೧೯೨೭ ರಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಕ್ ಉಲ್ಲಾಹ್ ಖಾನ್, ಠಾಕೂರ್ ರೋಶನ್ ಸಿಂಘ್, ರಾಮಕೃಷ್ಣ ಖತ್ರಿ ಮತ್ತಿತರ ಸ್ವತಂತ್ರ ಹೋರಾಟಗಾರರು ಲಖನೌ ಜೈಲಿನಲ್ಲಿದ್ದರು. ಕಾಕೋರಿ ರೈಲು ದರೋಡೆಯ ಅರೋಪದ ಮೇಲೆ ಆಂಗ್ಲ ಸರ್ಕಾರ ಅವರನ್ನು ಬಂಧಿಸಿತ್ತು. ಜೈಲಿನಲ್ಲಿ ತಮ್ಮ ಸಹವಾಸಿಗಳ ಕೋರಿಕೆಯ ಮೇರೆಗೆ ರಾಮ್ ಪ್ರಸಾದ್ ಬಿಸ್ಮಿಲ್ಲರು ರಚಿಸಿದ ಗೀತೆ ’ಮೇರ ರಂಗ್ ದೇ ಬಸಂತಿ ಚೋಲಾ’.
’ನಮ್ಮ ಮೈಮನಗಳಲ್ಲಿ ಕೇಸರಿಯ ರಂಗೇರಲಿ’ ಎಂಬ ಆಶಯದ ಈ ಸಾಲುಗಳು ಸ್ವತಂತ್ರ ಹೋರಾಟದ ಅತ್ಯಂತ ಪ್ರಖರ ಘೋಷಣೆಗಳಲ್ಲೊಂದು.
ನಮ್ಮ ಪರಂಪರೆಯಲ್ಲಿ ಕೇಸರಿ ಬಣ್ಣ ತ್ಯಾಗ ಮತ್ತು ಶೌರ್ಯದ ಸಂಕೇತವಾಗಿರುವುದರಿಂದ ಹೋರಾಟಗಾರರಿಗೆ ಸಹಜವಾಗಿ ಇದು ಪ್ರೇರಣೆ ನೀಡುತ್ತಿತ್ತು .
ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ತಾವು ನೇಣಿಗೇರುವ ಮುನ್ನಾದಿನ ಇದೇ ಹಾಡನ್ನು ಸಂತೋಷವಾಗಿ ಹಾಡಿಕೊಳ್ಳುತ್ತಿದ್ದರು ಎಂಬ ಪ್ರತೀತಿ ಇದೆ. ಭಗತ್ ಸಿಂಗ್ ಬಗ್ಗೆ ಬಂದಿರುವ ಸಿನೆಮಾಗಳಲ್ಲಿ ಈ ಹಾಡು ತುಂಬಾ ಜನಪ್ರಿಯಗೊಂಡಿದೆ. ಸಿನೆಮಾಗಳಲ್ಲಿ ಬೇರೆ ಬೇರೆ ಕವಿಗಳು ಈ ಹಾಡುಗಳನ್ನು ಬರೆದಿದ್ದಾರಾದರೂ ’ಮೇರ ರಂಗ್ ದೇ ಬಸಂತಿ ಚೋಲ’ ಎಂಬ ಸಾಲನ್ನು ಮಾತ್ರ ಹಾಗೇ ಉಳಿಸಿಕೊಂಡಿದ್ದಾರೆ.
ಜಗತ್ತಿನೆಲ್ಲೆಡೆ ಸ್ವಾತಂತ್ರ್ಯಕ್ಕಗಿ ಬಲಿದಾನ ಮಾಡಿರುವವರ ಇತಿಹಾಸ ನೋಡಿದರೆ, ಎಲ್ಲರಲ್ಲಿಯೂ ಕಂಡುಬರುವ ಸಮಾನ ಅಂಶ -ಭವಿಷ್ಯದ ತಮ್ಮ ನಾಡಿನ ಒಳಿತಿಗಾಗಿ ಇಂದು ತಾವು ತಮ್ಮ ಕರ್ತವ್ಯ ಮಾಡುತ್ತಿದ್ದೇವಷ್ಟೆ ಎಂಬ ಭಾವ. ಅಧೈರ್ಯದ ಕುರುಹೂ ಇಲ್ಲದೆ ಸಂಭ್ರಮದಿಂದ ಸಾವನ್ನಪ್ಪುವ ಗುಣ. ಹಾಡಿಕೊಂಡು ಸಾಯುವುದು ಈ ಕಟು ಸಂಭ್ರಮದ ಹೆಗ್ಗುರುತು. ಬಹುಶಃ ಹಾಡಿಲ್ಲದ ಯಾವುದೇ ಸಂಗ್ರಾಮವೂ ಜಗತ್ತಿನಲ್ಲಿ ನಡೆದಿಲ್ಲವೆನಿಸುತ್ತದೆ. ಹಲವೆಡೆಗಳಲ್ಲಿ ಇಂಥ ಹಾಡುಗಳೇ ಹೋರಾಟದ ಓನಾಮವಾದ ಉದಾಹರಣೆಗಳೂ ಇವೆ. ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ’ವಂದೇ ಮಾತರಂ’ ನ ಪಾತ್ರ ಎಲ್ಲರಿಗೂ ತಿಳಿದೇ ಇದೆ.
ಇಂಥದ್ದೇ ಕಥೆ ಸ್ಪಾನಿಶ್ ಭಾಷೆಯ “Mi Ultimo Adios” ಕವಿತೆಯದ್ದು.
ಫ಼ಿಲಿಪೈನ್ಸ್ ದೇಶದ ಮೇಲೆ ಸ್ಪಾನಿಶ್ ಪ್ರಭುತ್ವವಿದ್ದ ಕಾಲವದು. ವೈದ್ಯನಾಗಿದ್ದ ಹೋಝೇ ರಿಝಾಲ್ (José Rizal) ನ ಬರಹಗಳು ಕ್ರಾಂತಿಗೆ ಎಡೆ ಮಾಡಿಕೊಡುತ್ತಿವೆ ಎಂಬ ರಾಜದ್ರೋಹದ ಆರೋಪದಡಿ ಸರ್ಕಾರ ಅವನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಗಲ್ಲಾಗುವ ಹಿಂದಿನ ರಾತ್ರಿ ಅವನ ಕುಟುಂಬದವರು ಅವನನ್ನು ನೋಡಲು ಬಂದಾಗ, ರಿಝಾಲ್ ತಾನು ಉಪಯೋಗಿಸುತ್ತಿದ್ದ ಒಲೆಯನ್ನು ಅವರಿಗೆ ಕೊಟ್ಟು ಅದರೊಳಗೆ ’ಏನೋ’ ಇದೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ ಎಂದು ಹೇಳಿದ. ಮನೆಗೆ ಬಂದು ಒಲೆಯನ್ನು ಪರಿಶೀಲಿಸಿದಾಗ ಅವನ ಕುಟುಂಬಸ್ಥರಿಗೆ ಮಡಚಿಟ್ಟಿದ್ದ ಕಾಗದವೊಂದರಲ್ಲಿ ಈ ಪದ್ಯ ಕಂಡಿತು.
ಐದೈದು ಸಾಲಿನ ಹದಿನಾಲ್ಕು ಪ್ಯಾರಗಳಿದ್ದ, ಇನ್ನೂ ಹೆಸರಿಡದಿದ್ದ ಆ ಪದ್ಯವನ್ನು ರಿಝಾಲ್ ನ ಗೆಳೆಯರನೇಕರಿಗೆ ಅವನ ಮನೆಯವರು ಕಳುಹಿಸಿದರು. ಅವರಲ್ಲೊಬ್ಬ ಆ ಪದ್ಯಕ್ಕೆ ’Mi Ultimo Adios’ ಎಂಬ ಹೆಸರನ್ನು ಕೊಟ್ಟು ’la independencia’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ.
ಪ್ರಕಟಗೊಂಡ ನಂತರ ರಿಝಾಲ್ ನ ಪದ್ಯ ಫ಼ಿಲಿಪೈನ್ಸ್ ನ ಸ್ವತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಬೇರೆ ದೇಶಗಳ ಸಮರಗಳಲ್ಲೂ ಬಳಕೆಯಾಗತೊಡಗಿತು. ಅನ್ವರ್ ಎಂಬುವವನು ಇಂಡೋನೇಷಿಯನ್ ಭಾಷೆಗೆ ಪದ್ಯವನ್ನು ತರ್ಜುಮೆ ಮಾಡಿದ. ಇಂಡೋನೇಷಿಯ ಆಗ ಡಚ್ಚರ ವಿರುದ್ಧ ಯುದ್ಧದಲ್ಲಿ ತೊಡಗಿತ್ತು. ಅಲ್ಲಿನ ಸೈನಿಕರು ಯುದ್ಧಕ್ಕೆ ಹೋಗುವ ಮುನ್ನ ಅದನ್ನು ಹಾಡಲು ಶುರುಮಾಡಿದರು. ಕೆಲವೇ ಸಮಯದಲ್ಲಿ ರಿಝಾಲ್ ನ ಪದ್ಯ ಪ್ರಪಂಚದ ಹತ್ತುಹಲವು ಭಾಷೆಗಳಿಗೆ ನುಡಿಮಾರುಗೊಂಡಿತು. ಇಂಗ್ಲಿಷ್ ನಲ್ಲೇ ಈ ಪದ್ಯದ ಮೂವತ್ತೈದಕ್ಕೂ ಹೆಚ್ಚು ಅನುವಾದಗಳು ಬಂದಿವೆ.
ಈ ಪದ್ಯ ಕನ್ನಡದಲ್ಲೂ ಬಂದಿದೆ. ಇಂಗ್ಲಿಷ್ ನಲ್ಲಿ ಪ್ರಕಟಗೊಂಡ ’my last farewell’ ಎಂಬ ಭಾಷಾಂತರವನ್ನು ಆಧರಿಸಿ, ದ ರಾ ಬೇಂದ್ರೆಯವರು ’ನಮ್ಮ ಕೊನೆಯ ಶರಣು’ ಎಂಬ ಹೆಸರಿನಲ್ಲಿ ಈ ಪದ್ಯವನ್ನು ಭಾವಾನುವಾದ ಮಾಡಿದ್ದಾರೆ. ಬೇಂದ್ರೆಯವರ ವಿಸ್ತಾರವಾದ ಭಾವಾನುವಾದ ಮೂಲ ಪದ್ಯದ ಮೆರಗನ್ನು ಇನ್ನೂ ಏರಿಸಿದೆ. ಸಾಹಿತ್ಯಾಸಕ್ತರು ಕವಿತೆಯ ಇಂಗ್ಲಿಷ್ ವರಸೆಯೊಡನೆ ಕನ್ನಡಾನುವಾದವನ್ನು ಇಟ್ಟು ನೋಡಿದರೆ ಬೇಂದ್ರೆಯವರ ಕವಿತ್ವದ ಶಕ್ತಿ ಎದ್ದು ಕಾಣುತ್ತದೆ.
ಬೇಂದ್ರೆಯವರೇ ಹೇಳಿರುವಂತೆ ’ನಮ್ಮ ಕೊನೆಯ ಶರಣು’ ಲಾವಣಿ ಛಂದದ ಗತ್ತಿನಲ್ಲಿದೆ.
ಹಾಗಾಗಿ ಈ ಪದ್ಯವನ್ನು ಓದುವುದರ ಜೊತೆಗೆ ಕೇಳಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಪದ್ಯದ ಪೂರ್ಣ ಪಾಠ ಮತ್ತು ಎಂ ಎಂ ಕಲಬುರ್ಗಿ ಯವರು ಸಮಾರಂಭವೊಂದರಲ್ಲಿ ಈ ಪದ್ಯವನ್ನು ವಾಚಿಸಿರುವ ವೀಡಿಯೊ ಇಲ್ಲಿದೆ.
ನಮ್ಮ ಕೊನೆಯ ಶರಣು
ನಾಳೆ ಬೆಳಿಗ್ಗೆ ಐತಿ ಮಹ ಮರಣಾ
ಶರಣಂತಾವ ನಮ್ಮ ಪಂಚ ಹರಣಾ
ಹಸನುಳದಾವ ನಮ್ಮಂತಃಕರಣಾ
ದೇವ ದೇವನು ಮಾಡ್ಯಾನೊ ಕರುಣಾ
ನಾಳೆ ಹೊತ್ತ ಮೂಡ ಬಂದೈತಿ ಮರಣಾ
ಶರಣು ಶರಣೆಂಬೆ ನೆಚ್ಚಿನಾ ನಾಡ
ನೀ ಸೂರ್ಯಾನ ಮೆಚ್ಚಿನಾಕಿ ನೋಡ
ಮೂಡಲ ಕಡಲಾಗ ಮುತ್ತು ಹುಟ್ಟಿಧಾಂಗ
ಇಂದ್ರನ ಬನಾನ ಕಡಕೊಂಡು ಬಿತ್ತೊ ಹಿಂಗ
ಇಂಥ ನಾಡಿಗಾಗಿ ನಮ್ಮ ದೇಹಾ ಬೇಡಿದಾಗ ನೀಡಲಿಕ್ಕೆ
ನಿಂತೇವು ಒಂಟಿಕಾಲ ಮ್ಯಾಗ
ಉಳಿದಿಲ್ಲೇನೇನು ಇನ್ನಿದರಾಸಿ
ಏನೋ ಆಗೈತಿ ಒಂದಿಷ್ಟು ಬಾಸಿ
ಆದ್ರೂ ಕೊಟ್ಟೇವು ಮೈ ಹಡದಿ ಹಾಸಿ
ನಮ್ಮ ಹೊಸಾ ಹರೇದಾಗ, ಎಳೇತನಾ ಖರೇದಾಗ
ಮಿಂಚತಿತ್ತು ಬರೇದಾಗ ಉಕ್ಕುಕ್ಕಿ ಉತ್ಸಾಹ ಕಿರಾಣಾ
ಆವಾಗ ಬರಬೇಕು ಇತ್ತ ಈ ಮರಣಾ
ಆಗ ಕೂಡಬೇಕು ಇತ್ತ ತಾಯಿ ಚರಣಾ
ಈಗದರೂ ಏನಾತು, ಸಲ್ಲಿಸತೇವು ಕೊಟ್ಟ ಮಾತು
ನಿಮ್ಮ ಒಳಿತಿಗಾಗಿ ಆತ ಸಾವು
ಶರಣಂದೇವು ಅಂತ ನಿಮಗೇ ನಾವೂ
ವ್ಯೂಹಕ್ಕ ವ್ಯೂಹಾ ಹೂಡಿ, ಯುದ್ಧದ ಸನ್ನಿ ಮೂಡಿ
ಸಂಶಯ ಗಿಂಶಯ ಕಳೆದೂ
ವೀರ ಬಿಟ್ಟ ಗರಿ ಬಾಣಾ,ತೂರತಾರ ತಮ್ಮ ಪ್ರಾಣಾ
ದುಮ್ಮಾನ ದುಃಖಾನ ತೊಳದು
ತಾವರಿಯ ತಂಪಿನ್ಯಾಗ, ಕಣಗೀಲಿ ಕಂಪಿನ್ಯಾಗ
ಮದಗುಣಿಕಿಯ ಜಂಪಿನ್ಯಾಗ
ಎಲ್ಲಿ ಬಂದ್ರು ಏನು ನಮಗ ಮರಣಾ
ಶೂಲಾನ ನೆಟ್ಟಿರಲಿ, ಹಾಳ ಬಯ ಮೆಟ್ಟಿರಲಿ
ಯಮನವರನಿಟ್ಟಿರಲಿ
ಅಗ್ಗಿ ಹೊಕ್ಕು ಏರಿಸೇವು ದವನಾ
ಮನಿಗಾಗಿ, ನಾಡಿಗಾಗಿ ಹ್ಯಾಂಗ ಸತ್ತರೇನು ಸಾವು
ಎಲ್ಲಾನು ನಮಗ ಸರಿಸವನಾ
ಪಂಚ ಪಂಚ ಉಷಃಕಾಲ, ಇಂಥಾ ಮೂರ್ತಾ ಬರಾಕಿಲ್ಲ
ಬಂತಣ್ಣಾ ಎಂಥಾದೀ ಹಗಲಾ
ಖುಲ್ಲಾ ಆಗ್ಯಾವ ಸ್ವರ್ಗದ ಬಾಗಿಲಾ
ಸೂರ್ಯನ ಜ್ಯೋತಿ ಝಗ್ ಅಂತ ಬೆಳಗೊ ಸಂಪ ಹೊತ್ತಿನ್ಯಾಗ
ಬಂದೈತಿ ಪರಲೋಕ ಪಯಣಾ
ಕಾಳರಾತ್ರಿ ಕಪ್ಪಗಾಗಿ ಸಪ್ಪಗಾಗಿ ತೆಪ್ಪಗಾಗಿ
ಹಿಂದ ಬಿದ್ದು ಮುಂದ ಬಂತೊ ಹವನಾ
ಸುಣ್ಣಾ ಬಣ್ಣಾ ಮಾಡಬೇಕು, ತೋರಣಾ ಕಟ್ಟಿ ನೋಡಬೇಕು
ಮಾನಮ್ಮಿ ದಾಸರೇಧಾಂಗ ಮನೀ
ಮುಂಜಾವಿನ ಕೆಂಜ ಬೆಳಕಿಗೆ ಕೆಂಪು ಕಡಿಮೀ ಬಿದ್ದಿದ್ರ
ಥಳೀ ಹಾಕ್ರಿ ನಮ್ಮ ರಕ್ತದ ಹನೀ
ಜಳಕಾ ಮಾಡ್ರಿ, ಓಕುಳಿಯಾಡ್ರಿ, ಅಸಿಮಿಸಿ ನೋಡಬ್ಯಾಡ್ರಿ
ಬಂದೈತಿ ನಮ್ಮ ಬಾಳಿಗ್ಗೊನೀ
ಮಕಮೀಸಿ ಒಡೆದಿರಲಿಲ್ಲಾ ಆಗನ ನಮಗೆಲ್ಲಾ
ಬಿದ್ದಿತ್ತವ್ವಾ ತಾಯಿ ನಿನ್ನ ಕನಸು
ಹರೇದಾಗ ಕೇಳೋದೇನೂ ರಕ್ತದಾಗ ಹೊಕ್ಕಿನೀನು
ನೀನ ಆಗಿಬಿಟ್ಟಿ ನಮ್ಮ ಮನಸು
ರತ್ನದ ಕಂಬಿಯಂಥಾ ಜಗದಂಬಿ ಮೂಡಿ ಬಂದಿ
ಮೂಡಲ ಕಡಲ ಒಡಲ ಸೀಳಿ
ಕಣ್ಣಾಗ ಸುಖ ಉಕ್ಕಿ, ಹುಬ್ಬೇರಿಸಿ ನೀನು ನಕ್ಕಿ
ಹೊಕ್ಕಿತವ್ವಾನಿ ನಮೈಯಾಗ ಗಾಳೀ
ದುಃಖಿಲ್ಲಾ, ಸುಕ್ಕಿಲ್ಲಾ, ಕುಂದಿಲ್ಲಾ ಬಂದೆವ್ವಾ
ಗೌರವದಲೆ ಗೌರೀ ರೂಪಾ ತಾಳಿ
ಏನು ಮಂತ್ರಾ ಹಾಕಿದೆವ್ವಾ ನಮ್ಮ ಜೀವಕ್ಕ ನೀನು
ನಮ್ಮ ಜೀವಾ ಪ್ರಾಣ ನೀನ ಆದೀ
ಅಲಕ್ಕಂತ ಹಾರಿಕೊಂಡು ಹೊತ್ತಿಕೊಂಡ ಕೊಂಡದಾಗ
ಹಿಡಿದೇವವ್ವಾ ನಿನ್ನ ಸ್ವರ್ಗದ ಹಾದೀ
ನಮ್ಮ ಸಾವಿನ್ಯಾಗ ನಿನಗ ಬದುಕಾದ್ರ ಸಾಕು ನಮಗ
ಬಿದ್ದಿರ್ತೇವಿ ಹೊತ್ತುಕೊಂಡು ಗಗನಾ
ನಾವು ಬಿದ್ದರೇನಾತು ನೀನು ಎದ್ದಿ ಅದೇ ಸಾಕು
ನೋಡುತಿರಲಿ ನಿನ್ನ ನೀಲೀ ನಯನಾ
ತಾಯೀ ನಿನ್ನ ತೊಡಿ ಮ್ಯಾಲೆ ಜೋಗುಳಿಸಿದ ಹುಡೀ ಮ್ಯಾಲೆ
ಹಾಕಿರ್ತೇವಿ ಶಾಶ್ವತ ಶಯನಾ
ನಮ್ಮ ಗೋರಿ ದಿನ್ನಿ ಮ್ಯಾಲೆ ಎಂದಾರೆ ಒಂದ ದಿನಾ
ಎದ್ದು ಮೂಡಿತೊಂದು ಸಾದಾ ಹೂವು
ಕಸಾ ಕಡ್ಡಿ ತಲೀ ಮ್ಯಾಲೆ ತೂಗಾಡಿದರೂ ಸಾಕು
ತಿಳಿದೇವಿ ಪೂಜಿ ಅಂತ ನಾವು
ಮುದ್ದಿಟ್ರ ಅದನ ನೀವು, ಮರೆತ ಹೋದೀತು ಸಾವು
ಬಂದಿತಣ್ಣ ನಮಗ ಜೀವಾ ಮರಳಿ
ತಣ್ಣಗಾದ ಕಲ್ಲಿನೊಳಗೂ ಹುಟ್ಟೀತು ಸಣ್ಣ ಕಂಪಾ
ಮಾರೀ ಸವರೀಧಾಂಗ ನಮಗ ಹೊರಳಿ
ನಿಮ್ಮ ಉಸುರೀನುಸುರೀನೊಳಗೂ ಹೆಸರುಗೊಂಡು ಕರೆಧಾಂಗ
ನಿಮ್ಮ ಕರುಳೂ ಬಂದೀತು ಅರಳಿ
ಶಾಂತವಾಗಿ ಕಾಂತೀಯಿಂದ ರಾತ್ರೀ ಚಂದ್ರಾಮರಾಯ
ಪಹಾರೇ ಮಾಡುತಿರಲಿ ನಮ್ಮ ಮ್ಯಾಲ
ಬೆಳಕೀನ ಕೆಚ್ಚಲಾಗಿ ನಿಚ್ಚ ಮೂಡಲಾಗಿ ನಮಗ
ನಸುಕಿನ್ಯಾಕಿ ಕುಡಿಸತಿರಲಿ ಹಾಲ
ಮರಾಮರಾ ಮರಗತಿರಲಿ, ಮರಾ ಗಿಡಾ ಸೇರಿಕೊಂಡು
ಭರಾ ಭರಾ ಹರಿಯೋ ಗಾಳಿ ಕೂಡಾ
ಹಾರೋ ಹಕ್ಕಿ ಎರಗಿ ಸೋತು ನಮ್ಮ ಶಿಲುಬೀ ಮ್ಯಾಲ ಕೂತು
ಹೇಳತಿದ್ರ ಹೇಳಲೊಂದು ಹಾಡಾ
ಶಾಂತೀ ಸೋಬಾನೇ ಹೇಳೀ ಸಮಾಧಾನ ಮಾಡತಿದ್ರ
ಬ್ಯಾಡೋ ಗೆಣೆಯ ಅದನ್ನ ತಡವಬ್ಯಾಡಾ
ರವಿ ಸಾಕ್ಷಿಯಾಗಿ ನರೀಮದವಿ ಆಗೋ ಹೊತ್ತಿನೊಳಗ
ಮಳಿ ಉದರಲಿ ಅಕ್ಕಿಕಾಳ ಗತೀ
ಉಗೀ ಆಗಿ, ಮಂಜ ಆಗಿ ಮತ್ತ ಮ್ಯಾಲ ಏರಿ ಹೋಗಿ
ಸ್ವರ್ಗದಾಗ ಹೇಳಲಿ ನಮ್ಮ ಕಥಿ
ಅರ್ಧಾ ಆಟದಾಗ ಹೀಂಗ, ಕೈಬಿಟ್ಟು ಹೋದ ಹ್ಯಾಂಗ
ಆತ್ತರಳಲಿ ಗೆಳೆಯಾ ಯಾವನಾರೆ
ಸಂಜಿ ತಂಪು ಹೊತ್ತಿನ್ಯಾಗ ನಮ್ಮನ್ನ ನೆನಿಸಿಕೊಂಡು
ಬೇಡಿಕೊಳ್ಳಲಿ ನಮಗಾಗಿ ಬ್ಯಾರೆ
ನಮ್ಮ ನಾಡು, ನಮ್ಮ ಜನಾ, ನಮಗಾಗಿ ಬೇಡಿಕೊಳ್ಳಲಿ
ದೇವರೊಳಗ ಆಗೋ ಹಾಂಗ ಸೇರೆ
ಬೇಡಿಕೊಳ್ರ್ಯೊ ಬೇಡಿಕೊಳ್ರೀ ಸತ್ತಾವ್ರ್ನ ನೋಡಿಕೊಳ್ರೀ
ಗತಿ ಇಲ್ದ ಸತ್ತರೆಷ್ಟೋ ಜನಾ
ತಡೀಲಾರ್ದೆ ತಡಕೊಂಡು, ಬಾಯಿ ಬಿಗಿ ಹಿಡಕೊಂಡು
ಸತ್ತವರಂತ ನೀಗತಾರ ಪ್ರಾಣಾ
ಹಡದ ಹೊಟ್ಟೀ ಕಿಚ್ಚು ಹೊತ್ತಿ, ಬಾಯಿ ಬಾಯಿ ಬಡಕೋತಾರ
ಕಳಕೊಂಡು ಹೊಟ್ಟೀ ಸಂತಾನಾ
ರಂಡಿಮುಂಡಿ ಪರಾಧೀನಾ ಪರದೇಶಿ ಮಕ್ಕಳು ಹೀನಾ
ತುರಂಗದ ನರಕದಾಗ ದೀನಾ
ನಾನಾ ರೀತಿ ನಾನಾ ಜನಾ ಸಾಯ್ತಾರ ದಿನಾ ದಿನಾ
ನಿಮ್ಮ ಮುಕ್ತಿಗಾದರೂ ಮಾಡಿ ಧ್ಯಾನಾ
ಅಮಾಸಿ ಇರುಳು ಹೊತ್ತು, ಮಸಣದಾಗ ಯಾರಿಗೊತ್ತು
ಸತ್ತವರ್ದ ಸತ್ತವರ ಮ್ಯಾಲೆ ಗಸ್ತೀ
ಸ್ಮಶಾನಾ ಶಿವನ ಸ್ಥಾನಾ, ಗಹನಾ ಗಹನಾ ಅಲ್ಲಿ ಧ್ಯಾನಾ
ಕೋಟಿ ಕೋಟಿ ಭೋತ ಪ್ರೇತ ವಸ್ತೀ
ಏನಾರೇ ಧನೀ ಕೇಳಿ, ಏನಾರೇ ತಿಳೀಬ್ಯಾಡ್ರಿ
ದೇಶಭಕ್ತರದೆಲ್ಲ್ಯಾತೊ ಹನನಾ
ಅಲ್ಲಿ ಇರಬಹುದು ದೆವ್ವಗಾಳಿ, ಬರಬಹುದು ಭದ್ರಕಾಳಿ
ಮಳಿಗಾಳಿ, ಛಳಿಗಾಳಿ, ಝಣಣಾ
ದೇಶಭಕ್ತಿ ಗಾನಾ ಏಕತಾನದಾಗ,
ಗಗನದಾಗ ನಡೆದಿರತೈತಿ ತೋಂ ತೋಂ ತನನಾ
ನೆನಸ್ತಿರತೈತಿ ಜೀವಾ ಶಕ್ತಿ ಶಿವನಾ
ಕಟ್ಟತಿರತೈತಿ ನಮ್ಮ ಭಾವಾ ಕವನಾ
ಹೇಳ ಹೆಸರಿಲ್ಲದಾಗಿ ಹೋದೀತು ಒಂದ ದಿನಾ
ನಮ್ಮ ಹುಗಿದ ಮಣ್ಣಗುಡ್ಡಿ ಸ್ಥಳಾ
ಶಿಲುಬೀಯ ಕಲ್ಲ ಕುರುಹು ಅಲ್ಲೋ, ಇಲ್ಲೋ, ಎಲ್ಲೋ ಬಿದ್ದು
ಸಪಾಟು ಆದೀತೀ ನೆಲಾ
ಗುದ್ಲೀ್ಲೆ ಹಡ್ಡಿ ತೆಗೆದು, ಸಲಕೀಲೆ ಸರಿ ಮಾಡಿ
ನೇಗಿಲ ಹೊಡೆದು ನೋಡಿ ಬಿಡ್ರಿ ರಣಾ
ಮಣ್ಣು ಆಗಿ, ಸುಣ್ಣ ಆಗಿ, ಬೂದಿ ಆಗಿ, ಭಸ್ಮ ಆಗಿ
ಹೋಗೋದೈತಿ ಎಲ್ಲಾ ಒಂದಿನಾ
ನಮ್ಮ ಮಣ್ಣ ಕಸಾ ಕೂಡ, ಹಸಾ ಆಗಿ ಹುಲ್ಲ ಬೆಳೆದು
ಸಸಿ ಹಸಿ ಕಾಣಲಿ ತಾಯಿ ಕ್ಷಣಾ
ಯಾರು ನಮ್ಮ ಅರತರೇನು, ಯಾರು ನಮ್ಮ ಮರತರೇನು
ನಾವು ಮರ್ಯಾಕಿಲ್ಲ ನಮ್ಮ ದೇಶಾ
ಇದೇ ಈ ಗಾಳಿವೊಳಗ, ಮುಗಿಲ ತುಂಬ ಧೂಳಿವೊಳಗ
ದಾರೀ ಉದ್ದಾ ತೊಟ್ಟು ಬ್ಯಾರೆ ವೇಷಾ
ಕಿನ್ನರರ್ಹಾಂಗ ಕಿನ್ನರಿ ಮಿಡಿದು, ಗಂಧರ್ವರ ಗತ್ತು ಹಿಡಿದು
ಕಿವಿ ತುಂಬತಿರ್ತೇವಿ ನಿಮ್ಮ ಜೋಡಿ
ಗಂಧಾ ತೂರಿ, ಬೆಳಕ ತೂರಿ, ಬಣ್ಣಾ ತೂರಿ, ಹರಾಹೂರಿ
ಗುಜ್ಜಾರಿ ಲಾವಣಿ ಕಟ್ಟಿ ತೋಡಿ
ನಂಬಿಗೀಯ ಪಲ್ಲಾ ಮಾಡಿ, ಜೀವದ ನುಡಿ ಜೋಡಿ
ಹಾಡತಿರ್ತೇವಿ ಹಗಲು ರಾತ್ರಿ ಕೂಡಿ
ದೇವೀ ಅಂತ ನಾವು ನಿಮಗ ಎಂದನ ಅಂದೇವಿ
ಅದ ನಮ್ಮ ಕೊರಳಿಗಾತು ಹಗ್ಗಾ
ಫ಼ಿಲಿಪೀನಾ ನಾಡದೇವಿ, ನಮ್ಮ ಕೊನಿ ಶರಣು ಕೇಳ
ಅದ ನಮ್ಮ ಜೀವಾಳದ ಹಿಗ್ಗಾ
ಇದ್ದೆಲ್ಲಾ ಮನೀಮಾರು ಮುಡುಪು ನಮ್ಮ ಚೂರುಚಾರು
ಋಣಾನುಬಂಧ ಬ್ಯಾರೆ ಬಂಧಾ ಭಾವಾ
ನಂಬಿಗ್ಗೆ ಸಾವಿಲ್ಲದಲ್ಲಿ, ಗುಲಾಮರಿಗೆ ಬಾಳಿಲ್ಲದಲ್ಲಿ
ಕಾಟಕಾಯಿ ಕಟಕರಿಲ್ಲದ ಠಾವಾ
ದೇವರಿದ್ದ ರಾಜ್ಯೇದಾಗ, ದೇವರ ಸಾಮ್ರಾಜ್ಯೇದಾಗ
ಇಡತೇವಿ ನಾಳೆ ನಾವು ಜೀವಾ
ತಂದಿಗಳಿರಾ ಶರಣು ಅಂದ್ವಿ
ತಾಯಿಗಳಿರಾ ಶರಣು ಬಂದ್ವಿ
ಶರಣಣ್ಣಾ ಶರಣೊ ತಮ್ಮಾ ನಾವೂ
ನಮ್ಮ ಜೀವದ ತೊಳಿತೊಳಿ ನೀವೂ
ಮನೀ ಕಣ್ಣ ಮರೀಗಾದ್ರು
ಮಂದಿನ್ನ ಮರ್ತೇವ್ಹ್ಯಾಂಗ
ಹಳೇ ಪಳೇ ಗೆಣೇರಿಗೆ ಶರಣು
ದಣಿವಾರ್ಕಿ ಹೊತ್ತು ಬಂತು ಶರಣು
ಯಾರಣ್ಣ ಹೊಸಬ ನೀನು?
ನಿನಗೂನೂ ಶರಣು ನಾನು
ಪ್ರಾಣಿ ಜಾತಕ್ಕ ನಮ್ಮ ಕೊನೀ ಶರಣು
ನಮ್ಮ ಮುದ್ದೀನ ಮಣಿ ಬಂತು ಬಂತು
ನಮ್ಮ ಹಿಗ್ಗೀನ ಕುಣಿ ಬಂತು ಬಂತು
ಸಾಕು ದಣಿಸೀದ ಹಗಲಿನ ಸುದ್ದಿ
ಆಹಾ ಸಾವಂದ್ರ ಘನಾ ಘನಾ ನಿದ್ದಿ
ನಾಳೆ ಬೆಳಿಗ್ಗೆ ಐತಿ ಮಹ ಮರಣಾ
ಶರಣಂತಾವ ನಮ್ಮ ಪಂಚ ಹರಣಾ
ಹಸನುಳದಾವ ನಮ್ಮಂತಃಕರಣಾ
ದೇವ ದೇವನು ಮಾಡ್ಯಾನೊ ಕರುಣಾ
ನಾಳೆ ಹೊತ್ತ ಮೂಡ ಬಂದೈತಿ ಮರಣಾ