• Samvada
Wednesday, August 10, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home BOOK REVIEW

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

Vishwa Samvada Kendra by Vishwa Samvada Kendra
July 7, 2022
in BOOK REVIEW
255
0
ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!
501
SHARES
1.4k
VIEWS
Share on FacebookShare on Twitter

ಈ ನಾಡಿನ ಹಿರಿಯ ರಾಜಕಾರಿಣಿ,ಸದಾ ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಮಾಜಿ ಸಚಿವೆ ಮೋಟಮ್ಮ ಅವರ-“ಬಿದಿರು ನೀನ್ಯಾರಿಗಲ್ಲದವಳು”- ಪುಸ್ತಕವನ್ನು ಆತ್ಮಕಥನವೆಂದೂ ಕರೆಯಬಹುದು. ‘ಆತ್ಮಚರಿತೆ’ ಎಂದೂ ಹೇಳಬಹುದು. ಈ ಪುಸ್ತಕ ಪೂರ್ಣವಾಗಿ ಪುರುಷಾರ್ಥಕ ಸರ್ವನಾಮಗಳಲ್ಲಿ ಒಂದಾದ ಉತ್ತಮ ಪುರುಷದಲ್ಲೇ ಆರಂಭದಿಂದ ಕೊನೆಯವರೆಗೆ ಸಾಗಿದೆ. ಅವರ ಬಾಲ್ಯದ ಬೆಳವಣಿಗೆ,ವಿದ್ಯಾಭ್ಯಾಸ,ಉದ್ಯೋಗ,ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಹೀಗೆ ಅವರ ಬದುಕಿನ ಏರುಗತಿಯನ್ನು ಸರಳರೇಖೆಯಲ್ಲಿ ದಾಖಲಿಸದೆ,ನುಗ್ಗಿ ಬಂದ ನೆನಪುಗಳನ್ನು ಮೊಗೆದು ನೀಡುತ್ತಾ ಆಯಾ ಸಂದರ್ಭಗಳನ್ನು ಮೋಟಮ್ಮನವರೇ ಕಟ್ಟಿಕೊಡುತ್ತಾ ತಮ್ಮ ಹೆಜ್ಜೆ ಸಾಗಿದ ಪಥವನ್ನೂ ಚಿತ್ರಿಸುತ್ತಾ ಹೋಗಿದ್ದರೆ,ಅವುಗಳ ನಿರೂಪಣೆಯನ್ನು ವೀರಣ್ಣ ಕಮ್ಮಾರ ಅತ್ಯುತ್ತಮವಾಗಿ ಮಾಡಿ ಕೃತಿ ಸಜ್ಜುಗೊಳಿಸಿದ್ದಾರೆ.

‘ಆತ್ಮಕಥನ” ಸಾಹಿತ್ಯ ಪ್ರಭೇಧಗಳಲ್ಲಿ ವಿಶಿಷ್ಟವಾದುದು. ಹಾಗೆಯೇ ಸ್ವಲ್ಪ ಕ್ಲಿಷ್ಟ ಸಹ. ಆತ್ಮಕಥನದಲ್ಲಿ ವ್ಯಕ್ತಿ ತನ್ನ ಜೀವನದ ಗತಿಯನ್ನು ನಿರೂಪಿಸುವಾಗ ತನ್ನ ಗತವನ್ನು ತೋಡಿಕೊಳ್ಳುತ್ತಾ ಸಾಗಬೇಕಾಗುತ್ತದೆ. ತನ್ನ ಒಳ ಮನಸ್ಸನ್ನು ಬಿಚ್ಚುಡುವ ಬಗೆ ಅದು. ಅನೇಕ ಬಾರಿ ಸಮಕಾಲೀನರಿಗೆ ನೋವಾಗುವ ಸಂಗತಿಗಳೂ ಇರಬಹುದು. ಹಾಗೆಯೇ ತನ್ನ ತಾಯಿ,ಬಾಳಸಂಗಾತಿ ಯೊಂದಿಗೂ ಹಂಚಿಕೊಳ್ಳಲಾಗದ ಗುಟ್ಟನ್ನು ಸಂದರ್ಭವೊಂದರಲ್ಲಿ ಬಿಚ್ಚಿಟ್ಟು ಕೃತಿಗೊಂದು ಸಹಜ ಗತಿಯನ್ನು ಒದಗಿಸಬೇಕಾಗಬಹುದು. ಆ ಕೃತಿ ತನ್ನ ಹೆಗ್ಗಳಿಕೆಯನ್ನು ತಿಳಿಸುವ ಕೃತಿಯಾಗಿ ಬಿಟ್ಟರೆ, ಆತ್ಮಕತೆ ಎನಿಸದೆ ಆತ್ಮರತಿಯಾಗುವ ಅಪಾಯಕ್ಕೆ ಒಳಗಾಗುತ್ತದೆ. ಹಾಗಾಗಿಯೇ- ಜಾರ್ಜ್ ಆರ್ವೆಲ್ ಹೇಳುತ್ತಾನೆ- Autobiography is only to be trusted  when it reveals something disgracefull – ಎಂದು.

READ ALSO

Conflict resolution : The RSS way

ಬುದ್ಧಚರಣ ಅನಿಕೇತನನ ಆಂತರ್ಯದ ಅನಾವರಣ!

ಆತ್ಮಚರಿತ್ರೆಗಿಂತ ಆತ್ಮಕಥನವನ್ನು ಬರೆಯುವಾಗ ಉತ್ಪ್ರೇಕ್ಷೆಗಳಿಲ್ಲದೆ,ಸತ್ಯ ಮುಚ್ಚಿಡದೆ,ತನ್ನಂತರಂಗ ಹಾಗು ಬಾಹ್ಯ ನಡುವಳಿಕೆಗಳನ್ನು ತೆರೆದಿಟ್ಟು ಅಕ್ಷರ ರೂಪ ನೀಡಿದಾಗ ಆ ಆತ್ಮಕಥನ ಓದುಗರನ್ನು ಸೆಳೆಯುತ್ತದೆ,ಬದುಕಿನ ಸಮಗ್ರ ವಿವರಗಳನ್ನು ಮನಗಾಣಿಸಿ,ಬರೆದವರ ವ್ಯಕ್ತಿತ್ವ ರೂಪುಗೊಳ್ಳುವಾಗ ತಾಕಿದ ಚಾಣಗಳ ಹೊಡೆತ, ಜಗದ ಮಂತು ಕಡೆದು ಹೊರತೆಗೆಯುವ ಆತ್ಮಮತಿ ಮತ್ತೊಬ್ಬರ ಬದುಕಿಗೆ ಒಂದು ಮಾರ್ಗದರ್ಶಕ ರೂಪವಾಗಬಹುದು, ನನ್ನ ಕಥೆ ನನ್ನ ಸ್ತುತಿಯಾಗದೆ,ನನ್ನ ವ್ಯಕ್ತಿತ್ವದ ದೌರ್ಬಲ್ಯ,ದೋಷ,ಎಡವಿ ಬಿದ್ದ ಸಂದರ್ಭಗಳನ್ನೂ ಕಟ್ಟಿಕೊಟ್ಟಾಗ ಅದರಲ್ಲಿರುವ ಸತ್ಯ ನಿಷ್ಠರೂತೆಯಿಂದ ಗಮನ ಸೆಳೆಯುತ್ತದೆ. ಆತ್ಮಕಥೆಯ ಬರವಣಿಗೆಯೆಂದರೆ ಅದೊಂದು ಸತ್ಯಶೋಧನೆಯ ಹಾದಿ. ಅನುಭವ, ನೋವು, ಆನಂದ ತಂದ ಘಟನೆ, ಸಂದರ್ಭ ಈ ರೀತಿ ತಾನು ನಡೆದ ಹಾದಿಯಲ್ಲಿ ಕಂಡದ್ದನ್ನು ದಾಖಲಿಸುತ್ತಾ ಸಾಗಬೇಕಾಗುತ್ತದೆ. ಆ ರೀತಿ ತನ್ನ ಬದುಕಿನಲ್ಲಿ ತಾನೆಸಗಿದ ತಪ್ಪುಗಳನ್ನು  ಮನಸ್ಸಿನಲ್ಲಿ ಬಂದು ಹುದುಗಿದ ಕೆಲವು ಬೇಡದ ಆಲೋಚನೆಗಳನ್ನು ಪಾಪ ನಿವೇದನೆಯಂತೆ ಜನ ಏನೆಂದುಕೊಂಡರೂ ಚಿಂತೆಯಿಲ್ಲ, ಹೇಳಲು ಸಂಕೋಚ ಪಡಲಾರೆ ಎಂದು ತಮ್ಮ  ಆತ್ಮಕಥೆಯಲ್ಲಿ ಅವುಗಳನ್ನು ನಿಸ್ಸಂಕೋಚವಾಗಿ ಬಿಚ್ಚಿಟ್ಟವರು ರಾಷ್ಟ್ರಪಿತ ಮಹಾತ್ಮಗಾಂಧಿ. ಅವರ- ಎಕ್ಸ್ಪೆರಿಮೆಂಟ್ ವಿತ್ ಟ್ರೂತ್ ಹಾಗೆಯೇ ಕೆಲವು ದಲಿತ ಆತ್ಮಕಥೆಗಳು, ಬೀಚಿ ಅವರ ಬಯಾಗ್ರಫಿ ತಮ್ಮ ಜೀವನದಲ್ಲಿ ತಾವೆಸಗಿದ ಅಪರಾಧಗಳನ್ನು ನೇರವಾಗಿಯೇ ದಾಖಲಿಸಿದ್ದು, ಆತ್ಮಕತೆ ಬರೆಯುವವರಿಗೊಂದು ಮಾರ್ಗದರ್ಶಿ ಕೃತಿಗಳು.

‘ಬಿದಿರು ನೀನ್ಯಾರಿಗಲ್ಲದವಳು’ ಮೋಟಮ್ಮ ಅವರ ಆತ್ಮಕಥನ ಅವರ ಬದುಕಿನ ತವಕ-ತಲ್ಲಣಗಳನ್ನು ಹೇಳುತ್ತಲೇ, ತಮ್ಮ ತಪ್ಪು-ಒಪ್ಪುಗಳನ್ನು ಹೇಳಲು ಹಿಂದೆ ಸರಿದಿಲ್ಲ: ಹಾಗೆಯೇ ಹತ್ತಿರವಿದ್ದೂ ಕೆಲವು ಸಂದರ್ಭಗಳಲ್ಲಿ ತಮ್ಮ ವಿರುದ್ಧ ಹೋದವರ ಬಗ್ಗೆ, ಅರ್ಹತೆಯಿದ್ದಾಗಲೂ ಅಧಿಕಾರದಿಂದ ವಂಚಿತರಾದ ಪ್ರಸಂಗಗಳ ನೇರ ನಿರೂಪಣೆಯನ್ನು ಮೋಟಮ್ಮ ಮಾಡಲು ಹಿಂಜರಿದಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಮೂರುಬಾರಿ ಶಾಸಕಿಯಾಗಿ, ಸಚಿವೆಯಾಗಿ,ಎರಡು ಬಾರಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ಅವರು ಆ ಕಾಲದ ರಾಜಕಾರಣದ ಚಿತ್ರವನ್ನೂ ಅಲ್ಲಲ್ಲಿ ಸಂಕ್ಷಿಪ್ತವಾಗಿ ಹೇಳುತ್ತಾ ತಮ್ಮ ಬದುಕಿನ ಹಾದಿಯಷ್ಟು ವೈವಿಧ್ಯಮಯವಾಗಿತ್ತು? ಅದರಿಂದ ಕಲಿತ ಬದುಕಿನ ಪಾಠ ಕ್ರೀಡಾಪಟುವಾದ ಬಗೆ ಎಲ್ಲವನ್ನೂ ನೇರವಾಗಿ ನೀಡಿದ್ದು,ಅವರ ಕಥನದ ಹಾದಿ ಓದುಗರನ್ನು ಹಿಡಿದಿಟ್ಟು ಕೊನೆಯ ಪುಟದವರೆಗೆ ಕೊಂಡೊಯ್ಯುತ್ತದೆ.

ತಮ್ಮ ಮುನ್ನಡಿಯಲ್ಲಿ ಹಿರಿಯ ಸಾಹಿತಿ ಹಾಗೂ ಮೋಟಮ್ಮನವರ ವಿದ್ಯಾಗುರುಗಳೂ  ಆದ ಪ್ರೊ.ಕಮಲಾ ಹಂಪನಾ ಅವರು ಹೇಳಿರುವಂತೆ ಮೋಟಮ್ಮನವರ ಜೀವನ ಪಯಣ ಹೂವಿನ ಹಾಸಿಗೆಯಲ್ಲ, ಅದು ಸುಗಮ ಸಂಗೀತವಲ್ಲ. ಅಡ್ಡಿ ಆತಂಕಗಳ ದಿಡ್ಡಿ ಬಾಗಿಲನ್ನು ದಾಟಿ ಬಂದಿದ್ದಾರೆ. ಯಾವುದೇ ಕಷ್ಟಕಾರ್ಪಣ್ಯವೂ ಅವರ ಧೀಶಕ್ತಿಯನ್ನು ಹಿಮ್ಮೆಟ್ಟಿಸಲಿಲ್ಲ. ಸದಾ ತುಡಿಯುತ್ತಿದ್ದ ಆತ್ಮವಿಶ್ವಾಸ ಮತ್ತು ಜನಪರ ಕಾಳಜಿಯಿಂದ ದಿಟ್ಟ ಹೆಜ್ಜೆಯಿಟ್ಟು ಮುಂದೆ ಸಾಗಿದರು ಮತ್ತು “ಬಿದಿರು ನೀನ್ಯಾರಿಗಲ್ಲದವಳು” ಎಂದು ಸ್ವಾಭಿಮಾನದಿಂದ ತಲೆಯೆತ್ತಿ ನಿಂತರು ಎಂಬುದು ಗಮನಾರ್ಹ.

ಅಪ್ಪನಿಗೆ ಬೇಡವಾದ ಮಗುವಾಗಿ ಹುಟ್ಟಿದವರು ಮೋಟಮ್ಮ. ಅವರೇ ಹೇಳುವಂತೆ ಕೆಸವೊಳಲಿನಲ್ಲಿ ಅವರು ಜನಿಸಿದಾಗ ತಂದೆ ಸಣ್ಣಯ್ಯ ಪ್ರತಿಕ್ರಿಯಿಸಿದ್ದು, “ಅಯ್ಯೋ, ಯಾರಿಗೆ ಬೇಕು ಹೆಣ್ಣು ಮಗು? ಯಾರಿಗಾದರೂ ಕೊಟ್‌ಬಿಡಕ್ಕೇಳು” ಅಂತ. ಬೇಡದ ಮಗುವಾದ್ದರಿಂದ ನಾಮಕರಣ ನಡೆಯಲೇ ಇಲ್ಲ. ಮಗು ಗುಂಡುಗುAಡಾಗಿ ಮೋಟುಮೋಟಾಗಿ ಇದ್ದುದರಿಂದ ಮೋಟಮ್ಮ ಎಂದು ಕರೆದು ಅದೇ ಅವರ ಅಧಿಕೃತ ಹೆಸರಾಯಿತು.

ಒಟ್ಟು ೨೭ ಅಧ್ಯಾಯಗಳಲ್ಲಿ ಅವರ ಜೀವನಯಾನದ ಚಿತ್ರಣವನ್ನೊಳಗೊಂಡ ಕೃತಿ ಇದು. ಮೋಟಮ್ಮ ಅವರ ತಂದೆ ಸಣ್ಣಯ್ಯ ತೋಟ ಕಾರ್ಮಿಕರು, ತಾಯಿ ವಸಂತಮ್ಮ ಸಹ ಸಮೀಪದ ಹೊಯ್ಸಳಲು ಗ್ರಾಮದವರೆ. ರಟ್ಟೆಯಾಡಿಸಿ ಹೊಟ್ಟೆ ತುಂಬಿಸಿಕೊಳ್ಳುವ ಕುಟುಂಬದ ನಾಲ್ಕನೆಯ ಕುಡಿಯಾಗಿ ಬಂದ ಮೋಟಮ್ಮ ಸಹ. ತೀರಾ ಕಡುಬಡತನದಲ್ಲಲ್ಲದಿದ್ದರೂ ಬಡತನದಲ್ಲೇ ಬೆಳದವರು. ಅವರೇ ಹೇಳುವಂತೆ, “ಹಾಗೆ ನೋಡಿದ್ರೆ, ನಮ್ಮ ತಂದೆಯವರು ಸ್ವಲ್ಪ ಸ್ಥಿತಿವಂತರಾಗೇ ಇದ್ದರು. ಜೊತೆಗೆ ತಾವು ಕೆಲಸ ಮಾಡುವ ಸಾಹುಕಾರರ ಜಮೀನನ್ನು ಗೇಣಿಗೆ ಪಡೆದು ಉಳುಮೆ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಬೇರೆಯವರಂತೆ ಜೀವನ ಪರ್ಯಂತ ಜೀತ ಮಾಡಿಯೇ ಬದುಕಬೇಕು ಅಂತಿರಲಿಲ್ಲ. ಆದರೂ, ಕೆಸವೊಳಲು ಗ್ರಾಮದಲ್ಲಿ ಕೃಷ್ಣೇಗೌಡ್ರು ಎಂಬುವರ ಜಮೀನಿನಲ್ಲಿ ಇವರು ಕೂಲಿ ಮಾಡುತ್ತಿದ್ದರು.”

ಈ ಕೃತಿಯಲ್ಲಿ ತಮ್ಮ ಬದುಕಿನ ಬಟ್ಟೆಯನ್ನು ತೆರೆದಿಡುತ್ತಲೇ ಅಂದು ಜಾರಿಯಲ್ಲಿದ್ದ ಜೀತ ಪದ್ಧತಿ, ಪಡೆದ ಹಣದ ಋಣ ತೀರಿಸಲಾಗದೆ ಜೀತದಾಳಾಗಿ ದುಡಿಯುವುದೂ ವಂಶಪಾರಂರ‍್ಯವಾಗಿ ಮಾರ್ಪಡುತ್ತಿದ್ದುದು, ಜೀತದಿಂದ ಹೊರಬರಲಾರದ ಸ್ಥಿತಿಯ ಚಿತ್ರಣವೂ  ಕಾಣಸಿಗುತ್ತದೆ. ಕೇವಲ ತಮ್ಮ ನಡೆ, ಬೆಳವಣಿಗೆಗೆ ಸೀಮಿತವಾಗದೆ, ಆ ದಿನದ ಸಾಮಾಜಿಕ ಸ್ಥಿತಿ, ದಲಿತರ ಬದುಕು, ಸಂಕಷ್ಟದ ಮಧ್ಯದಲ್ಲೂ ಅದರ ನಿವಾರಣೆಗೆ ಯತ್ನಿಸುವ ಮನಸ್ಸುಗಳ ಸಣ್ಣ ಚಿತ್ರಣವೂ ದೊರಕುತ್ತದೆ.

ದಲಿತರು, ಕೂಲಿಕಾರ್ಮಿಕರ ಶ್ರಮ, ಬೆವರನ್ನು ಮಾತ್ರ ಅಪೇಕ್ಷಿಸಿ, ಅವರ ನೋವುಗಳಿಗೆ ಮುಲಾಮಾಗದ ಮನಸ್ಥಿತಿಯೇ ಹೆಚ್ಚಾಗಿದ್ದ ಸನ್ನಿವೇಶದಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಕೊಳ್ಳುವುದರ ಜೊತೆಗೆ ಅವರ ನೋವನ್ನು ಅರಿಯುವ ತೋಟದ ಮಾಲಕಿ ಮಿಸಿಯಮ್ಮ ಅವರ ಕರುಣೆ, ಕೂಲಿಲೈನಿನ ಮಕ್ಕಳಿಗೆ ನಿತ್ಯವೂ ಹಾಲುಕೊಡುವ ಸಂಪ್ರದಾಯಕ್ಕೆ ಚಾಲನೆ, ಈ ರೀತಿ ಕೆಲವು ಮನಮಿಡಿಯುವ ಪ್ರಸಂಗಗಳೂ ಧ್ವನಿತವಾಗಿವೆ.

ಅಕ್ಷರದಿಂದ ವಂಚಿತವಾಗಿದ್ದವರ ಮಧ್ಯದಲ್ಲಿ ಬೆಳೆದವರು ಮೋಟಮ್ಮ. ಅವರ ಅದೃಷ್ಟವೆಂದರೆ ಅವರಿದ್ದ ಮಗ್ಗಲಮಕ್ಕಿ ಗ್ರಾಮಕ್ಕೆ ಪ್ರಾಥಮಿಕ ಶಾಲೆ ಮಂಜೂರಾಯಿತು. ಅವರೆದೆಗೂ ಅಕ್ಷರ ಬಿತ್ತನೆಯಾಯಿತು. ಅದು ಟಿಸಿಲೊಡೆದು ಅವರನ್ನು ಸ್ನಾತಕೋತ್ತರ ಪದವಿವರೆಗೆ ಕೊಂಡೊಯ್ಯಿತು. ಈ ಕೃತಿಯ ವಿಶೇಷವೆಂದರೆ ತಮ್ಮ ನಿರಂತರ ಓದಿಗೆ ಅಸ್ತಿಭಾರ ಹಾಕಿದ ಸತ್ಯನಾರಾಯಣ ಮೇಷ್ಟ್ರಿಂದ ಹಿಡಿದು ತಿಮ್ಮಶೆಟ್ರು, ಅವರ ಮೂಲಕ ಹುಡುಗಿಯ ಕಲಿಕೆಯ ಆಸೆ, ಜಾಣ್ಮೆಯನ್ನು ಗುರುತಿಸಿ ಮುಂದಿನ ತರಗತಿಗೆ ಚಿಕ್ಕಮಗಳೂರಿನಲ್ಲಿ ಹಾಸ್ಟೆಲ್ ಸೇರಿದ್ದು, ಅಲ್ಲಿ ವಾರ್ಡನ್ ಸರಸ್ವತಮ್ಮ ಅವರು ತೋರಿಸುತ್ತಿದ್ದ ಪ್ರೀತಿ, ಮತ್ತೊಬ್ಬ ಶಿಕ್ಷಕಿ ಸರಸ್ವತಮ್ಮನವರ ಪ್ರೋತ್ಸಾಹ, ಕ್ರೀಡಾ ಶಿಕ್ಷಕಿ ಸುಶೀಲಾ ಡಿ’ಸೋಜಾ ಅವರ ಮೂಲಕ ಉತ್ತಮ ಕ್ರೀಡಾಪಟುವಾದುದ್ದು; ಶಾಲೆಯಲ್ಲಿ ತರಗತಿ ನಾಯಾಕಿಯಾಗಿ, ಕ್ರೀಡೆಯಲ್ಲಿ ಸ್ಕೂಲ್ ಚಾಂಪಿಯನ್ ಆದುದು, ದೈಹಿಕ ಶಿಕ್ಷಕ ನಾಗೇಂದ್ರ ಮೋಟಮ್ಮ ಅವರ ಶಾಟ್‌ಪುಟ್ ಎಸೆತ ಕಂಡು ಅದರಲ್ಲಿ ಅವರಿಗೆ ಹೆಚ್ಚಿನ ತರಬೇತಿ ನೀಡಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿ ಚಿನ್ನದ ಹುಡುಗಿಯಾದ ಸಂದರ್ಭ, ಹಾಸ್ಟೆಲ್ ಜೀವನದ ಚಿತ್ರಣ, ಕೆಲವು ರೋಚಕ ಪ್ರಸಂಗಗಳ ವಿವರಣೆ, ಅವರ ಬದುಕಿನ ಹಾದಿಯ ವೈಶಿಷ್ಟತೆಯನ್ನು ಹೇಳುತ್ತದೆ.

ಕೃತಿಯನ್ನು ಓದುತ್ತಾ ಹೋದಂತೆ ಸಿಕ್ಕ ಅವಕಾಶಗಳನ್ನು ಮೋಟಮ್ಮ ತಮ್ಮ ಬೆಳವಣಿಗೆಗೆ ನೀರು-ಗೊಬ್ಬರವಾಗಿಸಿ ಕೊಂಡಿರುವುದು, ಓದಿನಲ್ಲಿದ್ದ ಆಸಕ್ತಿ, ಕ್ರೀಡೆಯಲ್ಲಿದ್ದ ಅವರ ವಿಜಗೀಶು ಮನೋಭಾವ, ತಮಗೆ ಆಸಾಧ್ಯ ಎನಿಸಿದ್ದನ್ನೂ ಸಾಧ್ಯವಾಗಿಸಿ ಕೊಳ್ಳಲು ಪಟ್ಟ ಶ್ರಮ, ಆರ್ಥಿಕ ಮುಗ್ಗಟ್ಟು, ಕಾಡುತ್ತಿದ್ದ ಆತಂಕಗಳನ್ನು ಮೆಟ್ಟಿ ನಿಂತು ಮುನ್ನುಗ್ಗಿ ಗುರಿ ಮುಟ್ಟುವ ಸ್ವಭಾವದ ವಿವರ, ಅವರಿಗೆ ಬೆನ್ನು ತಟ್ಟಿದ, ಸಮಸ್ಯೆ ನಿವಾರಣೆಗೆ ಸಹಾಯ ಮಾಡಿದವರನ್ನು ಮೋಟಮ್ಮ ಅತ್ಯಂತ ಹೃದಯ ಪೂರ್ವಕವಾಗಿ ನೆನೆದಿರುವುದು. ಎಲ್ಲವೂ ತನ್ನಿಂದಲೇ ಆಯಿತೆಂಬ ಅಹಂಭಾವಕ್ಕೆ ಎಡಯಿಲ್ಲದಂತೆ ಸಹಾಯ, ಸಹಕಾರ, ಮಾರ್ಗದರ್ಶನದ ಪ್ರಸ್ತಾಪಗಳು ಅವರ ಪ್ರಾಂಜಲ ಮನಸ್ಥಿತಿಯ ವಿವರಗಳಾಗಿವೆ.

ಆ ದಿನಗಳಲ್ಲಿ ದಲಿತ ಹೆಣ್ಣುಮಗಳೊಬ್ಬಳು ಶಾಲೆಗೆ ಹೋದರೂ ಹೆಚ್ಚೆಂದರೆ ಪ್ರಾಥಮಿಕ ಶಾಲೆಗೆ ಅವರ ಓದು ಸೀಮಿತವಾಗುತ್ತಿತ್ತು. ಮನೆಯಿಂದ ಅದರಲ್ಲೂ ಆ ಊರಿನಿಂದ ಮತ್ತೊಂದು ಊರಿಗೆ ಹೋಗಿ ಕಲಿಯಲು ಕುಟುಂಬವೇ ಒಪ್ಪುತ್ತಿರಲಿಲ್ಲ ಅಂತಹ ಸ್ಥಿತಿಯಲ್ಲೂ ಬೇಡದ ಮಗು ಇದೆಂದು ಕೊಂಡರೂ ಆ ಮಗುವಿನ ಅಕ್ಷರ ಕಲಿಕೆಯ ಆಸಕ್ತಿ, ಚುರುಕುತನವನ್ನು ನೋಡಿ ಮುಂದೆ ಓದಲು ರಾಜಧಾನಿಯವರೆಗೂ ಕಳುಹಿಸಿದ ಅವರ ತಂದೆ ಮತ್ತು ಅಣ್ಣನ ಪ್ರೀತಿವಿಶ್ವಾಸವನ್ನು, ಈ ನಿರ್ಧಾರಕ್ಕೆ ಅವರುಗಳೆಂದೂ ಪಶ್ಚಾತಾಪ ಪಡುವ ಸನ್ನಿವೇಶ ಎದುರಾಗದಂತೆ ಮೋಟಮ್ಮ ಹಠತೊಟ್ಟು ಎದುರಾದ ಪ್ರತಿ ಮೆಟ್ಟಲನ್ನೂ ಏರಿ ರಾಜಕೀಯವಾಗಿಯೂ ಒಂದು ಸಾಧನೆ, ಸೇವೆ ಮಾಡಿರುವುದರ ಚಿತ್ರಣವನ್ನು ಕೃತಿ ನಮ್ಮ ಮುಂದೆ ಅನಾವರಣಗೊಳಿಸುತ್ತದೆ. ಮೋಟಮ್ಮ ಓದು, ಕ್ರೀಡೆಯಲ್ಲಿ ಮಗ್ನರಾದಂತೆಯೆ ಅವರ ಶಾರೀರದ ಸೊಗಸು ಸಹ ಉಲ್ಲೇಖಾರ್ಹ; ಜಾನಪದೀಯ ಸೊಗಡಿನಿಂದ ತುಂಬಿದ ಅವರ ಕಂಠಶ್ರೀ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದ, ರಾಜಕೀಯ ಕ್ಷೇತ್ರದಲ್ಲೂ ಜನರನ್ನಾಕರ್ಷಿಸಿದೆ. ಭಾಷಣವಾದ ನಂತರ ಹಾಡೊಂದನ್ನೂ ಶ್ರಾವ್ಯವಾಗಿಸಿಕೊಳ್ಳಲು ಜನ ಹಾತೊರೆಯುತ್ತಿದ್ದರು.

ಮೋಟಮ್ಮ ರಾಜಕೀಯದತ್ತ ಹೆಜ್ಜೆ ಹಾಕಲಿಲ್ಲ, ಆದರೆ ರಾಜಕೀಯ ಕ್ಷೇತ್ರವೇ ಅವರನ್ನು ಹುಡುಕಿಕೊಂಡು ಬಂತು. ತಮ್ಮ ಎಂ.ಎ. ಪದವಿ ಪೂರೈಸಿದಾಕ್ಷಣ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾದರು. ಭೈರಮಂಗಲದ ಶಾಲೆಗೆ ಬಸ್ ಬದಲಾಯಿಸಿ ಹೋಗುವ ಬದಲು ಅಲ್ಲೆ ಬಾಡಿಗೆ ಕೊಠಡಿ ಮಾಡಿಕೊಳ್ಳಲು ಮುಂದಾದಾಗ ಅಸ್ಪೃಶ್ಯತೆಯ ಅನುಭವವೂ ಆಯಿತು. ಆ ನಂತರ ಅವರಿಗೆ ಕೆ.ಪಿ.ಎಸ್.ಸಿ ಮೂಲಕ ಸಬ್‌ರಿಜಿಸ್ಟ್ರಾರ್ ಹುದ್ದೆಗೆ ಕರೆಬಂತು. ಆಶ್ಚರ್ಯವೆಂದರೆ ಲಂಚವಿಲ್ಲದೆ ಒಲಿದ ಹುದ್ದೆ ಅದು. ಅವರ ಮದುವೆ ಪ್ರಸ್ತಾಪ ಸಹ ಸಾಂಪ್ರದಾಯಕವಾಗಿ ಆದುದಲ್ಲ. ಒಂದೇ ಜಾತಿಯವರಾದರೂ ಕೃಷಿ ಇಲಾಖೆ ಅಧಿಕಾರಿಯಾಗಿದ್ದ ವೆಂಕಟರಾಮ್ ಅವರನ್ನು ಪರಿಚಯಿಸಿ ಪ್ರಸ್ತಾಪಿಸಿದ್ದು ಮೋಟಮ್ಮ ಅವರ ಹಿರಿಯ ಅಧಿಕಾರಿ ತಿಮ್ಮಯ್ಯ. ಮೊದಲು ಓದಿದ ಹುಡುಗಿಯನ್ನು ಒಪ್ಪಲೋ ಬೇಡವೋ ಎನ್ನುತ್ತಿದ್ದ ವೆಂಕಟರಾಮ್ ಆಗಾಗ ಮೋಟಮ್ಮ ಅವರನ್ನು ನೋಡಲು ಬರುತ್ತಿದ್ದು ಕೊನೆಗೆ ಆ ಹುದ್ದೆ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಅವರ ವಿವಾಹ ನೆರವೇರಿತು. ಅವರ ವಿವಾಹಕ್ಕೆ ಹಿಂದಿನ ಪ್ರಧಾನಿ ಇಂದಿರಾಗಾಂಧಿ ಬಂದು ಆಶೀರ್ವದಿಸಿ, ಅಲ್ಲೇ ಸಹಭೋಜನ ಮಾಡಿದ್ದು ಅವರ ಜೀವನದ ವಿಶೇಷ ಪ್ರಸಂಗ. ಇಂದಿರಾ ಅವರ ಚುನಾವಣೆಯ ಸಂಕ್ಷಿಪ್ತ ಚಿತ್ರಣ, ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸರಿಗೂ ಇಂದಿರಾಗೂ ಉಂಟಾಗಿದ್ದ ಮನಸ್ತಾಪದ ಒಂದು ಝಲಕ್ ಸಹ ಸೇರಿದೆ.

ದೇಶದಲ್ಲಿ ಆಗ ಒಂದು ರೀತಿಯ ರಾಜಕೀಯ ಸ್ಥಿತ್ಯಂತರದ ಸ್ಥಿತಿ ಇತ್ತು. ಜಿಲ್ಲೆಯ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟವನ್ನು ಇಂದಿರಾ ಕಾಂಗ್ರೆಸ್ ನಡೆಸಿತು. ಅಂದಿನ ಸಂಸದ ಡಿ.ಬಿ.ಚಂದ್ರೇಗೌಡ ಅವರಿಗೆ ತಮ್ಮ ತಾಲ್ಲೂಕಿನವರಾದವರನ್ನು ನಿಲ್ಲಿಸುವ ಇರಾದೆ. ಆಗ ಮೋಟಮ್ಮ ಅವರ ಹೆಸರು ಅವರ ಮನಹೊಕ್ಕಿತು. ಆದರೆ ಮೋಟಮ್ಮ ರಾಜಕೀಯಕ್ಕೆ ನಿಲ್ಲಲು ಸಿದ್ಧರಿರಲಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ- ಹಿರಿಯ ರಾಜಕಾರಣಿ ಬಿ.ಎಲ್.ಸುಬ್ಬಮ್ಮ ಬಂದು ನೀನೇಕೆ ಚುನಾವಣೆಗೆ ನಿಲ್ಲಬಾರದು? ಎಂದು ಕೇಳಿದಾಗ ಮೋಟಮ್ಮ ನೀಡಿದ ಉತ್ತರ, “ಎಲೆಕ್ಷನ್ನಾ? ಅದರಗೊಡವೆ ನನಗೆ ಬೇಡಪ್ಪ. ಎಲೆಕ್ಷನ್-ಗಿಲಕ್ಷನ್ ಅಂದ್ರೆ ಏನೂಂತ ಗೊತ್ತಿಲ್ಲ. ನನಗೆ ಇಷ್ಟವಿಲ್ಲ” ಎಂದು.

ಕೊನೆಗೆ ಒತ್ತಡ ಅಧಿಕವಾದಾಗ ಆಗ ಅವರ ಸಹೋದ್ಯೋಗಿ ಮಾತಿಗೆ ಕಟ್ಟುಬಿದ್ದು ಶಾಸ್ತçಕ್ಕೆ ಮೊರೆಹೋದರು. ಈ ಪ್ರಸಂಗ ಫಲಜ್ಯೋತಿಷ್ಯದ ದ್ವಂದ್ವವನ್ನು ಪರಿಚಯಿಸುತ್ತದೆ. ಶಾಸ್ತç ಕೇಳಲು ಹೋಗಿದ್ದು ಅರಸೀಕೆರೆ ಸಮೀಪ ಕೋಡಿಮಠಕ್ಕೆ. ಸ್ವಾಮೀಜಿ ಭೇಟಿ ಮಾಡಿ ಅವರು ಹೊತ್ತಿಗೆ ತೆರೆದಾಗ ಬಂದ ನುಡಿಗಟ್ಟು ‘ರಾಜಕೀಯ ರಜೇಕ ಬಂಧನಂ’ ಎಂದು. ತಕ್ಷಣ ಅದನ್ನು ಅರ್ಥೈಸಿದ ಸ್ವಾಮಿಗಳು, “ನಿಮಗೆ ರಾಜಕೀಯದಲ್ಲಿ ಕಷ್ಟವಿದೆ. ನಿಮಗೆ ಅಡ್ಡಿಆತಂಕ ಬರುತ್ತದೆ. ನೀವು ರಾಜಕೀಯಕ್ಕೆ ಹೋಗಲಿಕ್ಕೆ ಸಾಧ್ಯವಿಲ್ಲ” ಎಂದರು. ಮೋಟಮ್ಮ ಅವರಿಗೆ ಆನಂದವೇ ಆಯಿತು. ಆದರೆ ಚಂದ್ರೇಗೌಡರು ಬಿಡಬೇಕಲ್ಲ. ಬೇಲೂರಿನ ಜ್ಯೋತಿಷಿ ಬಳಿಗೆ ಕರೆದೊಯ್ದರು. ಅವರು ಹೊತ್ತಿಗೆಯ ನುಡಿಗಟ್ಟನ್ನು ಕೇಳಿ, “ಸರಿಯಾಗಿಯೇ ಬಂದಿದೆಯಲ್ಲಾ, ‘ರಾಜಕೀಯ ರಜೇಕ ಬಂಧನಂ’ ಅಂದ್ರೆ ನೀನು ರಾಜಕೀಯ ಜೀವನಕ್ಕೆ ಬಂಧಿಸಲ್ಪಡ್ತೀಯಾ ಅಂಥ ಅರ್ಥ” ಎಂದರು. ಕೊನೆಗೂ ಮೋಟಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟು ಶಾಸಕಿಯೂ ಆದರು.

ಮೋಟಮ್ಮ ತಮ್ಮ ಕೃತಿಯಲ್ಲಿ  ರಾಜಕೀಯ ಕ್ಷೇತ್ರದಲ್ಲಾಗುತ್ತಿರುವ ಅಪಸವ್ಯಗಳ ಬಗ್ಗೆ ನೇರನುಡಿಗಳನ್ನಾಡುತ್ತಾರೆ. ಟಿಕೆಟ್ ಪಡೆಯಲು ಈಗ ಅನುಸರಿಸುತ್ತಿರುವ ಅಪಮಾರ್ಗ, ಹಣವಿಲ್ಲದಿದ್ದರೆ ರಾಜಕೀಯ ಮಾಡಲಾಗುವುದೇ ಇಲ್ಲ ಎಂಬ ವಾಸ್ತವ ಸಂಗತಿ ಹೇಳಿ,ಪಕ್ಷ ನಿಷ್ಠೆ,ತತ್ವ ಸಿದ್ಧಾಂತಗಳ ಬಗ್ಗೆ ಬದ್ಧತೆ ಇಲ್ಲದಿರುವುದರತ್ತ ಬೊಟ್ಟು ಮಾಡಿ ತೋರಿಸಿ,ಟಿಕೆಟ್ ಸಿಗದಿದ್ದರೆ ಆ ಪಕ್ಷ ತ್ಯಜಿಸಿ ಬೇರೊಂದು ಪಕ್ಷದಿಂದ ನಿಲ್ಲುವ ಹಣ ಮೂಲದ ಬಗ್ಗೆ ತೀವ್ರ ಅಸಮಧಾನ ಹೊರಹಾಕಿದ್ದಾರೆ. ರಾಜಕೀಯಕ್ಕೆ ಬರುವುದು, ಬಂದು ಏಗುವುದು ಸುಲಭವಲ್ಲವೆಂದು ಅವರ ಸ್ನೇಹಿತೆಯಾಗಿ ಮುಂದೆ ಸಂಸದೆಯೂ ಆದ ಡಿ.ಕೆ.ತಾರಾದೇವಿ ಅವರ ಮಾತನ್ನು ಸಹ ನೇರವಾಗಿ ಉಲ್ಲೇಖಿಸುವುದಲ್ಲದೆ, ಮುಂದಿನ ಅಧ್ಯಾಯದಲ್ಲಿ ೧೯೮೩ರಲ್ಲಿ ಬಂದ ಶಾಸನಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡುವುದನ್ನು  ಡಿ.ಕೆ.ತಾರಾದೇವಿ ಅವರೇ ವಿರೋಧಿಸಿದ್ದನ್ನು, ಕ್ಷೇತ್ರದ ಕೆಲವರು ಇಂದಿರಾಗಾಂಧಿ ಅವರಿಗೆ, “ಮೋಟಮ್ಮ ಅವರಿಗೆ ಟಿಕೇಟ್ ನೀಡಬೇಡಿ”  ಎಂದು ೫೦ ಟೆಲಿಗ್ರಾಂ ಕಳುಹಿಸಿದ್ದನ್ನು ವಿವರಿಸಲು ಹಿಂಜರಿಯದೆ ಅವರು ಹೇಳುವುದು, “ಇದನ್ನು ಕೇಳಿದ ನನಗೆ ಭಾರೀ ಆಘಾತವಾಯಿತು. ಆಗ ನನಗೆ ರಾಜಕೀಯದ ಕುತಂತ್ರವೇನು? ಮತ್ತು ಹೇಗೆ ಅದು ಕಾಣಿಸಿಕೊಳ್ಳುತ್ತದೆ ಎಂಬುದು ಅರಿವಿಗೆ ಬಂತು. ನಮ್ಮ ಪಕ್ಷದಲ್ಲಿ ಜೊತೆಗಿದ್ದುಕೊಂಡೇ ಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಶತೃತ್ವ ಸಾಧಿಸುತ್ತಾರೆ, ಪಿತೂರಿ ಮಾಡುತ್ತಾರೆ”, ಎಂದು ತಮಗಾದ ನೋವನ್ನು ಸ್ಪಷ್ಟ ಮಾತುಗಳಲ್ಲೇ ಹೇಳಿದ್ದಾರೆ.

ಮೋಟಮ್ಮ ರಾಜಕೀಯ ಕ್ಷೇತ್ರದಲ್ಲಿ  ತಮ್ಮ ಅನುಭವ, ಸಾಮರ್ಥ್ಯವನ್ನು ತೋರಿಸಿದರೂ, ಅದನ್ನು ಗುರುತಿಸದೇ ಇದ್ದ ನಾಯಕರನ್ನು ಹೆಸರು ಸಮೇತ ಉಲ್ಲೇಖಿಸುವಾಗಲೂ ಯಾವುದೇ ರೀತಿಯ ಹಿಮ್ಮೆಟ್ಟುವಿಕೆಗೆ ಒಳಗಾಗಲಿಲ್ಲ. ಅವರು ಎರಡನೆಯ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗಲೂ ಅಂದಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ ಗುರುತಿಸದೇ ಇರುವುದು, ಬಂಗಾರಪ್ಪನವರು ಅಧಿಕಾರದ ಚುಕ್ಕಾಣಿ ಹಿಡಿದಾಗಲೂ ಅವಕಾಶ ನೀಡದಿರುವುದು, ವೀರಪ್ಪ ಮೊಯ್ಲಿಯವರೂ, ಸಿದ್ಧರಾಮಯ್ಯ ತಮ್ಮನ್ನು ಕಡೆಗಣಿಸಿದ್ದು, ಹಿಂದುಳಿದವರ್ಗಕ್ಕೆ ಸೇರಿದ ಮುಖ್ಯಮಂತ್ರಿಗಳಾದರೂ ಅವರ ಅವಧಿಯಲ್ಲಿ ನನಗೆ ಯಾವುದೇ ರೀತಿ ಸಪೋರ್ಟ್ ಮಾಡಲಿಲ್ಲ, ಉತ್ತೇಜನವನ್ನೂ ನೀಡಲಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ, ಹಾಗೆಯೇ ಮನವಿ ಮಾಡಕೊಂಡ ನಂತರ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಬಂಗಾರಪ್ಪ ಮಾಡಿದನ್ನು  ನೆನೆಯಲಾಗಿದೆ. ೨೦೧೩ರಲ್ಲಿ ವಿಧಾನಪರಿಷತ್ ಸದಸ್ಯೆಯಾಗಿ, ವಿಪಕ್ಷ ನಾಯಕಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೂ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂತ್ರಿಪದವಿ ನೀಡದ ನೋವನ್ನೂ ಮೋಟಮ್ಮ ತೋಡಿಕೊಂಡಿದ್ದಾರಲ್ಲದೆ,  ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಹ ನೆರವಿಗೆ ಬರದಿದ್ದರ ಬಗ್ಗೆ ಆದ ಬೇಸರವನ್ನು ಬರೆದಿದ್ದಾರೆ.

ಮೋಟಮ್ಮ ಅವರಿಗೆ ೧೯೯೪ರ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲು ಯತ್ನಿಸಿದವರ, ಟಿಕೆಟ್ ಸಿಕ್ಕ ನಂತರ ಹೇಗೆ ಸೋಲಿಸಿದರೆಂಬ ವಿವರಣೆಯೂ ಇದೆ. ಆ ನಂತರ ಮಹಿಳಾ ಸಂಘಟನೆಯಲ್ಲಿ ಸಕ್ರಿಯರಾದುದು, ೧೯೯೯ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದಾಗ ಮತ್ತೆ ಗೆದ್ದು, ಸಂಪುಟದರ್ಜೆ ಸಚಿವರಾಗಿದ್ದನ್ನು ಹೇಳುವಾಗ ಕೃಷ್ಣ ಅವರ ಉತ್ತೇಜನವನ್ನು ಕೃಷ್ಣ ನನ್ನ ಶಿಸ್ತು, ನನ್ನ ನಡವಳಿಕೆ, ಜನಪರ ಕಾಳಜಿ ಜನರ ಅಭಿವೃದ್ಧಿ ಕುರಿತಂತೆ ನನಗೆ ಇದ್ದ ಆಸಕ್ತಿ, ರಾಜಕೀಯ ಆಸಕ್ತಿಯನ್ನು ಗುರುತಿಸಿ ಅವರು ನನಗೆ ಎಲ್ಲಾ ರೀತಿಯ  ಪ್ರೋತ್ಸಾಹ ನೀಡಿದರು. ಹೀ ಈಸ್ ಗ್ರೇಟ್ ಎನ್ನುತ್ತಾರೆ. ಕೃತಿಯಲ್ಲಿ ಅವರ ವಿರುದ್ಧ ಕೆಂಗಣ್ಣು ಬಿಟ್ಟವರನ್ನು, ಬೆನ್ನುತಟ್ಟಿದವರ ಬಗ್ಗೆ ನೇರನುಡಿಯಲ್ಲೇ ಮೋಟಮ್ಮ ತಮ್ಮ ಅಸಮಾಧಾನ ಹೊರಹಾಕಿ ದ್ದಾರೆ.

ಮೋಟಮ್ಮ ಸಚಿವೆಯಾದಾಗ, ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯೆಯಾದಾಗ ಅವರ ಬಗ್ಗೆ ಅಧ್ಯಕ್ಷೆ ಸೋನಿಯಾಗೆ ಆದ ಮೆಚ್ಚುಗೆ, ರಾಜ್ಯದಲ್ಲಿ ಸ್ತ್ರೀಶಕ್ತಿ ಗುಂಪುಗಳ ಕ್ರಾಂತಿಕಾರಿ ಹೆಜ್ಜೆ, ರಾಯಚೂರಿನಲ್ಲಿ ನಡೆದ ಸ್ತ್ರೀಶಕ್ತಿ ಸಂಘಗಳ ಸಮ್ಮೇಳನದಲ್ಲಿ ಭಾಗವಹಿಸಿದ ಸೋನಿಯಾ ಗಾಂಧಿ ಅವರಿಗೆ ಅವರ ಸಂಘಟನಾ ಶಕ್ತಿ ಅರಿವಾಗಿ ಅವರಿಂದ ಬಂದ ಶ್ಲಾಘನೆ, ಮಂತ್ರಿಯಾಗಿ ಮಾಡಿದ ಸಾಧನೆಗಳ ಮಾಹಿತಿಯನ್ನು ಪಟ್ಟಿ ಮಾಡಿದ್ದರೆ, ಅಸ್ಪೃಶ್ಯತೆ ನಿವಾರಣೆಯಾಗದಿರುವುದು, ಮತಾಂತರ ಯಾಕೆ ಬೇಡ? ಗೋರಕ್ಷಕರ ನಡವಳಿಕೆ ಬಗ್ಗೆ ಸಹ ಅವರಿಗೆ ಸಿಟ್ಟಿದೆ. ದಲಿತ ಸಂಘರ್ಷ ಸಮಿತಿ ಒಡೆದು ಚೂರಾಗಿರುವುದನ್ನೂ ಉಲ್ಲೇಖಿಸಿ, ಆಗಿನದಕ್ಕೂ ಈಗಿನದಕ್ಕೂ ಹೋಲಿಕೆಯೇ ಇಲ್ಲ ಎಂದಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯೆಯಾಗಿದ್ದರೂ ಸಭಾಧ್ಯಕ್ಷ ಸ್ಥಾನ ನೀಡದೆ ಇದ್ದ ನೋವನ್ನು ಹೊರಹಾಕಿದ್ದಾರೆ. ೨೦೧೪ರಿಂದ ಆರಂಭವಾದ ಮೋದಿ ಆಡಳಿತದ ಬಗ್ಗೆ ಸಹ ಅವರ ವಿರೋಧ ಮುಂದುವರೆದಿದೆ. ಕನಿಷ್ಠ ಅಡುಗೆ ಅನಿಲ ಸಂಪರ್ಕ, ಉಜ್ವಲ ಯೋಜನೆ ಸೇರಿದಂತೆ ಮಹಿಳೆಯರಿಗಾಗಿ ಅವರ ಕೈಗೊಂಡ ಯೋಜನೆಯ ಆ ಉಲ್ಲೇಖವೂ ಕೃತಿಯಲ್ಲಿ ಇಲ್ಲದಿರುವುದೊಂದು ಜಾಣ ಮರೆವೆನಿಸುತ್ತದೆ.

ಮೋಟಮ್ಮ ಅವರ ಆತ್ಮಕಥನವನ್ನು ಓದುತ್ತಾ ಹೋದಂತೆ,ಅವರೊಬ್ಬ ಸಾಮಾಜಿಕ ಕಾಳಜಿಯ,ದಲಿತವರ್ಗದ ನೋವುಗಳನ್ನು ಸ್ವತಃ ಅನುಭವಿಸಿ ಅರ್ಥೈಸಿಕೊಂಡಿರುವ,ಹೊತ್ತ ಜವಾಬ್ಧಾರಿಯನ್ನು ಅಷ್ಟೇ ಉತ್ತಮವಾಗಿ ನಿರ್ವಹಿಸಿದ, ನೇರ ನುಡಿಯ ರಾಜಕಾರಣಿ ಎನಿಸುತ್ತದೆ. ಕೃತಿ ಓರ್ವ ದಲಿತ ಮಹಿಳಾ ರಾಜಕಾರಣಿಯ ಬದುಕಿನ ಯಾನವನ್ನು ತೆರೆದಿಡುತ್ತಲೇ ರಾಜಕೀಯ ಕ್ಷೇತ್ರದಲ್ಲಾಗುತ್ತಿರುವ ಸ್ಥಿತ್ಯಂತರ, ನೀತಿ ಭ್ರಷ್ಟತೆ, ಹಣತೃಷ್ಣ ಮನೋಭಾವ ಇವೆಲ್ಲದನ್ನೂ ಅನಾವರಣಗೊಳಿಸಿರುವುದು ಕೃತಿಗೆ ಒಂದು  ಗಟ್ಟಿತನವನ್ನು ತಂದಿದೆ.  ಹಚ್ಚ ಹಸಿರು ಹೊದ್ದಿಕೆಯ ಮೂಡಿಗೆರೆಯಲ್ಲೆ  ಹುಟ್ಟಿಬೆಳೆದು ರಾಜಕೀಯ ಪ್ರಾತಿನಿಧ್ಯವನ್ನು  ಅಲ್ಲೇ ಪಡೆದ ಮೋಟಮ್ಮನವರು ತೆಳುವಾಗುತ್ತಿರುವ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮತೆಯ ಆ ಪ್ರದೇಶದಲ್ಲಾಗುತ್ತಿರುವ ಆ ಹಸುರಿನ ಹನನ ಮತ್ತು ಅದರು ಪತ್ತಲದಲ್ಲಡಗಿರುವ ವನ್ಯಜೀವಿಗಳ ನಾಮಾವಶೇಷದ ಬಗ್ಗೆ ತಾವು ನೋಡಿದ್ದು, ಅನುಭವಿಸಿದ್ದನ್ನು ಒಂದು ಅಧ್ಯಾಯದಲ್ಲಿ ಸೇರಿಸಬಹುದಿತ್ತು.

 ಕೃತಿಯನ್ನು ಕೊನೆಯ ಪುಟದವರೆಗೆ ಓದಿದ ನಂತರ ಮೋಟಮ್ಮನವರು ಸಾರಸರ್ವಸ್ವವಾಗಿ ಹೇಳುತ್ತಿರುವುದು  “ನನಗೆ ನೋವಿದೆ, ನಾನು ನಂಬಿದವರೇ ನನ್ನ ಜೊತೆಗೆ ನಿಲ್ಲಲಿಲ್ಲವೆಂದು. ನನಗೆ ನಲಿವಿದೆ, ನನ್ನ ಬೆಳವಣಿಗೆಗೆ ಹೆಗಲು ನೀಡಿ ಗೆಳೆಯ ಗೆಳತಿ, ಹಿರಿಯರು ನಿಂತರೆಂದು. ನನಗೆ ವಿಷಾದವಿದೆ, ಅಂದಿನ ರಾಜಕಾರಣಕ್ಕೂ ಇಂದಿನ ದ್ವೇಷಾಸೂಯೆಗಳ, ಹಣದ ಬಲದ ರಾಜಕಾರಣದ ಬಗ್ಗೆ. ನನಗೆ ತೃಪ್ತಿ ಇದೆ, ನನ್ನ ಹೆಗಲೇರಿದ ಜವಾಬ್ದಾರಿಗಳನ್ನು ಜನಮೆಚ್ಚುವಂತೆ ನಿರ್ವಹಿಸಿದ್ದೇನೆಂದು.” 

ಸ.ಗಿರಿಜಾಶಂಕರ

ಚಿಕ್ಕಮಗಳೂರು.

  • email
  • facebook
  • twitter
  • google+
  • WhatsApp
Tags: congressCongress MLAdalit womenDalitsDKShivakumarHindu CongresswomanIndiragandhiMotammaMudigereRSS on DalitsSiddaramaiahSM Krishnawesternghat

Related Posts

BOOK REVIEW

Conflict resolution : The RSS way

April 21, 2022
BOOK REVIEW

ಬುದ್ಧಚರಣ ಅನಿಕೇತನನ ಆಂತರ್ಯದ ಅನಾವರಣ!

February 28, 2022
BOOK REVIEW

ರಾಣಿ ಚೆನ್ನಭೈರಾದೇವಿ ಬಹುಪಾರಕ್!!

January 29, 2022
ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.
Articles

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

April 28, 2021
ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ
BOOK REVIEW

ಹುತಾತ್ಮ ಕುಯಿಲಿ, ಹೇಗಾದಾಳು ಎಲ್ಟಿಟಿಇ?

April 9, 2021
ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..
Articles

ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..

March 25, 2021
Next Post

ಕನ್ಹಯ್ಯಾಲಾಲ್ ಹತ್ಯೆಯನ್ನು ಖಂಡಿಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತನ ಮೇಲೆ ಕೊಲೆ ಯತ್ನ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

February 2, 2019
ಸಂಸ್ಕೃತ ಪಂಡಿತನಾಗಬೇಕಿದ್ದವನು ಕ್ರಾಂತಿಕಾರಿಯಾದ ದೇಶಭಕ್ತ ಚಂದ್ರಶೇಖರ್ ಆಜಾದ್‌.

ಸಂಸ್ಕೃತ ಪಂಡಿತನಾಗಬೇಕಿದ್ದವನು ಕ್ರಾಂತಿಕಾರಿಯಾದ ದೇಶಭಕ್ತ ಚಂದ್ರಶೇಖರ್ ಆಜಾದ್‌.

February 27, 2021

VIDEO: Swadeshi Economy can only Save India says Economist MR Venkatesh

November 14, 2011
ಬಾಯಾರು: ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ

ಬಾಯಾರು: ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ

November 20, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In