8ಜುಲೈ 2018, ಬೆಂಗಳೂರು: ‘ಆನಂದ ಕುಮಾರಸ್ವಾಮಿಯವರ ಜೀವನ ಮತ್ತು ಕಾರ್ಯ’ ಬಗೆಗಿನ ವಿಚಾರ ಗೋಷ್ಠಿ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಇಂದು ನಡೆಯಿತು. ಡ್ಯಾನ್ಸ್ ಆಫ್ ಶಿವ ಪುಸ್ತಕದ 100ನೆ ವರ್ಷದ ಸಂದರ್ಭದಲ್ಲಿ ಈ ವಿಚಾರ ಗೋಷ್ಠಿಯನ್ನು FIRST (Foundation for Indic Research Studies) ಆಯೋಜಿಸಿದ್ದರು. ಈ ವಿಚಾರಗೋಷ್ಠಿಗೆ ಲೇಖಕರು, ವಿಮರ್ಶಕರಾದ ಡಾ. ಜಿ. ಬಿ. ಹರೀಶ್, ’ಪ್ರಜಾವಾಣಿ’ಯ ಪತ್ರಕರ್ತರಾದ ಶ್ರೀ ಸೂರ್ಯಪ್ರಕಾಶ್ ಪಂಡಿತ್ ತಮ್ಮ ವಿಚಾರಗಳನ್ನು ಮುಂದಿಟ್ಟರು.
ಕಲೆ ಹಾಗೂ ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ. ಎಲ್ಲರೂ ಕಲಾವಿದರು ಎಂಬುದು ಆನಂದರ ಬಲವಾದ ನಂಬಿಕೆ ಎಂಬ ವಾದವನ್ನು ಜಿ.ಬಿ.ಹರೀಶ ಮುಂದಿಟ್ಟರು. ಕಲೆಯನ್ನು ಆರಾಧಿರುವ ಕೆಲಸವೇ ತನ್ನದು ಎಂದು ಬಲವಾಗಿ ನಂಬಿದ ಆನಂದ ಕುಮಾರಸ್ವಾಮಿ ತಮ್ಮ ನಿತ್ಯದ ಹೊಟ್ಟೆ ತುಂಬುವ, ಕೈತುಂಬ ತರುವ ಸಂಬಳವನ್ನು ತ್ಯಜಿಸಿ ಕಲೆಗೆ, ಭಾರತೀಯ ಸಂಸ್ಕೃತಿಯ ಬಗೆಗಿನ ಅಧ್ಯಯನ, ಸಾಹಿತ್ಯದ ಕೆಲಸಕ್ಕೆ ಮುಂದಾದರು. ತಾನು ಸಂಗ್ರಹ ಮಾಡಿದ ವಸ್ತುಗಳನ್ನು ಬಾಸ್ಟನ್ ಮ್ಯೂಸಿಯಂಗೆ ಒಯ್ದು , ಅಲ್ಲಿಯೇ ಕ್ಯೂರೇಟರ್ ನ ಜವಾಬ್ದಾರಿಯಲ್ಲಿ ಕಾರ್ಯನಿರ್ವಹಿಸಿದರು. ಅವರು ಅಮೇರಿಕಾದಲ್ಲಿದ್ದಾಗ, ಭಾರತಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಭಾರತದಲ್ಲಿದ್ದ ದೊರೆರಾಜಸಿಂಗಂಗೆ ಬರೆದ ಪತ್ರದಲ್ಲಿ ಅವರ ಸಂದೇಶ “Be Yourself. Follow Mahatma Gandhi, DVG …. Do not consider inferior philosophers” ಎಂಬ ಉಲ್ಲೇಖ ಮಾಡಿದ ಹರೀಶರು ಕುಮಾರಸ್ವಾಮಿಯವರು ಡಿವಿಜಿಯವರ ಬಗ್ಗೆ ಇದ್ದ ಶ್ರದ್ಧೆಯನ್ನು ಪ್ರಸ್ತಾಪಿಸಿದರು. ರಿಲಿಜಿಯನ್ ಜೊತೆಗೆ ಕಲೆಯೂ ಬೆಸೆದಿರುವುದರಿಂದ ಕಲೆಯನ್ನು ಜೀವನದಿಂದ ಹೊರಗಿಡುವುದು ಸರಿಯಲ್ಲ ಎಂದು ಹರೀಶರು ನುಡಿದರು.

‘ಕಲಾದರ್ಶನ’ದ ಬಗ್ಗೆ ಮಾತನಾಡಿದ ಪತ್ರಕರ್ತರಾದ ಶ್ರೀ ಸೂರ್ಯಪ್ರಕಾಶ್ ಪಂಡಿತ್ ಒಂದು ಜೀವಮಾನದಲ್ಲಿ ಆನಂದರನ್ನು ಓದಲು ಆಗದಷ್ಟು ಅಗಾಧ ವ್ಯಕ್ತಿತ್ವ ಆನಂದ ಕುಮಾರಸ್ವಾಮಿ ಎಂದು ನುಡಿದರು. ಮನಸ್ಸು, ಬುದ್ಧಿ, ಚಿಂತನೆಗಳಲ್ಲಿ ಬೌದ್ಧಿಕ ಪ್ರಾಮಾಣಿಕತೆಯೇ ಮೂಲವಾಗಿ ಎದ್ದು ಕಾಣುವ ಗುಣ ಅವರಲ್ಲಿತ್ತು. ವಿಲಿಯಮ್ ಬ್ಲೇಕ್, ಕುರಾನ್, ಚೀನಾ ಸೇರಿದಂತೆ ವಿಶ್ವದ ಹಲವಾರು ಚಿಂತನೆಗಳನ್ನು ಓದಿಕೊಂಡು, ಅಲ್ಲಿಯ ತತ್ತ್ವಗಳನ್ನು ಬಳಸಿಕೊಂಡೇ ಸನಾತನ ಧರ್ಮದ ಶ್ರೇಷ್ಠತೆಯ ಬಗ್ಗೆ ಬರೆದವರಾದ ಕುಮಾರಸ್ವಾಮಿ ಆನಂದವರ್ಧನ, ಅಭಿನವಾಗುಪ್ತ, ಮಹಿಮಭಟ್ಟರಾದಿಯಾಗಿ ಬರೆದ ದರ್ಶನಗಳ ಸಾಲಿನಲ್ಲಿ ಬರುವವರು ಆನಂದ ಕುಮಾರಸ್ವಾಮಿ ಎಂದು ಸೂರ್ಯಪ್ರಕಾಶ್ ಪಂಡಿತ ತಮ್ಮ ಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ‘ಶಬ್ದ’ಕ್ಕೆ ನಿಷ್ಠವಾಗಿದ್ದಾಗ ಮಾತ್ರವೇ ‘ಅರ್ಥ’ಕ್ಕೆ ನ್ಯಾಯ ಹೇಗೆ ದೊರಕುವುದೋ ಅಂತೆಯೇ ಆನಂದ ಕುಮಾರಸ್ವಾಮಿಯವರನ್ನು ಓದುವುದು ಅರ್ಥೈಸಿಕೊಳ್ಳುವುದು ಇಂದಿನ ಅಗತ್ಯ ಎಂದು ಸೂರ್ಯಪ್ರಕಾಶ್ ತಮ್ಮ ಉಪನ್ಯಾಸದಲ್ಲಿ ತಿಳಿಸಿಕೊಟ್ಟರು. ಅಂತೆಯೇ ಪ್ರಸ್ತುತ ಜಗತ್ತಿನಲ್ಲಿ ಇರುವುದನ್ನೇ ಪುನಃ ಕಾಣುವುದು ‘ದರ್ಶನ’ವಾಗಿ, ಜೀವನವನ್ನು ಸರಿಯಾಗಿ ಕಾಣುವುದು ‘ಕಲೆ’ಯಾಗಬೇಕು ಎಂದು ಬಲವಾಗಿ ನಂಬಿದ್ದ ಆನಂದ ಕುಮಾರಸ್ವಾಮಿಯವರ ಕಲಾತತ್ತ್ವ ಚಿಂತನೆ, ಬರಹದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳೋಣವೆಂದು ಆಗ್ರಹಿಸಿದರು.

ಸಮಾರೋಪ ಭಾಷಣದಲ್ಲಿ ಆನಂದ ಕುಮಾರಸ್ವಾಮಿಯವರ ವಿವಿಧ ಪುಸ್ತಕಗಳನ್ನು ಡಾ. ಹರೀಶ್ ಪರಿಚಯಿಸಿದರು. ಹಿಂದೂಯಿಸಮ್ ಮತ್ತು ಬುದ್ಧಿಸಂ ಪುಸ್ತಕವನ್ನು ಉಲ್ಲೇಖಿಸಿ ಕುಮಾರಸ್ವಾಮಿಯವರ ಚಿಂತನೆಗಳನ್ನು ಪರಿಚಯಿಸಿದ ಡಾ. ಜಿ.ಬಿ. ಹರೀಶ್ ಇಂದಿನ ಸಾಮಾಜಿಕ, ರಾಜಕೀಯ ದೃಷ್ಟಿಯಲ್ಲಿ ಬೌದ್ಧ ಧರ್ಮವನ್ನು ಕಾಣದೇ ಸಮಗ್ರವಾಗಿ ಅಧ್ಯಯನ ಮಾಡಿದಾಗ ಅವೆರಡರಲ್ಲಿರುವ ಸಾಮ್ಯತೆ ಎದ್ದುಕಾಣುತ್ತದೆಂದು ತಿಳಿಸಿದರು.

ಕುಮಾರಸ್ವಾಮಿಯವರು ಜಾನಪದವನ್ನು ಕೊಲ್ಲುತ್ತಾ, ಜಾನಪದ ವಸ್ತುಸಂಗ್ರಹಾಲಯಗಳನ್ನು ಸೃಷ್ಟಿಸುವವರ ವಿರೋಧಿಗಳಾಗಿದ್ದರು ಹಾಗೂ ಬ್ರಿಟಿಷರ ಕಾಲದಲ್ಲಿ ಕೊಲ್ಕತ್ತಾದಿಂದ ದೆಹಲಿಗೆ ರಾಜಧಾನಿಯ ಸ್ಥಳಾಂತರದ ಹೊತ್ತಿಗೆ ವಿಶ್ವದ ಪ್ರಮುಖ ನಾಯಕರನ್ನು ಸೇರಿಸಿ ಭಾರತದ ಕಲಾವಿದರ ಸಹಾಯದಿಂದಲೇ ಹೊಸ ರಾಜಧಾನಿಯನ್ನು ಕಟ್ಟಬೇಕೆಂದು ಪಟ್ಟು ಹಿಡಿದರು, ಹಾಗೂ ರಾಷ್ಟ್ರೀಯ ಸಂಸ್ಕೃತಿಯನ್ನು ಕಟ್ಟುವವರು ಕಲಾವಿದರು ಎಂದು ಬಲವಾಗಿ ಪ್ರತಿಪಾದಿಸಿದವರು ಆನಂದ ಕುಮಾರಸ್ವಾಮಿ ಎಂದು ಸಮಾರೋಪ ಭಾಷಣದಲ್ಲಿ ತಿಳಿಸಿದರು.
Revisionist, Revivalistಗಳ ಸಾಲಿನಲ್ಲಿ ಕುಮಾರಸ್ವಾಮಿಯವರನ್ನು ಎಲ್ಲರೂ ವಿಂಗಡಿಸಹೊರಟರೆ, ಅವರು ಅವರನ್ನು ಸಂಪ್ರದಾಯಸ್ಥ Traditionalist ಕರೆದುಕೊಂಡರು. ಸಾಮಾನ್ಯವಾಗಿ ಅರೆಬರೆ ಕತೆಗಳನ್ನು ಕೇಳಿಸಿಕೊಂಡು ಆ ಚಿತ್ರಣಗಳಿಗೆ ನಮ್ಮ ವ್ಯಾಖ್ಯಾನವನ್ನು ಸೇರಿಸಿ ನೋಡುವುದರಿಂದ ಪರಿಣಾಮಕಾರಿ ಅಧ್ಯಯನ ಅಸಾಧ್ಯ ಎಂದು ಹರೀಶ್ ತಿಳಿಸಿದರು.
FIRST ನ ಸಂಯೋಜಕ ಜಿ.ಆರ್. ಸಂತೋಷ್ ಉಪಸ್ಥಿತರಿದ್ದರು.

