• Samvada
Sunday, May 29, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

Bharat of Future: An RSS Perspective. Lecture series of Sarsanghachalak Dr. Mohan Bhagwat : Q&A

Vishwa Samvada Kendra by Vishwa Samvada Kendra
September 24, 2018
in Articles
235
0
Bharat of Future: An RSS Perspective. Lecture series of Sarsanghachalak Dr. Mohan Bhagwat : Lecture 1.

Dr. Mohan Bhagwat, Sarsanghachalak, RSS

491
SHARES
1.4k
VIEWS
Share on FacebookShare on Twitter

ಸೆಪ್ಟೆಂಬರ್ ೧೯ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರೋಪ ಹಾಗೂ ಸಭಿಕರ ಪ್ರಶ್ನೆಗೆ ಸರಸಂಘಚಾಲಕರ ಉತ್ತರ

ಸಮಾರೋಪ

READ ALSO

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

ಒಂದು ಪಠ್ಯ – ಹಲವು ಪಾಠ

ಸಂಘದ ಬಗ್ಗೆ ಬೇರೆಯವರ ಅಭಿಪ್ರಾಯಗಳನ್ನು ಅಂಗೀಕರಿಸಬೇಡಿ. ಸಂಘಕ್ಕೆ ಬನ್ನಿ. ಸ್ವತಃ ಅನುಭವಿಸಿ. ನಂತರ ಅಭಿಪ್ರಾಯವನ್ನು ರೂಢಿಸಿಕೊಳ್ಳಿ. ಸಂಘಕಾರ್ಯದಲ್ಲಿ ಜೋಡಿಸಿಕೊಳ್ಳಬೇಕೆಂದರೆ ಶಾಖೆಗಳಿವೆ. ಅಲ್ಲದಿದ್ದರೆ ಸ್ವಯಂಸೇವಕರೇ ನಡೆಸುತ್ತಿರುವ ಅನ್ಯಾನ್ಯ ಚಟುವಟಿಕೆಗಳಿವೆ. ಅವರೊಡನೆ ಸೇರುವ ಆಸಕ್ತಿ ಇಲ್ಲದಿದ್ದರೆ ನಿಮಗೆ ಆಸಕ್ತಿಯಿರುವ ಯಾವುದಾದರೂ ಕ್ಷೇತ್ರವನ್ನು ಆರಿಸಿಕೊಳ್ಳಿ. ದಯವಿಟ್ಟು ನಿಷ್ಕ್ರಿಯರಾಗಬೇಡಿ. ನೀವು ಈ ಸಮಾಜದ ಒಳಿತಿಗಾಗಿ ಯಾವುದೇ ಕೆಲಸವನ್ನು ಮಾಡಿ, ಸಂಘವು ನಿಮಗೆ ಸಹಾಯ ಮಾಡುತ್ತದೆ. ನೀವು ಸಂಪರ್ಕವನ್ನು ಇಟ್ಟುಕೊಳ್ಳಬೇಕಷ್ಟೇ. ಇಂದು ಪ್ರಪಂಚಕ್ಕೆ 3 ನೇ ದಾರಿ ಬೇಕು. ಅದನ್ನು ತೋರಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇರುವುದು. ಸ್ವಕಲ್ಯಾಣ, ರಾಷ್ಟ್ರಕಲ್ಯಾಣ ಹಾಗೂ ವಿಶ್ವಕಲ್ಯಾಣಗಳು ಈ ದೃಷ್ಟಿಯಲ್ಲಿ ಅಡಗಿದೆ. ನಮಗೆ ಭಾರತದ ಪರಮವೈಭವ ಸಂಘದಿಂದ ಆಯಿತೆನ್ನುವ ಹಣೆಪಟ್ಟಿ ಹೊರುವ ಅಪೇಕ್ಷೆಯಿಲ್ಲ. ಬದಲಾಗಿ ಈ ದೇಶದಲ್ಲಿ ತಯಾರಾದ ಒಂದು ಪೀಳಿಗೆಯು ಈ ದೇಶವನ್ನು ಉನ್ನತಿಯತ್ತ ಕೊಂಡೊಯ್ದಿತು ಎನ್ನುವುದರಲ್ಲಿ ನಮಗೆ ಹೆಚ್ಚು ಆನಂದವಿದೆ. ಆ ಕನಸನ್ನು ಒಟ್ಟಿಗೆ ಸಾಕಾರಗೊಳಿಸೋಣ.

-ಡಾ. ಮೋಹನ್‌ಜಿ ಭಾಗವತ್

ಜಾತಿ ವ್ಯವಸ್ಥೆಯ ಕುರಿತಾದ ಸಂಘದ ದೃಷ್ಟಿ ಏನು ? ಸಂಘದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪ್ರಾತಿನಿಧಿತ್ವ ಎಷ್ಟಿದೆ? ಸಂಘವು ಅಲೆಮಾರಿ ಜನಾಂಗದ ಸಲುವಾಗಿಯೂ ಏನಾದರೂ ಕೆಲಸ ಮಾಡುತ್ತಿದೆಯೇ ?

ಜಾತಿ ಎನ್ನುವುದು ವ್ಯವಸ್ಥೆಯಲ್ಲ, ಅದು ಅವ್ಯವಸ್ಥೆ. ಅದು ಹಿಂದೆ ಇತ್ತೋ ಇಲ್ಲವೋ, ಅದು ಸಮಾಜಕ್ಕೆ ಹೇಗೆ ಉಪಯುಕ್ತವಾಗಿತ್ತು ಎನ್ನುವ ಚರ್ಚೆಯೇ ಅನಾವಶ್ಯಕ. ಅದು ಖಂಡಿತವಾಗಿ ತೊಲಗುತ್ತದೆ. ಅದನ್ನು ತೊಲಗಿಸುವ ಪ್ರಯತ್ನ ಮಾಡುವುದರ ಬದಲಾಗಿ ಅದರ ಬದಲಿಗೆ ಏನನ್ನು ತರಬೇಕೋ ಅದಕ್ಕಾಗಿ ನಮ್ಮ ಶಕ್ತಿಯನ್ನು ವಿನಿಯೋಗಿಸುವುದು ಉತ್ತಮ. ಕತ್ತಲೆಯನ್ನು ಎಷ್ಟು ಬಡಿದರೂ ಅದು ಹೋಗುವುದಿಲ್ಲ, ಅದು ಅದೃಶ್ಯವಾಗುವುದು ದೀಪವನ್ನು ಬೆಳಗಿಸಿದಾಗ ಮಾತ್ರ. ಸಾಮಾಜಿಕ ವಿಷಮತೆಯನ್ನು ಪ್ರತಿಪಾದಿಸುವ ಯಾವುದೇ ವಿಷಯವನ್ನಾಗಲಿ, ಸಂಘವು ವಿರೋಧಿಸುತ್ತದೆ. ಸಂಘದ ಕೆಲಸವು ಹೆಚ್ಚಿದಂತೆಲ್ಲಾ ಸಂಘದ ಸ್ವಯಂಸೇವಕರ ನಡುವಿನ ವಿಷಮತೆಗಳು ಅಳಿದು ಸಾಮರಸ್ಯ ಮೂಡುತ್ತದೆ.

ಸಂಘದಲ್ಲಿ ಜಾತಿಯನ್ನು ಕೇಳದೇ ಇರುವ ಪರಿಣಾಮವಾಗಿ ಪ್ರಾತಿನಿಧಿತ್ವದ ವಿಷಯವಾಗಿ ಹೇಳುವುದು ಸ್ವಲ್ಪ ಕಠಿಣವೇ. ಪ್ರಸ್ತುತ ಸಂಘಕಾರ್ಯವನ್ನು ಗಮನಿಸಿದರೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಂಖ್ಯೆಯು ಗಣನೀಯವಾಗಿ ಕಂಡುಬರುತ್ತಿದೆ. ಬಾಲಕನಾಗಿದ್ದ ನಾನು ನಾಗಪುರದಲ್ಲಿ ಹೋಗುತ್ತಿದ್ದ ಶಾಖೆಗೆ ಬರುತ್ತಿದ್ದವರಲ್ಲಿ ಬಹಳ ಜನರು ಬ್ರಾಹ್ಮಣರೇ ಆಗಿದ್ದರು. ಆದರೆ 80ರ ದಶಕದಲ್ಲಿ ನಾನು ನಾಗಪುರದ ಪ್ರಚಾರಕನಾಗಿ ಬಂದಾಗ ಅಲ್ಲಿದ್ದ ಬಸ್ತಿಯ ಶಾಖೆಗಳಲ್ಲಿ ಸ್ಥಾನೀಯ ಕಾರ್ಯಕರ್ತರು ತಯಾರಾಗಿ ಶಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದು ಶಾಖೆಗಳಲ್ಲಿ ನಡೆಯುವ ಅತ್ಯಂತ ಸಹಜವಾದ ಪ್ರಕ್ರಿಯೆಯಿಂದ ಮಾತ್ರ ಸಾಧ್ಯ. ಆದರೆ ಈ ಪ್ರಕ್ರಿಯೆಯನ್ನು ತರುವವರ ಮನಸ್ಸಿನಲ್ಲಿರಬೇಕಾದುದು ಏನೆಂದರೆ ನಾವು ಎಲ್ಲರನ್ನೂ ಸಂಘಟನೆಯೊಳಗೆ ತರಬೇಕೆಂಬುದು.ಈ ಚಿಂತನೆಯ ಪರಿಣಾಮವಾಗಿ ಇಂದು ಸಂಘದ ಕ್ಷೇತ್ರೀಯ ಸ್ತರದಲ್ಲೂ ಸಹ ಎಲ್ಲಾ ಜಾತಿಯ ಕಾರ್ಯಕರ್ತರಿದ್ದಾರೆ.

ಅಲೆಮಾರಿ ಜನಾಂಗದ ಸಲುವಾಗಿ ಸ್ವತಂತ್ರ ಭಾರತದಲ್ಲಿ ಕೆಲಸವನ್ನು ಆರಂಭಿಸಿದ ಪ್ರಥಮ ಸಂಘಟನೆ ನಮ್ಮದೇ. ಇದು ಮಹಾರಾಷ್ಟ್ರದಲ್ಲಿ ಆರಂಭವಾಯಿತು. ಅವರಲ್ಲಿ ಶಿಕ್ಷಣದ ಸಲುವಾಗಿ ಜಾಗೃತಿ, ಅವರ ಕುರೂಢಿಗಳ ನಿರ್ಮೂಲನೆ ಮುಂತಾದ ಕಾರ್ಯಗಳನ್ನು ಅವರ ಮುಖಾಂತರವೇ ಜಾರಿಗೊಳಿಸಿದ ಪರಿಣಾಮವಾಗಿ ಇಂದು ಕೇಂದ್ರ ಸರ್ಕಾರವು ಅವರಿಗೆಂದೇ ವಿಶೇಷ ಸಮಿತಿಯನ್ನು ನೇಮಕ ಮಾಡಿದೆ. ಅದರ ಪ್ರಾಥಮಿಕ ಪ್ರಯೋಗ ಮಹಾರಾಷ್ಟ್ರದ ಯಂಗರ್ವಾಡಿ ಎಂಬ ಸ್ಥಳದಲ್ಲಿ ನಡೆದಿದೆ. ಅವರ ಕುರಿತಾದ ಕೇಂದ್ರೀಭೂತ ಮಾಹಿತಿ ಹಾಗೂ ಕಾರ್ಯದ ಸ್ವರೂಪದ ದರ್ಶನ ಅಲ್ಲಿ ಸಿಗುತ್ತದೆ. ಭಾರತದ ಎಲ್ಲಾ ಅಲೆಮಾರಿ ಜನಾಂಗಗಳ ನಡುವೆಯೂ ಈ ಕಾರ್ಯವನ್ನು ವಿಸ್ತರಿಸುವ ಯೋಜನಯನ್ನು ಸಂಘ ಹೊಂದಿದೆ.

ಅಂತರ್ಜಾತೀಯ ರೋಟಿ-ಬೇಟಿ (ಭೋಜನ ಹಾಗೂ ವಿವಾಹ) ಸಂಬಂಧಗಳ ಕುರಿತಾಗಿ ಸಂಘದ ನಿಲುವೇನು?

ಇವುಗಳನ್ನು ಪರಿಶೀಲಿಸುತ್ತ ಸಂಘವು ಇವುಗಳನ್ನು ಪೂರ್ಣವಾಗಿ ಸಮರ್ಥಿಸುತ್ತದೆ. ಆದರೆ ಪ್ರತ್ಯಕ್ಷ ಕಾರ್ಯದಲ್ಲಿ ಭೋಜನದ ವಿಷಯವು ಬಹು ಸುಲಭ. ಅನೇಕರು ಇದನ್ನು ತಿಳಿದೋ, ತಿಳಿಯದೆಯೋ ಅಥವಾ ಬಲವಂತವಾಗಿಯೋ ಮಾಡುತ್ತಿದ್ದಾರೆ. ಅದು ಮನಃಪೂರ್ವಕವಾಗಿ ಆಗಬೇಕಿದೆ. ಆದರೆ ವಿವಾಹದ ವಿಷಯವಾಗಿರುವ ಸಮಸ್ಯೆ ಏನೆಂದರೆ ಅದು ಕೇವಲ ಸಾಮಾಜಿಕ ಸಾಮರಸ್ಯದ ಪ್ರಶ್ನೆಯಷ್ಟೇ ಅಲ್ಲದೇ ವರವಧು ಸಾಮ್ಯವೂ, ಎರಡು ಕುಟುಂಬಗಳ ಮಿಲನದ ವಿಚಾರವೂ ಅಡಗಿದೆ. 1942 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಅಂತರ್ಜಾತೀಯ ವಿವಾಹವು ಎರಡು ಸುಶಿಕ್ಷಿತ ಕುಟುಂಬಗಳ ಮಧ್ಯೆ ನಡೆದ ಪರಿಣಾಮವಾಗಿ ಅದು ಪ್ರಸಿದ್ಧಿಯನ್ನ ಪಡೆಯಿತು. ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಶುಭಸಂದೇಶವೂ ಸಹ ಬಂದಿತ್ತು. ಅದೇ ಸಂದರ್ಭದಲ್ಲಿ  ಶ್ರೀ ಗುರೂಜಿಯವರು ಅವರಿಗೆ ಕಳಿಸಿದ ಸಂದೇಶದಲ್ಲಿ ‘ನೀವು ಕೇವಲ ಶಾರೀರಿಕ ಆಕರ್ಷಣೆಗೆ ಒಳಗಾಗದೇ, ನಾವೆಲ್ಲಾ ಒಂದೇ ಎನ್ನುವ ಭಾವನೆಯನ್ನು ಸಮಾಜದಲ್ಲಿ ಬಿಂಬಿಸುವ ಸಲುವಾಗಿ ವಿವಾಹವಾಗಿದ್ದರೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಹಾಗೂ ನಿಮಗೆ ದಾಂಪತ್ಯ ಜೀವನ ಸುಖಮಯವಾಗಲಿ ಎಂದು ಹಾರೈಸುತ್ತೇನೆ’ ಎಂದಿದ್ದರು. ನಾವು ಭಾರತದ ಅಂತರ್ಜಾತೀಯ ವಿವಾಹಗಳ ಪಟ್ಟಿಯನ್ನೇನಾದರೂ ನೋಡಿದರೆ ಅದರಲ್ಲಿ ಸ್ವಯಂಸೇವಕರ ಸಂಖ್ಯೆ ಗಣನೀಯವಾಗಿ ಇರುವುದು ಖಚಿತ ! ಇದು ಕೇವಲ ಭೋಜನ – ವಿವಾಹದ ವಿಷಯಕ್ಕೆ ಸಂಬಂಧಿಸಿದ್ದಲ್ಲ, ಇಡೀ ಸಮಾಜವನ್ನು ಎಲ್ಲಾ ರಂಗಗಳಲ್ಲೂ ಅಭೇದದ ದೃಷ್ಟಿಯಿಂದ ನೋಡಲು ತೊಡಗಿದಾಗ ಮಾತ್ರ ನಾವು ಹಿಂದೂ ಸಮಾಜ ಅಖಂಡವಾಗಿದೆ ಎಂದು ಸಾರಬಹುದು. ಹೇಗೆ ಆತ್ಮವು ದೇಶಕಾಲ ಪರಿಸ್ಥಿತಿಗಳನ್ನನುಸರಿಸಿ ಹೊಸ ಹೊಸ ಶರೀರವನ್ನು ಧಾರಣೆ ಮಾಡುವುದೋ ಹಾಗೇ ಹಿಂದೂ ಸಮಾಜವು ಹಲವು ರೂಪಗಳನ್ನು ತಾಳಿದರೂ ತನ್ನ ಆತ್ಮವಾದ ಏಕತೆಯನ್ನು ಉಳಿಸಿಕೊಂಡೇ ಇರುತ್ತದೆ. ಸಂಘ ಪ್ರಾರಂಭವಾದ ದಿನಗಳಲ್ಲಿ ಅಪಹಾಸ್ಯಕ್ಕೊಳಗಾಗುತ್ತಿದ್ದ ಸಮಾಜವು ಇಂದು ಸಂಘಟಿತವಾಗಿ ಏಕತ್ರಿತವಾಗುತ್ತಿದೆ.

 

ಶಿಕ್ಷಣದಲ್ಲಿ ಭಾರತದ ಪರಂಪರಾಗತ ಕ್ರಮ ಹಾಗೂ ಆಧುನಿಕತೆಯ ಸಮನ್ವಯ

ಹೇಗೆ ? ಕುಸಿಯುತ್ತಿರುವ ಮೌಲಿಕ ಶಿಕ್ಷಣದ ಬಗ್ಗೆ ಸಂಘದ ಅಭಿಪ್ರಾಯ ಏನು ?

ಧರ್ಮಪಾಲರ ಗ್ರಂಥಾವಲೋಕನದಿಂದ ಸ್ಪಷ್ಟವಾಗುವ ವಿಷಯವೇನೆಂದರೆ ನಮ್ಮ ಶಿಕ್ಷಣ ಪದ್ಧತಿಯು ಅತ್ಯಂತ ಹೆಚ್ಚು ಜನರನ್ನು ಸಾಕ್ಷರರನ್ನಾಗಿ, ಮನುಷ್ಯರನ್ನಾಗಿ, ಜೀವನ ನಡೆಸಲು ಸಮರ್ಥರನ್ನಾಗಿ ನಿರ್ಮಿಸುವ ಕ್ಷಮತೆಯನ್ನು ಹೊಂದಿತ್ತು. ಇಂತಹ ಪದ್ಧತಿಯನ್ನು ಆಂಗ್ಲರು ಸ್ವೀಕರಿಸಿ ಇವೆಲ್ಲವನ್ನೂ ಮಾಡಲು ಅಸಮರ್ಥವಾದ ಅವರ ನೀಚ ಪದ್ಧತಿಯನ್ನು ನಮಗೆ ದಯಪಾಲಿಸಿದರು! ಈಗಿನ ಶಿಕ್ಷಣ ಪದ್ಧತಿಯಲ್ಲಿ ಯೋಗ್ಯವಾದುದನ್ನು ಸ್ವೀಕರಿಸುತ್ತ ನಮ್ಮ ಪರಂಪರಾಗತ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ ಶಿಕ್ಷಣನೀತಿಯು ಇಂದಿನ ಅವಶ್ಯಕತೆಗಳಲ್ಲೊಂದು. ಚತುರ್ವೇದ, ಪುರಾಣ, ಉಪನಿಷತ್, ರಾಮಾಯಣ, ಮಹಾಭಾರತ, ಷಡ್ದರ್ಶನಗಳು, ಆಗಮಗಳು, ತ್ರಿಪಿಟಕಗಳು, ಗುರುಗ್ರಂಥ ಸಾಹೆಬ್ ಮುಂತಾದ ಈ ದೇಶದ ಶ್ರೇಷ್ಠ ಜ್ಞಾನನಿಧಿಯು ಪ್ರತಿಯೊಬ್ಬ ಭಾರತೀಯನಿಗೂ ಸಿಗುವಂತಾಗಬೇಕು. ಇವಲ್ಲದೇ ಅನ್ಯ ಮತಗಳ ಮೌಲಿಕ ವಿಚಾರಗಳ ಶಿಕ್ಷಣವೂ ಸಹ ದೊರಕಬೇಕು. ವಿಚಾರಗಳ ಮಂಥನದಿಂದ ದೊರಕುವ ಸಂಸ್ಕಾರಗಳ ದೃಷ್ಟಿಯಿಂದ ಇವಲ್ಲವುಗಳ ಅಧ್ಯಯನ ಅಗತ್ಯ. ನಿಜವಾಗಿ ನೋಡಿದರೆ ಕುಸಿಯತ್ತಿರುವುದು ಶಿಕ್ಷಾರ್ಥಿಯ ಹಾಗೂ ಶಿಕ್ಷಕನ ಮೌಲ್ಯಗಳೇ ಹೊರತು ಶಿಕ್ಷಣದ್ದಲ್ಲ. ಇಂದಿನ ವಿದ್ಯಾರ್ಥಿಯ ದೃಷ್ಟಿಜ್ಞಾನದ ಕಡಗೋ ಅಥವಾ ಕೇವಲ ನೌಕರಿಯ ಕಡೆಗೋ! ಎಂಬುದನ್ನು ವಿಚಾರ ಮಾಡಬೇಕಿದೆ. ತಿಲಕರು ತಮ್ಮ ಮಗನಿಗೆ ಹೇಳಿದ – ನಿನಗೆ ಏನು ಮಾಡಬೇಕೆನಿಸುವುದೋ ಅದನ್ನೇ ಮಾಡು, ಆದರೆ ಚಪ್ಪಲಿ ಹೊಲಿದರೂ ನಿನ್ನಂತೆ ಬೇರಾರಿಗೂ ಚಪ್ಪಲಿ ಹೊಲಿಯಲು ಬರದಂತೆ ಉತ್ಕೃಷ್ಟವಾಗಿ ಹೊಲಿಯಲು ಕಲಿ ಎನ್ನುವ ಮಾತಿನ ಆಂತರ್ಯವೂ ಸಹ ಇದೇ. ಉತ್ಕೃಷ್ಟವಾದ ಜ್ಞಾನಾರ್ಜನೆಯೇ ವಿದ್ಯಾರ್ಥಿಯ ಧ್ಯೇಯವಾಗಬೇಕು. ಶಿಕ್ಷಕರ ಸ್ತರವೂ ಸಹ ಇಲ್ಲಿ ಅತಿ ಮುಖ್ಯವಾದ ಅಂಗ. ಅವರ ಜ್ಞಾನದ ಮಟ್ಟ, ಕಲಿಸುವ ಶ್ರದ್ಧೆ ಮುಂತಾದವೂ ಸಹ ಶಿಕ್ಷಣದ ಸ್ತರವನ್ನು ಹೆಚ್ಚಿಸುವಲ್ಲಿ ಉಪಯುಕ್ತವಾದ ಅಂಶಗಳು. ವ್ಯಕ್ತಿಗಳ ಸರ್ವಾಂಗೀಣ ಅಭಿವೃದ್ದಿಯನ್ನು ಮಾಡುವ ಒಂದು ಮಾದರಿಯನ್ನು ಕಡೆದು ನಿಲ್ಲಿಸಬೇಕೆಂಬುದು ಸಂಘದ ಅಪೇಕ್ಷೆ.

 

ಮಹಿಳೆಯರ ಸುರಕ್ಷತೆಯ ಬಗ್ಗೆ ಸಂಘದ ದೃಷ್ಟಿಕೋನವೇನು?

ನಮ್ಮ ಸಮಾಜದಲ್ಲಿ ಮೊದಲೆಲ್ಲ ಮಹಿಳೆಯರು ಮನೆಯ ಒಳಗೆ ಕೇವಲ ಗೃಹಕೃತ್ಯ ನಿರ್ವಾಹದಲ್ಲಿ ತೊಡಗಿರುತ್ತಿದ್ದರು. ಆಗ ಅವರ ರಕ್ಷಣೆ ಕುಟುಂಬದ ಜವಾಬ್ದಾರಿಯಾಗಿತ್ತು. ಇಂದಿನ ಸಮಾಜದಲ್ಲಿ ಪುರುಷರ ಸಮಾನಸ್ಕಂಧರಾಗಿ ಅವರು ಕೆಲಸ ಮಾಡುವಾಗ ಅವರು ಸಹಜವಾಗಿಯೇ ತಮ್ಮ ರಕ್ಷಣೆಯ ವಿಷಯದಲ್ಲಿ ಜಾಗರೂಕರೂ ಹಾಗೂ ಸಿದ್ಧರಾಗಬೇಕಾದ ಅವಶ್ಯಕತೆಯಿದೆ. ನಿಜವಾದ ಸಮಸ್ಯೆಯಿರುವುದು ಮಹಿಳೆಯರ ಕುರಿತಾದ ಪುರುಷರ ದೃಷ್ಟಿಕೋನದಲ್ಲೇ. ಅದಕ್ಕೆ ನಮ್ಮ ಪರಂಪರೆ ಪರಿಹಾರವನ್ನೂ ಕರುಣಿಸಿದೆ. ‘ಮಾತೃವತ್ ಪರದಾರೇಷು’ ಪರಸ್ತ್ರೀಯನ್ನು ತಾಯಿಯಂತೆ ಕಾಣು ಎನ್ನುವುದು ಪುರುಷರಿಗೆ ನಮ್ಮ ಸಂಸ್ಕೃತಿ ವಿಧಿಸಿದ ಶಾಸನ. ಆದರೆ ಅದನ್ನು ಪಾಲಿಸಬೇಕಾದ ಮನಃಸ್ಥಿತಿಯು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸಂಘವು ಕಿಶೋರ ಕಿಶೋರಿಯರಿಗೆ ಅಗತ್ಯವಾದ ತರಬೇತಿಯನ್ನು ನೀಡುತ್ತಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ಅವರಿಗೆ ಪ್ರಶಿಕ್ಷಣ ಹಾಗೂ ಸ್ಪರ್ಧೆಗಳನ್ನೂ ಸಹ ಆಯೋಜಿಸಲಾಗುತ್ತಿದೆ. ನಮ್ಮ ಸಮಾಜಕ್ಕೆ ಕಾನೂನಿನ ಹೆದರಿಕೆಗಿಂತ ಸಂಸ್ಕಾರದ ಪರಿಣಾಮ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಕಾನೂನು ಮುರಿಯದ ಸಮಾಜವಿದ್ದರೆ ಅದು ಉಳಿಯುತ್ತದೆ. ಇಂದೂ ಕೆಲವು ರಾಜ್ಯಗಳಲ್ಲಿ ಮಹಿಳೆಯು ಸರ್ವಾಲಂಕಾರಭೂಷಿತೆಯಾಗಿ ಮಧ್ಯರಾತ್ರಿಯೂ ಸಹ ನಿರ್ಭಯವಾಗಿ ಸಂಚರಿಸಬಲ್ಲಳು. ಇದು ಕಾನೂನಿನ ಪ್ರಭಾವವಲ್ಲ. ಬದಲಾಗಿ ಸಮಾಜದ ವಾತಾವರಣದ ಪರಿಣಾಮ. ಅಂತಹ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮ ಗುರಿ.

 

ಎಲ್ಲ ಕಡೆಯೂ ಆಂಗ್ಲ ಭಾಷೆಯ ಪ್ರಭುತ್ವ, ಹಿಂದೀ ಹಾಗೂ ಇತರ ಭಾರತೀಯ ಭಾಷೆಗಳ ಕುರಿತಾಗಿ ಸಂಘದ ಅಭಿಪ್ರಾಯ ಏನು? ಸಂಸ್ಕೃತ ವಿದ್ಯಾಲಯಗಳು ಮುಚ್ಚಲ್ಪಡುತ್ತಿವೆ ಹಾಗೂ ಅದಕ್ಕೆ ಮಹತ್ವವನ್ನೂ ನೀಡಲಾಗುತ್ತಿಲ್ಲ. ಇದರ ವಿಚಾರವಾಗಿ ಸಂಘದ ನಿಲುವೇನು? ಸಂಸ್ಕೃತಕ್ಕೆ ಹಿಂದಿಗಿಂತ ಹೆಚ್ಚಿನ ಮರ್ಯಾದೆ ನೀಡಬೇಕೇ ಬೇಡವೇ?

ಆಂಗ್ಲ ಭಾಷೆಯ ಪ್ರಭುತ್ವ ಕಾಣುತ್ತಿರುವುದು ನಮ್ಮ ಮನಸ್ಸಿನಲ್ಲಿ ಮಾತ್ರ. ಭಾರತದ ಉಚ್ಚವರ್ಗ ಭಾರತದ ಭಾಷೆಗಳು ತಿಳಿದಿದ್ದರೂ ಸಹ ಪರಸ್ಪರ ಆಂಗ್ಲಭಾಷೆಯಲ್ಲಿ ಸಂವಹಿಸುವುದು ನಮ್ಮ ಅನುಭವದಲ್ಲಿದೆ. ಭಾಷೆ ಭಾವನೆಗಳ ಜೊತೆಗೆ ಸಂಸ್ಕೃತಿಯ ವಾಹಕವೂ ಹೌದು. ಹಾಗಾಗಿ ಮನುಷ್ಯನ ವಿಕಾಸಕ್ಕಾಗಿ ಎಲ್ಲ ಭಾಷೆಗಳ ಅಸ್ತಿತ್ವವೂ ಅನಿವಾರ್ಯ. ನಾವು ಯಾವ ಭಾಷೆಯನ್ನೂ ದ್ವೇಷಿಸುವುದು ಬೇಡ. ಅವುಗಳ ಸ್ಥಾನವನ್ನು ನಮ್ಮ ಜೀವನದಲ್ಲಿ ನಿರ್ಧರಿಸಬೇಕು ಅಷ್ಟೇ. ನಾವು ತೆಗೆದುಹಾಕಬೇಕಾಗಿರುವುದು ಆಂಗ್ಲಭಾಷೆಯನ್ನಲ್ಲ, ಬದಲಾಗಿ ನಮ್ಮ ಮನಸ್ಸಿನಲ್ಲಿರುವ ಅದರ ಕುರಿತಾದ ಮೋಹವನ್ನು. ಜಗತ್ತಿನ ಅನೇಕ ದೇಶಗಳು ತಮ್ಮ ದೇಶದ ಭಾಷೆಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ನಾವೂ ಸಹ ಆ ದಿಕ್ಕಿನಲ್ಲಿ ಪ್ರಯತ್ನಿಸಬೇಕು. ನಮ್ಮಲ್ಲಿ ಅತ್ಯಂತ ಸಮೃದ್ಧವಾದ ಭಾಷೆಗಳಿವೆ. ಇಡೀ ವಿಶ್ವದಲ್ಲಿ ಆಂಗ್ಲಭಾಷೆಯ ಪ್ರಭುತ್ವದ ಮೂಲಕ ತನ್ನ ಛಾಪು ಮೂಡಿಸಬಲ್ಲ ಪ್ರಭಾವೀ ವ್ಯಕ್ತಿಗಳು ನಮ್ಮ ದೇಶದಲ್ಲಿ ತಯಾರಾಗಬೇಕು. ಆದರೆ ಕನಿಷ್ಠ ಮಾತೃಭಾಷೆಯನ್ನಾದರೂ ಕಲಿಯುವ ಪ್ರಯತ್ನವನ್ನು ಪ್ರತಿಯೊಬ್ಬ ಭಾರತೀಯನೂ ಮಾಡಬೇಕು. ಆಗ ಪ್ರಶ್ನೆ ಉದ್ಭವಿಸುವುದೇನೆಂದರೆ ಯಾವ ಭಾಷೆಯನ್ನು ಕಲಿಯಬೇಕು ಎಂಬುದು. ಬಹಳ ಜನ ಮಾತನಾಡುವ ಭಾಷೆಯಾಗಿ ಹಿಂದಿ ಇರುವುದರಿಂದ ಇಂದು ಹಿಂದಿ ರಾಷ್ಟ್ರಭಾಷೆಯ ರೂಪದಲ್ಲಿ ಪ್ರಚಲಿತದಲ್ಲಿದೆ. ನಾವು ಒಂದೇ ಭಾಷೆಯ ವಿಷಯವಾಗಿ ಮಾತನಾಡುವ ಉದ್ದೇಶವೆಂದರೆ ಅದರ ಮೂಲಕವಾಗಿ ರಾಷ್ಟ್ರವನ್ನು ಜೋಡಿಸಬೇಕೆಂಬುದಾಗಿ ಮಾತ್ರ. ಆದರೆ ಅದನ್ನು ಮಾಡುವುದರಿಂದ ವಿಷಮತೆ ಬೆಳೆದಲ್ಲಿ ನಾವು ಆಗ ಯೋಚಿಸಬೇಕಾದ ವಿಷಯ, ಇದನ್ನು ಕಾರ್ಯರೂಪಕ್ಕಿಳಿಸುವ ವಿಧಾನವೇನೆಂದು ಮಾತ್ರ. ಹೇಗೆ ಇತರ ಪ್ರಾಂತದವರು ಹಿಂದಿಯನ್ನು ಕಲಿಯುವರೋ ಅದೇ ರೀತಿ ಹಿಂದೀ ಮಾತನಾಡುವ ಜನರೂ ಸಹ ಇತರ ಪ್ರಾಂತದ ಯಾವುದಾದರೂ ಒಂದು ದೇಶಭಾಷೆಯನ್ನು ಕಲಿತರೆ ಆಗ ಈ ಮನೋಭೂಮಿಕೆಯನ್ನು ಸಿದ್ಧಪಡಿಸುವ ಕೆಲಸ ಸುಗಮವಾಗುತ್ತದೆ. ಸಂಸ್ಕೃತ ವಿದ್ಯಾಲಯಗಳು ಮುಚ್ಚಲ್ಪಡುತ್ತಿವೆ ಎನ್ನುವ ವಿಚಾರವಾಗಿ ನಾವು ನೀಡುತ್ತಿರುವ ಮಹತ್ವ ಎಷ್ಟು? ನಾವು ಮಹತ್ವ ನೀಡಿದರೆ ಸಹಜವಾಗಿ ಸರ್ಕಾರವೂ ಮಹತ್ವ ನೀಡುತ್ತದೆ. ನಮ್ಮ ಶ್ರೇಷ್ಠ ಪರಂಪರೆಯ ಗ್ರಂಥಗಳು ಸಂಸ್ಕೃತದಲ್ಲಿವೆ ಎನ್ನುವ ಕಾರಣಕ್ಕಾದರೂ ನಾವು ಅದರ ಅಧ್ಯಯನವನ್ನು ಮಾಡಬೇಕು. ಕನಿಷ್ಠ ಪಕ್ಷ ಅದರಲ್ಲಿ ಸರಳ ಸಂಭಾಷಣೆಯನ್ನಾದರೂ ಮಾಡುವಷ್ಟು ಅದನ್ನು ಅಧ್ಯಯನ ಮಾಡಬೇಕು. ನಾವು ಅದರ ಅಧ್ಯಯನ ಹೆಚ್ಚು ಮಾಡಿದಷ್ಟೂ ನಮಗೆ ಅದರ ಶ್ರೇಷ್ಠತೆಯ ಅರಿವಾಗುತ್ತದೆ ಹಾಗೂ ಅದರಿಂದ ಸಮಾಜದಲ್ಲಿ ಸಂಚಲನ ಮೂಡುತ್ತದೆ. ಆಗ ತಾನಾಗಿಯೇ ವಿದ್ಯಾಲಯಗಳು ಮತ್ತೆ ತೆರೆಯುತ್ತವೆ ಹಾಗೂ ಅಧ್ಯಾಪಕರು ತಾನಾಗಿಯೇ ದೊರೆಯುತ್ತಾರೆ. ಆಗ ಮಾತ್ರ ಸರ್ಕಾರದ ನೀತಿಗಳು ಪ್ರಭಾವಶಾಲಿಯಾಗಿ ಕೆಲಸ ಮಾಡಬಲ್ಲವು. ಭಾಷೆಗಳಲ್ಲಿ ಶ್ರೇಷ್ಠ, ಕನಿಷ್ಠ ಎಂಬುದಿಲ್ಲ. ಎಲ್ಲಾ ಭಾರತದ ಭಾಷೆಗಳೂ ನಮ್ಮವೇ. ನಾವು ಎಲ್ಲಿದ್ದರೂ ಅಲ್ಲಿಯ ಸ್ಥಳೀಯ ಭಾಷೆಯಲ್ಲಿ ಮಾತನಾಡುವಂತಾಗಬೇಕು. ನಮ್ಮ ಮಾತೃಭಾಷೆ, ಸ್ಥಳೀಯಭಾಷೆ ಹಾಗೂ ರಾಷ್ಟ್ರಭಾಷೆಗಳನ್ನು ಕಲಿತು ಉಪಯುಕ್ತವಾದ ಯಾವುದೇ ವಿದೇಶೀ ಭಾಷೆಗಳನ್ನು ಕಲಿಯುವುದೂ ಸಹ ತಪ್ಪಾಗಲಾರದು ಮತ್ತು ಭಾರತದ ಗೌರವವೂ ಸಹ ಇದರಲ್ಲಿಯೇ ಅಡಗಿದೆ.

ಹಿಂದುತ್ವದ ವ್ಯಾಖ್ಯೆಯು ಇಷ್ಟು ಸುಂದರವಾಗಿದ್ದರೂ ಇದರ ವಿರುದ್ದವಾಗಿ ವಿಶ್ವದಲ್ಲಿ ಆಕ್ರೋಶ ಏಕಿದೆ?

ವಿಶ್ವದಲ್ಲಿ ಹಿಂದುತ್ವದ ವಿರುದ್ಧವಾಗಿ ಯಾವುದೇ ಆಕ್ರೋಶವಿಲ್ಲ, ಬದಲಾಗಿ ಸ್ವೀಕೃತಿಯಿದೆ. ಆಕ್ರೋಶವಿರುವುದು ನಮ್ಮ ದೇಶದಲ್ಲಿ. ಏಕೆಂದರೆ ನಾವು ಧರ್ಮದ ವ್ಯಾಖ್ಯೆಯ ಹೆಸರಿನಲ್ಲಿ ಅಧರ್ಮವನ್ನೆಸಗುತ್ತಿದ್ದೇವೆ. ನಾವು ಹಿಂದುತ್ವದ ವಿಚಾರವನ್ನು ಅನುಸರಿಸಿದರೆ ಸಹಜವಾಗಿಯೇ ಪ್ರತಿರೋಧ ಕಡಿಮೆಯಾಗುತ್ತದೆ. ನಮ್ಮ ತತ್ವವೇನೋ ಉತ್ಕೃಷ್ಟವಾಗಿದೆ, ಆದರೆ ಪ್ರತ್ಯಕ್ಷ ವ್ಯವಹಾರದಲ್ಲಿ ಅದರ ಜೋಡಣೆ ಮಾತ್ರ ಶೂನ್ಯ. ಅದು ನಮ್ಮ ನಿತ್ಯ ಜೀವನದ ಅಂಗವಾಗಬೇಕು. ನಾವು ಸರಿಯಾದ ಅರ್ಥದಲ್ಲಿ ಹಿಂದೂ ಆಗಬೇಕು. ಅದನ್ನೇ ಸಂಘವು ಮಾಡಲು ಪ್ರಯತ್ನಿಸುತ್ತಿರುವುದು.

 

ಮತಾಂತರ ಬಲವಂತವಾಗಿ ನಡೆಯುತ್ತಿದೆಯೇ ? ಎಲ್ಲ ಧರ್ಮಗಳೂ ಸಮಾನ ಎಂದರೆ ಮತಾಂತರಕ್ಕೆ ಸಂಘದ ವಿರೋಧ ಏಕೆ?

ಈ ಪ್ರಶ್ನೆಯನ್ನು ಕೇಳುವವರಿಗೆ ನನ್ನ ಪ್ರಶ್ನೆ ಏನೆಂದರೆ ಎಲ್ಲ ಧರ್ಮಗಳೂ ಸಮಾನವೆಂದರೆ ಮತಾಂತರದ ಅವಶ್ಯಕತೆಯಾದರೂ ಏನು?! ವ್ಯಕ್ತಿಯು ಯಾವ ಧರ್ಮದಲ್ಲಿದ್ದರೂ ಅವನಿಗೆ ಪೂರ್ಣತ್ವ ಪ್ರಾಪ್ತಿಯಾಗುತ್ತದೆ. ಆತನು ಮತ ತತ್ವಗಳನ್ನು ಅಧ್ಯಯನ ಮಾಡಿ ಸ್ವ ಇಚ್ಛೆಯಿಂದ ಒಂದು ಮತವನ್ನು ಅನುಸರಿಸಿದರೆ ಅದು ಬೇರೆ ಮಾತು. ಆದರೆ ಪ್ರಕೃತ ಪರಿಸ್ಥಿತಿಯಲ್ಲಿ ಅವರನ್ನು ಕರೆತರಲಾಗುತ್ತಿದೆ. ಇದರಿಂದಲೇ ಊಹಿಸಬಹುದೇನೆಂದರೆ ಅವರ ಉದ್ದೇಶ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಅಲ್ಲ ಎಂದು. ದೇಶ ವಿದೇಶಗಳಲ್ಲಿ ನಡೆದ ಮತಾಂತರಗಳ ಮಾಹಿತಿಯ ಜಾಲವನ್ನು ತೆಗೆದು ನೋಡಿದರೆ ನಮಗೆ ಈ ಸತ್ಯದ ಅರಿವಾಗುತ್ತದೆ. ಒಬ್ಬ ವ್ಯಕ್ತಿಯು ಸ್ವೇಚ್ಛೆಯಿಂದ ಮತಾಂತರವಾದರೆ ಅದಕ್ಕೆ ಹಿಂದೂವಿನ ಸಮರ್ಥನೆ ಖಂಡಿತ ಇದೆ. ಆದರೆ ಈಗಿನ ಪ್ರಕರಣಗಳು ಇದಕ್ಕೆ ವ್ಯತಿರಿಕ್ತವಾಗಿಯೇ ಇವೆ. ಅದಕ್ಕಾಗಿಯೇ ಅದನ್ನು ಸಂಘವು ವಿರೋಧಿಸುವುದು.

 

ಗೋರಕ್ಷಣೆಯ ವಿಷಯವಾಗಿ ಸಂಘದ ನಿಲುವೇನು? ಗೋಕಳ್ಳರ ಹೆಚ್ಚಳ, ಗೋರಕ್ಷಕರ ಮೇಲೆ ಹಲ್ಲೆ ಇವುಗಳ ಪರಿಹಾರ ಹೇಗೆ?

ಯಾವುದೇ ವಿಷಯವಾಗಲಿ ಕಾನೂನು ಕೈಗೆ ತೆಗೆದುಕೊಳ್ಳುವುದು ಘೋರ ಅಪರಾಧ ಮತ್ತು ಅದಕ್ಕಾಗಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಇದು ಸಂಘದ ಸ್ಪಷ್ಟ ನಿಲುವು. ಗೋವು ಭಾರತೀಯರ ಶ್ರದ್ಧಾ ಕೇಂದ್ರ. ಭಾರತದ ಹಳ್ಳಿಯಲ್ಲಿರುವ ಪ್ರತಿ ಕೃಷಿಕನ ಅರ್ಥಾಧಾರವೇ ಗೋವು. ಗೋವಿನ ಅನೇಕ ಉತ್ಪನ್ನಗಳು ಅವನ ಜೀವನಾಧಾರವಾಗಿವೆ. ಇಂದು ದೇಶೀ ತಳಿ ಗೋವಿನ ಹಾಲಿನಾದಿಯಾಗಿ ಅನೇಕ ಉತ್ಪನ್ನಗಳ ಉತ್ಕೃಷ್ಟತೆ ವೈಜ್ಞಾನಿಕವಾಗಿ ದೃಢಪಟ್ಟಿದೆ. ಗೋ ಸಂರಕ್ಷಕರು ಮೊದಲು ಮಾಡಬೇಕಾದ ಕೆಲಸ ಗೋವನ್ನು ಸಾಕುವುದು. ಗೋ ತಳಿ ಸಂವರ್ಧನೆಯು ಅದರ ರಕ್ಷಣೆಯ ಮುಖ್ಯ ಅಂಗ. ಹಸುವಿನ ಉತ್ಪನ್ನಗಳ ಉಪಯೋಗ ಏನು ಮತ್ತು ಹೇಗೆ ಎನ್ನುವದನ್ನು ಸಮಾಜಕ್ಕೆ ಮನಗಾಣಿಸಬೇಕು.ಇಂದು ಗೋಸಂರಕ್ಷಣೆಯ ವಿಚಾರವನ್ನು ಮಾಡುತ್ತಿರುವುದು ಕೇವಲ ಸಂಘ ಮಾತ್ರವಲ್ಲ. ಪೂರ್ಣ ಜೈನ ಸಮಾಜ ಹಾಗೂ ಗೋಶಾಲೆಗಳನ್ನು ನಡೆಸುತ್ತಿರುವ ಎಷ್ಟೋ ಮುಸಲ್ಮಾನ ಸಮಾಜದ ಬಂಧುಗಳು ಇದರಲ್ಲಿ ಭಾಗಿಯಾಗಿದ್ದಾರೆ. ಗೋಸೇವೆಯಿಂದ ವ್ಯಕ್ತಿಯ ಅಪರಾಧಿ ಪ್ರವೃತ್ತಿಯು ಕಡಿಮೆಯಾಗುತ್ತದೆ ಎನ್ನುವುದೂ ಸಹ ಸೆರೆಮನಗಳಲ್ಲಿ ನಡೆದ ಪ್ರಯೋಗಗಳಿಂದ ದೃಢಪಟ್ಟಿದೆ. ಇವೆಲ್ಲವನ್ನೂ ಸಮಾಜಕ್ಕೆ ಮನಗಾಣಿಸುವುದು ಸಂಘದ ಕರ್ತವ್ಯ.

 

ದೇಶದ ಜನಸಂಖ್ಯೆಯ ವಿಷಯವಾಗಿ ಸಂಘದ ಅಭಿಪ್ರಾಯವೇನು ? ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಬೇಕೇ ? ಜನಸಂಖ್ಯೆಯ ಹೆಚ್ಚಳವು ವಿಕಾಸಕ್ಕೆ ಮಾರಕವೇ ?

ನಿಶ್ಚಯವಾಗಿಯೂ ಹೆಚ್ಚಾದ ಜನಸಂಖ್ಯೆಯು ರಾಷ್ಟ್ರಕ್ಕೆ ಹೊರೆಯೇ ಸರಿ. ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಬೇಕು. ಆದರೆ ಕಾನೂನನ್ನು ಮಾಡುವಾಗ ಮುಂದಿನ 50 ವರ್ಷಗಳ ನಂತರ ಇರಬಹುದಾದ ತಾಯಂದಿರ ಕ್ಷಮತೆ, ಅವರ ಪರಿಸರದ ವ್ಯತ್ಯಯಗಳು, ಹುಟ್ಟುವ ವ್ಯಕ್ತಿಗಳಿಗೆ ಆಹಾರ ಪೂರೈಕೆಯ ಸಾಮರ್ಥ್ಯ ಮುಂತಾದವುಗಳನ್ನು ಲಕ್ಷ್ಯದಲ್ಲಿರಿಸಿಕೊಳ್ಳಬೇಕು. ಸಮಾಜದ ಎಲ್ಲಾ ವ್ಯಕ್ತಿಗಳನ್ನೂ ಅದು ತಲುಪಿದೆಯೇ ಎಂಬುದನ್ನು ಗಮನಿಸಬೇಕು. ಪರಿವಾರದ ಸಂತಾನ ಎಷ್ಟಿರಬೇಕು ಎಂಬುದನ್ನು ನಿಗದಿಪಡಿಸಬೇಕು. ಅದು ಪಾಲಿತವಾಗುತ್ತಿದೆಯೇ ಎಂಬುದನ್ನು ವಿಚಾರಿಸಬೇಕು.ಹುಟ್ಟುವ ಮಕ್ಕಳನ್ನು ಯೋಗ್ಯ ವ್ಯಕ್ತಿಗಳನ್ನಾಗಿ ನಿರ್ಮಿಸುವ ಸಾಮರ್ಥ್ಯದ ಕೊರತೆ ಎಲ್ಲಿ ಕಂಡುಬರುವುದೋ ಅಂತಹ ಸಮಾಜಗಳಲ್ಲಿ ಈ ಕಾನೂನನ್ನು ಮೊದಲು ಜಾರಿಗೆ ತರಬೇಕು.ಅಕ್ರಮ ನುಸುಳುವಿಕೆ ಹಾಗೂ ಭೌಗೋಳಿಕ ಜನಸಂಖ್ಯಾ ಅಸಮತೋಲನವೂ ಸಹ ಜನಸಂಖ್ಯಾ ಹೆಚ್ಚಳಕ್ಕೆ ಪೂರಕವಾದ ಘಟನೆಗಳಾಗುತ್ತದೆ. ಸರ್ಕಾರವು ಯೋಗ್ಯ ಮಾರ್ಗಗಳಿಂದ ಅಂತಹವಕ್ಕೆ ಕಡಿವಾಣ ಹಾಕಬೇಕು.

 

ಮೀಸಲಾತಿಗೆ ಸಂಘವು ಮಾನ್ಯತೆ ನೀಡುತ್ತದೆಯೇ?

ಸಾಮಾಜಿಕ ವಿಷಮತೆಯನ್ನು ಹೋಗಲಾಡಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಾಂವಿಧಾನಿಕವಾದ ಮೀಸಲಾತಿಗೆ ಸಂಘದ ಸಂಪೂರ್ಣ ಸಹಮತವಿದೆ. ನಮ್ಮ ಸಮಾಜದ ಒಂದು ಭಾಗವು ಐತಿಹಾಸಿಕ, ಸಾಮಾಜಿಕ ಕಾರಣಗಳಿಂದ ಅಭಿವೃದ್ಧಿಯಿಲ್ಲದೇ ಬಡಕಲಾಗಿದೆ. ಇದು ನಾವೇ ನಮ್ಮ ಸಮಾಜಕ್ಕೆ ತಂದಿರುವ ದುರ್ದಶೆ. ಇದನ್ನು ನಾವೇ ಹೋಗಲಾಡಿಸಬೇಕು. ಸಮಾಜದ ಮೇಲಿನ ಸ್ತರದವರು ಸ್ವಲ್ಪ ಕೆಳಗೆ ಹೋಗಿ ಕೆಳಗಿನವರನ್ನು ಮೇಲೆತ್ತಿ ತಮ್ಮ ಸಮಾನರನ್ನಾಗಿ ಮಾಡಲು ಈ ಕಾನೂನು ಒಂದು ಸದವಕಾಶ. ಸಾವಿರಾರು ವರ್ಷಗಳಿಂದ ನಮ್ಮ ಸಮಾಜಕ್ಕೆ ಇರುವ ರೋಗವನ್ನು ನಿವಾರಿಸುವುದು ನಮ್ಮ ಕರ್ತವ್ಯ. ಇದು ಸಮಾಜದ ಸ್ವಾಸ್ಥ್ಯದ ಪ್ರಶ್ನೆಯೂ ಸಹ ಆಗಿದೆ.

 

ಅತ್ಯಾಚಾರ ನಿರೋಧಕ ಕಾನೂನಿನ ಕುರಿತ ತೀರ್ಪಿನ ವಿಷಯವಾಗಿ ಸಂಘದ ಅಭಿಪ್ರಾಯ ಏನು ?

ಅನೇಕ ವೇಳೆ ಅತ್ಯಾಚಾರ ವಿರೋಧೀ ಕಾನೂನು ಅನ್ವಯವಾಗುವುದೇ ಇಲ್ಲ ಅಥವಾ ದುರುಪಯೋಗವಾಗುತ್ತದೆ. ಅದರ ಸದುಪಯೋಗವಾಗಬೇಕು.ಅದು ಸಾಮಾಜಿಕ ಸಾಮರಸ್ಯದಿಂದ ಮಾತ್ರ ಸಾಧ್ಯ. ಸಂಘವು ಈ ನಿಟ್ಟಿನಲ್ಲಿ ಸಮರಸತಾ ಮಂಚ್‌ನ ಮುಖಾಂತರ ಅನೇಕ ಕಾರ್ಯಗಳನ್ನು ನಡೆಸುತ್ತಿದೆ. ಸಾಮಾಜಿಕ ಸದ್ಭಾವನೆಯು ಮಾತ್ರ ಇಂತಹ ಸಮಸ್ಯೆಗಳನ್ನು ತಡೆಗಟ್ಟಬಲ್ಲದು.

 

ಅಲ್ಪಸಂಖ್ಯಾತರನ್ನು ಸಂಘಟನೆಗೆ ಜೋಡಿಸುವ ವಿಷಯದಲ್ಲಿ ಸಂಘದ ನಿಲುವೇನು?

ಆಂಗ್ಲರು ಭಾರತಕ್ಕೆ ಬರುವ ಮೊದಲು ಇಲ್ಲದಿದ್ದ ಅಲ್ಪಸಂಖ್ಯಾತ ಪದವು ಆನಂತರ ಸೃಷ್ಟಿಯಾದ ಪರಿಭಾಷೆಯೇ ಸ್ಪಷ್ಟವಿಲ್ಲದ ಒಂದು ಶಬ್ದ. ಸಂಘದ ಪ್ರಕಾರ ಯಾರೂ ಅಲ್ಪಸಂಖ್ಯಾತರಲ್ಲ. ಸಂಘಕ್ಕೆ ತಿಳಿದಿರುವುದೊಂದೇ, ಎಲ್ಲರೂ ನಮ್ಮವರು. ಎಲ್ಲರನ್ನೂ ಜೋಡಿಸಿ ಸಂಘದ ಸಂಪರ್ಕಕ್ಕೆ ಕರೆತರಬೇಕು ಎಂಬುದು. ಮುಸಲ್ಮಾನರಿಗೆ ಸಂಘವು ಹೇಳುವುದಿಷ್ಟೇ. ಭಯ ಬೇಡ. ಸಂಘದ ಶಾಖೆಗೆ ಬನ್ನಿ. ಅದನ್ನು ಹತ್ತಿರದಿಂದ ನೋಡಿ. ನಿಮ್ಮ ವಿಚಾರ ಬದಲಾಗುತ್ತದೆ. ಆದರೆ ನಿಮ್ಮ ಉಪಸ್ಥಿತಿ ಇರುವ ಕಾರಣ ನಾವು ಸತ್ಯವನ್ನು ಹೇಳದಿರುವುದಿಲ್ಲ. ನಾವೆಲ್ಲರೂ ಹಿಂದೂಗಳು ಎನ್ನುತ್ತಾ ನಿಮ್ಮನ್ನೂ ಸಹ ನಮ್ಮವರು ಎಂದುಕೊಳ್ಳಲು ನಾವು ಹೇಳುತ್ತೇವೆ. ಯಾವುದೋ ಹಳೆಯ ಕಾಲದ ಸಂಘದ ಪುಸ್ತಕವನ್ನು ನೋಡಿಕೊಂಡು ಸಂಘವನ್ನು ದೂಷಿಸುವ, ಸಂಶಯಿಸುವ ಅಗತ್ಯವಿಲ್ಲ. ಸಂಘವು ಯಾವುದೇ ಪುಸ್ತಕದ ಆಧಾರದ ಮೇಲೆ ನಡೆಯುವುದೂ ಇಲ್ಲ. ಸಂಘವು ಒಂದು ವಿಶಾಲ ಮನೋಭಾವದ ಸಂಘಟನೆ. ಇದು ಕಾಲ ಹಾಗೂ ಪರಿಸ್ಥಿತಿಯೊಂದಿಗೆ ಬದಲಾಗುತ್ತದೆ. ಇದರ ಅನುಭವವನ್ನು ಸಂಘದ ಸಂಪರ್ಕಕ್ಕೆ ಬಂದವರು ಮಾತ್ರ ಪಡೆದುಕೊಳ್ಳಬಲ್ಲರು.

 

ಸಮ ಲೈಂಗಿಕತೆಯ ಕಾನೂನಿನ ಕುರಿತಾಗಿ ಸಂಘ ಏನು ಹೇಳುತ್ತದೆ ?

ಸಮಾಜದ ಪ್ರತಿವ್ಯಕ್ತಿಯೂ ಸಮಾಜದ ಅಂಗ. ಅವನ ಸರ್ವಾಂಗೀಣ ಉನ್ನತಿಯ ವ್ಯವಸ್ಥೆ ಮಾಡುವುದು ಸಮಾಜದ ಕರ್ತವ್ಯ. ಈ ಬದಲಾದ ಸಮಯದಲ್ಲಿ ಅವರನ್ನು ಸಮಾಜವು ಸಹೃದಯತೆಯಿಂದ ನೋಡಬೇಕು. ಸಮಾಜವು ತನ್ನ ಸ್ವಾಸ್ಥ್ಯವನ್ನು ಲಕ್ಷ್ಯದಲ್ಲಿರಿಸಿಕೊಂಡು ಅವರನ್ನು ಗಮನಿಸುತ್ತ ಅವರ ಅಭಿವೃದ್ಧಿಯತ್ತ ಗಮನ ಹರಿಸಬೇಕು.

 

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಂಘದ ಅಭಿಪ್ರಾಯವೇನು?

ಇದರ ವಿಷಯವಾಗಿ ಸಂವಿಧಾನದಲ್ಲೇ ಮಾರ್ಗದರ್ಶಕ ತತ್ವಗಳಿವೆ – ಒಂದು ದೇಶವು ಒಂದೇ ಕಾನೂನಿನಡಿಯಲ್ಲಿ ಬರ್ಬೇಕು ಎಂಬುದು. ಆದರೆ ಅದನ್ನು ಪಾಲಿಸುವ ಮನಸ್ಸನ್ನು ಸಮಾಜವು ಸಿದ್ಧಗೊಳಿಸಿಕೊಳ್ಳಬೇಕು.ನಮ್ಮ ಸಮಾಜದಲ್ಲಿ ಅನೇಕ ಪರಂಪರಾಗತ ಧಾರ್ಮಿಕ ಕಾನೂನುಗಳಿವೆ. ಆದಾಗ್ಯೂ ಅವುಗಳನ್ನು ಸಮರಸಗೊಳಿಸುವ ಪ್ರಯತ್ನ ಸಮಾಜದಿಂದ ನಡೆಯಬೇಕು. ಸರ್ಕಾರವು ಕಾನೂನನ್ನು ಮಾಡುವಾಗಲೂ ಸಮಾಜವನ್ನು ಸಹಮತದೊಂದಿಗೆ ತೆಗೆದುಕೊಂಡು ಮುಂದಡಿಯಿಡಬೇಕು.

ರಾಮಮಂದಿರ ನಿರ್ಮಾಣದ ವಿಚಾರವಾಗಿ ಸಂಘದ ನಿಲುವುಗಳೇನು ?

ರಾಮಜನ್ಮಭೂಮಿಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣವಾಗಬೇಕು ಎಂದು ಸಂಘದ ಅಪೇಕ್ಷೆ. ಶ್ರೀ ರಾಮನು ಕೇವಲ ಭಗವಾನನಲ್ಲ. ಈ ದೇಶದ ಕೋಟ್ಯನುಕೋಟಿ ವ್ಯಕ್ತಿಗಳ ದೃಷ್ಟಿಯಲ್ಲಿ ಅವನು ಭಾರತೀಯ ಸಂಸ್ಕೃತಿಯ ಮರ್ಯಾದೆಗಳ ಪರಮ ಸೀಮೆ. ಇದರಿಂದಲೇ ರಾಮನ ಬಗ್ಗೆ ಸಮಾಜದ ಎಲ್ಲಾ ವರ್ಗಗಳಲ್ಲೂ ಆಸ್ಥೆ ಇರುವುದು. ಆದ್ದರಿಂದ ಎಲ್ಲಿ ಅವನ ಜನ್ಮವಾಗಿದೆಯೋ ಅದೇ ಸ್ಥಳದಲ್ಲಿ  ಮಂದಿರ ಆಗಬೇಕು. ಇದರಿಂದ ಶತ ಶತಮಾನಗಳ ಹಿಂದೂ ಮುಸಲ್ಮಾನರ ಜಗಳ ಪರಿಹಾರವಾದಂತಾಗುತ್ತದೆ. ಅಲ್ಲದೇ ಮುಸಲ್ಮಾನರ ನಿಂದೆ ಮಾಡಲು ಉಪಯೋಗಿಸಲು ರಾಜಕೀಯ ನಾಯಕರಿಗೆ ಒಂದು ಅಸ್ತ್ರ ಕಡಿಮೆಯಾದಂತಾಗುತ್ತದೆ.

 

ಜಮ್ಮು-ಕಾಶ್ಮೀರದ 370ನೇ ವಿಧಿ ಹಾಗೂ ವಿಶೇಷ ಸ್ಥಾನಮಾನವನ್ನು ನೀಡುವುದರ ಬಗ್ಗೆ ಮತ್ತು ಅದನ್ನು 3 ಬೇರೆ ಬೇರೆ ರಾಜ್ಯವಾಗಿಸುವುದರ ಬಗ್ಗೆ ಸಂಘವು ಏನು ಹೇಳುತ್ತದೆ ? ಹಾಗೂ ಅಲ್ಲಿನ ಸಮಾಜ ಜೀವನದಲ್ಲಿ

ಸಂಘದ ಪಾತ್ರವೇನು?

ರಾಜ್ಯದ ವಿಭಜನೆಯ ಹಿಂದೆ ಇರಬೇಕಾದ ಎರಡು ಮಾನದಂಡಗಳೆಂದರೆ ದೇಶದ ಅಖಂಡತೆಯ ರಕ್ಷಣೆ ಹಾಗೂ ಆಡಳಿತದ ಸುಲಭತೆ. ಇವೆರಡನ್ನೂ ಲಕ್ಷ್ಯದಲ್ಲಿರಿಸಿಕೊಂಡು ನಾವು ಈ ವಿಚಾರವನ್ನು ಗಮನಿಸಿದಾಗ ನಮಗೆ ಇವುಗಳ ಅಗತ್ಯವಿಲ್ಲ ಎನಿಸುವುದು ಸ್ವಾಭಾವಿಕ. ಇನ್ನು ಕಾಶ್ಮೀರದ 370 ನೇ ವಿಧಿಯ ಬಗ್ಗೆ ಸಂಘವು ಮೊದಲಿನಿಂದಲೂ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಅಲ್ಲಿನ ಸಮಾಜ ಜೀವನದಲ್ಲಿ ಸಂಘವು ತನ್ನ ಕಾರ್ಯ ಚಟುವಟಿಕೆಗಳನ್ನು ನಿಧಾನವಾಗಿ ವಿಸ್ತರಿಸುತ್ತಿದೆ. ಏಕಲ್ ವಿದ್ಯಾಲಯಗಳ ಮೂಲಕ ಅದು ಅಲ್ಲಿನ ತರುಣರಿಗೆ ರಾಷ್ಟ್ರೀಯತೆಯ ಶಿಕ್ಷಣವನ್ನು ನೀಡುತ್ತಿದೆ.ಅಲ್ಲಿನ ಸಮಾಜವನ್ನು ಭಾರತದೊಂದಿಗೆ ಭಾವನಾತ್ಮಕವಾಗಿ ಬೆಸೆಯುವ ಕಾರ್ಯ ಆರಂಭಗೊಂಡಿದೆ.

 

ಸಂಘವು ತನ್ನನ್ನುಏಕೆ ನೊಂದಾಯಿಸಿಕೊಂಡಿಲ್ಲ? ಸಂಘದ ಸರಸಂಘಚಾಲಕರ ಚುನಾವಣೆ ಏಕೆ ನಡೆಯುವುದಿಲ್ಲ ? ಸಂಘದ ಕಾರ್ಯಕರ್ತರು ಸೂಚನೆ ಕೊಟ್ಟರೆ ಯೋಚನೆ ಮಾಡದೇ ಕೆಲಸ ಮಾಡುವರು ಎಂಬ ಆರೋಪ ನಿಮ್ಮ ಉತ್ತರವೇನು?

ಸಂಘವು ಆರಂಭಗೊಂಡಿದ್ದು ಸ್ವಾತಂತ್ರ್ಯಪೂರ್ವದಲ್ಲಿ. ಸ್ವಾತಂತ್ರ್ಯ ಬಂದ ನಂತರವೂ ಎಲ್ಲ ಸಂಘಟನೆಗಳನ್ನೂ ನೋದಾಯಿಸಲೇಬೇಕೆನ್ನುವ ಯಾವುದೇ ಕಾನೂನು ಸಹ ಇಲ್ಲ. ಹಾಗಾಗಿ ಸಂಘದ ಕೆಲಸ ಹಾಗೆಯೇ ನಡೆಯುತ್ತಿದೆ. ನಾವು ಅರ್ಪಿಸುವ ಗುರುದಕ್ಷಿಣೆಗೆ ನಮಗೆ ಕರ ಬೀಳುವುದಿಲ್ಲವಾದರೂ ಸಂಘವು ಪ್ರತಿ ವರ್ಷವೂ ದಕ್ಷ ಅಧಿಕಾರಿಗಳಿಂದ ಹಣಕಾಸಿನ ಪರಿಶೀಲನೆ ನಡೆಸುತ್ತದೆ. ಇನ್ನು ಸರಸಂಘಚಾಲಕ ಎನ್ನುವುದು ಸಂಘದ ಶ್ರದ್ಧಾಸ್ಥಾನ. ಹಾಗಾಗಿ ಅದಕ್ಕೆ ಚುನಾವಣೆ ಇಲ್ಲ. ಅಲ್ಲದೇ ಸರಸಂಘಚಾಲಕರಿಗೆ ಸಂಘಟನೆಯಲ್ಲಿ ಯಾವ ಅಧಿಕಾರವೂ ಇಲ್ಲ. ಅವರು ಕೇವಲ ಸಂಘಟನೆಯ ಮಾರ್ಗದರ್ಶಕ ಮಾತ್ರ. ಆದರೆ ಸರಕಾರ್ಯವಾಹ ಚುನಾವಣೆ ಮಾತ್ರ ತಪ್ಪದೇ 3 ವರ್ಷಕ್ಕೊಮ್ಮೆ ನಡೆಯುತ್ತದೆ. ಸಂಘದ ಕಾರ್ಯಕರ್ತರು ಸೂಚನೆ ಬಂದ ಮೇಲೆ ಯೋಚಿಸುವುದಿಲ್ಲ. ಆದರೆ ಸೂಚನೆ ಕೊಡುವ ಮೊದಲು ಎಲ್ಲ ಪೂರ್ವಾಪರಗಳನ್ನೂ ಪರಿಶೀಲಿಸಿಯೇ ನಂತರ ಸೂಚನೆಯನ್ನು ಕೊಡುತ್ತಾರೆ ಹಾಗೂ ಕೈಗೊಳ್ಳುತ್ತಾರೆ. ಇದು ಸಂಘಟನೆಯ ವೈಶಿಷ್ಟ್ಯವೇ ಹೊರತು ದೌರ್ಬಲ್ಯವಲ್ಲ.

ಭಾ ಜ ಪ ಹೊರತುಪಡಿಸಿ ಬೇರೆ ಪಕ್ಷಗಳ ಕುರಿತು ಸಂಘದ ನಿಲುವು ಏನು?

ಸಂಘ ಯಾರು ಕೇಳಿದರೂ ತನ್ನ ವ್ಯಕ್ತಿಗಳನ್ನು ರಾಷ್ಟ್ರಕಾರ್ಯಕ್ಕಾಗಿ ಕೊಡುತ್ತದೆ. ಸಂಘವು ನೀತಿಯ ಸಮರ್ಥಕವೇ ಹೊರತು ಪಕ್ಷದ್ದಲ್ಲ. ಯಾರಿಗೆ ಅದರ ಲಾಭ ಗಳಿಸಿಕೊಳ್ಳುವ ಅರ್ಹತೆ ಹಾಗೂ ಆಕಾಂಕ್ಷೆ ಇರುವುದೋ ಅವರು ಅದನ್ನು ಸಂಘದಿಂದ ಪಡೆದುಕೊಳ್ಳುತ್ತಾರೆ. ಸಂಘವು ತುರ್ತುಪರಿಸ್ಥಿತಿಯನ್ನು ವಿರೋಧಿಸಿದಾಗ ಅನೇಕ ಪಕ್ಷಗಳ ಜೊತೆಗೂಡಿಯೇ ಹೋರಾಟವನ್ನು ನಡೆಸಿತು. ಸಂಘದ ಕಾರ್ಯಪದ್ಧತಿಯೇ ಹಾಗೆ. ಇಲ್ಲಿ ಯಾರನ್ನೂ ಹೊಗಳುವುದಿಲ್ಲ. ಧನ್ಯವಾದ ಸಮರ್ಪಣೆಯ ಚಿಂತನೆಯೇ ನಮ್ಮಲ್ಲಿಲ್ಲ. ಆದರೂ ಸಂಘದ ಜೊತೆಗೆ ಯಾರು ಬರುತ್ತಾರೋ ಅವರು ಸಂಘದವರಾಗುತ್ತಾರೆ. ಅನೇಕ ರಾಜಕೀಯ ಪಕ್ಷಗಳ ಮುಖ್ಯ ಸಮಸ್ಯೆ ಏನೆಂದರೆ ಅವು ಲೋಕ ಕಲ್ಯಾಣಕ್ಕಾಗಿರದೇ ಕೇವಲ ಅಧಿಕಾರಕ್ಕಾಗಿ ಮಾತ್ರ ಇರುವುದು. ಸಂಘವು ಸಹಜವಾಗಿ ತನ್ನ ನೀತಿಯಾದ ಲೋಕಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಯಾವುದೇ ಪಕ್ಷವಾಗಲಿ ತನ್ನ ಬೆಂಬಲವನ್ನು ನೀಡುತ್ತದೆ.

 

ಪರೋಕ್ಷ ಕಾರಣಗಳನ್ನು ನೀಡಿ ಹಿಂದೂ ಹಬ್ಬಗಳನ್ನು ವಿರೋಧಿಸುವವರಿಗೆ ಸಂಘವು ಏನು ಸಂದೇಶ ನೀಡುತ್ತದೆ?

ಹಬ್ಬಗಳು ನಮ್ಮ ಸಂಸ್ಕೃತಿಯ ಕರ್ಮಕಾಂಡದ ಭಾಗ. ಅವುಗಳಲ್ಲಿ ಅನೇಕ ವೈಜ್ಞಾನಿಕ ಅಂಶಗಳೂ ಅಡಗಿರುತ್ತದೆ. ಉದಾಹರಣೆಗೆ ಹಿಂದೆ ದೀಪಾವಳಿಯ ಸಮಯದಲ್ಲಿ ಸಿಡಿಸುತ್ತಿದ್ದ ಪಟಾಕಿಯ ಹೊಗೆಯು ವಾತಾವರಣದಲ್ಲಿದ್ದ ಕ್ರಿಮಿಗಳಿಗೆ ಕೀಟನಾಶಕದಂತೆ ಉಪಯುಕ್ತವಾಗುತ್ತಿತ್ತು. ಹೀಗೆ ಮನಃಸಮಾಧಾನದೊಂದಿಗೆ ಪ್ರಕೃತಿಯನ್ನು ಶುಚಿಗೊಳಿಸುವ ಅನೇಕ ಹಬ್ಬಗಳು ನಮ್ಮ ಸಂಪ್ರದಾಯದಲ್ಲಿವೆ. ಇಷ್ಟಾದರೂ ನಮ್ಮ ಹಬ್ಬಗಳಲ್ಲಿ ಏನಾದರೂ ಸಮಸ್ಯಾತ್ಮಕವಾದ ಅಂಶಗಳಿದ್ದರೆ ಅದನ್ನು ನೇರವಾಗಿ ಹೇಳಿ. ನಮ್ಮಲ್ಲಿ ಸುಶಿಕ್ಷಿತರಾದ ವ್ಯಕ್ತಿಗಳಿದ್ದಾರೆ, ಮಠಾಧಿಪತಿಗಳಿದ್ದಾರೆ. ಅವರಿಗೆ ತಿಳಿಸಿ. ಈ ರೀತಿ ಪರೋಕ್ಷ ಕಾರಣಗಳನ್ನು ನೀಡುವುದು ಇನ್ನಷ್ಟು ಸಂಶಯಕ್ಕೆ, ಗೊಂದಲಕ್ಕೆ ದಾರಿ ಮಾಡಿಕೊಡುವುದೇ ಹೊರತು ಸಮಸ್ಯೆ ಬಗೆಹರಿಯಲಾರದು.

 

ಹಿಂದುತ್ವವನ್ನು ಹಿಂದೂಯಿಸಂ ಎನ್ನಬಹುದೇ? ದೇಶದ ಇತರ ಜಾತಿ ಪಂಥಗಳೊಂದಿಗೆ ಹಿಂದುತ್ವದ ಸಂಬಂಧ ಹೇಗೆ?

ಇಸಂ ಎಂಬ ಶಬ್ದವು ಒಂದು ಚಿಂತನೆಯ ಮಿತಿಯನ್ನು ತಿಳಿಸುತ್ತದೆ. ಆದರೆ ಹಿಂದುತ್ವವೆನ್ನುವುದು ಒಂದು ನಿರಂತರವಾದ ಪ್ರಕ್ರಿಯೆ. ಮಹಾತ್ಮಾ ಗಾಂಧೀಜಿಯವರ ಮಾತಿನಂತೆ ಸತ್ಯದ ನಿರಂತರವಾದ ಶೋಧನೆಯೇ ಹಿಂದುತ್ವ. ಹಿಂದೂಯಿಸಂ ಪದವನ್ನು ಹಿಂದುತ್ವಕ್ಕೆ ಸಮಾನಾರ್ಥಕವಾಗಿ ಬಳಸುವುದು ಸಮಂಜಸವಲ್ಲ. ಆಲ್ಲದೇ ಎಲ್ಲಾ ಮತ ಪಂಥಗಳೊಂದಿಗೆ ಸಾಮರಸ್ಯದಿಂದ ಬಾಳಬಲ್ಲ ಏಕೈಕ ಚಿಂತನೆಯೆಂದರೆ ಅದು ಹಿಂದುತ್ವ. ಏಕೆಂದರೆ ಏಕತ್ವವನ್ನು ಮೂಲವಾಗಿ ಹೊಂದಿರುವ ವಿವಿಧತೆಯು ಪ್ರಕೃತಿಯ ಸಹಜ ಹಾಗೂ ಅತಿ ಸುಂದರ ಲಕ್ಷಣ ಎಂಬ ಅನುಭವಾಧಾರಿತ ಸಂದೇಶವನ್ನು ನೀಡುವ ಏಕಮಾತ್ರ ಧರ್ಮ, ಅದು ಹಿಂದುತ್ವ. ನಾನು ಪ್ರತಿಪಾದಿಸಿದ ರಾಷ್ಟ್ರೀಯತೆಯ ಕಲ್ಪನೆಯ ಆಧಾರದಲ್ಲಿ ಜನ ಜಾತೀಯ ಸಮಾಜವೂ ಕೂಡ ಹಿಂದೂ ಸಮಾಜವೇ. ಭಾರತದಲ್ಲಿ ಜನಿಸಿದ ಪ್ರತಿ ಪ್ರಜೆಯೂ ರಾಷ್ಟ್ರೀಯತೆಯ ದೃಷ್ಟಿಯಿಂದ ಹಿಂದುವೇ. ಈ ವಿಷಯವಾಗಿ ಕೆಲವರು ಗರ್ವದಿಂದಲೂ, ಕೆಲವರು ಸಹಜವಾದ ಅನುಭವದಿಂದಲೂ ಮಾತಾಡುವುದುಂಟು, ಅನ್ಯಾನ್ಯ ಕಾರಣಗಳಿಂದಲೋ ಅಥವಾ ಅಜ್ಞಾನದಿಂದಲೋ ಮಾತನಾಡದಿರುವವರೂ ಸಹ ಇದ್ದಾರೆ. ಎಷ್ಟೋ ವೇಳೆ ವಿರೋಧಾಭಾಸಗಳಂತೆ ಕಂಡರೂ ವೈವಿಧ್ಯತೆಯೊಡಗೂಡಿ ಮುನ್ನಡೆಯುತ್ತಿರುವ ಭಾರತದ ಅತ್ಯಂತ ಪ್ರಾಚೀನ ಪರಂಪರೆಯ ಮೂಲವು ಜಾನಪದ ಹಾಗೂ ಕೃಷಿಕ ಸಮಾಜದ ಬದುಕಿನಲ್ಲಿದೆ. ಇವರೇ ನಮ್ಮ ನಿಜವಾದ ಪೂರ್ವಜರು. ನಮಗೆ ಯಾರೂ ಪರಕೀಯರಿಲ್ಲ. ನಮ್ಮ ಪರಂಪರೆಯು ಏಕತೆಯನ್ನ ಮಾತ್ರ ನಮಗೆ ಕಲಿಸಿರುವುದೇ ಹೊರತು ಭೇದಬುದ್ಧಿಯನ್ನಲ್ಲ.

 

ಸಂಘದ ಗ್ರಾಮವಿಕಾಸದ ಕಲ್ಪನೆ ಏನು ಮತ್ತು ಹೇಗೆ ?

ಗ್ರಾಮದ ಪರಂಪರಾಗತ ವೃತ್ತಿಯನ್ನು ಉಳಿಸಬೇಕು ಎಂಬುದು ಸಂಘದ ಗ್ರಾಮ ವಿಕಾಸದ ಕಲ್ಪನೆಯ ಒಂದು ಭಾಗ. ಸ್ವದೇಶೀ ಅಧಾರಿತ ಅರ್ಥ ಸುರಕ್ಷೆ ಆ ಗ್ರಾಮಗಳಲ್ಲಿ ಆಗಬೇಕು. ಆ ನೋ ಭದ್ರಾ ಕ್ರತವೋ ಯಂತು ವಿಶ್ವತಃ ಎಂಬ ಆರ್ಯೋಕ್ತಿಯನ್ನು ನೆನಪಿನಲ್ಲಿರಿಸಿಕೊಂಡು ಪ್ರತಿ ಗ್ರಾಮವೂ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಂಡು ಸ್ವಾವಲಂಬಿಯಾಗುವತ್ತ ಗಮನ ಹರಿಸುವಂತೆ ಮಾಡುವುದೇ ಸಂಘದ ಉದ್ದೇಶ. ಇಂದು ಸುಮಾರು 500 ಗ್ರಾಮಗಳನ್ನು ವಿಕಸಿತ ಗ್ರಾಮಗಳನ್ನಾಗಿ ಗುರುತಿಸಬಹುದು. ಇಂದು ತಂತ್ರಜ್ಞಾನದ ಪರಿಣಾಮವಾಗಿ ಅನೇಕ ವಸ್ತುಗಳ ಉತ್ಪಾದನೆಗಳು ಗ್ರಾಮಗಳಲ್ಲಿ ನಡೆಯುತ್ತಿದೆ. ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಂದ ಶಿಕ್ಷಿತರು ಗ್ರಾಮಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅನೇಕ ಗ್ರಾಮಗಳು ಸ್ವಾವಲಂಬಿಯಾಗುವತ್ತ ಹೆಜ್ಜೆಯಿಡುತ್ತಿದೆ.

 

ಕೃಪೆ : ವಿಕ್ರಮ ವಾರಪತ್ರಿಕೆ

ಮೊದಲನೆಯ ದಿನದ ಉಪನ್ಯಾಸಕ್ಕಾಗಿ ಇಲ್ಲಿ ನೋಡಿ

ಎರಡನೆಯ ದಿನದ ಉಪನ್ಯಾಸಕ್ಕಾಗಿ ಇಲ್ಲಿ ನೋಡಿ
ಸಂಪೂರ್ಣ ಕಾರ್ಯಕ್ರಮದ ವಿಡಿಯೋಗಾಗಿ ಇಲ್ಲಿ ನೋಡಿ

  • email
  • facebook
  • twitter
  • google+
  • WhatsApp
Tags: 3 day lecture series on future of BharatBharat of FutureBharat of Future : an RSS perspectiveSarsanghachalak Dr Mohan Bhagwat

Related Posts

Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Next Post
Bharat of Future: An RSS Perspective. Lecture series of Sarsanghachalak Dr. Mohan Bhagwat : Lecture 1.

Bharat of Future: An RSS perspective - Video Lecture series of Sarsanghachalak Dr. Mohan ji Bhagwat

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

ABVP celebrates ‘National Students Day’ on its Foundation Day ; talks held at Mandya, Bangalore

ABVP celebrates ‘National Students Day’ on its Foundation Day ; talks held at Mandya, Bangalore

July 10, 2014
Senior RSS Pracharak KS Nagabhushan Bhagwat passes away  in Bengaluru

Senior RSS Pracharak KS Nagabhushan Bhagwat passes away in Bengaluru

September 16, 2015
Nanaji Deshmukh Memorial Lecture (नानाजी स्मृति व्याख्यान) on April 13 at New Delhi

Nanaji Deshmukh Memorial Lecture (नानाजी स्मृति व्याख्यान) on April 13 at New Delhi

March 18, 2014
Every generation has responsibility to lead the society forward, says RSS Chief Mohan Bhagawat

Every generation has responsibility to lead the society forward, says RSS Chief Mohan Bhagawat

January 16, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಹಿಂದೂರಾಷ್ಟ್ರದ ಸಮರ್ಥಕ – ಸಾವರ್ಕರ್ : ಶ್ರೀ ಗುರೂಜಿ
  • ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
  • ಅಧೋಗತಿಯತ್ತ ರೆಕ್ಕೆಯ ದ್ವಿಪಾದಿಗಳು
  • Alapuzha – One arrested for provocative sloganeering during PFI rally
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In