• Samvada
  • Videos
  • Categories
  • Events
  • About Us
  • Contact Us
Friday, March 24, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಸಂಘಕಾರ್ಯ ವಿಸ್ತಾರದ ದೃಢ ಸಂಕಲ್ಪವೇ ಡಾಕ್ಟರ್‌ಜೀಯವರಿಗೆ ಸ್ವಯಂಸೇವಕರು ಸಲ್ಲಿಸಬಹುದಾದ ನಮನ: ವಿ ನಾಗರಾಜ

Vishwa Samvada Kendra by Vishwa Samvada Kendra
March 22, 2015
in Others
256
1
‘After SWOT analysis of the then Hindu Society; Dr Hedgewar founded RSS’:  V Nagaraj at Bengaluru

V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru

504
SHARES
1.4k
VIEWS
Share on FacebookShare on Twitter

ಬೆಂಗಳೂರು 21 ಮಾರ್ಚ 2015: ಬೆಂಗಳೂರಿನ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ದಕ್ಷಿಣ ಭಾಗದ ಯುಗಾದಿ ಉತ್ಸವದಲ್ಲಿ  ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಮಾನ್ಯ ಸಂಘಚಾಲಕರಾದ ವಿ ನಾಗರಾಜರವರು ಬೌದ್ಧಿಕ ವರ್ಗವನ್ನು ನಡೆಸಿಕೊಟ್ಟರು.

V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru
V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru

ಮಾನ್ಯ ವಿ ನಾಗರಾಜರವರ ವಕ್ತವ್ಯದ ಸಾರಾಂಶ :

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎನ್ನುವ  ಗೀತೆಯನ್ನು ನಾವು ಕೇಳಿದ್ದೇವೆ. ಬಹಳ ವರ್ಷಗಳಿಂದ ನಮ್ಮ ಹೃದಯದಲ್ಲಿ ಧ್ವನಿಸಿರುವಂತಹ ಗೀತೆ ಇದು. ಆದರೆ ಪ್ರತಿವರ್ಷ ನಾವು ಇದನ್ನು ಕೇಳಿದರೂ ಇದು ಹಳೆಯದು ಎಂದು ನಮಗೆ ಅನಿಸುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಆ ಗೀತೆಯ ವಸ್ತು, ಯುಗಾದಿಯ ಹಬ್ಬ. ಯುಗಾದಿ ಒಂದು ಸಂಭ್ರಮದ ಹಬ್ಬ. ಎಲ್ಲ ಹಬ್ಬಗಳೂ ಸಡಗರ ಸಂಭ್ರದಿಂದಲೇ ಇರುವಂತದ್ದಾದರು, ಯುಗಾದಿ ಹಬ್ಬಕ್ಕೆ  ಪ್ರಕೃತಿಯಲ್ಲಿಯೂ ಸಡಗರ ಸಂಭ್ರಮ ಕಾಣುವುದರಿಂದ ಅದಕ್ಕೆ ಹೆಚ್ಚಿನ ವಿಶೇಷತೆ ಎಂದು ನಮಗೆ ಅನ್ನಿಸುತ್ತದೆ. ಶಿಶಿರ ಋತುವಿನ ಜಡತ್ವ ಮತ್ತು ಶೈತ್ಯವನ್ನು ಕಳೆದು ಉಲ್ಲಾಸವನ್ನು ತರುವ ವಸಂತ ಋತು ಆರಂಭವಾಗುವ ಚೈತ್ರ ಶುದ್ಧ ಪ್ರತಿಪದದ ಈ ದಿವಸವನ್ನು ಯುಗಾದಿಯಾಗಿ ನಾವು ಆಚರಣೆ ಮಾಡುತ್ತೇವೆ.

ಯುಗಾದಿಯ ಆಚರಣೆಗೆ ಖಗೋಲ ಶಾಸ್ತ್ರದ ಹಿನ್ನೆಲೆ ಕೂಡ ಇದೆ. ಎರಡು ಯುಗಾದಿಗಳು ಬರುತ್ತವೆ. ಎರಡು ರೀತಿಯ ಪದ್ಧತಿಗಳು ಆಚರಣೆಯಲ್ಲಿವೆ. ಒಂದು ಸೌರಮಾನ ಇನ್ನೊಂದು ಚಾಂದ್ರಮಾನ. ಚಂದ್ರ ಚೈತ್ರಮಾಸದಿಂದ ಹೊರಟು ಫಲ್ಗುಣ ಮಾಸದವರೆಗೆ ಹನ್ನೆರಡು ಮಾಸಗಳನ್ನು ಮುಗಿಸ ಪುನಃ ಚೈತ್ರ ಮಾಸಕ್ಕೆ ಕಾಲಿಟ್ಟಾಗ ನಮಗೆ ಒಂದು ವರ್ಷ. ಹಾಗೆಯೇ ಸೂರ್ಯನೂ ಸಹ ಮೇಷ ರಾಶಿಯಿಂದ ಪ್ರಾರಂಭಿಸಿ ಹನ್ನೆರಡು ರಾಶಿಗಳನ್ನು ಮುಟ್ಟಿ ಮೀನರಾಶಿಯನ್ನು ದಾಟಿ ಮತ್ತೆ ಅವನು ಮೇಷರಾಶಿಗೆ ಬಂದಾಗ ಒಂದು ವರ್ಷ ಮುಗಿಯಿತೆಂದು ಮತ್ತೆ ಯುಗಾದಿ. ಈ ಎರಡು-ಚಾಂದ್ರಮಾ ಮತ್ತು ಸೌರಮಾನದ ಯುಗಾದಿಗಳು ಚೈತ್ರಮಾಸದಲ್ಲೆ   ಬರುವಂತಹದ್ದು ಮತ್ತು ಇದಕ್ಕೆ ಖಗೋಳ ಶಾಸ್ತ್ರ ವೈಜ್ಞಾನಿಕ ಹಿನ್ನೆಲೆ ಇರುವಂತಹದ್ದು ಒಂದು ಹೆಮ್ಮೆಯ ಸಂಗತಿ. ಈ ರೀತಿಯ ಹಿನ್ನೆಲೆಯಲ್ಲಿಯೇ ಯುಗಾದಿಯನ್ನು ಆಚರಿಸುವುದು.  ಯಾವುದೋ ಅಕಸ್ಮಾತ್ ಆಗಿ ಒಂದು ತಿಂಗಳನ್ನು ಒಂದು ದಿನಾಂಕವನ್ನು ನಿಶ್ಚಯ ಮಾಡಿ ಅದು ವರ್ಷದ ಆದಿ ಯುಗಾದಿ ಎಂದು ಆಚರಣೆ ಮಾಡುವ ಪದ್ಧತಿ ಹಿಂದು ಪರಂಪರೆಯಲ್ಲಿಲ್ಲ.

ಈ ಸಂಭ್ರಮದ ಉತ್ಸವಕ್ಕೆ ಇನ್ನಷ್ಟು ಸಂಭ್ರಮ ಕಟ್ಟುವುದೊಂದಿದೆ. ಅದೆಂದರೆ ನಮ್ಮ ಯುಗಾದಿ ಉತ್ಸವದ ಆಚರಣೆಯಲ್ಲಿ ಇದು ಹೊಸವರ್ಷ ಎಂದು ಕುಣಿದು ಕುಪ್ಪಳಿಸಿ ಮೈಮರೆತಿರುವ ಪದ್ಧತಿ ಇಲ್ಲ. ಸಡಗರವೂ ಇದೆ, ಸೊಗಸೂ ಇದೆ ಅದರ ಜೊತೆಗೆ ಗಂಭೀರ ಚಿಂತನೆಯೂ ಇದೆ. ಯುಗಾದಿ ಹಬ್ಬದಲ್ಲಿ ನಾವು ಬೇವು ಬೆಲ್ಲವನ್ನು ಸೇವಿಸುತ್ತೇವೆ. ಮನುಷ್ಯನ ಜೀವನದಲ್ಲಿ ಏಳುಬೀಳುಗಳು ಸದಾಕಾಲ ಇರುವಂಥದ್ದೇ. ಸುಖ ದುಃಖಗಳು ಸದಾಕಾಲ ಬರತಕ್ಕಂತದ್ದೇ. ಹೀಗೆ ಬರುವ ಏಳು ಬೀಳುಗಳನ್ನು ಸುಖ ದುಃಖಗಳನ್ನು ಸಮದೃಷ್ಟಿಯಿಂದ ಕಾಣಬೇಕು. ಎಲ್ಲವನ್ನು ಸ್ವೀಕರಿಸುವ ಸ್ವಭಾವವನ್ನು ಬೆಳಸಿಕೊಳ್ಳುವುದು ಜೀವನವನ್ನು ಗಂಭೀರವಾಗಿ ಕಾಣುವುದು. ಸೊಗಸಿನ ಜೊತೆಗೆ ಜೀವನವನ್ನು ಗಂಭೀರವಾಗಿ ಕಾಣುವ ಸಂಕೇತವಾಗಿ ನಾವು ಬೇವುಬೆಲ್ಲವನ್ನು ಸೇವಿಸುತ್ತೇವೆ. ಸಮಾಜ ಜೀವನ ರಾಷ್ಟ್ರಜೀವನವೂ ಹೀಗೆಯೇ. ಏಳುಬೀಳುಗಳ ಪುನರಾವರ್ತನೆ ನಿರಂತರವಾಗಿ ನಡೆಯುವಂತಹುದೇ. ನಮ್ಮ ರಾಷ್ಟ್ರಜೀವನದಲ್ಲೂ ಏಳು ಬೀಳುಗಳನ್ನು ನಾವು ಅನೇಕ ಬಾರಿ ಕಂಡಿದ್ದೇವೆ. ಆದರೆ ಆ ಏಳುಬೀಳುಗಳ ಜೊತೆಗೆ ಪ್ರತಿಬಾರಿಯೂ ಕೂಡ ಈ ರೀತಿಯ ಯುಗಾದಿಯನ್ನೂ ಸಹ ನಮ್ಮ ರಾಷ್ಟ್ರದ ಜೀವನದಲ್ಲಿ ನಾವು ನೋಡುತ್ತೇವೆ. ಹಿಂದೂ ಸಮಾಜದ ಅಂತಃಸತ್ವ ಆ ಥರಹದ್ದು. ನಮ್ಮ ಮೇಲೆ ಆದ ಎಷ್ಟೋ ದಾಳಿಗಳು, ವಿದೇಶೀ ಆಕ್ರಮಣಗಳು, ಸಂಸ್ಕೃತಿಯ ಮೇಲಾದಂತಹ ದಾಳಿ ಈ ಎಲ್ಲ ಸಂಗತಿಗಳಿದ್ದರೂ ಕೂಡ ಮತ್ತೆ ನಮ್ಮ ಚೈತನ್ಯ ಪುನರಾವರ್ತನೆಯಾಗುವಂತಹದ್ದು. ಅಷ್ಟೇ ಅಲ್ಲ ಸಹಸ್ರಾರು ವರ್ಷಗಳಿಂದ ಆ ಚೈತನ್ಯ ಆ ಸಂಸ್ಕೃತಿ ಬೆಳದುಕೊಂಡು ಬಂದಿದ್ದನ್ನು ನಾವು ನೋಡುತ್ತೇವೆ. ಅದಕ್ಕೆ ಸಮಾಜದಲ್ಲಿರುವ ಅಂತಃಶಕ್ತಿಯೇ ಕಾರಣ. ಅಂತಃಸತ್ವ ತನ್ನ ಏಳುಬೀಳಿನ ಸಂದರ್ಭದಲ್ಲಿ ಸಮಾಜಕ್ಕೆ ಅಗತ್ಯವಾದ ಪರಿವರ್ತನೆಯನ್ನು ತರುವಂತಹ, ಅದಕ್ಕೆ ಬೇಕಾಗಿರುವ ಸತ್ವವನ್ನು ಕೊಡುತ್ತ, ಅದನ್ನು ಯಾವುದಾದರೂ ಓರ್ವ ಮಹಾಪುರುಷರು, ಆಯಾ ಕಾಲದ ಮಹಾನ್ ವ್ಯಕ್ತಿಗಳೋ, ಒಬ್ಬ ಮಹಾನ್ ಮಹಿಳಿಯ ಮುಖಾಂತರವೋ ಆ ಪರಿವರ್ತನೆಯನ್ನು ತರುತ್ತದೆ. ಇಡೀ ಸಮಾಜ ಆ ಯುಗಾನುಕೂಲ ಪರಿವರ್ತನೆಯಾಗುತ್ತದೆ. ಶಾಶ್ವತ ಸತ್ಯಗಳು ಅವೇ, ಚಿರಂತನವಾಗಿರುವ ಸಂಸ್ಕೃತಿ ಅದೇ, ಆದರೆ ಆ ಕಾಲಕ್ಕೆ ಬೇಕಾದ ಪರಿಭಾಷೆಯಲ್ಲಿ, ಆಕಾಲಕ್ಕೆ ಬೇಕಾದ ವಸ್ತು ವಿಧಾನದಲ್ಲಿ ಪರಿವರ್ತನೆಯನ್ನು ತರುವಂತಹ ಹೊಸರೂಪುರೇಷೆಗಳನ್ನು ಕೊಡಬಲ್ಲಂತಹ ಅಂತಃಸತ್ವ ನಮ್ಮ ಸಮಾಜಕ್ಕಿದೆ. ಆ ರೀತಿಯ ಅನೇಕ ಮಹಾಪುರುಷರನ್ನು ಹಿಂದೂ ಸಮಾಜ ಸೃಷ್ಟಿಸಿದೆ. ಭಗವಾನ ಬುದ್ಧನಿಂದ, ಶಂಕರರಿಂದ, ಬಸವೇಶ್ವರರಿಂದ ಅಥವಾ ಶ್ರೇಷ್ಠ ವೀರರಾದ ರಾಣಾ ಪ್ರತಾಪ, ಶಿವಾಜಿ ಹಕ್ಕಬುಕ್ಕರಿಂದ, ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟ ಮಾಡಿದ ವೀರರಿಂದ ಸಮಾಜವನ್ನು ಪರಿವರ್ತನೆ ಮಾಡಿದ ಸಮಾಜ ಸುಧಾರಕರನ್ನು ಹೀಗೆ ಅಗಣಿತ ಸಂಖ್ಯೆಯಲ್ಲಿ ಮಹಾನ್ ವ್ಯಕ್ತಿಗಳನ್ನು ನಾವು ಕಾಣುತ್ತೇವೆ. ಇವರೆಲ್ಲರೂ ಸಮಾಜದ ಅಂತಃಸತ್ವದಿಂದ ನಿರ್ಮಾಣಗೊಂಡಂತವರೇ ಆಗಿದ್ದಾರೆ. ಹಾಗಾಗಿ ಪ್ರತಿಬಾರಿಯೂ ಕೂಡ ಈ ರೀತಿ ಉತ್ಕರ್ಷಕ್ಕೆ ಬರುವುದು ಮುಂದೆ ಹೋಗುವುದು ನಮ್ಮ ಸಮಾಜದ ಲಕ್ಷಣವಾಗಿದೆ.

ಅಂತಹ ಓರ್ವ ಮಹಾನ್ ಪುರುಷನ ಜನ್ಮದಿನ ಕೂಡ ಯುಗಾದಿಯ ದಿವಸವೇ ಆಗಿದೆ. ಸಂಘವನ್ನು ಸ್ಥಾಪನೆ ಮಾಡಿದ ಪರಮ ಪೂಜನೀಯ ಡಾಕ್ಟರ್ ಕೇಶವ ಬಲಿರಾಮ ಹೆಡಗೇವಾರರು ಹುಟ್ಟಿದ್ದು ಯುಗಾದಿಯ ದಿವಸವೇ. ಅದು ಸ್ವಯಂಸೇವಕರಿಗೆ ಇನ್ನೂ ಹೆಚ್ಚಿನ ಸಂಭ್ರಮವನ್ನು ಕೊಡುವಂತಹುದು ಅಷ್ಟೇ ಅಲ್ಲ ಇಡೀ ಹಿಂದೂ ಸಮಾಜದ ಪರಿವರ್ತನೆಗೆ ಯಾರು ಮುಂದೆ ಬಂದರೋ ಅಂತಹ ವ್ಯಕ್ತಿಯ ಜನ್ಮದಿನವನ್ನು ಇಂದು ಇಡೀ ಹಿಂದೂ ಸಮಾಜ ಆಚರಣೆ ಮಾಡುತ್ತಿದೆ.  ಪರಮ ಪೂಜನೀಯ ಡಾಕ್ಟರ್‌ಜೀ ೧೯೮೯ ನೇ ಇಸವಿಯ ಯುಗಾದಿಯ ದಿವಸ ಜನ್ಮ ತಾಳಿದರು. ಅವರಿಗಿಟ್ಟ ಹೆಸರು ಕೇಶವ. ಕೇಶವ ಬೆಳೆದಿದ್ದು ಜೀವನ ಪೂರ್ತಿ ಕಡು ಬಡತನದಲ್ಲೇ. ತನ್ನ ಹನ್ನೆರಡನೇ ವಯಸ್ಸಿನಲ್ಲೇ ತಂದೆತಾಯಿಗಳನ್ನು ಕಳದುಕೊಂಡರು. ಆಮೇಲೆ ಅಹನಿ ಅಹನಿ ಕಷ್ಟದಲ್ಲೇ ಬೆಳೆದರು. ಆದರೆ ಈ ಕಡುಬಡತನವಾಗಲೀ ತಂದೆ ತಾಯಿಗಳ ಅಗಲುವಿಕೆಯಾಗಲೀ ಅವರ ಅದ್ಭುತ ಚೇತನವನ್ನು ಕುಗ್ಗಿಸಲಿಲ್ಲ. ಇದನ್ನೇ ನಾವು ಅವರ ಜೀವನದುದ್ದಕ್ಕೂ ಕಾಣುಬಹುದು. ಆ ಅದ್ಭುತ ಚೇತನದಿಂದಲೇ ಅವರು ಕೆಲಸ ಮಾಡಿದರು. ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವ ಕನ್ನಡದ ಒಂದು ನಾಣ್ನುಡಿಯನ್ನು ನಾವು ಕೇಳಿರುತ್ತೇವೆ. ಹಾಗೆಯೇ ಡಾಕ್ಟರ್‌ಜೀಯವರ ಸಮಾಜಕ್ಕೋಸ್ಕರ ಏನು ಮಾಡಿದರು ಎನ್ನುವ ಸಂಗತಿಯನ್ನು ಅವರ ಬಾಲ್ಯದ ಜೀವನದಿಂದಲೇ ನಾವು ಕಾಣಬಹುದು. ಅವರ ಜೀವನದ ಅನೇಕ ಇಂತಹ ಘಟನೆಗಳನ್ನು ನಾವು ಕೇಳಿರಬಹುದು. ಉಲ್ಲೇಖನಕ್ಕೋಸ್ಕರ ಒಂದು ಘಟನೆಯನ್ನು ನೋಡುವುದಾದರೆ –  ೧೮೯೭ನೇ ಇಸವಿನಲ್ಲಿ ಎಂಟು ವರ್ಷದ ಬಾಲಕನಾಗಿದ್ದಾಗ ಆವತ್ತು ಬ್ರಿಟಿಷ್ ರಾಣಿಯಾಗಿದ್ದ  ವಿಕ್ಟೋರಿಯಾ ರಾಣಿ ಪಟ್ಟಕ್ಕೆ ಬಂದು ಅರವತ್ತು ವರ್ಷ ಆಯಿತೆಂದು ಆ ಸಂಭ್ರಮವನ್ನು ಎಲ್ಲೆಲ್ಲಿ ಬ್ರಿಟಿಷ್ ಸಾಮ್ರಾಜ್ಯವಿತ್ತೋ ಎಲ್ಲಕಡೆ ಆಚರಿಸಲಾಯಿತು. ನಾಗಪುರದಲ್ಲೂ ಅದರ ಆಚರಣೆ ನಡೆಯಿತು. ನಾಗಪುರದ ಸಿರಿವಂತರು, ಬುದ್ಧಿಜೀವಿಗಳು ಅದರ ಆಚರಣೆಯಲ್ಲಿ ಪಾಲ್ಗೊಂಡರು. ಎಲ್ಲ  ಶಾಲೆ ಕಾಲೇಜುಗಳಲ್ಲಿ ಅದರ ಆಚರಣೆ ಮಾಡಿ ಮಕ್ಕಳಿಗೆ ಮಿಠಾಯಿ ಕೊಡಲಾಯಿತು. ಎಂಟು ವರ್ಷದ ಬಾಲಕ ಕೇಶವನಿಗೂ ಕೂಡ ಮಿಠಾಯಿ ಸಿಕ್ಕಿತು. ಆದರೆ ಕೇಶವ ಮಿಠಾಯಿಯನ್ನು ತಿನ್ನಲಿಲ್ಲ, ಅದನ್ನು ಚರಂಡಿಗೆ ಎಸೆದ.  ಈ ಘಟನೆ ನಮಗೆ ಗೊತ್ತಿರುವುದೇ. ನೀನು ಯಾಕೆ ಮಿಠಾಯಿಯನ್ನು ಎಸೆದೆ ಎಂದು ಕೇಳಿದಾಗ ಕೇಶವನ ಉತ್ತರ ಹೀಗಿತ್ತು- ಯಾರು ನಮ್ಮನ್ನು ಗುಲಾಮರನ್ನಾಗಿಸದ್ದಾಳೋ ಆ ವಿದೇಶಿ ರಾಣಿಯ ಉತ್ಸವದ ಮಿಠಾಯಿಯನ್ನು ತಿನ್ನುವುದು ಪಾಪ ಅದು ಅವಮಾನ ಅಂತ ಹೇಳಿದ, ಎಂಟು ವರ್ಷದ ಬಾಲಕ! ಸುತ್ತಮುತ್ತಲು ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಭಾವನೆಗಳು ಮಾತುಕತೆಗಳು ಅವನ ಮೇಲೆ ಪ್ರಭಾವ ಬೀರಿರಬಹುದು. ಆದರೆ ಎಂಟು ವರ್ಷದ ಈ ಬಾಲಕನ ಮನದಲ್ಲಿ ಯಾವ ಅಭಿಮಾನ ಬೆಳೆದಿತ್ತು, ಸಮಾಜಕ್ಕೋಸ್ಕರ, ದೇಶಕ್ಕೋಸ್ಕರ ಕೆಲಸ ಮಾಡಬೇಕೆಂಬ ಭಾವನೆ ಯಾವ ಸ್ವರೂಪದಲ್ಲಿತ್ತೋ ಆ ಎಂಟು ವರ್ಷದ ಬಾಲಕನ ಮನಸ್ಸಿನಲ್ಲಿ ಎಂದು ಹೇಳುವುದು ಕಷ್ಟ. ಆದರೂ ಸಹ ಆತನ ಮನಸ್ಸಿನಲ್ಲಿ ಮೂಡಿದ ಭಾವನೆ ಆ ಮಿಠಾಯಿಯನ್ನು ಆಚೆ ಎಸೆಯುವಂತೆ ಮಾಡಿತು. ಈ ದೇಶಾಭಿಮಾನ, ಸಮಾಜೋನ್ಮುಖಿಯಾದ ಸ್ವಭಾವವನ್ನು ಡಾಕ್ಟರ್‌ಜೀಯವರ ಜೀವನದುದ್ದಕ್ಕೂ ನಾವು ನೋಡುತ್ತೇವೆ.

ಕೇಶವ ಬೆಳೆದು ಮೆಟ್ರಿಕ್ ಪರೀಕ್ಷೆ ಮುಗಿದ ನಂತರ ವೈದ್ಯಕೀಯ ಪದವಿಯ ಓದಿಗಾಗಿ ಕಲಕತ್ತೆಗೆ ಹೋಗುತ್ತಾರೆ. ಆವತ್ತಿನ ದಿವಸದಲ್ಲಿ ಮುಂಬಯಿಯಲ್ಲೂ ಸುಪ್ರಸಿದ್ಧ ವೈದ್ಯಕೀಯ ಕಾಲೇಜು ಇತ್ತು, ಪೂನಾದಲ್ಲೂ ಇತ್ತು. ಕೇಶವನ ಮಾತೃಭಾಷೆಯಾಗಿದ್ದು ಮರಾಠಿ, ತನಗೆ ಗೊತ್ತಿದ್ದ ಪ್ರಾಂತ, ಪ್ರದೇಶ, ತಿಂಡಿ ಉಡುಗೆ ಎಲ್ಲವೂ ಇದ್ದ ಮುಂಬಯಿಯನ್ನಾಗಲೀ ಪೂನಾವನ್ನಾಗಲೀ ಆಸಿಕೊಳ್ಳಲಿಲ್ಲ. ಯಾಕೆ ಎಂದರೆ ಆ ಕಾಲದಲ್ಲಿ ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ ಕ್ರಾಂತಿಕಾರಿಗಳ ಸಂಘಟನೆ ಅನುಶೀಲನ ಸಮೀತಿ ಇದ್ದದ್ದು ಕಲಕತ್ತೆಯಲ್ಲಿ. ವಿವೇಕಾನಂದರ ಪಟ್ಟಶಿಷ್ಯೆ ಸೋದರಿ ನಿವೇದಿತಾ, ವಿವೇಕಾನಂದರ ತಮ್ಮ ಭೂಪೇಂದ್ರನಾಥ ದತ್ತ ಅರವಿಂದ ಘೋಷರ ತಮ್ಮ ಬಾರಿಂದರ್ ಘೋಷ್ ಪ್ರಾರಂಭ ಮಾಡಿದ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮೀತಿ ಅತ್ಯಂತ ಸಕ್ರಿಯವಾಗಿ ದೇಶದ ಎಲ್ಲ ಕಡೆಗಳಿಂದ ತರುಣರನ್ನು ಆಕರ್ಷಣೆ ಮಾಡುತ್ತಿದ್ದು ಅಲ್ಲಿ. ಆ ಕಾರಣಕ್ಕಾಗಿಯೇ ಕೇಶವ ಅಲ್ಲಿಗೆ ಹೋಗಿದ್ದು. ವೈದ್ಯಕೀಯ ಓದಿನ ಜೊತೆಗೆ ಕ್ರಾಂತಿಕಾರಿ ಸಂಘಟಯನ್ನು ಸೇರಿ ಕೆಲಸ ಮಾಡುವುದು ಮೊದಲನೇ ಆದ್ಯತೆ ನಂತರದ ಆದ್ಯತೆ ವಿದ್ಯಾಭ್ಯಾಸ. ವೈದ್ಯಕೀಯ ಪರೀಕ್ಷೆಯನ್ನು ಪಾಸು ಮಾಡಿದರು. ಜೊತೆಗೆ ಕ್ರಾಂತಿಕಾರಿ ಸಂಘಟನೆಯಲ್ಲಿ ಅನೇಕ ರೀತಿಯ ಕೆಲಸಗಳನ್ನು ಮಾಡಿದರು. ಡಾಕ್ಟರ್‌ಜೀಯವರ ಕ್ರಾಂತಿಕಾರಿ ಜೀವನ ನಮಗೆ ಹೆಚಾಗಿ ಗೊತ್ತಾಗುವಂಥದ್ದಲ್ಲ. ದೆಹಲಿಯಲ್ಲಿರುವ ನ್ಯಾಶನಲ್ ಆರ್ಕೈವ್‌ಸನಲ್ಲಿ ಆವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರೆ most dangerous people to be watched ಗಮನಿಸಲೇ ಬೇಕಾಗಿರುವ ಭಯಂಕರ ಅಪಾಯಕಾರಿ ವ್ಯಕ್ತಿಗಳು ಯಾರು ಎನ್ನುವ ಪಟ್ಟಿಯಲ್ಲಿ ಡಾಕ್ಟರ್‌ಜೀ ಹೆಸರಿರುತ್ತಿತ್ತು. ಆ ರೀತಿ ಕ್ರಾಂತಿಕಾರಿ ಸಂಘಟನೆಯಲ್ಲಿ ಕೆಲಸ ಮಾಡುತ್ತಲೇ ವೈದ್ಯಕೀಯ ಪದವಿಯನ್ನೂ ಪಡೆದುಕೊಂಡರು. ಅಂದರೆ ಅವರ ಜೀವನದಲ್ಲಿ ದೇಶೋನ್ಮುಖಿಯಾಗಿ ಕೆಲಸ ಮಾಡಬೇಕೆಂದು ನಿಶ್ಚಯ ಮಾಡಿದರಲ್ಲ ಅದಕ್ಕಾಗಿ ತಮ್ಮ ಪ್ರಾಂತದಲ್ಲೇ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದರೂ ಬೇರೆಕಡೆಗೆ ಹೋದರು. ಅಲ್ಲಿಂದ ವಾಪಸ್ಸು ನಾಗಪುರಕ್ಕೆ ಬಂದಾಗ ಒಬ್ಬ ವೈದ್ಯನಾಗಿ ಅವರು ಕೆಲಸ ಮಾಡಬಹುದಾಗಿತ್ತು, ವೃತ್ತಿಯನ್ನು ಪ್ರಾರಂಭ ಮಾಡಬಹುದಾಗಿತ್ತು, ಸರ್ಕಾರದ ಕೆಲಸಕ್ಕೆ ಸೇರಬಹುದಾಗಿತ್ತು. ಆದರೆ ಅವರ ಜೀವನದ ಉದ್ದಕ್ಕೂ ಇದ್ದ ಸಂಗತಿ ದೇಶಾಭಿಮಾನ ಮತ್ತು ಸಮಾಜೋನ್ಮುಖಿ ಕೆಲಸ ಆ ಕಾರಣಕ್ಕೋಸ್ಕರ ಅವರು ಅಂದಿನ ಕಾಂಗ್ರೆಸ್ ಸಂಸ್ಥೆಯನ್ನು ಸೇರಿದರು. ಬಹಳ ಬೇಗ ಅತ್ಯಂತ ಪ್ರಭಾವಿ ಕಾರ್ಯಕರ್ತರಾಗಿ ಬೆಳೆದರು. ಆವತ್ತಿನ ಹೊತ್ತಿಗೆ ಡಾಕ್ಟರ್‌ಜೀ  ಅಖಿಲ ಭಾರತ ಸ್ತರದ  ಕಾರ್ಯಕರ್ತನಾಗಿ ಕಾಂಗ್ರೆಸ್ಸಿನ ಹೋರಾಟದಲ್ಲಿ ಭಾಗವಹಿಸಿದರು. ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿ ಒಂಭತ್ತು ತಿಂಗಳ ಕಠಿಣ ಶಿಕ್ಷೆಗೆ ಗುರಿಯಾಗಿ ಜೈಲಿನಿಂದ ವಾಪಸ್ಸು ಬಂದಾಗ ಅವರನ್ನು ಸ್ವಾಗತ ಮಾಡಲು ನಾಗಪುರದಲ್ಲಿ ನಡೆದ ಸಭೆಯಲ್ಲಿ ಇದ್ದವರು ಚಕ್ರವರ್ತಿ ರಾಜಗೋಪಾಲಾಚಾರಿ, ಪಂಡಿತ ಜವಾಹರಲಾಲ್ ತಂದೆ ಮೋತಿಲಾಲ್‌ಲ ನೆಹರು, ವಲ್ಲಭ್ ಭಾಯ್ ಪಟೇಲ್ ಅಣ್ಣ ವಿಟ್ಠಲ್ ಭಾಯ್ ಪಟೇಲ್, ಸುಪ್ರಸಿದ್ಧ ಕಾಂಗ್ರೆಸ್ ಕಾರ್ಯಕರ್ತ ಡಾ ಅನ್ಸಾರಿ ಇವರೆಲ್ಲರೂ ಕೂಡ ವೇದಿಕೆಯಲ್ಲಿದ್ದರು. ಡಾಕ್ಟರ್‌ಜೀಯವರು ಅಖಿಲ ಭಾರತ ಮಟ್ಟದ ನಾಯಕನಾಗಿ ಕೆಲಸ ಮಾಡಿದರು. ಈ ಎಲ್ಲ ಸಂದರ್ಭದಲ್ಲೂ ಅವರ ಅಣ್ಣ  ತೀರಿಕೊಂಡಾಗ ಮನೆಯಲ್ಲಿ ಅವರು ಅವರ ಅತ್ತಿಗೆಯ ಜೊತೆಗಿದ್ದಾಗ ಒಪ್ಪತ್ತಿನ ಊಟಕ್ಕೂ  ಕಷ್ಟವಿದ್ದ ಕಡುಬಡತನದಲ್ಲೂ ತಮ್ಮ ಧ್ಯೇಯ ಜೀವನವನ್ನಾಗಲೀ ಸಮಾಜಕ್ಕೋಸ್ಕರ ಕೆಲಸ ಮಾಡುವುದನ್ನಾಗಲೀ ಎಂದೂ ನಿಲ್ಲಿಸಿದಂತವರಲ್ಲ.

ಡಾಕ್ಟರ್‌ಜೀಯವರ ಜೀವನದಲ್ಲಿ ತಾವು ತೊಡಗಿಸಿಕೊಂಡ ಈ ಸಮಾಜೋನ್ಮುಖಿ ಕೆಲಸಕ್ಕೋಸ್ಕರ ತಾವು ಏನು ನಿಶ್ಚಯ ಮಾಡಿದರೋ ಅದನ್ನು ಸಾಧಿಸಿವುದಕ್ಕೆ ಅವರು ತೊಡಗಿಸಿಕೊಂಡ ಮೂರನೇ ಘಟ್ಟ ಕೂಡ ಬರುತ್ತದೆ. ಅದೇನೆಂದರೆ ಇಡೀ ದೇಶಕ್ಕೆ ನಾಯಕನಾಗಬಲ್ಲ ಅವಕಾಶವಿದ್ದ ಸಂದರ್ಭದಲ್ಲಿ ಅವರಿಗಿದ್ದ ಕಾಂಗ್ರೆಸ್ಸಿನ ಜವಾಬ್ದಾರಿಯನ್ನೆಲ್ಲ ಬಿಟ್ಟು ೧೯೨೫ರಲ್ಲಿ ಸಂಘದ ಶಾಖೆಯನ್ನು ಪ್ರಾರಂಭ ಮಾಡಿದಂಥದ್ದು. ಬಹುಶಃ ಕಾಂಗ್ರೆಸ್ಸಿನಲ್ಲಿದ್ದಿದ್ದರೆ ಆ ಸಂಸ್ಥೆಯಲ್ಲಿ ಇನ್ನೂ ಎತ್ತರಕ್ಕೆ ಹೋಗಿರುತ್ತಿದ್ದರೇನೋ? ಅದೆಲ್ಲವನ್ನೂ ಪಕ್ಕಕ್ಕಿಟ್ಟು ಹತ್ತು ಹನ್ನೆರಡು ಜನ ಬಾಲಕರನ್ನು ಸೇರಿಸಿ ಸಂಘದ ಶಾಖೆಯಲ್ಲಿ ಆಟ ಆಡುತ್ತಿದ್ದರು ಎಂದು ನಾವು ಅವರ ಜೀವನ ಕಥೆಯಲ್ಲಿ ಓದುತ್ತೇವೆ. ಅನೇಕರು ಅಂದುಕೊಂಡರು ಇಷ್ಟು ದೊಡ್ಡ ಸ್ತರದಲ್ಲಿದ್ದ ವ್ಯಕ್ತಿ ಈಗೆಕೆ ಕಬಡ್ಡಿ ಆಡುತ್ತಿದ್ದಾರೆ, ಬಹುಶಃ ಡಾ. ಹೆಡಗೇವಾರ್, ಹೆಡ್‌ಗವಾರ್ ಆಗಿಬಿಟ್ಟಿದ್ದಾರೋ ಏನೋ? ಅನ್ನುವಷ್ಟರ ಮಟ್ಟಿಗೆ ಅವಹೇಳನ ಲೇವಡಿ ಮಾಡುವಷ್ಟರ ಮಟ್ಟಿಗೆ ಆಗಿಬಿಟ್ಟಿತ್ತು. ಆದರೂ ಡಾಕ್ಟರ್‌ಜೀ ವಿಚಲಿತರಾಗಲಿಲ್ಲ. ಸಂಘದ ಕಾರ್ಯವನ್ನು ಪ್ರಾರಂಭ ಮಾಡಿದರು.

ಸಂಘದ ಕಾರ್ಯವನ್ನು ಪ್ರಾರಂಭ ಮಾಡಬೇಕಾದರೆ ಅವರ ಮನಸ್ಸಿನಲ್ಲಿ ಬಂದಂತಹ ಸಂಗತಿಗಳು ಬಹಳ ಮುಖ್ಯವಾದವು. ಅನೇಕ ವರ್ಷಗಳ ಕಾಲ ಡಾಕ್ಟರ್‌ಜೀಯವರು ಸಂಘದ ಕಾರ್ಯದ ಬಗ್ಗೆ ಚಿಂತನೆಯನ್ನು ಮಾಡಿದ್ದರು. ಕ್ರಾಂತಿಕಾರಿಯಾಗಿ ಕೆಲಸ ಮಾಡಿದ ಅನುಭವ ಅವರಿಗಿತ್ತು. ಇಡೀ ದೇಶದಲ್ಲಿ ಕ್ರಾಂತಿಕಾರಿ ಕೆಲಸಕ್ಕೆ ಬರುತ್ತಿದ್ದವರು ಹಿಡಿಯಷ್ಟು ಜನ. ಅಂತಹ ಕ್ರಾಂತಿಕಾರಿ ಸಂಘಟನೆಗಳಲ್ಲೂ ವಿಶ್ವಾಸ ದ್ರೋಹ ಮಾಡಿದವರೆಷ್ಟೋ, ಎಲ್ಲ ಕ್ರಾಂತಿಕಾರಿಗಳೂ ಸಿಕ್ಕಿಹಾಕಿಕೊಂಡಿದ್ದು ವಿಶ್ವಾಸ ದ್ರೋಹದಿಂದಲೇನೇ. ಕಾಂಗ್ರೆಸ್ಸಿನ ಕಾರ್ಯಕರ್ತರಾಗಿ ಕೆಲಸ ಮಾಡಿದ ಸಂದರ್ಭದಲ್ಲೂ ಕೂಡ ಸಮಾಜದ ಒಳಗೆ, ಸಂಘಟನೆ ಒಳಗೆ ಇದ್ದಂತಹ ಸ್ವಾರ್ಥ ಅಧಿಕಾರ ಲಾಲಸೆ, ಈ ಸಂಗತಿಗಳು ಅವರಿಗೆ ಕಂಡಿದ್ದವು. ಅವರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಎಂದೂ ಕೂಡ ಬಾಹ್ಯ ಸಂಗತಿಗಳನ್ನು ಕಾರಣ ಮಾಡಲಿಲ್ಲ.

ನಮ್ಮ ದೇಶದ ಅಧಃಪತನಕ್ಕಾಗಲೀ ಹಿಂದೂ ಸಮಾಜ ಕೆಳಗೆ ಬಿಳುವುದಕ್ಕಾಗಲೀ ಕಾರಣ ಯಾರೋ ಹೊರಗಿನಿಂದ ಬಂದ ಆಕ್ರಮಣಕಾರರು, ಬೇರೆಯವರು ಅಲ್ಲ. ಆಕ್ರಮಣಕಾರರಿಗೆ ತಮ್ಮ ಸಾಧನೆ ಮಾಡಲು ಸಾಧ್ಯವಾದದ್ದು ಯಾಕೆ? ಅದು ನಮ್ಮ ಸಮಾಜದಲ್ಲೇ ಇದ್ದ ದೋಷಗಳ ಕಾರಣದಿಂದ. ಹಾಗಾಗಿ ಅವರು ದೋಷವನ್ನು ಗುರುತಿಸಿಸದ್ದು ತಮ್ಮಲ್ಲೇನೇ. ಇಂದು SWOT ಎನ್ನುವ ಆಧುನಿಕ ಶಬ್ದ  ನಾವು ಕೇಳುತ್ತೇವೆ ನಮ್ಮ   Strength, Weakness, Opportunities, Threat ಎನ್ನುವುದನ್ನು ಆಧುನಿಕ ಮ್ಯಾನೇಜ್‌ಮೆಂಟ್‌ನಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಹಾಗೆಯೇ ತೊಂಭತ್ತು ವರ್ಷಗಳ ಕೆಳಗೆ ಡಾಕ್ಟರ್‌ಜೀಯವರು ಹಿಂದೂ ಸಮಾಜದ SWOT ಮಾಡಿದರು. ನಮ್ಮ ಸಮಾಜದ ಶಕ್ತಿಯೇನು? ಅನೇಕ ಏಳುಗಳ ನಡುವೆಯೂ ಎದ್ದು ನಿಂತುಕೊಂಡಂತಹ ಆ ಆಂತರಿಕ ಶಕ್ತಿಯನ್ನು ಅವರು ಗುರುತಿಸಿದ್ದರು. ಹಾಗೇಯೇ ಸಮಾಜ ಬೀಳಬೇಕಾದರೆ ಆದಂತಹ ದೌರ್ಬಲ್ಯಗಳನ್ನೂ ಕೂಡ ಅವರು ಕಂಡಿದ್ದರು. ಕ್ರಾಂತಿಕಾರಿಗಳಾಗಿ ಕೆಲಸ ಮಾಡಿದವರ ಸಂಖ್ಯೆ ಕೆಲವೇ ಸಾವಿರ. ಸ್ವಾತಂತ್ರ್ಯ ಹೋರಾಟದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲಿಗೆ ಹೋದವರ ಸಂಖ್ಯೆ ಇಡೀ ದೇಶದಲ್ಲಿ ಅರವತ್ತರಿಂದ ಎಪ್ಪತ್ತು ಸಾವಿರ. ದಾಖಲೆಯಾಗಿರುವಂತಹ ಸಂಗತಿ ಇದು. ಆದರೆ ಆವತ್ತು ನಮ್ಮ ದೇಶದ ಜನಸಂಖ್ಯೆ ಮುವತ್ತ ಮೂರು ಕೋಟಿ ! ಮುವತ್ಮೂರು ಕೋಟಿ ಇರುವಂತಹ ದೇಶದಲ್ಲಿ ನಮ್ಮ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರ ಸಂಖ್ಯೆ ಕೇವಲ ಅರವತ್ತರಿಂದ ಎಪ್ಪತ್ತು ಸಾವಿರ. ಬೇಂದ್ರೆಯವರು ಕೂಡ ಆವತ್ತು ಕನ್ನಡದಲ್ಲಿ ಒಂದು ಕವಿತೆ ಬರೆದರು- ’ಮುವತ್ಮೂರು ಕೋಟಿ ಮಕ್ಕಳಿವರೇನಮ್ಮ ಮುವತ್ಮೂರು ಕೋಟಿ ಮಕ್ಕಳು ? ಯಾಕೆ ಬೇಕೀ ಮಕ್ಕಳು?’ ತಮ್ಮದೇ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡದೇ ಇರತಕ್ಕಂತವರು. ಇದು ನಮ್ಮ ಸಮಾಜದ ಪರಿಸ್ಥಿತಿ ಇತ್ತು. ಡಾಕ್ಟರ್‌ಜೀ ಇದನ್ನು ಗಮನಿಸಿದ್ದರು. ಆ ಕಾರಣಕ್ಕೋಸ್ಕರ ಅವರು ಚಿಂತಿಸಿದರು ಸ್ವಾತಂತ್ರ್ಯ ಪಡೆಯುವುದಷ್ಟೇ ಅಲ್ಲ ಅದರ ನಂತರವೂ ಕೂಡ ಭವ್ಯ ಭಾರತದ ನಿರ್ಮಾಣ ಆಗಬೇಕಾದರೆ ಸಮಾಜದಲ್ಲಿರುವಂತಹ ದೋಷಗಳನ್ನು ತೆಗೆದುಹಾಕಬೇಕು. ಆವತ್ತು ಕಾಣುತ್ತಿದ್ದ ದೋಷ ಅತ್ಯಂತ ಹೆಚ್ಚಿನ ಸ್ವಾರ್ಥ. ತನಗೋಸ್ಕರ, ತಾನು ತನ್ನ ಕುಟುಂಬಕ್ಕೋಸ್ಕರ ಮಾತ್ರ. ಯಾರು ಬೇಕಾದರೂ ರಾಜ್ಯವಾಳಲೀ, ರಾಮ ಬಂದರೂ ಸ್ವಸ್ತಿ ರಾವಣ ಬಂದರೂ ಸ್ವಸ್ತಿ, ತಾನು ತನ್ನ ಕುಟುಂಬ ಸುಖವಾಗಿದ್ದರೆ ಸಾಕು, ಎನ್ನುವಂಥದ್ದು . ಪರಸ್ಪರ ಕಚ್ಚಾಟಕ್ಕೆ ಕಾರಣವಾದ ಸಮಾಜದಲ್ಲಿದ್ದ ಜಾತೀಯತೆ, ಇನ್ನೊಂದು ಸಮಾಜಕ್ಕೆ ಘೋರ ಶಾಪವಾಗಿ ಅಂಟುಕೊಂಡಿದ್ದ ಅಸ್ಪ್ರಶ್ಯತೆ, ದೇಶಾಭಿಮಾನದ ಕೊರತೆ ಈ ಸಂಗತಿಗಳನ್ನೇ ಅವರು ಗಮನಿಸಿದರು. ಈ ದೋಷಗಳನ್ನು ನಾವೇ ದೂರಮಾಡಬೇಕು. ಬೇರೆ ಯಾರಿಂದಲೋ ಚಮತ್ಕಾರದಿಂದ ಅದು ದೂರ ಹೋಗುವಂಥದ್ದಲ್ಲ, ಯಾವ ಸಮಾಜದಲ್ಲಿ ದೋಷ ಇದೆಯೋ ಆ ಸಮಾಜದ ಮಕ್ಕಳೇ ತಮ್ಮ ದೋಷಗಳನ್ನು ದೂರ ಮಾಡಬೇಕು, ಆ ಕೆಲಸಕ್ಕೆ ಮುಂದಾದರು. ಆ ರೀತಿಯಲ್ಲಿ ಪ್ರತಿಯೊಬ್ಬ ಹಿಂದುವಿನಲ್ಲೂ ಇರುವ ದೋಷಗಳನ್ನು ದೂರಗೊಳಿಸಿ ಆತ ಸಮಾಜೋನ್ಮುಖಿಯಾಗುವಂತಹ, ಸ್ವಾರ್ಥರಹಿತವಾಗಿ ಕೆಲಸ ಮಾಡಬಲ್ಲ, ಜಾತಿ ಅಸ್ಪ್ರಶ್ಯತೆಗಳನ್ನು ಮೀರಿ ಪ್ರಾಮಾಣಿಕನಾಗಿ ಅತ್ಯಂತ ದಕ್ಷತೆಯಿಂದ ಕೆಲಸಮಾಡಬಲ್ಲ  ವ್ಯಕ್ತಿಯನ್ನು ನಿರ್ಮಾಣ ಮಾಡಬೇಕು. ಆದ್ದರಿಂದ ಮೊದಲು ಆಗಬೇಕಾದದ್ದು ವ್ಯಕ್ತಿಯ ಪರಿವರ್ತನೆ. ಪರವರ್ತಿತ ವ್ಯಕ್ತಿಯ ಮೂಲಕ ಸಮಾಜದ ಸಂಘಟನೆ ಅದರ ಮೂಲಕ ಪರಮ ವೈಭವದ ಸ್ಥಿತಿಯನ್ನು ತಲುಪುವುದು. ನಮ್ಮ ಪ್ರಾರ್ಥನೆಯಲ್ಲೂ ಕೂಡ ನಾವು ನಿತ್ಯ ಹೇಳುವುದು ಅದನ್ನೇ – ’ಪರಮ್ ವೈಭನ್ನೇತುಮೇ ತತ್‌ಸ್ವರಾಷ್ಟ್ರಮ್’ ಆ ಪರಮ ವೈಭವದ ಸ್ಥಿತಿ ಸಾಧ್ಯವಾಗುವುದು ’ವಿಜಯತ್ರೀ ಚ ನಃ ಸಂಹತಾ ಕಾರ್ಯಶಕ್ತಿಃ’ ಇಂದ. ಡಾಕ್ಟರ್‌ಜೀಯವರು ಇದನ್ನು ವಿಚಾರ ಮಾಡಿ ಪ್ರತಿಯೊಬ್ಬ ಹಿಂದುವಿನಲ್ಲೂ ಪರಿವರ್ತನೆ ತರಬಲ್ಲಂತಹ ಸಂಘದ ಕಾರ್ಯವನ್ನು ಪ್ರಾರಂಭ ಮಾಡಿದರು. ಈ ಕಲ್ಪನೆ ಸಮಾಜಕ್ಕೋಸ್ಕರ ಕೆಲಸ ಮಾಡುತ್ತಿದ್ದ ಬಹಳಷ್ಟು ಜನರ ಮನಸ್ಸಿನಲ್ಲೂ ಇದ್ದಂತಹ ಸಂಗತಿಯೇ ಆಗಿತ್ತು. ಸ್ವಾಮಿ ವಿವೇಕಾನಂದರೂ ಕೂಡ ಅಮೇರಿಕ ಪ್ರವಾಸ ಮುಗಿಸ ಬಂದು ದೇಶದಾದ್ಯಂತ ಬಿರುಗಾಳಿಯ ಪ್ರವಾಸ ಮಾಡಿದಾಗ ಈ ದೇಶದ ಯುವಕರ ಮುಂದೆ ಅವರು ಇಟ್ಟಂತಹ ಕಲ್ಪನೆ ಕೂಡ ಅದೇ ಆಗಿತ್ತು. ’ಭವಿಷ್ಯದ ಭಾರತ ಹೇಗಿರಬೇಕು ಎಂದು ಹೇಳಿದರೆ ಆಧ್ಯಾತ್ಮಿಕವಾಗಿ ಜಾಗೃತವಾದ, ಸಾಮಾಜಿಕವಾಗಿ ಭದ್ರವಾದ, ಜ್ಞಾನ ವಿಜ್ಞಾನಗಳ ಆಗರವಾದ. ಆರ್ಥಿಕವಾಗಿ ಬಲಿಷ್ಠವಾದ ಭಾರತವನ್ನು ನಾನು ಕಾಣಬಯಸುತ್ತೇನೆ’ ಇದು ವಿವೇಕಾನಂದರು ಹೇಳುತ್ತಿದ್ದ ಮಾತು. ಆಧ್ಯಾತ್ಮಿಕವಾಗಿ ಜಾಗೃತವಾದ ಅಂದರೆ ವಿವೇಕಾನಂದರು ಎಂದೂ ಕೂಡ ಪೂಜೆ ಪುನಸ್ಕಾರ, ವೈಯಕ್ತಿಕ ಮೋಕ್ಷಕ್ಕಾಗಿ ಮಾಡುವ ತಪಸ್ಸು ಅಥವಾ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾತನಾಡಲಿಲ್ಲ. ಆಧ್ಯಾತ್ಮಿಕವಾಗಿ ಜಾಗೃತವಾದ ಭಾರತ ಎಂದು ಹೇಳಿದಾಗ ಭಾರತಮಾತೆಯನ್ನು ಇಡೀ ಭಾರತವನ್ನೇ ದೇವರಾಗಿ ಪೂಜಿಸುವಂಥದ್ದು. ಲಖನೌದಲ್ಲಿ ಮಾತನಾಡುವಾಗ ಅವರು ಒಂದು ಸಂಗತಿ ಹೇಳಿದ್ದುಂಟು, ೧೯೦೧ನೇ ಇಸವಿಯಲ್ಲಿ. ’ಇನ್ನು ಐವತ್ತು ವರ್ಷಗಳ ಕಾಲ ನಮ್ಮ ದೇಶದಲ್ಲಿ ಯಾವ ಗುಡಿ ಗೋಪುರಗಳೂ ಬೇಡ, ಬೀಗ ಹಾಕಿಟ್ಟುಬಿಡೋಣ. ಕೇವಲ ತಾಯಿ ಭಾರತಿಯ ಅರ್ಚನೆ ಮಾಡೋಣ. ತಾಯಿ ಭಾರತಿಯ ಅರ್ಚನೆ ಅಂದರೆ ಈ ದೇಶದಲ್ಲಿರುವ ಕೋಟಿ ಕೋಟಿ ಜನರ ಸೇವೆ. ಕೋಟಿ ಕೋಟಿ ಜನರನ್ನು ಮೇಲಕ್ಕೆತ್ತುವ ಕಾರ್ಯ. ಅದು ಆಧ್ಯಾತ್ಮಿಕ ಸಾಧನೆ. ಆತ್ಮನೋ ಮೊಕ್ಷಾರ್ಥಮ್ ಜಗತ್ ಹಿತಾಯ ಚ’. ನಾವು ಮಾಡುವ ಆಧ್ಯಾತ್ಮಿಕ ಸಾಧನೆ ಕೂಡ ಜಗತ್ತಿನ ಹಿತಕ್ಕಾಗಿ ಎಂದು ವಿವೇಕಾನಂದರು ಹೇಳಿದ್ದರು. ಸಾಮಾಜಿಕವಾಗಿ ಭದ್ರ ಎಂದಾಗಲೂ ವಿವೇಕಾನಂದರ ಮನಸ್ಸಿನಲ್ಲಿದ್ದ ಸಂಗತಿ ಅದೇನೆ. ನಮ್ಮನ್ನು ಛಿದ್ರ ಮಾಡುತ್ತಿರುವ ಜಾತೀಯ ಪ್ರಾಂತೀಯ ಅಸ್ಪ್ರಶ್ಯ ಭಾವನೆಗಳನ್ನು ತೊಡೆದುಹಾಕುವುದು. ಇಡೀ ಹಿಂದೂ ಸಮಾಜ ಒಂದಾಗಿ ಬರುವಂತಹ ಕಲ್ಪನೆಯನ್ನು ಅವರು ಮಾಡಿದ್ದರು. ಈ ಎರಡು ಸಂಗತಿಗಳಾದರೆ ಮಿಕ್ಕ ಎರಡು ಸಂಗತಿಗಳು ತಾನೇ ತಾನಾಗಿ ಆಗುತ್ತದೆ. ಜ್ಞಾನ ವಿಜ್ಞಾನಗಳ ಆಗರ, ಆರ್ಥಿಕ ಬಲಿಷ್ಠತೆ. ಡಾಕ್ಟರ್‌ಜೀಯವು ಈ ಕಲ್ಪನೆಗೆ ಒಂದು ತಂತ್ರವನ್ನು ಕೊಟ್ಟರು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲೂ ಕೂಡ ಈ ರೀತಿಯ ಆಧ್ಯಾತ್ಮಿಕ ಜಾಗೃತಿ ಸಮಸ್ತ ಭಾರತವನ್ನೇ ದೇವರಾಗಿ ಕಂಡು ಸೇವೆ ಮಾಡುವ ಕಲ್ಪನೆ, ಅದನ್ನು ಮುಂದೆ ಇಟ್ಟರು. ಇದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಅವನ ಹೃದಯದಲ್ಲಿ ಈ ಕಲ್ಪನೆಗಳು ಭದ್ರವಾಗಿ ನೆಲೆಯೂರುವ ಹಾಗೆ ಮಾಡಿದರು. ಸಂಘದ ಕಾರ್ಯದ ಮೂಲಕ ಸಾಮಾಜಿಕವಾಗಿ ಕಾಣುವ ಅಸಮಾನತೆಗಳಾದ ಜಾತೀಯತೆ ಪ್ರಾಂತೀಯತೆ ಮುಂತಾದ ಎಲ್ಲ ದೋಷಗಳನ್ನು ಮೀರುವ ಸಂಗತಿಯನ್ನು ಅಳವಡಿಸಿದರು. ಇದನ್ನೇ ನಾವು ಇಂದು ನಾವು ಇಂದು ಸಂಘದಲ್ಲಿ ನಾವು ಕಾಣುತ್ತಿರುವುದು.  ಕಳೆದ ತೊಂಭತ್ತು ವರ್ಷಗಳ ಸಂಘದ  ಕಾರ್ಯದಲ್ಲಿ ಡಾಕ್ಟರ್‌ಜೀ ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ  ನಡೆದ ಲಕ್ಷಾಂತರ ಸ್ವಯಂಸೇವಕರು ತಯಾರಾದರು. ಸಹಸ್ರಾರು ಜನ ಅವರು ಮಾಡಿದ ಹಾಗೆಯೇ ಭಾರತದ ಅರ್ಚನೆ ಮಾಡಿದರು, ಅನೇಕ ಜನ ತಮ್ಮ ಜೀವನವನ್ನೇ ಸಮರ್ಪಿಸಿ ಪ್ರಚಾರಕರಾದರು, ಹಗಲು ರಾತ್ರಿ ಕೆಲಸ ಮಾಡುವ ಕಾರ್ಯಕರ್ತರಾದರು. ಕೇವಲ ಒಬ್ಬ ಡಾಕ್ಟರ್‌ಜೀ ಅಲ್ಲ, ಆ ಆದರ್ಶವನ್ನು ತೆಗೆದುಕೊಂಡ ಸಹಸ್ರಾರು ಜನ ಡಾಕ್ಟರ್‌ಜೀಯವರಂತೆ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡಿದರು, ಡಾಕ್ಟರ್‌ಜೀಯವರ ಜೀವನದಲ್ಲಿ ನಾವು ಕಾಣುವ ವೈಶಿಷ್ಟ್ಯ ಅದೇನೆ.

ಅನೇಕ ಬಾರಿ ಒಬ್ಬ ಮಹಾಪುರುಷನ ಜೀವನದ ನಂತರ  ಕೆಲವು ಕಾಲ ಆತ ಹೇಳಿದ ಸಂಗತಿಗಳಿರುತ್ತವೆ ಅಥವಾ ಆತ ಸಮಾಜದ ಮುಂದೆ ಇಟ್ಟಂತಹ ವಿಷಯಗಳನ್ನು ಮುಂದೆ ನಡೆಸಿಕೊಂಡು ಹೋಗುವುದು ಕೆಲವು ಕಾಲ ನಡೆಯುತ್ತದೆ. ಆದರೆ ನಿರಂತರವಾಗಿ ಪ್ರತಿವರ್ಷ ಅದು ಹೆಚ್ಚಳವೇ ಆಗುತ್ತ ಈ ರೀತಿಯ ಕಾರ್ಯಕರ್ತರು ತಯಾರಾದದ್ದು ಸಂಘದ ಪದ್ಧತಿಯಲ್ಲಿ. ಡಾಕ್ಟರ್‌ಜೀಯವರು ಕೊಟ್ಟಂತಹ ವಿಶೇಷ ಕೊಡುಗೆ ಅಂದರೆ ಇದೇ. ಇಷ್ಟೂ ಸಂಗತಿಯನ್ನು ಅವರು ಮಾಡಿದಂತದ್ದು ಹೇಗೆ? ಸಂಘದ ಕಾರ್ಯದಲ್ಲಿ ಸ್ವತಃ ಅವರು ಆದರ್ಶವಾಗಿ ನಿಂತರು. ಜೀವನದುದ್ದಕ್ಕೂ ಸುಖದ ಕಲ್ಪನೆಯೇ ಇಲ್ಲದೇ ಬಾಳಿದಂತವರು.  ಡಾಕ್ಟರ್‌ಜೀಯವರು ಅಷ್ಟು ದೊಡ್ಡವರಾಗಿದ್ದರೂ ಅಷ್ಟು ದೊಡ್ಡ ಸಂಘಟನೆ ಕಟ್ಟಿದ್ದರೂ ಕೂಡ ಪ್ರತಿನಿತ್ಯ ಊಟದ ಸಮಸ್ಯೆ ಇದ್ದೇ ಇತ್ತು. ಅವರ ಜೀವನ ಚರಿತ್ರೆಯಲ್ಲಿ ಅನೇಕ ಇಂತಹ ಸಂಗತಿಗಳನ್ನು ನಾವು ಓದುತ್ತೇವೆ. ಒಮ್ಮೆ ಅವರ ಮನೆಗೆ ಅತ್ಯಂತ ವಿಶ್ವಾಸ ಪಾತ್ರರಾಗಿದ್ದ ವಿಶ್ವನಾಥ ಕೇಳ್ಕರ್‌ರವರು ಬಂದಿದ್ದಾಗ ಅವರ ಅತ್ತಿಗೆಗೆ ಅವರು ಚಹ ಮಾಡಲು ಹೇಳಿದರು. ಆದರೆ ಚಹಾ ಬಹಳ ಹೊತ್ತಾದರೂ ಬರಲಿಲ್ಲ, ಅಡುಗೆ ಮನೆಗೆ ಹೋಗಿ ನೋಡಿದಾಗ ಅವರ ಅತ್ತಿಗೆ ಬಹಳ ದುಃಖಿತರಾಗಿ ಕೂತಿದ್ದರು. ಯಾಕೆ? ಅಂದರೆ  ಮನೆಯಲ್ಲಿ ಚಹಾ ಪುಡಿಯೂ ಇರಲಿಲ್ಲ, ಹಾಲೂ ಇರಲಿಲ್ಲ, ಒಲೆ ಉರಿಸಲು ಸೌದೆಯೂ ಇರಲಿಲ್ಲ. ಸಂಘದ ನೇತೃತ್ವ ವಹಿಸಿದ್ದರೂ ಕೂಡ ಮನೆಯ ಉರುವಲಿಗೆ ಬೇಕಾದ ಸೌದೆಯನ್ನು ಅವರೇ ಒಡೆಯಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ ಎಂದೂ ಕೂಡ ತಮ್ಮ ಕಾರ್ಯದಿಂದ ವಿಚಲಿತರಾಗಲಿಲ್ಲ ಅಥವಾ ಅದಕ್ಕೆ ಬೇಕಾದ ಹಣದ ಸಂಪಾದನೆಗೆ ಕೂಡ ವಿಚಾರ ಮಾಡಲೇ ಇಲ್ಲ. ಸೊಲ್ಲಾಪುರ ಓರ್ವ ತೊಂಭತ್ತು ವರ್ಷದ ವ್ಯಕ್ತಿ ಒಂದು ಇಂದಿಗೂ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಡಾಕ್ಟರ್‌ಜೀಯವರನ್ನು ಭೇಟಿಯಾದಾಗ ಅವರಿಗೆ ಹದಿನೈದು ಹದಿನಾರು ವರ್ಷ. ಅವರು ಟೇಲರ್ ಆಗಿದ್ದರು. ಒಮ್ಮೆ ಡಾಕ್ಟರ್‌ಜೀ ಅವರ ಟೇಲರಿಂಗ್ ಅಂಗಡಿಗೆ ಬಂದರು. ಒಂದು ಗ್ರಾಮಕ್ಕೆ ಶಾಖೆ ಪ್ರಾರಂಭ ಮಾಡಲು ಹೋಗಬೇಕಾಗಿತ್ತು. ಇವರಿಬ್ಬರೂ ರೈಲಿನಲ್ಲಿ ಕುಳಿತುಕೊಂಡರು. ಎಂಟು ಮೈಲು ದೂರದ ಸ್ಟೇಶನ್‌ವರೆಗೆ ಹೋಗುವಷ್ಟು ಮಾತ್ರ ಹಣ ಅವರ ಹತ್ತಿರ ಇತ್ತು. ಇಬ್ಬರಿಗೂ ಸೇರಿ ಅದು ಖರ್ಚಾಗಿ ಬಿಡುತ್ತಿತ್ತು. ಹಾಗಾಗಿ ಎಂಟು ಮೈಲಿಗೆ ಟಿಕೆಟ್ ತೆಗೆದಿಕೊಂಡು ರೈಲಿನಲ್ಲಿ ಪ್ರಯಾಣಸಿ ಆ ಸ್ಟೇಶನ್ನಿನಲ್ಲಿ ಇಳಿದರು. ಉಳಿದ ಹತ್ತು ಮೈಲು ದೂರವನ್ನು ಇಬ್ಬರೂ ನಡೆದುಕೊಂಡೇ ಹೋಗಿ ಸಂಘವನ್ನು ಪ್ರಾರಂಭ ಮಾಡಿದರು. ಹೀಗೆ ಡಾಕ್ಟರ್‌ಜೀ ೧೯೨೫ರಿಂದ ೧೯೪೦ನೇ ಇಸವಿಯ ತನಕ ನಿರಂತರವಾಗಿ ರಕ್ತವನ್ನು ನೀರು ಮಾಡುವುದು ಎಂದು ಹೇಳಿದಂತೆ ಅಕ್ಷರಶಃ ರಕ್ತವನ್ನು ನೀರು ಮಾಡಿಯೇ ಸಂಘವನ್ನು ಕಟ್ಟಿ ಬೆಳೆಸಿದರು.

ತೊಂಭತ್ತು ವರ್ಷಗಳಲ್ಲಿ ಇವತ್ತು ವಿಶಾಲ ಹೆಮ್ಮರವಾಗಿ ಬೆಳೆದಿರುವುದು, ಅಷ್ಟೇ ಅಲ್ಲ ಸಂಘದ ವಿಚಾರವನ್ನು ತೆಗೆದುಕೊಂಡು ಸಮಾಜದ ಪ್ರತಿರಂಗದಲ್ಲೂ ಕೆಲಸ ಮಾಡುವಂತಹ-ವಿದ್ಯಾರ್ಥಿ ಕ್ಷೇತ್ರದಲ್ಲಿ ಭಾರತೀಯ ವಿದ್ಯಾರ್ಥಿ ಪರಿಷತ್ತಾಗಲೀ, ಕಾರ್ಮಿಕ ಕ್ಷೇತ್ರದಲ್ಲಿ ಭಾರತೀಯ ಮಜದೂರ್ ಸಂಘವಾಗಲೀ ಅಥವಾ ಕಿಸಾನ್ ಕ್ಷೇತ್ರದಲ್ಲಿ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಂಘ ವಿಚಾರದಲ್ಲಿ ಕೆಲಸ ನಡೆಯುತ್ತಿರುವುದನ್ನು ನಾವಿಂದು ನೋಡುತ್ತೇವೆ. ಈ ವರ್ಷ ಅಖಿಲ  ಭಾರತೀಯ ಪ್ರತಿನಿಧಿ ಸಭಾದಲ್ಲಿ ಬಂದ ವರದಿಯ ಪ್ರಕಾರ ಇಂದು ಈ ದೇಶದಲ್ಲಿ ೫೧ ಸಾವಿರಕ್ಕೂ ಹೆಚ್ಚು ಶಾಖೆಗಳಿವೆ, ೧೨ ಸಾವಿರಕ್ಕೂ ಹೆಚ್ಚು ಮಿಲನ್‌ಗಳು ನಡೆಯತ್ತಿವೆ, ೯ ಸಾವಿರಕ್ಕೂ ಹೆಚ್ಚು ಸಂಘದ ಮಂಡಳಿಗಳು ನಡೆಯತ್ತಿವೆ. ಸಂಘದ ಕಾರ್ಯ ಇವತ್ತು ದೇಶವ್ಯಾಪಿಯಾಗಿರುವುದಷ್ಟೇ ಅಲ್ಲ ಮೂವತ್ತೊಂಭತ್ತು ದೇಶಗಳಲ್ಲಿ ಎಲ್ಲಲ್ಲಿ ಹಿಂದುಗಳಿದ್ದಾರೋ ಅವರ ನಡುವೆಯೂ ನಡೆಯುತ್ತಿದೆ.

ಇಡೀ ಸಮಾಜದಲ್ಲಿ ಬದಲಾವಣೆ ತರುವಂತಹ , ನಿಜಕ್ಕೂ ಕೂಡ ಪರಮ ವೈಭವ ಸಂಪನ್ನವಾದ ನಮ್ಮ ರಾಷ್ಟ್ರದ ಕಲ್ಪನೆಯನ್ನು ಸಾಕಾರ ಮಾಡುವುದಕ್ಕೆ ಸಾಧ್ಯವಾಗುವಂತಹ ಒಂದು ದೃಶ್ಯವನ್ನು ನಾವು ಇವತ್ತು  ಕಾಣುತ್ತಿದ್ದೇವೆ.ಇಡೀ ಸಮಾಜದಲ್ಲಿ ಹಿಂದುತ್ವದ ಪರವಾದ ವಾತಾವರನಣವನ್ನು ನಾವು ಇವತ್ತು ನೋಡುತ್ತೇವೆ. ಇಪ್ಪತ್ತೈದು ಮೂವತ್ತು ವರ್ಷದ ಕೆಳಗೆ ಯಾರಾದರೂ ಹಿಂದು ರಾಷ್ಟ್ರದ ಕಲ್ಪನೆಯನ್ನು ಅಥವಾ ಹಿಂದುತ್ವದ ವಿಚಾರವನ್ನು ಹೇಳಿದಾಗ ಜನ ನಗುತ್ತಿದ್ದರು. ಬಹುಶಃ ಇವರೆಲ್ಲೋ ಪ್ರಾಚೀನ ಮಧ್ಯಯುವಗಲ್ಲಿ ಇರವಂತವತರು ಎಂದು ಗೇಲಿ ಮಾಡುತ್ತಿದ್ದರು. ಆದರೆ ಇವತ್ತು ಹಿಂದು ವಿಚಾರಕ್ಕೆ ಅತಿ ಹೆಚ್ಚಿನ ಬೆಲೆ ಬಂದಿರವುದನ್ನು ನಾವು ಕಾಣುತ್ತೇವೆ.

ನಮಗೆ ತಿಳಿದಿರುವ ಹಾಗೆ ಜೂನ್ ೨೧ನೇ ತಾರೀಖಿನ ದಿನವನ್ನು ಅಂತರಾಷ್ಟ್ರೀಯ ಯೋಗದಿನವೆಂದು ಘೋಷಣೆ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ೧೩೮ ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಘೋಷಣೆ ಮಾಡಲು ತಮ್ಮ ಒಪ್ಪಿಗೆಯನ್ನು ನೀಡಿದ್ದವು. ಈ ರೀತಿ ಅಕಸ್ಮಾತ್ ಆಗಿಬಿಟ್ಟಿತು ಎನ್ನುವುದಲ್ಲ, ಯೋಗದ ಬಗ್ಗ ಶ್ರದ್ಧೆ ಇರುವ ಸಾವಿರಾರು ಜನ ಯೋಗದ ಪ್ರಚಾರವನ್ನು ಮಾಡುತ್ತಿದ್ದಾರೆ. ಸಂಘದ ಶಿಬಿರಗಳಲ್ಲಿ ಶಾಖೆಗಳಲ್ಲಿ ಯೋಗದ ಕಾರ್ಯಕ್ರಮಗಳು ಯೋಗಾಭ್ಯಾಸ ನಡೆಯುತ್ತಿದೆ. ಹಾಗಾಗಿ ಯೋಗದ ವಿಚಾರ ಹಾಗೂ ಭಾರತದಲ್ಲಿ ಹಿಂದೂ ವಿಚಾರ ಗಟ್ಟಿಯಾದಾಗ ವಿಶ್ವದಲ್ಲಿ ಯೋಗಕ್ಕೆ ಮಾನ್ಯತೆ ಬಂದಿರುವುದನ್ನು ನಾವಿವತ್ತು ನೋಡುತ್ತಿದ್ದೇವೆ. ಎಲ್ಲ ವಿಚಾರಗಳಲ್ಲೂ ಹೀಗೆಯೇ. ಇಂದು ಜಗತ್ತು ನಮ್ಮೆಡೆಗೆ ನೋಡುತ್ತಿರುವುದು ಈ ದೇಶದಲ್ಲಿ ಪರಿವರ್ತನೆ ಆಗಿದೆ ಎನ್ನುವ ಕಾರಣದಿಂದ. ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೆವೆಲೊಪ್‌ಮೆಂಟಲ್ ಸ್ಟಡೀಸ್ ಅಂತ ಒಂದಿದೆ ಸ್ವೀಡನ್ನಿನಲ್ಲಿ. ಅದರಲ್ಲಿ ಜೀನ್ ಪೀಯರೆ ಲೇಹ್‌ಮನ್ ಎನ್ನುವ ದಾರ್ಶನಿಕ ಪ್ರೊಫೆಸರ್ ಒಬ್ಬರಿದ್ದಾರೆ. ಆ ವ್ಯಕ್ತಿ ೨೦೦೬ನೇ ಇಸವಿಯಲ್ಲಿ  ನ್ಯೂ ಯೋರ್ಕ್ ಟೈಮ್ಸ್‌ನಲ್ಲಿ  ಒಂದು ಲೇಖನವನ್ನು ಬರೆದರು.  ಇಡೀ ಜಗತ್ತನ್ನು ಕಾಡುತ್ತಿರುವ ಅಲ್ಲ ಸಮಸ್ಯೆಗಳ ಬಗ್ಗೆ-ಭಯೋತ್ಪಾದನೆ, ಕೋಮುವಾದ, ಪರ್ಯಾವರಣ ನಾಶ ಇವೆಲ್ಲ ಸಮಸ್ಯೆಗಳ ಕುರಿತು ಆ ಲೇಖನದಲ್ಲಿ ಚರ್ಚೆ ಮಾಡಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಮಾನವ ಕೋಟಿಗೆ ಒಂದು sense of order  ನೈತಿಕ ಪ್ರಜ್ಞೆ ಬರಬೇಕು. ಎರಡನೆಯದು ಅವನ ಜೀವನದಲ್ಲಿ ಆಧ್ಯಾತ್ಮಿಕತೆ SPIRITUALISM ಬರಬೇಕು. ಮೂರನೆಯದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಯಾವ ದಿಕ್ಕಿನಲ್ಲಿ ಜೀವನವನ್ನು ಸಾಧಿಬಸೇಕು ಎನ್ನುವ ಸಲುವಾಗಿ ಒಂದು ETHICAL COMPASS  ಬೇಕು, ಒಂದು ನೈತಿಕ ದಿಕ್ಸೂಚಿ ಬೇಕು. ಈ ಮೂರು ಸಂಗತಿಗಳು ಆದಾಗ ನಮ್ಮ ಭೂಮಿ ಉಳಿಯತ್ತದೆ, ಇಲ್ಲವಾದರೆ ನಮ್ಮ ಭೂಮಿ ನಾಶವಾಗುತ್ತದೆ; ಅನ್ನುವ ಸಂಗತಿಯನ್ನು ಬರೆದು ಕಡೆಯಲ್ಲಿ ಒಂದು ಭರತವಾಕ್ಯವನ್ನು ಆತ ಬರೆದ ಈ ಮೂರೂ ಸಂಗತಿಗಳು ನಮಗೆ ಸಿಗುವಂಥದ್ದು  ಭಾರತದ ಹಿಂದೂ ಪರಂಪರೆಯಿಂದ. ಭಾರತದ ಹಿಂದೂ ಪದ್ಧತಿ, ವಿಚಾರಧಾರೆಯನ್ನು ಅಳವಡಿಸಿಕೊಂಡರೆ ನಮ್ಮ ಜೀವನದಲ್ಲಿ ಬದಲಾವಣೆ ಬರುತ್ತದೆ ಎನ್ನುವುದನ್ನು ಆತ ಬರೆದ. ಹೀಗೆ ಜಗತ್ತು ನಮ್ಮ ಕಡೆಗೆ ನೋಡುತ್ತಿದೆ. ಅಂತಹ ಒಂದು ಸಂದರ್ಭದಲ್ಲಿ ನಮ್ಮ ಕಾರ್ಯವನ್ನು ಇನ್ನಷ್ಟು ವಿಸ್ತಾರ ಮಾಡುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ.

ಸಂಘದ ಸ್ವಯಂಸೇವಕನ ಜೀವನದಲ್ಲಿ  ಭೇದ ಮಾಡುವಂತಹ ಯಾವುದೇ ಕಾರ್ಯಗಳಿಗೆ ಅವಕಾಶವಿಲ್ಲ. ಅವನ ಮನೆಯಲ್ಲಿಯೂ ಇಲ್ಲ. ಸಂಘದ ಸ್ವಯಂಸೇವಕನ ಜೀವನದಲ್ಲಿ ಪರಿವರ್ತನೆ ಆಗಿದೆ. ಜಾತಿ ಮತ ಪಂಥ ಅಸ್ಪ್ರಶ್ಯತೆಯನ್ನು ಮಿರುವ ಪರಿವರ್ತನೆ ಅವನ ಮನೆಯಲ್ಲಾಗಿದೆ. ಅದನ್ನು ಸಮಾಜಕ್ಕೂ ವಿಸ್ತಾರ ಮಾಡಬೇಕಾದ ಕೆಲಸ ನಮ್ಮ ಮೇಲೆ ಇದೆ. ನಿಧಾನವಾಗಿ ಆ ಕಾರ್ಯವೂ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ.

ಇತ್ತೀಚೆಗೆ ನಡೆದಂತಹ ಒಂದು ಘಟನೆ, ಎಲ್ಲರಿಗೂ ಶ್ರದ್ಧಾಕೇಂದ್ರವಾದ ಮಂತ್ರಾಲಯದಲ್ಲಿ ವಿರಾಟ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ವಿವಿಧ ಪಂಥಗಳಿಗೆ ಸೇರಿದ ಹನ್ನೆರಡು ಸ್ವಾಮೀಜಿಗಳು ಅಲ್ಲಿಗೆ ಬಂದಿದ್ದರು. ಮೈಸೂರಿನ ಮಾದಾರ ಚನ್ನಯ್ಯ ಶ್ರೀಗಳು ಕೂಡ ಅಲ್ಲಿಗೆ ಬಂದಿದ್ದರು. ಬೇರೆ ಬೇರೆ ಪಂಥಗಳಿಗೆ ಸೇರಿದ ಆ ಎಲ್ಲ ಸ್ವಾಮಿಗಳಿಗೂ ಮಂತ್ರಾಲಯದಲ್ಲಿ ಪೂರ್ಣ ಕುಂಭ ಸ್ವಾಗತವನ್ನು ನೀಡಲಾಯಿತಷ್ಟೇ ಅಲ್ಲದೇ ಮೂಲ ಬೃಂದಾವನದಲ್ಲಿ ಅರ್ಚನೆಗೂ ಅವಕಾಶ ಮಾಡಿಕೊಡಲಾಯಿತು. ಇಡೀ ಹಿಂದೂ ಸಮಾಜ ಒಂದಾಗಿ ಬಂತು. ಯಾವ ಯಾವ ಪಂಥಕ್ಕೆ ಸೇರಿದ್ದರೂ ಕೂಡ ಅವರೆಲ್ಲರೂ ಸೋದರರು. ಸ್ವತಃ ಮಾದಾರ ಚನ್ನಯ್ಯ ಶ್ರೀಗಳು ಅರ್ಚನೆ ಮಾಡಿ ಮಂಗಳಾರಿಯನ್ನೂ ಮಾಡಿದರು. ಮೊಟ್ಟಮೊದಲನೆಯ ಬಾರಿಗೆ ಮಂತ್ರಾಲಯದಲ್ಲಿ ಈ ಘಟನೆ ನಡೆಯಿತು. ಎಲ್ಲ ಸ್ವಾಮೀಜಿಗಳು ಕೂಡ ವೇದಿಕೆಯ ಮೇಲಿಂದ ಎಲ್ಲ ಹಿಂದೂಗಳೂ ಸೋದರರು, ಹಿಂದೂ ಸಮಾಜದ ಮೇಲೆ ನಡೆಯತ್ತಿರುವ ಆಕ್ರಮಣ, ಮತಾಂತರ, ಲವ್ ಜಿಹಾದ್ ಅಥವಾ ಇನ್ನು ಯಾವುದೋ ಕಾರ್ಯಕ್ರಮವಿರಬಹುದು ಅವೆಲ್ಲವನ್ನೂ ತಡೆಗಟ್ಟಬೇಕಾರ ನಾವಲ್ಲ ಒಂದು ಎನ್ನುವ ಭಾವನೆಯಿಂದ ಕೆಲಸ ಮಾಡಬೇಕು ಎಂದು ಸಂದೇಶ ನೀಡಿದರು. ಇದು ಸಂಘದ ಕಾರ್ಯದ ಪರಿಣಾಮವಾಗಿ ಆದಂತಹ ಬದಲಾವಣೆ.

ಬೆಂಗಳೂರಿನಲ್ಲಿ ವಿರಾಟ ಹಿಂದೂ ಸಮ್ಮೇಳನ ನಡೆದಾದ ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರು ಮಾತನಾಡುವಾಗಲೂ ಅದನ್ನೇ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದಿಂದಾಗಿ ನಾವೆಲ್ಲ ಒಂದು ಎನ್ನುವ ಭಾವನೆ ಬರಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಭಾವನೆಯನ್ನು ಸಮಾಜದಲ್ಲಿ ತರಲು ಇಂದು ಸಂಘ ಶಕ್ತವಾಗಿದೆ.  ಹೀಗೆ ದೇಶದಾದ್ಯಂತ ಈ ರೀತಿ ಕಾರ್ಯಕ್ರಮಗಳಲ್ಲಿ ಎಲ್ಲ ಬಾಂಧವರು ಪಾಲ್ಗೊಳ್ಳುವದನ್ನು ನಾವು ನೋಡುತ್ತೇವೆ. ಆದರೆ ಆ ಕಾರ್ಯಕ್ಕೆ ನಾವು ಇನ್ನಷ್ಟು ವೇಗವನ್ನು ತರಬೇಕಾಗಿದೆ. ಇಡೀ ಸಮಾಜವನ್ನು ಒಟ್ಟಾಗಿ ತರುವಂತಹ, ಸಮಾಜದಲ್ಲಿ ದೇಶಾಭಿಮಾನವನ್ನು ಬೆಳೆಸುವಂತಹ ಸಮಾಜೋನ್ಮುಖೀ ಕಾರ್ಯ ಒಂದು ಕಡೆ ಬೆಳೆಯುತ್ತಿದ್ದರೆ, ಇನ್ನೊಂದು ಕಡೆ ಸಮಾಜವನ್ನು ಹಾಳುಮಾಡುವ ಕೆಲಸವೂ ನಡೆಯುತ್ತಿದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಎಂದರೆ ವ್ಯಕ್ತಿಯ ಸ್ವಾರ್ಥ.

ಸ್ವಾರ್ಥದ ಕಾರಣ ಎಂತಹ ಭೀಕರ ಹಿನ್ನೆಲೆಗಳನ್ನು ಸೃಷ್ಟಿ ಮಾಡುತ್ತದೆ ಎನ್ನುವುದನ್ನು ಕಳೆದ ಕೆಲವು ದಿವಸಗಳಿಂದ ನಾವು ನೋಡುತ್ತಿದ್ದೇವೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು, ಅದರ ಹಿನ್ನೆಲೆ, ಆ ಸ್ವಾರ್ಥದ ರಾಜಕಾರಣ ಇಂತಹ ಸಂಗತಿಗಳನ್ನೂ ಕೂಡ ನಾವು ಇವತ್ತು ನೋಡುತ್ತಿದ್ದೇವೆ. ಹಾಗೆಯೇ ಇಡೀ ದೇಶದಲ್ಲಿ ಸ್ತ್ರೀಯರ ಮೇಲೆ ಆಗುತ್ತಿರುವಂತಹ ದೌರ್ಜನ್ಯ. ನಮ್ಮ ಪರಂಪರಾಗತ ಮೌಲ್ಯಗಳನ್ನು ಮರೆತಾಗ ಈ ರೀತಿಯ ಸಂಗತಿಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ. ಯತ್ರ ನಾರ್ಯಸ್ತು ಪೂಜ್ಯಂತೆ ಎಂದು ಹೇಳಿದ ನಾಡಿನಲ್ಲೇ, ಅತ್ಯಂತ ಅಸಹ್ಯಕರ ರೀತಿಯಲ್ಲಿ ಸ್ತ್ರೀಯರ ಮೇಲೆ ಆಗುತ್ತಿರುವಂತಹ ದೌರ್ಜನ್ಯ. ಇದನ್ನೆಲ್ಲವನ್ನು ಸಮಾಡುವ ಹೊಣೆ ನಮ್ಮ ಸಮಾಜದ ಮೇಲೆಯೆ ಇದೆ. ಮೂಲವನ್ನು ವಿಶ್ಲೇಷಿಸದರೆ ಯಥಾಪ್ರಕಾರ ನಾವು ಹೋಗುವಂಥದ್ದು ವ್ಯಕ್ತಿಯನ್ನು ಸುಧಾರಿಸುವುದರಲ್ಲಿಯೇ. ಆ ವ್ಯಕ್ತಿಯ ಜೀವನವನ್ನು ಸುಧಾರಿಸಿದಾಗ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಗುಣಗಳು ಬಂದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಪರಮ್ ವೈಭನ್ನೇತುಮೇ  ತತ್‌ಸ್ವರಾಷ್ಟ್ರಮ್ ಎನ್ನುವ ಸಾಧನೆ ಸಾಧ್ಯವಾಗುತ್ತದೆ. ಯುಗಾದಿಯ ದಿವಸ ಪರಮ ಪೂಜನೀಯ ಡಾಕ್ಟರ್‌ಜೀಯವರ ಜೀವನವನ್ನು ಸ್ಮರಣೆ ಮಾಡುವುದು ಎಂದರೆ ನಮ್ಮ ಜೀವನದಲ್ಲ ಈ ಸಂಕಲ್ಪವನ್ನು ಮತ್ತಷ್ಟು ದೃಢಗೊಳಿಸುವುದು. ಇದೇ ಡಾಕ್ಟರ್‌ಜೀಯವರಿಗೆ ನಾವು ಸಲ್ಲಿಸುವ ನಮನ. ಇನ್ನು ಇಡೀ ಸಮಾಜ ಬಂಧುಗಳು, ಸಜ್ಜನರು, ಸಂಘದ ಹಿತೈಶಿಗಳು, ಮಾತಾ ಭಗಿನಿಯರು ಈ ಕಾರ್ಯದಲ್ಲಿ  ಕೈಜೋಡಿಸಿದರೆ ಅತ್ಯಂತ ಸುಂದ ಸಮಾಜವನ್ನು ನಿರ್ಮಾಣ ಮಾಡುವುದು ಸಾಧ್ಯವಾಗುತ್ತದೆ.

ವೇದಿಕೆಯಲ್ಲಿ ಬೆಂಗಳೂರು ಮಹಾನಗರ ಮಾನ್ಯ ಸಂಘಚಾಲಕರಾದ ಡಾ ಗಂಗಾಧರ್‌ರವರು ಉಪಸ್ಥಿತರಿದ್ದರು. ಆರೆಸ್ಸೆಸ್ ಹಿರಿಯರಾದ ಮೈ ಚ ಜಯದೇವ, ಚಂದ್ರಶೇಖರ ಭಂಡಾರಿ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ, ಪ್ರಾಂತ ಸಹ ಕಾರ್ಯವಾಹ ಶ್ರೀಧರಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
‘RSS is to unite Hindu Society’: RSS veteran Dr Prabhakar Bhat at Malleshwaram Bengaluru

'RSS is to unite Hindu Society': RSS veteran Dr Prabhakar Bhat at Malleshwaram Bengaluru

Comments 1

  1. K P Pradyumna says:
    8 years ago

    how to get this downloaded please advise

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

Vice- President Hamid ANSARI unveils Statue of Vivekananda at Thiruvanantapuram

Vice- President Hamid ANSARI unveils Statue of Vivekananda at Thiruvanantapuram

December 17, 2013
‘Akhand Bharat Sankalp Diwas’ Program held across major cities of the nation

‘Akhand Bharat Sankalp Diwas’ Program held across major cities of the nation

August 15, 2014
Veteran Swayamsevak – Former Mangalore Vibhag Sanghachalak Dr Madhav Bhandari expired

Veteran Swayamsevak – Former Mangalore Vibhag Sanghachalak Dr Madhav Bhandari expired

July 18, 2012
MEN of STRAW: by Tarun Vijay

MEN of STRAW: by Tarun Vijay

March 31, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In