿಗೊಳಿಸಿದ್ದು ಅಸಹನೀಯವಾಯಿತು. ಆಗ ಬಾಜಿರಾವ್ ನಂಬಿದ್ದ ಏಕೈಕ ವೀರ ಧೀರ ತನ್ನ ತಮ್ಮ ಚಿಮಾಜಿ ಅಪ್ಪಾ! ಚಿಮಾಜಿ ಮೊದಲು ಕೆಲವು ವರ್ಷಗಳು ಸತಾರಾದ ರಾಜ ಶಾಹುವಿನ ಆಸ್ಥಾನದಲ್ಲಿ ತನ್ನ ಅಣ್ಣನ ರಾಯಭಾರಿಯಾಗಿ ಕಳೆದನು. ಅಲ್ಲಿ ರಾಜಕಾರಣದ ಹಲವು ಪಟ್ಟುಗಳನ್ನು ಕರಗತಗೊಳಿಸಿಕೊಂಡನು.

ಕೃಪೆ: ಅಂತರ್ಜಾಲ

ಮರಾಠರ ಮುಖ್ಯ ಸೇನಾಧಿಪತಿಯಾದ ಧಾಬಡೆ ಬಾಜಿರಾವ್ ನನ್ನು ತನ್ನ ನಾಯಕನಾಗಿ ಸ್ವೀಕರಿಸಲು ನಿರಾಕರಿಸಿದ. ಹಳಬರ ಅಸಹಕಾರವನ್ನು ಮೊದಲೇ ಗ್ರಹಿಸಿದ್ದ ಬಾಜಿರಾವ್ ಹಾಗೂ ಚಿಮಾಜಿ ಅಪ್ಪ ತಮ್ಮ ಹೊಸ ತಂಡವನ್ನು ಆಗಲೇ ತಯಾರು ಮಾಡಿದ್ದರು. ಆ ತಂಡದಲ್ಲಿ ಮುಖ್ಯವಾಗಿ ಇದ್ದವರು ರಾಣೋಜಿ ಶಿಂಧೆ, ಮಲ್ಹಾರ್ ರಾವ್ ಹೊಲ್ಕರ್, ಉದಾಜಿ ಪವಾರ್, ಪಿಳಾಜಿ ಜಾದವ್.  ಈ ತಂಡಕ್ಕೆ ಮೊದಲ ಸವಾಲಾಗಿ ಬಂದದ್ದು ಹೈದರಾಬಾದಿನ ನಿಜಾಮನಿಂದ  1724ರಲ್ಲಿ. ಈ ಸಂದರ್ಭದಲ್ಲಿ ಬಾಜಿರಾವ್ ಚಿಮಾಜಿಗೆ ತನ್ನ ರಾಜನನ್ನು ಸುರಕ್ಷಿತವಾಗಿ ಕಾಪಾಡುವ ಆಙ್ಞೆಯನ್ನು ನೀಡಿದ. ಅದರಂತೆ ರಾಜಾ ಶಾಹುವನ್ನು ಪುಣೆ ಬಳಿಯ ಪುರಂದರ ಕೋಟೆಗೆ ಚಿಮಾಜಿ ಕರೆದೊಯ್ದ. ಇನ್ನೊಂದೆಡೆ ಬಾಜಿರಾವ್ ನಿಜಾಮನ ಒಂದೊಂದೇ ಕೋಟೆಗಳನ್ನು ವಶಪಡಿಸಿಕೊಳ್ಳುತ್ತಾ ಪಾಲಾಖೇಡ್ ನಲ್ಲಿ ನಡೆದ ಮುಖಾಮುಖಿ ಯುದ್ಧದಲ್ಲಿ ಹೀನಾಯವಾಗಿ ಸೋಲಿಸಿದನು. ಹೀಗೆ ಸಹೋದರರು ತಮ್ಮ ಮೊದಲ ಸವಾಲಿನಲ್ಲಿ ಯಶಸ್ವಿಯಾದರು.
ಅದರ ಮುಂದಿನ ವರ್ಷ ಚಿಮಾಜಿ ಬಹುಮುಖ್ಯವಾದ ಮಾಲ್ವ ಪ್ರದೇಶವನ್ನು ಸುತ್ತುವರೆದನು. ಈ ಮಾಲ್ವ ಪ್ರದೇಶ ಉತ್ತರ ಭಾರತಕ್ಕೂ ಹಾಗೂ ದಕ್ಕನ್ ಪ್ರಸ್ತಭೂಮಿಗೂ ಒಂದು ಕೊಂಡಿಯಂತೆ ಇತ್ತು. ಇಲ್ಲಿ ಅವನು ಒಂದು ಆಶ್ಚರ್ಯಕರ ರೀತಿಯಲ್ಲಿ ಆ ಪ್ರದೇಶದ ಮೊಘಲ್ ಸಾಮಂತರಾದ ಗಿರಿಧರ ಬಹದ್ದೂರ್ ಹಾಗೂ ದಯಾ ಬಹದ್ದೂರ್ ವಿರುದ್ಧ ದಾಳಿ ಮಾಡಿದನು. ಒಂದು ಘೋರ ಮುಖಾಮುಖಿ ಯುದ್ಧದಲ್ಲಿ ಇಬ್ಬರನ್ನೂ ಕೊಂದು ಆ ಪ್ರದೇಶವನ್ನು ವಶಪಡಿಸಿಕೊಂಡನು. ಅಲ್ಲಿಂದ ಮುಂದುವರೆದು ಉಜ್ಜಯಿನಿಗೆ ಹೋಗಿ ಅಲ್ಲಿಯ ಮೊಘಲ ಆಡಳಿತಗಾರರನ್ನು ತನ್ನ ಮುಂದೆ ಮಂಡಿಯೂರಿವಂತೆ ಮಾಡಿದನು. ಅಣ್ಣನ ಮಾರ್ಗದರ್ಶನದಲ್ಲೇ ಈ ಎಲ್ಲಾ ಯುದ್ಧಗಳು ನಡೆಯುತ್ತಿತ್ತು. ಹೀಗೆ ಮುಂದುವರೆದು ಸಹೋದರರಿಬ್ಬರು ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದವರೆಗೂ ತಲುಪಿ ಜಯಿಸಿದರು.

ಮತ್ತೆ ಪುಣೆಗೆ ಹಿಂತಿರುಗಿದ ಚಿಮಾಜಿ ಕೊಂಕಣದ ಸಿದ್ಧಿಗಳ ಮೇಲೆ ಯುದ್ಧ ಸಾರಲು ಸನ್ನದ್ದನಾಗಿ ಅಣ್ಣನ ಬರುವಿಕೆಗಾಗಿ ಕಾದನು. ಬಾಜಿರಾವ್ ಬಂದೊಡನೆ ಯುದ್ಧ ಹೂಡಿ ಸಿದ್ಧಿಗಳನ್ನು ಕೊಂಕಣದಿಂದ ಮೂಲೋತ್ಪಾಟನೆ ಮಾಡಿದರು. ಇದರೊಡನೆ ಮರಾಠರ ಮೂಲ ರಾಜಧಾನಿಯಾದ ರಾಯಗಡ ಕೂಡ ವಶಪಡಿಸಿಕೊಳ್ಳಲಾಯಿತು.

ಮುಂದೆ ಬಾಜಿರಾವ್ ಪುಣೆ ಹಾಗೂ ಮಹಾರಾಷ್ಟ್ರವನ್ನು ಬಿಟ್ಟು ಹೊರಗೆ ಯುದ್ಧಕ್ಕೆ ಹೋದಾಗಲೆಲ್ಲಾ, ಸ್ವಂತ ನೆಲವನ್ನು ಕಾಯುವ ಜವಾಬ್ದಾರಿ ಚಿಮಾಜಿ ಅಪ್ಪ ನಿಷ್ಠೆಯಿಂದ ಮಾಡುತ್ತಿದ್ದ. ಇದರಿಂದ ಬಾಜಿರಾವ್ ತನ್ನ ಎಲ್ಲಾ ಹೊರಗಿನ ಅಶ್ವಮೇಧ ಯುದ್ಧಗಳಿಗೆ ಸಮನಾದ ಕಾದಾಟಕ್ಕೆ ಮನೆಯ ಚಿಂತೆ ಬಾರದಂತೆ ನೋಡಿಕೊಂಡವನು ಚಿಮಾಜಿ. ಇದೇ ವ್ಯವಸ್ಥೆಯಡಿಯಲ್ಲಿ ಹಲವು ವರ್ಷಗಳು ಕಳೆಯಿತು.

ಮರಾಠ ಸಾಮ್ರಾಜ್ಯಕ್ಕೆ ವೈರಿಗಳು ಇದ್ದದ್ದು ಒಂದೇ ಎರಡೇ. 16ನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ ಪೋರ್ಚುಗೀಸರು ಗೋವಾ, ವಸೈ, ದಿಯು, ದಮನ್ ಹಾಗೂ ಇತರೆಡೆ ತಮ್ಮ ವಸಾಹತುಗಳನ್ನು ಸ್ಥಾಪಿಸಿ ಅಲ್ಲಿ ದೊಡ್ಡ ದೊಡ್ಡ ಕೋಟೆಗಳನ್ನು ಕಟ್ಟಿ ಅವನ್ನು ತೋಪುಗಳು ಹಾಗೂ ಬಂದೂಕುಗಳಿಂದ ಭದ್ರಪಡಿಸಿ ಬೇರೂರಿದ್ದರು. ಇವರ ವಿರುದ್ಧ ಸೆಣಸಲೇಬೇಕಾದ ಅನಿವಾರ್ಯತೆ ಬಾಜಿರಾವ್ ಹಾಗೂ ಚಿಮಾಜಿಗೆ ಬಂದೊದಗಿತ್ತು. ಮಾರ್ಚ್ 1737 ರಲ್ಲಿ ಚಿಮಾಜಿ ಇವರ ವಿರುದ್ಧ ಕಾದಾಡಲು ತನ್ನ ಸೈನ್ಯವನ್ನು ಹುರಿಗೊಳಿಸಿದನು. ಒಂದೇ ವಾರದಲ್ಲಿ ಅವರು ‘ಶಾಸ್ತಿ’ ಎಂಬ ಪೋರ್ಚುಗೀಸರ ದ್ವೀಪವನ್ನು ವಶಪಡಿಸಿಕೊಂಡರು. ಮುಂದಿನ ಆಕ್ರಮಣ ವಸೈ ಮೇಲಾಯಿತು. ಅಲ್ಲಿನ ಕೋಟೆ ಬಹಳ ಬಲಿಷ್ಠವಾಗಿ ದೊಡ್ಡದೊಡ್ಡ ಬುರುಜುಗಳನ್ನು ಹೊಂದಿತ್ತು. ಮೂರು ಕಡೆಯಲ್ಲಿ ನೀರಿನಿಂದ ಸುತ್ತುವರೆದುದರ ಕಾರಣ ಪೋರ್ಚುಗೀಸರ ಸೈನ್ಯಕ್ಕೆ ಮೇಲುಗೈ ಇತ್ತು. ಆದ್ದರಿಂದ ಅವರನ್ನು ಸೋಲಿಸುವುದು ದುಸ್ತರವಾಗಿತ್ತು. ಯುದ್ಧ ಒಂದು ರೀತಿಯ ಸ್ಟೇಲ್ ಮೇಟ್ ಸ್ಥಿತಿಗೆ ತಲುಪಿತು. ಇದೇ ವೇಳೆ ಭೋಪಾಲದಲ್ಲಿ ಬಾಜಿರಾವ್ ಹಾಗೂ ನಿಜಾಮ್ ಉಲ್ ಮುಲ್ಕ್ ನಡುವೆ ಯುದ್ಧ ಶುರುವಾದ ಕಾರಣ ಚಿಮಾಜಿ ಅಪ್ಪ ಉತ್ತರಕ್ಕೆ ದೌಡಾಯಿಸಿದನು. ತಾಪಿ ನದಿಯ ಬಳಿ ನಿಜಾಮನ ಸಹಾಯಕ್ಕೆ ತೆರಳುತ್ತಿದ್ದ ಅವನ ಮಗ ನಾಸಿರ್ ಜಂಗ್ ನನ್ನು ಒದ್ದೋಡಿಸಿ, ನಿಜಾಮ ಬಾಜಿರಾವ್ ಮುಂದೆ ಮತ್ತೊಮ್ಮೆ ಮಂಡಿಯೂರುವಂತೆ ಮಾಡಿದವನು ಚಿಮಾಜಿ.

ಉತ್ತರದ ಕೆಲಸ ಮುಗಿಸಿ ವಸೈಗೆ ಹಿಂದಿರುಗಿದ ಚಿಮಾಜಿ, ಈ ಬಾರಿ ತಮ್ಮ ವಸಾಹತುಗಳಲ್ಲಿ ಹಿಂದುಗಳಿಗೆ ಚಿತ್ರ ಹಿಂಸೆ ಕೊಡುತ್ತಿದ್ದ ಕ್ರೂರ ಪೋರ್ಚುಗೀಸರನ್ನು ಹೆಡೆಮುರಿಕಟ್ಟಲೇಬೇಕೆಂದು ನಿರ್ಧರಿಸಿದನು. ಆದ್ದರಿಂದ ಮೊದಲೇ ಇನ್ನೊಂದು ಸೈನ್ಯದ ತುಕಡಿಯನ್ನು ಗೋವಾಕ್ಕೆ ಕಳುಹಿಸಿ ಅಲ್ಲಿಂದ ವಸೈಗೆ ಯಾವುದೇ ನೆರವು ಬರದಂತೆ ಮರಾಠರು ತಡೆಹಿಡಿದರು. ಆದರೆ ಸಾಕಷ್ಟು ದಾಳಿಗಳ ನಂತರವೂ ಕೋಟೆ ವಶಪಡಿಸಿಕೊಳ್ಳುವುದು ದುಸ್ತರವಾಯಿತು.
ಈ ಮಧ್ಯೆ ಚಿಮಾಜಿಯ ಆರೋಗ್ಯ ಕೂಡ ಹದಗೆಡಲು ಆರಂಭಿಸಿತು. ಆದರೆ ಇವೆಲ್ಲಕ್ಕೂ ಅಂಜದ ಅವನು ತನ್ನ ಸೈನ್ಯಕ್ಕೆ ಹೀಗೆಂದು ಹೇಳಿದನು – “ಒಂದೋ ಕೋಟೆಯನ್ನು ವಶಪಡಿಸಿಕೊಳ್ಳಿ, ಇಲ್ಲವೇ ನನ್ನನ್ನು ಒಂದು ತೋಪಿಗೆ ಹಾಕಿ ಕೋಟೆಯೆಡೆಗೆ ಉಡಾಯಿಸಿ ಬಿಡಿ”. ಈ ನಿರ್ಣಾಯಕ ಕೆಚ್ಚೆದೆಯ ಮಾತುಗಳು ಫಲ ಕೊಡಲಾರಂಭಿಸಿತು. ಬಹಳ ಸಾವು-ನೋವುಗಳನ್ನು ಲೆಕ್ಕಿಸದೆ ಮರಾಠ ಸೈನಿಕರು ಕೋಟೆಯ ಹತ್ತಿರ ಹತ್ತಿರಕ್ಕೆ ಹೋಗಲಾರಂಭಿಸಿದರು. 1739ರ ಮೇ ಮೊದಲ ವಾರದಲ್ಲಿ ಕೋಟೆಯ ಬುಡಕ್ಕೆ ಮೈನ್ ಗಳನ್ನು ಇಟ್ಟು ಕೊನೆಗೂ ಗೋಡೆಗಳನ್ನು ಉರುಳಿಸುವಲ್ಲಿ ಸಫಲರಾದರು. ತದನಂತರ ಕೋಟೆಯೊಳಗೆ ನುಗ್ಗಿದ ಮರಾಠ ಸೈನಿಕರು ಪೋರ್ಚುಗೀಸರನ್ನು ಶರಣಾಗುವಂತೆ ಮಾಡಿದರು. ಕಳೆದ ಮೂರು ವರ್ಷದಲ್ಲಿ ಸಾಕಷ್ಟು ಸಾವು ನೋವುಗಳನ್ನು ಕಂಡಂತಹ ಮರಾಠ ಪಡೆ ಪೋರ್ಚುಗೀಸರ ಶರಣಾಗತಿಯನ್ನು ಬಹಳ ದೊಡ್ಡ ಮನಸ್ಸಿನಿಂದ ಒಪ್ಪಿತು. ಚಿಮಾಜಿ ಅಪ್ಪ ಅವರು ಕೋಟೆಯನ್ನು ಶಾಂತಿಯುತವಾಗಿ ಖಾಲಿ ಮಾಡಲು ಅನುವು ಮಾಡಿಕೊಟ್ಟನು. ವಸೈಯಲ್ಲಿ ಯುದ್ಧವು ಪೋರ್ಚುಗೀಸರ ಭಾರತದ ಇರುವಿಕೆಯನ್ನು ಗೋವೆಗೆ ಮಾತ್ರ ಸೀಮಿತಗೊಳಿಸಿತು. ಮೊದಲ ಬಾರಿ ಭಾರತೀಯ ಒಂದು ಸೈನ್ಯಪಡೆ ಯುರೋಪಿನ ರಾಷ್ಟ್ರವನ್ನು ಸೋಲಿಸಿತು.

ಚಿಮಾಜಿ ಹೀಗೆ ತನ್ನ ಅಣ್ಣನಿಗೋಸ್ಕರ ಲಕ್ಷ್ಮಣನಂತೆ ನಿಸ್ವಾರ್ಥವಾಗಿ ತನ್ನ ಬದುಕನ್ನು ಮುಡಿಪಾಗಿಟ್ಟನು. ಭರತನಂತೆ ಅಣ್ಣನ ಅನುಪಸ್ಥಿತಿಯಲ್ಲಿ ರಾಜ್ಯವನ್ನು ಕಾಪಾಡಿದನು. ಆದರೆ ಬಾಜಿರಾವ್ ಏಪ್ರಿಲ್ 1740 ರಂದು ಅನಾರೋಗ್ಯದಿಂದ ತೀರಿಕೊಂಡನು. ತನ್ನ ಅಣ್ಣನನ್ನೇ ಸದಾಕಾಲ ಅನುಸರಿಸುತ್ತಿದ್ದ ಚಿಮಾಜಿ ಸಾವಿನಲ್ಲೂ ಅವನನ್ನೆ ಅನುಸರಿಸಿದನು. ಡಿಸೆಂಬರ್ 17, 1740 ರಂದು 33ರ ಸಣ್ಣ ವಯಸ್ಸಿಗೆ ಹಲವಾರು ಯುದ್ಧಗಳ ಆಯಾಸಗಳಿಂದ ಬಳಲಿ ಬೆಂಡಾಗಿದ್ದ ಚಿಮಾಜಿ ಇಹಲೋಕ ತ್ಯಜಿಸಿದನು. ಹೈಂದವಿ ಸ್ವರಾಜ್ಯಕ್ಕೆ ಈ ವೀರನ ಕೊಡುಗೆ ಅಪಾರ. 

ಅವಿನಾಶ್ ವಿ.ಜಿ

ಬರಹಗಾರರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

"ಜಾಗೃತ ಗ್ರಾಹಕ, ಸಮರ್ಥ ಭಾರತ"

Mon Jan 3 , 2022
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ 1974 ರಿಂದ ಶೋಷಣ ಮುಕ್ತ ಸಮಾಜದ ಕನಸಿನೊಂದಿಗೆ ಕೆಲಸ ಮಾಡುತ್ತಿದೆ. ಉತ್ಪಾದನೆಯಲ್ಲಿ ಹೆಚ್ಚಳ, ಹಂಚಿಕೆಯಲ್ಲಿ ಸಮಾನತೆ, ಬಳಕೆಯ ಮೇಲೆ ಸಂಯಮ, ಎಂಬ ಪರಿಕಲ್ಪನೆಗಳೊಂದಿಗೆ ಸಮಾಜದಲ್ಲಿ ಜಾಗೃತಿ ನಡೆಸುತ್ತಿದೆ. ‘ರಾಷ್ಟ್ರ ಹಿತ, ಸಮಾಜ ಹಿತ ಹಾಗೂ ಗ್ರಾಹಕ ಹಿತ’ ಈ ಸರಪಳಿಯಲ್ಲಿ ಕೆಲಸ ಮಾಡುತ್ತಿರುವಾಗ, ಗ್ರಾಹಕರು ಸಹ ದೇಶದ ಹಿತಕ್ಕಾಗಿ ಕೊಡುಗೆ ನೀಡಬೇಕೆಂಬ ಸಂಸ್ಕಾರವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ವಾಸ್ತವದಲ್ಲಿ ಯಾರೊಂದಿಗೂ ಯಾವುದೇ ಸಂಘರ್ಷವಿಲ್ಲ. ವ್ಯಾಪಾರಿ, ಉತ್ಪಾದಕ, […]