- ದಿವಿನ್ ಮಗ್ಗಲಮಕ್ಕಿ, ಮೂಡಿಗೆರೆ
ಕಳೆದೊಂದು ವಾರದಿಂದ ಪೋಕ್ಸೋ ಕೇಸೊಂದನ್ನು ಹೊರತುಪಡಿಸಿದರೆ ಒಂದೇ ಸುದ್ದಿ. ಮಹಾಮಳೆಗೆ ಬೆಂಗಳೂರು ಅಸ್ತವ್ಯಸ್ತ. ಮೂಲಭೂತ ಸೌಕರ್ಯ ಸರಿ ಇಲ್ಲ,ಸರ್ಕಾರ ನೆರವಿಗೆ ಬರ್ತಿಲ್ಲ.ಕೆಲ ಏರಿಯಾಗಳು ಚಿಂದಿಚಿತ್ರಾನ್ನ ಅಂತೆ. ಸುಮಾರು ಐದಾರು ಇಂಚು(Around 140mm) ಮಳೆ ಅಂತೆ. ಅದ್ಯಾವ್ದೋ ರೈನ್ ಬೋ ಲೇಔಟ್ ಮುಚ್ಚೋಗಿದ್ಯಂತೆ,ಇಕೋಸ್ಪೇಸ್ ಅಂತೆ, ಮಹದೇವಪುರ, ಸರ್ಜಾಪುರ, ದೊಮ್ಮಲೂರು ಮಾನ್ಯತಾ ಟೆಕ್ ಪಾರ್ಕ್ ಇನ್ನೂ ಹತ್ತು ಹಲವು ಏರಿಯಾಗಳು ಮಹಾಮಳೆಗೆ ಮಕಾಡೆ ಮಲಗಿದ್ದಾವಂತೆ.
ಆದರೆ ಇವೆಲ್ಲಕ್ಕೆ ಮೂಲ ಕಾರಣ ಸರಿಯಾದ ಪ್ಲಾನಿಂಗ್ ಮತ್ತು ಮುಂದಾಲೋಚನೆ ಇಲ್ಲದೆ ವಾಮಮಾರ್ಗದ ಅನುಮತಿ ಪಡೆದು ಕಟ್ಟಿದ ಲೇ ಔಟುಗಳು ಮತ್ತು ಭೂ ಮಾಫಿಯಾ ಮತ್ತು ತಗ್ಗು ಪ್ರದೇಶಗಳಲ್ಲಿನ ಕೆರೆಗಳ ಒತ್ತುವರಿ ಮತ್ತು ಸಾರ್ವಜನಿಕರ ಹೊಣೆಗಾರಿಕೆ ರಹಿತ ಜೀವನ. ಆದರೆ ಅನುಭವಿಸುತ್ತಿರೋದು ಮಾತ್ರ ಬೆಂಗಳೂರಲ್ಲೊಂದು ಸ್ವಂತ ಮನೆಯ ಕನಸು ಕಂಡೋ ಅಥವಾ ಕಡಿಮೆ ಬಾಡಿಗೆಗಾಗಿ ನೆಲೆಸಿಯೋ, ಭೌಗೋಳಿಕ ಉಬ್ಬು ತಗ್ಗುಗಳ ಅರಿವಿಲ್ಲದೆ ನೆಲೆಸಿದ ಬಡಪಾಯಿ ಜನಗಳು. ದುಡ್ಡಿರೋ ಲ್ಯಾಂಡ್ ಡೆವೆಲಪರ್ ಅಧಿಕಾರವೋ ಹಣವೋ ಬಳಸಿ ಲೇ ಔಟೋ ಅಪಾರ್ಟಮೆಂಟೋ ಕಟ್ಟಿ ಒಳ್ಳೆ ಮಾರ್ಕೆಟಿಂಗ್ ಮಾಡಿ ಪಾಪುದ್ ಕುರಿಗಳ್ನೆಲ್ಲ ಮಂಗ ಮಾಡಿ ಕಾಸ್ ಮಾಡ್ಕೊಂಡಿರ್ತಾನೆ. ಅದ್ರು ಜೊತೆಗೆ ಮೂಲಭೂತ ಸೌಕರ್ಯಕ್ಕೆಂದು ಪಾಲಿಕೆಯಿಂದ ಆ ಏರಿಯಾಗೆ ಅಷ್ಟೋ ಇಸ್ಟೋ ಸಿಕ್ಕಿದ ಅನುದಾನದಲ್ಲಿ ಕಾಮಗಾರಿನೂ ಅಷ್ಟುಕ್ಕಷ್ಟೆ ನಡೆದಿರುತ್ತೆ. ಇವುಗಳೆಲ್ಲದರ ಜಂಟಿ ಫಲಾನೆ ಇವೆಲ್ಲ.
ಇದರ ಜೊತೆಗೆ ಅತಿಯಾದ ನಗರೀಕರಣ ಮತ್ತು ಅಲ್ಲಿನ ಜನಸಾಂದ್ರತೆ. ನಾವಂತೂ ಹಿಂದುಳಿದು ಬಿಟ್ವಿ,ನಮ್ ಮಕ್ಕಳಾದ್ರು ಸಿಟೀಲಿ ಬೆಳೀಲಿ ಅಂದುಕೊಳ್ಳೋ ಒಂದುವರ್ಗ, ಇರೋ ಮೂರು ಮತ್ತೊಂದು ಎಕರೆ ಜಮೀನೆಲ್ಲ ಮಾರಿ ನಗರದಲ್ಲಿ ಸೆಟ್ಲಾಗೋ ಹುಚ್ಚು, ದೊಡ್ಡ ಕನಸುಗಳ ಬೆನ್ನೇರಿ ಹೋಗುವ ನಿರೀಕ್ಷೆ, ಇರೋ ಬರೋವೆಲ್ಲ ಹಳ್ಳಿ ಬಿಟ್ಟು ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳೋ ನಗರದೆಡೆಗಿನ ಆಕರ್ಷಣೆ, ಇವುಗಳೇ ಭೂ ಮಾಲೀಕರ ಬಂಡವಾಳ. ಪ್ರಕೃತಿಗೆ ವಿರುದ್ಧವಾಗಿ ಹೋದಾಗ ಸಹಜವಾಗೇ ಆಗೋ ಪ್ರಕ್ರಿಯೆಯ ಒಂದು ಸಾಧಾರಣ ಝಲಕ್ ಅಷ್ಟೇ ಈ ಬೆಂಗಳೂರಿನ ಮಳೆ ಅವಾಂತರ.
ಇನ್ನು ಸಾರ್ವಜನಿಕ ಹೊಣೆಗಾರಿಕೆಗೆ ಬಂದರೆ ಬಳಸಿದ್ದೆಲ್ಲವನ್ನ ಕಸದ ಗಾಡಿಗೋ, ಕಸದ ಜಾಗಕ್ಕೋ ಹಾಕದೇ ಅಲ್ಲೆ ಇರೋ ಚರಂಡಿಗೋ,ಮೋರಿಗೋ ಬಿಸಾಕೋ ಎಷ್ಟು ಜನ ಇಲ್ಲ ಹೇಳಿ. ಕುಡಿದ ವಾಟರ್,ಜ್ಯೂಸ್ ಬಾಟಲ್ ಗಳು,ತಿಂದುಳಿದ ತಿಂಡಿ ತಿನಿಸುಗಳು,ಕೋಳಿ ಕುರಿಮೀನಿನಂಗಡಿಗಳ ಅಳಿದುಳಿದ ವೇಸ್ಟ್, ಅದ್ಯಾರೋ ನಾಗರೀಕರು TV ಚಾನೆಲ್ ಒಂದಕ್ಕೆ ಹೇಳ್ತಿದ್ರು “ಸಾರ್ ಹಳೇ ಸೋಫಾ, ಹಳೇ ಹಾಸಿಗೆ ಎಲ್ಲ ತಂದು ಚರಂಡಿಗೆ ಬಿಸಾಕಿ ತುರುಕಿದ್ದಾರೆ ಸಾರ್,ನೀರು ಬ್ಲಾಕ್ ಆಗಿ ಹೊರಗೆ ಬರ್ದೆ ಇನ್ನೇನಾಗುತ್ತೆ” ಅಂತ. ತಾವ್ ಬೇಕಾದ್ರೆ ಏನ್ ಬೇಕಾದ್ರು ಮಾಡ್ಬೋದು ಆದ್ರೆ ಸಮಸ್ಯೆ ಆದಾಗ ಮಾತ್ರ ಎಲ್ಲವನ್ನೂ ಸರ್ಕಾರ ಮಾಡಬೇಕು ಅನ್ನೋ ಜನಸಾಮಾನ್ಯನ ಚಿಂತನೆ ಎಷ್ಟು ಸರಿ?
ಅಫ್ ಕೋರ್ಸ್ ನಗರೀಕರಣದ ಯೋಜನೆ ಮತ್ತು ಅದರ ಇಂಪ್ಲಿಮೆಂಟೇಷನ್ ಅಲ್ಲಿ ಆಡಳಿತ ವರ್ಗ ಸಂಪೂರ್ಣ ಎಡವಿದೆ. ಆದರೆ ಸಾಮಾನ್ಯ ಪ್ರಜ್ಞೆ ಇಲ್ಲದೋರೆಲ್ಲ ಬಂದು ನಗರವೊಂದಕ್ಕೆ ಸೇರಿಕೊಂಡರೆ ಜನಸಾಂದ್ರತೆಯ ಸಮಸ್ಯೆ ಆಗೇ ತೀರುತ್ತದೆ, ಅದಕ್ಕೆ ತಕ್ಕ ಮೂಲಭೂತ ಸಮಸ್ಯೆಗೆ ಪರಿಹಾರ ಕ್ಷಣಿಕವೋ/ ಅಸಾಧ್ಯವೋ ಹೊರತು ಶಾಶ್ವತವಂತೂ ಸಾಧ್ಯವೇ ಇಲ್ಲ.
ಮಳೆಗೇನು ಗೊತ್ತು ಮನುಷ್ಯನ ಬವಣೆ. ಅಷ್ಟಕ್ಕೂ ಈ ಭೀಕರ ಹವಾಮಾನ ವೈಪರೀತ್ಯಕ್ಕೆ ಮನುಜನೇ ಕಾರಣವೇ ಹೊರತು ಪ್ರಕೃತಿಯಲ್ಲ. ಆದರೆ ನೀವು ಈ ಸಣ್ಣ ಸಣ್ಣ ನಗರಗಳನ್ನು ನೋಡಿ, ಹಳ್ಳಿಗಳನ್ನು ನೋಡಿ ಈ ರೀತಿ ಭೀಕರ ಸಮಸ್ಯೆ ಆಗೋದು ತೀರಾ ಅಪರೂಪ. ಬೆಂಗಳೂರಿನಲ್ಲಿ ರಾತ್ರಿ ಸುರಿದಿರುವ ಮಳೆ ನಮ್ಮ ಮಲೆನಾಡಿನಲ್ಲಿ ಸರ್ವೇ ಸಾಮಾನ್ಯ. ಮಳೆಗಾಲದಲ್ಲಿ, ಇಲ್ಲ ಸೈಕ್ಲೋನು ಸಮಯದಲ್ಲಿ ಕನಿಷ್ಟ ಹತ್ತಿಪ್ಪತ್ತು ದಿನವಾದರೂ ಸರಾಸರಿ ಐದರಿಂದ ಹತ್ತು ಹದಿನೈದು ಇಂಚಿನಷ್ಟು ಮಳೆ ಆಗುತ್ತೆ.ಒಂದೇ ದಿನಕ್ಕೆ ಎಲ್ಲವೂ ಸರಿ ಆಗುತ್ತೆ. ಇಲ್ಲಿ ಭೌಗೋಳಿಕವಾಗಿ ಇಳಿಜಾರಿನಲ್ಲಿ ನೀರು ಹರಿದು ಹೋಗುವುದು ಒಂದು, ಆದರೆ ಬೆಂಗಳೂರಿನಲ್ಲಿ ಇಳಿಜಾರು ಎಲ್ಲಿ? ಎಲ್ಲ ಕಡೆ ಮಣ್ಣನ್ನು ಬಗೆದು ಅಪಾರ್ಟ್ಮೆಂಟ್ ಲೇಔಟ್ ಕಟ್ಟಿಯಾಗಿದೆಯಲ್ಲ…
ಹೀಗಿರುವಾಗ ಬೆಂಗಳೂರಿನಂತಹ ನಗರದಲ್ಲಿ ಎಲ್ಲಾದರೊಂದು ಕಡೆ ನೀರು ಜಾಮ್ ಆಗೋದು ಗ್ಯಾರಂಟಿ. ಆದರೂ ನಮ್ಮ ಜನಕ್ಕೆ ಬೆಂಗಳೂರಿನಲ್ಲಿ ಬದುಕೋ ಹುಚ್ಚು. ಅಲ್ಲಿಯ ಸೀಸ(lead) ಮತ್ತು ಕಾರ್ಬನ್ ಯುಕ್ತ ಗಾಳಿ,ಮಲ ಮೂತ್ರಾದಿ ಕೊಳಾಚೆ ನೀರನ್ನು ಕಾವೇರಿಗೆ ಸೇರಿಸಿ ಮತ್ತದನ್ನೇ ಶುದ್ದೀಕರಿಸಿ ನೀಡಲಾಗುವ ನೀರು, ಕಲಬೆರಕೆ ಆಹಾರ ಪದಾರ್ಥಗಳು, ತರಕಾರಿಗಳು,ಒತ್ತಡದ ಜೀವನವಿದ್ದಾಗಿಯೂ ಕ್ಷಣಿಕ ಮನೋರಂಜನೆ ಮತ್ತು ನಗರದಲ್ಲಿದ್ದೇವೆಂಬ ಹುಚ್ಚು ಹೆಮ್ಮೆಯಿಂದಾಗಿ ಅಲ್ಲೇ ಬದುಕುವವರಿಗೆ Nature Will Punish sometime.
ಅದರಲ್ಲೂ ಆರೋಗ್ಯ ಅನ್ನೋ ವಿಷಯದಲ್ಲಿ ಬೆಂಗಳೂರಿನಂತಹ ನಗರದಲ್ಲಿ ಬದುಕುವವರು ಐದತ್ತು ವರ್ಷ ಬೇಗನೆ ಸಾಯುವುದು ಗ್ಯಾರಂಟಿ. ಅದಕ್ಕೆ ವೀಕೆಂಡು ಅಂದರೆ ಕೊಡಗಿಗೋ,ಚಿಕ್ಕಮಗಳೂರಿಗೋ,ಹಾಸನ,ಶಿವಮೊಗ್ಗ, ಉತ್ತರಕನ್ನಡಕ್ಕೋ ಹೋಗಿ ಬಿದ್ದು ಒದ್ದಾಡೋದು. ನಿಸರ್ಗದ ಅಗಾಧತೆಯ ಮುಂದೆ, ಅದರ ಮುಂದಿನ ನಡೆಯ ಬಗ್ಗೆ ಮನುಷ್ಯ ಒಂದಷ್ಟು ಸಿದ್ದಾಂತಗಳನ್ನು ಹೇಳಬಹುದೇ ಹೊರತು ಅವೇನು ನೂರಕ್ಕೆ ನೂರರಷ್ಟು Accurate ಆಗಿರಲು ಸಾಧ್ಯವೇ ಇಲ್ಲ.
ಇತ್ತೀಚೆಗೆ ಸ್ನೇಹಿತರೊಬ್ಬರು ಹೇಳ್ತಿದ್ರು ಬ್ರದರ್ ನೋಡಿ, ಕುವೆಂಪುರವರು ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಗರ (ಮೈಸೂರು)ದಲ್ಲಿ ನೆಲೆಸಿದರು. ಆದರೆ ಅವರದೇ ಮಗ ತೇಜಸ್ವಿ ಅಂದಿನ ಕಾಲಕ್ಕೇ ನಗರದ ಬದುಕು ಬೇಡ ಎಂದು ವಾಪಾಸು ಹಳ್ಳಿಗೆ ಹೋಗಿ ನೆಲೆಸಿದರು. ನಗರದಲ್ಲೋ,ವಿದೇಶದಲ್ಲೋ ಬದುಕು ಕಟ್ಟಿಕೊಳ್ಳೋ ಎಲ್ಲಾ ಅವಕಾಶಗಳು ಕುವೆಂಪುರಂತ ಕುವೆಂಪುರವರ ಮಗನಾಗಿ ತೇಜಸ್ವಿಯವರಿಗೆ ಇದ್ದರೂ ಅವರು ಆಯ್ದುಕೊಂಡಿದ್ದು ಹಳ್ಳಿ ಮತ್ತು ಪ್ರಕೃತಿ. ಅದು ಆ ಕಾಲಕ್ಕೆ ಹಿಮ್ಮುಖ ಚಲನೆಯೆಂದು ಆಡಿಕೊಂಡು ನಕ್ಕವರಿದ್ದರು. ಅಪ್ಪನ ನೆರಳಿನಲ್ಲಿರದೆ ನಿಸರ್ಗದ ಮಡಿಲಿಗೆ ಬಂದು ಕನ್ನಡ ಸಾರಸ್ವತ ಲೋಕದಲ್ಲಿ ಅವರದೇ ಛಾಪು ಮೂಡಿಸಿದ ರೀತಿ ಆಧುನಿಕ ಸಮಾಜಕ್ಕೆ ಮಾದರಿಯೇ ಹೊರತು ಬೆಳ್ಳಂದೂರು ಬ್ರಿಡ್ಜಿನ ಮೇಲೆ ನಿಂತು ಮನೆಗೆ ಹೋಗಲು ದಾರಿಯಿಲ್ಲದೆ ಕೆಳಗೆ ಹರಿಯುತ್ತಿದ್ದ ಕೊಳಚೆ ನೀರನ್ನೋ, ಪ್ರಶ್ಣೆ ಕೇಳುತ್ತಿದ್ದ ಮಾಧ್ಯಮದವನಿಗೆ ವ್ಯವಸ್ಥೆಯನ್ನು ದೂರುತ್ತ ಕೂರುವುದು ಬದುಕಲ್ಲ.
ನೀವೆಷ್ಟೇ ಬಾಯಿ ಬಡಿದುಕೊಂಡರೂ ಅಭಿವೃದ್ಧಿಯ ಹೆಸರಿನ ನಾಗಾಲೋಟದಲ್ಲಿ ನಿಮ್ಮ ಸದ್ದು ನಗಣ್ಯ. ಮಲೆನಾಡಲ್ಲಿ ಹುಟ್ಟಿ ಬೆಳೆದು ನಗರದಲ್ಲಿ ವಾಸಿಸುವ ಎಲ್ಲ ಅವಕಾಶವಿದ್ದರೂ, ಬದುಕು ಕಟ್ಟಿಕೊಂಡಿರೋದು ಪಟ್ಟಣಕ್ಕೆ ಸಮೀಪದ ನನ್ನ ಹಳ್ಳಿಯಲ್ಲಿಯೇ. ಅದೆಂತ ಮಳೆಬರಲಿ, ಅದ್ಯಾವ ಕೊರೋನಾದಂತಹ ಸಾಂಕ್ರಾಮಿಕ ರೋಗ ಬರಲಿ ಪ್ರಕೃತಿ ನಮ್ಮನ್ನ ಸಣ್ಣ ಪುಟ್ಟ ತೊಂದರೆಗೆ ಮಾತ್ರ ಸೀಮಿತಗೊಳಿಸುತ್ತಾಳೆಯೇ ಹೊರತು, ಯಾರದೋ ಮನೆಯ ಕೊಳಚೆಯನ್ನೆಲ್ಲ ಮನೆಯೊಳಗೆ ನುಗ್ಗಿಸಿಕೊಳ್ಳುವ ನರಕ ಸದೃಶವನ್ನು ಕರುಣಿಸೋಲ್ಲ.