• Samvada
  • Videos
  • Categories
  • Events
  • About Us
  • Contact Us
Wednesday, February 1, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಸುದೃಢ ರಾಷ್ಟ್ರದಿಂದ ಸುಸ್ಥಿರ ಬದುಕು : ನಾರಾಯಣ ಶೇವಿರೆ

Vishwa Samvada Kendra by Vishwa Samvada Kendra
September 26, 2014
in Articles
251
0
ಸುದೃಢ ರಾಷ್ಟ್ರದಿಂದ ಸುಸ್ಥಿರ ಬದುಕು : ನಾರಾಯಣ ಶೇವಿರೆ
493
SHARES
1.4k
VIEWS
Share on FacebookShare on Twitter

Author Narayana Shevire is a senior RSS Pracharak, holds the responsibility of Pranth Sah-Boudhik Pramukh of RSS Karnataka. This article appeared in UTTHANA monthly on October-2014 issue.

ಇತಿಹಾಸವೆಂದರೆ ರಾಜರ ಕಥೆ ಎನ್ನುವುದಿದೆ. ಇರಬಹುದು. ಸಮಾಜದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಇವುಗಳಿಂದಾಗಿ ಇತಿಹಾಸದಲ್ಲಿ ರಾಜರ ಕಥೆಗೆ ಮಹತ್ತ್ವ ಇದ್ದೇ ಇದೆ. ರಾಜರ ಕುರಿತ ಯಾವ ಉಲ್ಲೇಖವೂ ಇಲ್ಲದ ಇತಿಹಾಸ ಕಥನ ಅಸಮಗ್ರವೆಂದೇ ಹೇಳಬೇಕು. ಜನರ ಕಥೆಯನ್ನು ಒಳಗೊಂಡೇ ರಾಜರ ಕಥೆ ಸಾಗುತ್ತದೆ. ಹಾಗಾಗಿ ಜನಸಾಮಾನ್ಯನ ಬದುಕಿನ ಚಿತ್ರಣವಿಲ್ಲದ ಬರಿಯ ರಾಜರ ಕಥೆಯು ಒಂದು ಅಸಮಗ್ರ ಇತಿಹಾಸ ಕಥನವೇ ಸರಿ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

15india1

 

ರಾಜರೇ ಇಲ್ಲದ ಧರ್ಮರಾಜ್ಯದ ಕಲ್ಪನೆಯೊಂದು ನಮ್ಮಲ್ಲಿದೆ. ಇದರ ವಿವರವನ್ನಾಲಿಸುವಾಗ ಇದೊಂದು ಬರಿಯ ಕಾಲ್ಪನಿಕ ಸ್ಥಿತಿ ಅಂತನಿಸುವುದಿಲ್ಲ. ರಾಜರಿಲ್ಲದ ಈ ಸ್ಥಿತಿ ಅರಾಜಕ ಅನಾಗರಿಕ ಅಂತೂ ಅಲ್ಲವೇ ಅಲ್ಲ. ಇಲ್ಲೇಕೆ ರಾಜನಿಲ್ಲ ಎಂದರೆ ರಾಜನಿಗಿಲ್ಲಿ ಕೆಲಸವೇ ಇಲ್ಲ. ರಾಜನ ಕೆಲಸಗಳನ್ನೆಲ್ಲ ಜನರೇ ಮಾಡುತ್ತಾರೆ. ಧರ್ಮದ ಆಧಾರದಲ್ಲಿ ಎಲ್ಲರೂ ಬದುಕುವಂತೆ ವ್ಯವಸ್ಥೆ ರೂಪಿಸುವುದು ತಾನೆ ರಾಜನ ಕೆಲಸ. ಎಲ್ಲರೂ ನಿಜಾರ್ಥದಲ್ಲಿ ಧಾರ್ಮಿಕರಾದಾಗ  ಮತೀಯ ರಾದಾಗ ಅಲ್ಲ  ಯಾವ ವ್ಯವಸ್ಥೆಯ ಹಂಗೂ ಇರುವುದಿಲ್ಲ. ಒಬ್ಬಿಬ್ಬರು ದಾರಿ ತಪ್ಪಿದಾಗಲೂ ಈ ಶೈಲಿ ಮುಂದುವರಿದುಕೊಂಡು ಹೋದೀತು. ಅಧಿಕ ಸಂಖ್ಯೆಯ ಜನ ದಾರಿಕೆಟ್ಟಾಗ ವ್ಯವಸ್ಥೆ ಬೇಕಾಗುತ್ತದೆ. ರಾಜನ ಆವಶ್ಯಕತೆ ಉಂಟಾಗುತ್ತದೆ. ಧರ್ಮರಾಜ್ಯದಲ್ಲಿ ರಾಜರಿಲ್ಲದ್ದರಿಂದ ರಾಜರ ಕಥೆ ಇರುವ ಪ್ರಶ್ನೆಯೇ ಇಲ್ಲ. ಎಲ್ಲರೂ ರಾಜರೇ ಆಗಿರುವುದರಿಂದ ಧರ್ಮರಾಜ್ಯ ನಿಜವಾದ ಪ್ರಜಾಪ್ರಭುತ್ವ. ಅದಿರಲಿ, ಎಲ್ಲರೂ ಧಾರ್ಮಿಕರಾದಾಗ ಅವರಲ್ಲಿ ಕಥೆ ಹುಟ್ಟುತ್ತಾದರೂ ಹೇಗೆ? ಕಥೆಗೆ ರಸ ಬೇಕು. ಷಡ್ವೈರಿಗಳಿಗೆ ಕೆಲಸವಿಲ್ಲದಲ್ಲಿ ರಸೋತ್ಪತ್ತಿ ಅಸಾಧ್ಯ. ಧರ್ಮರಾಜ್ಯಕ್ಕೆ ಇತಿಹಾಸ ಇರಬಹುದಾದರೂ ಇತಿಹಾಸಕಥನ ಇರುವುದು ಈ ನೆಲೆಯಲ್ಲಿ ಅಸಾಧ್ಯ.

ಬದುಕಿನ ಆವಶ್ಯಕತೆ

ಇತಿಹಾಸದಲ್ಲಿ ಅಧರ್ಮ ಅನ್ಯಾಯಗಳೇ ತುಂಬಿವೆ ಎಂಬ ಗೊಣಗಾಟ ಕೇಳಿ ಬರುವಂಥದ್ದೆ. ಅಧರ್ಮ ಇಲ್ಲದ್ದು ಇತಿಹಾಸಕಥನವಾಗಬಾರದು. ಕೇವಲ ಅಧರ್ಮವಷ್ಟೆ ಇದ್ದುದೂ ಇತಿಹಾಸ ಕಥನವಾಗಬಾರದು. ಕೇವಲ ಧರ್ಮ ಇದ್ದಾಗ ಕಥೆ ಹುಟ್ಟುವುದಿಲ್ಲ. ಕೇವಲ ಅಧರ್ಮ ಇದ್ದಾಗ ಅದರ ಚಿತ್ರಣ ಕಥೆಯಾಗುವುದಿಲ್ಲ. ಹೆಚ್ಚೆಂದರೆ ಅದು ವರದಿಯಾದೀತು. ವರದಿಗೆ ರಸ ಬೇಕಿಲ್ಲ. ವೀರ ಅನ್ನುವುದೊಂದು ರಸ. ಇದಕ್ಕೆ ಆಲಂಬನ ಶೌರ್ಯ. ಅಧರ್ಮವನ್ನು ಮೆಟ್ಟಿ ನಿಂತು ಧರ್ಮವನ್ನು ನೆಲೆಗೊಳಿಸುವ ಕ್ರಿಯೆಗೆ ಬೇಕಾಗುವ ದ್ರವ್ಯ ಶೌರ್ಯ. ಅಲ್ಲಿ ಪ್ರಕಟಗೊಳ್ಳುವ ರಸ ವೀರ. ಹೀಗೆ ಧರ್ಮಾಧರ್ಮಗಳ ಕಾಳಗದಲ್ಲಿ ರಸವೂ ಪ್ರಕಟಗೊಳ್ಳುತ್ತದೆ. ಮೌಲ್ಯವೂ ಪ್ರಕಟಗೊಳ್ಳುತ್ತದೆ. ಮೌಲ್ಯ ಯಾವುದೆಂದರೆ ಅಧರ್ಮದ ವಿರುದ್ಧ ಹೋರಾಡಬೇಕೆಂಬ ಭಾವ. ರಸಕ್ಕೂ ಮೌಲ್ಯಕ್ಕೂ ಎಂಥ ಅನ್ಯೋನ್ಯ ಸಂಬಂಧ! ರಾಮಸೀತೆಯರ ಸರಸ ಶೃಂಗಾರರಸ. ಸೀತೆಯ ಮುಂದೆ ರಾವಣ ಬೇಡುವ ಪ್ರೇಮಭಿಕ್ಷೆ ಯಾವ ರಸದಡಿಯೂ ಬರುವುದಿಲ್ಲ. ಘೋರಿ ಬಂದ ಲೂಟಿಗೈದ, ದೋಚಿಕೊಂಡು ಹೋದ ಎನ್ನುವುದು ಬರಿಯ ವರದಿ ಅಷ್ಟೆ, ಕಥೆಯಲ್ಲ. ಕ್ರೂರಿ ಘೋರಿಯನ್ನು ಪೃಥ್ವೀರಾಜ ಎದುರಿಸಿದ, ಮೊದಲು ಗೆದ್ದು ಕ್ಷಮಿಸಿದ. ಕೊನೆಗೆ ಸೋತ. ಇದು ಕಥೆಯಾಗಬಲ್ಲುದು. ಧರ್ಮವು ಗೆಲ್ಲಲಿ, ಸೋಲಲಿ, ಅದರ ಉಪಸ್ಥಿತಿ ಇರುವುದು ಕಥೆಗೆ ಮುಖ್ಯ. ಗೆದ್ದರೆ ಅದು ಮನುಷ್ಯಬದುಕಿಗೆ ಭರವಸೆ ತುಂಬುವ ಆದರ್ಶ ಕಥೆಯಾಗುತ್ತದೆ. ಸೋತರೆ ಬದುಕಲ್ಲಿ ಎಚ್ಚರ-ಜಾಗೃತಿ ತುಂಬುವ ಕಥೆಯಾಗುತ್ತದೆ. ಪೃಥ್ವೀರಾಜನ ಕಥೆ ನಮಗೊಂದು ಎಚ್ಚರಿಕೆ. ಶಿವಾಜಿ ಕಥೆ ನಮಗೊಂದು ಭರವಸೆ. ಬದುಕಿಗೆ ಎರಡೂ ಅವಶ್ಯ.

ಪಾಶ್ಚಾತ್ಯ ಕಾವ್ಯಜಗತ್ತಿನಲ್ಲಿ ಧರ್ಮಾಧರ್ಮ ನ್ಯಾಯಾನ್ಯಾಯಗಳ ವಿವೇಚನೆ ಅಮುಖ್ಯ. ಗೆದ್ದವ ನಾಯಕ. ಆತ ಧರ್ಮಿಯೇ ಆಗಬೇಕಿಲ್ಲ. ಸೋತವ ಖಳನಾಯಕ. ಆತ ಅಧರ್ಮಿಯೇ ಆಗಬೇಕಿಲ್ಲ. ಹಿಂದೆ ಕನ್ನಡದ ವಿಮರ್ಶಕ ರೊಬ್ಬರು ಒಂದು ಅಪ್ಪಣೆ ಕೊಡಿಸಿದ್ದರು. ’ಪಾಶ್ಚಾತ್ಯ ಸಾಹಿತ್ಯಕ್ಕೂ ಭಾರತದ ರಾಮಾಯಣ ಮಹಾಭಾರತಾದಿ ಸಾಹಿತ್ಯಗಳಿಗೂ ವ್ಯತ್ಯಾಸವೇನಿಲ್ಲ. ಎರಡೂ ಕಡೆ ಒಂದು ಹೆಣ್ಣಿಗಾಗಿ ಇಬ್ಬರು ಗಂಡಸರ ನಡುವೆ ನಡೆವ ಹೋರಾಟ ಸಾಮಾನ್ಯ ವಿಷಯ. ಅವುಗಳ ನಿರೂಪಣೆಯಲ್ಲಷ್ಟೆ ವ್ಯತ್ಯಾಸ.’ ಧರ್ಮಾ ಧರ್ಮದ ವಿವೇಚನೆ ಇಲ್ಲದೇ ಹೋದಾಗ ಹೇಗೆ ವಿಮರ್ಶೆಯಂಥ ವಿಮರ್ಶೆಯೇ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಇದೊಂದು ದೃಷ್ಟಾಂತವಷ್ಟೆ. ಸೀತೆ ರಾಮನ ಪತ್ನಿಯಾಗಿದ್ದೂ, ಈ ವಿಮರ್ಶಕರ ಪಾಲಿಗೆ ಆಕೆ ರಾವಣನೂ ಬಯಸಬಹುದಾದ, ಕ್ರಮಪ್ರಕಾರ ಬಯಸಬಹುದಾದ ಓರ್ವ ಹೆಣ್ಣು ಅಷ್ಟೆ. ದ್ರೌಪದಿ ಪಾಂಡವರ ಪತ್ನಿಯಾದರೂ ಆಕೆಯನ್ನು ಕೌರವರು ಅಪಮಾನಿಸಿದ್ದು ಈ ವಿಮರ್ಶಕರಿಗೆ ತಪ್ಪೆನಿಸುವುದಿಲ್ಲ. ಈ ವಿಮರ್ಶಕರ ಮೇಲೆ ಕೇವಲ ಪಾಶ್ಚಾತ್ಯ ಪ್ರಭಾವ ಆಗಿದೆ ಎಂದಷ್ಟೆ ಇದ್ದರೆ ಅದನ್ನು ನಿರಸ್ತಗೊಳಿಸಬಹುದಾಗಿತ್ತೋ ಏನೋ? ಆದರೆ ಹಾಗಿಲ್ಲವೆನಿಸುತ್ತದೆ. ಏಕೆಂದರೆ, ರಾಮನ ಜಾಗದಲ್ಲಿ ರಾವಣನನ್ನೂ ಪಾಂಡವರ ಜಾಗದಲ್ಲಿ ಕೌರವರನ್ನೂ ಇಟ್ಟು ನೋಡಿ. ಆಗ ಇವರ ವಿಮರ್ಶೆ ಧಾಟಿಯೇ ಬದಲಾಗುತ್ತದೆ. ರಾವಣ-ಕೌರವರಲ್ಲಿಲ್ಲದ ಉತ್ತಮ ಗುಣಗಳ ಹಾಗೂ ರಾಮ-ಪಾಂಡವರಲ್ಲಿಲ್ಲದ ದೋಷಗಳ ಕುರಿತು ಇವರೆಲ್ಲ ಗೈದ ಶೋಧ ಸಾಹಸಗಳಿಂದಲೇ ಇದು ಗ್ರಾಹ್ಯ. ಇವರಲ್ಲಿರುವುದು ಪಾಶ್ಚಾತ್ಯ ಪ್ರಭಾವಕ್ಕಿಂತ ಮಿಗಿಲಾಗಿ ಹಿಂದು ಮೌಲ್ಯದ್ವೇಷ. ಇದಕ್ಕೆ ಪಾಶ್ಚಾತ್ಯ ‘ಮೌಲ್ಯ’ ಪೋಷಣೆಯಾಗಿದೆ ಅಷ್ಟೆ.

ದೃಷ್ಟಿದೋಷ

ಮೌಲ್ಯ ಅಮುಖ್ಯತೆಯಿಂದ ಪಾಶ್ಚಾತ್ಯ ಸಾಹಿತ್ಯ ಬೆಳೆದು ನಿಂತಿದೆ. ಸರಿ-ತಪ್ಪು, ಧರ್ಮಾಧರ್ಮಗಳ ವಿವೇಚನೆಯಿಲ್ಲದ ಈ ಸಾಹಿತ್ಯದ ಪ್ರಭಾವ ಅಲ್ಲಿಯ ಇತಿಹಾಸಕಾರರ ಮೇಲೂ ಆಗಿದೆ. ಅಲ್ಲಿಯ ಇತಿಹಾಸಕ್ಕೆ ಸರಿ-ತಪ್ಪು ಮೌಲ್ಯ ವಿವೇಚನೆಗಿಂತ ದಿನಾಂಕ ಸ್ಥಳಗಳೇ ಹೆಚ್ಚು ಮುಖ್ಯ. ನಿರ್ದಿಷ್ಟತೆ ದೃಷ್ಟಿಯಿಂದ ದೇಶಕಾಲಗಳಿಗೆ ಮಹತ್ತ್ವ ಇದ್ದೇ ಇದೆ. ಆದರೆ ಅದೇ ಮುಖ್ಯವಾದಾಗ ಅದೊಂದು ವರದಿಯಷ್ಟೆ ಆಗುತ್ತದೆ. ಅದು ಅಮುಖ್ಯವಾದವರಿಗೆ ಇತಿಹಾಸಪ್ರಜ್ಞೆಯೇ ಇಲ್ಲವೆಂಬ ಆಕ್ಷೇಪವೂ ಹೊರಬರುತ್ತದೆ.

ಇವರು ಕೊನೆಗೆ ಇತಿಹಾಸದ ಕುರಿತು ಬಂದು ತಲಪುವ ನಿಷ್ಕರ್ಷೆ ಯಾವುದೆಂದರೆ, ಅದು ರಾಜ-ರಾಜರ ನಡುವಿನ ಸಂಘರ್ಷ. ಇವರಿಗೆ ಸಾಹಿತ್ಯದಲ್ಲಿ ಹೆಣ್ಣಿಗಾಗಿ ಗಂಡಸರ ನಡುವಿನ ಸಂಘರ್ಷ ಕಾಣುತ್ತದೆ. ಇತಿಹಾಸದಲ್ಲಿ ಅಧಿಕಾರಕ್ಕಾಗಿ ರಾಜರ ನಡುವಿನ ಸಂಘರ್ಷ ಕಾಣುತ್ತದೆ. ಈ ದೃಷ್ಟಿದೋಷವೇ ಮುಂದುವರಿದು ಮನುಷ್ಯ ಬದುಕೂ ಕೂಡಾ ಜೀವನೋಪಾಯಕ್ಕಾಗಿ ಮನುಷ್ಯರೊಳಗೆ ನಡುವೆ ನಡೆದ ಸಂಘರ್ಷವಾಗಿ ತೋರುತ್ತದೆ. ಮನುಷ್ಯಜೀವನ ಎಂಬುದು ಸಂಘರ್ಷಮಯವಾದುದು ಎಂದು ಇಂಥವರು ಘಂಟಾಘೋಷವಾಗಿ ಸಾರುವ ಹೇಳಿಕೆ ಹಲವರಿಗೆ ತತ್ತ್ವಜ್ಞಾನದ ಮಾತಾಗಿ ಆಪ್ಯಾಯಮಾನವಾಗಿಬಿಡುತ್ತದೆ. ’ಯಾರಿಗೇ ಆಗಲಿ, ಜೀವನೋಪಾಯ ಅನಿವಾರ್ಯ. ಅದಕ್ಕಾಗಿ ಮಾಡಲಾಗುವ ಸಂಘರ್ಷವೂ ಹಾಗಾಗಿ ಅನಿವಾರ್ಯ. ಈ ಸೃಷ್ಟಿಯಲ್ಲಿ ಪ್ರತಿಯೊಂದು ಕಿರಿಜೀವಿಯೂ ಮತ್ತೊಂದು ಹಿರಿಜೀವಿಯ ಆಹಾರವಾಗಿದೆ ಅಥವಾ ಸಂಘರ್ಷದಲ್ಲಿ ಒಂದು ಜೀವಿಯ ಆಹಾರ ಮತ್ತೊಂದರ ಹೊಟ್ಟೆ ಸೇರುತ್ತದೆ. ಮನುಷ್ಯನೂ ಈ ಸೃಷ್ಟಿಯದೇ ಅಂಗ. ಅವನ ಜೈವಿಕ ಅಸ್ತಿತ್ವವೂ ಮತ್ತೊಬ್ಬನ ಅಸ್ತಿತ್ವದ ಜತೆ ತಳುಕು ಹಾಕಿಕೊಂಡಿದೆ. ಅವರಿಬ್ಬರ ಸಂಘರ್ಷದಲ್ಲಿ ಗೆದ್ದವನ ಬದುಕು ಸುಖಮಯವಾಗಿ ಮುಂದುವರಿಯುತ್ತದೆ ಮತ್ತು ಈ ಸಂಘರ್ಷ ಸರಣಿ ಆಟದಂತೆ ನಿರಂತರ ನಡೆಯುತ್ತದೆ.’ ಇದು ಬದುಕು ಸಂಘರ್ಷಮಯವಾಗಿದೆ ಎನ್ನುವುದರ ಹಿಂದಿರುವ ತರ್ಕಸರಣಿ.

ಸಾಹಿತಿಯೆನಿಸಿಕೊಂಡವನ ಹೇಳಿಕೆಯ ಸಂಘರ್ಷದ ಹಿಂದಿರುವುದು ಹೆಣ್ಣು. ಅಂದರೆ ಸ್ಥೂಲವಾಗಿ ಕಾಮ ಅಥವಾ ಷಡ್ವೈರಿಗಳು. ಇತಿಹಾಸಕಾರನೆನಿಸಿಕೊಂಡವನ ಹೇಳಿಕೆಯ ಸಂಘರ್ಷದ ಹಿಂದಿರುವುದು ಅಧಿಕಾರ, ರಾಜ್ಯ, ಮಣ್ಣು. ಇಲ್ಲಿಯೂ ಕೆಲಸ ಮಾಡುತ್ತಿರುವುದು ಷಡ್ವೈರಿಗಳೇ. ತತ್ತ್ವಜ್ಞಾನಿಯೆನಿಸಿಕೊಂಡವನ ಹೇಳಿಕೆಯ ಸಂಘರ್ಷದ ಹಿಂದೆ ಇರುವುದು ಸುಖಜೀವನ. ಇದು ಇಂದ್ರಿಯಸುಖದ ಜೀವನ. ಹೆಚ್ಚೆಚ್ಚು ಹಣ ಗಳಿಸುವುದರಲ್ಲಿ ಸುಖ ಅಷ್ಟಷ್ಟು ಹೆಚ್ಚು ಇದೆ ಎಂದುಕೊಂಡ ಜೀವನದೃಷ್ಟಿ. ಸ್ಥೂಲವಾಗಿ ಇಲ್ಲಿ ಜೀವನ ಹೊನ್ನಿನ ಹಿಂದಿದೆ, ಸುಖದ ಹೆಸರಲ್ಲಿ. ಕಾಲ-ದೇಶಭೇದವಿಲ್ಲದೆ ಹೆಣ್ಣು-ಮಣ್ಣು-ಹೊನ್ನಿಗಾಗಿ ಸಂಘರ್ಷ ನಡೆದೇ ಇದೆ. ಮತ್ತಿದು ನಿರಂತರ ಎಂದು ಭೌತಿಕವಾಗಿ ಆಲೋಚಿಸುವ ಎಲ್ಲರೂ ಹೇಳುತ್ತಿದ್ದಾರೆ.

ಭೌತಿಕವಾಗಿ ಸ್ಥಾನ-ಸುಖ-ಸಂಪತ್ತು ಗಳಿಗಾಗಿ ಇಲ್ಲೊಂದು ಕದನ ನಡೆದಿದೆ ಎಂಬುದು ಮೇಲಿನೆಲ್ಲ ಅಂಶಗಳ ಒಟ್ಟಾರೆ ಧಾಟಿ. ಅಂದರೆ ಭೌತಿಕ ಬಯಕೆಗಳಿಗಾಗಿ ಕದನ. ಕದನರಹಿತ ಸ್ಥಿತಿ ಸಾಧ್ಯವೆ?

ಗಾಂಧಿಗೆ ಮೇಲ್ಪಂಕ್ತಿಯಾಗಿರುವ ರಷ್ಯಾದ ಟಾಲ್‌ಸ್ಟಾಯ್ ಅಹಿಂಸೆಯನ್ನು ದ್ರವ್ಯವಾಗಿಸಿ ಯುದ್ಧರಹಿತ ಸ್ಥಿತಿಯ ಕಥೆಗಳನ್ನು ಹೆಣೆದಿದ್ದಾನೆ. ತನ್ನ ಸಾಹಿತ್ಯಕೃತಿಗಳೂ ಸೇರಿದಂತೆ ಪೂರ್ವಾರ್ಧ ಬದುಕಿನ ತನ್ನೆಲ್ಲ ಚಿಂತನೆ ಗಳನ್ನೂ ತನ್ನದಲ್ಲವೆಂದು ನಿರ್ಧರಿಸಿರುವ ಆತ, ತನ್ನ ಉತ್ತರಾರ್ಧದ ಬದುಕಿನ ಚಿಂತನೆಯನ್ನು ಪೂರ್ತಿ ಅಹಿಂಸಾಮಯಗೊಳಿಸಿದ್ದಾನೆ. ಅವನ ಅಂತಹ ಅಹಿಂಸಾಸಮರ್ಥಕ ಕಥೆಯೊಂದರಲ್ಲಿ ರಾಜನೊಬ್ಬ ಅಧಿಕಾರಕ್ಕೇರಿ ಸೈನ್ಯವನ್ನು ವಿಸರ್ಜಿಸಿ ಸೈನಿಕರನ್ನೆಲ್ಲ ಅವರವರ ಊರಿಗೆ ಕಳಿಸಿ ಕೃಷಿಕಾರ್ಯಕ್ಕೆ ಹಚ್ಚುತ್ತಾನೆ. ಬಳಿಕ ರಾಜ್ಯವ್ಯವಸ್ಥೆಯನ್ನು ನಿರಸ್ತಗೊಳಿಸಿ ಎಲ್ಲರನ್ನೂ ಕೃಷಿಕಾರ್ಯಕ್ಕೆ ತೊಡಗಿಸಿ ತಾನೂ ಕೃಷಿಕಾರ್ಯದಲ್ಲಿ ಪೂರ್ಣಮಗ್ನವಾಗುತ್ತಾನೆ. ಪಕ್ಕದ ರಾಜ ಈ ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. ಆದರಿಲ್ಲಿ ದಾಳಿಯೆದುರಿಸಲು ಸೈನಿಕರೇ ಇಲ್ಲ. ಎಲ್ಲರೂ ಹೊಲದಲ್ಲಿದ್ದಾರೆ. ಶತ್ರುಸೈನಿಕರು ಹೊಲಕ್ಕೆ ದಾಳಿಗೈಯುತ್ತಾರೆ. ಆಗ ಕೃಷಿಕರಾಗಿದ್ದ ಸೈನಿಕರೆಲ್ಲ ನಿಮಗೇನು ಕೊಡಲಿ ಎನ್ನುತ್ತ ಆತಿಥ್ಯಕ್ಕೆ ತೊಡಗುತ್ತಾರೆ. ದಾಳಿಗೆ ಪರ್ಯಾಯವಾಗಿ ಆತಿಥ್ಯ ಸ್ವೀಕರಿಸಬೇಕಾದ ಸನ್ನಿವೇಶವನ್ನೆದುರಿಸಿದ ಶತ್ರುರಾಜನೂ ತನ್ನ ಸೈನ್ಯವನ್ನು ವಿಸರ್ಜಿಸಿ ತಾನೂ ರಾಜಕಾರ್ಯ ದಿಂದ ವಿಮುಕ್ತನಾಗಿ ಕೃಷಿಕನಾಗುತ್ತಾನೆ. ಎಲ್ಲರೂ ಕೃಷಿಕರಾಗಿ ಸರ್ವತ್ರ ಶಾಂತಿ ಅಹಿಂಸೆ ನೆಲೆಗೊಳ್ಳುತ್ತವೆ.

ಧರ್ಮಸೂಕ್ಷ್ಮತೆ

ಧರ್ಮರಾಜ್ಯಕ್ಕೆ ಸನಿಹದಲ್ಲಿರುವಂತೆ ತೋರುವ ಈ ರಾಜರಹಿತ ರಾಜ್ಯರಹಿತ ವ್ಯವಸ್ಥಾರಹಿತ ವ್ಯವಸ್ಥೆಯಲ್ಲಿ ಅಹಿಂಸೆಗೇ ಪ್ರಾಧಾನ್ಯ. ಅಹಿಂಸೆಯೊಂದೇ ಎಲ್ಲದನ್ನೂ ರೂಪುಗೊಳಿಸುತ್ತದೆ; ಎಲ್ಲದನ್ನೂ ಸಾಧಿಸಿಬಿಡುತ್ತದೆ. ಇಲ್ಲಿ ಧರ್ಮದ ಪ್ರಸ್ತಾಪವಿಲ್ಲ. ಜನರು ಅಹಿಂಸಕರಾಗಬೇಕು ಸರಿ, ಅಹಿಂಸಕರೆಲ್ಲ ಧಾರ್ಮಿಕರೆ? ಕೆಲವೊಮ್ಮೆ ಸುಳ್ಳು ಹೇಳುವ, ಅನ್ಯಾಯ-ಅನೃತದಂತೆ ತೋರುವ, ಹಿಂಸೆಯಂತೆ ಕಾಣುವ ಕೃತ್ಯಗಳೂ ಧರ್ಮವೆನಿಸಬಲ್ಲವೆಂಬ ಧರ್ಮಸೂಕ್ಷ್ಮತೆಯ ಸಂದರ್ಭಗಳಿವೆ. ಇಲ್ಲಿ ಅಂಥ ಸೂಕ್ಷ್ಮತೆಗಳ ಸುಳಿವು ಕಾಣುವುದಿಲ್ಲ. ಅಹಿಂಸೆಯಿಂದ ಅಹಿಂಸೆಯನ್ನಷ್ಟೆ ಯಥೇಚ್ಛ ಎಲ್ಲೆಡೆ ಬೆಳೆಯಬಹುದೆಂಬ ಭರಪೂರ ವಿಶ್ವಾಸ ಇಲ್ಲಿ ಎದ್ದು ತೋರುತ್ತದೆ.

ಅಹಿಂಸೆಯಿಂದ ಅಹಿಂಸೆಯನ್ನು ಮಾತ್ರ ಬೆಳೆಯಬಹುದು ಎಂಬುದು ಎಲ್ಲರ ಅನುಭವವಾದರೆ ಆಗ ಈ ದಾರಿಯನ್ನು ಅವಶ್ಯ ಅನುಸರಿಸೋಣ. ಆದರೆ ಇದನ್ನು ಆಗಗೊಡದಷ್ಟು ಮನುಷ್ಯಪ್ರವೃತ್ತಿ ಬಲವಾಗಿದೆ. ಮನುಷ್ಯನೇನು ಪ್ರಾಣಿಗಳಂತಲ್ಲ ಎಂಬುದು ಹೆಮ್ಮೆಯ ಸಂಗತಿ ಇರಬಹುದು. ಆದರೆ ಪ್ರವೃತ್ತಿಸಂಬಂಧಿತವಾಗಿ ಆತ ಪ್ರಾಣಿಗಳಂತಲ್ಲ ಎಂಬುದು ದುಃಖದ ಸಂಗತಿಯೇ. ಹೇಗೆಂದರೆ – ಪ್ರಾಣಿಗಳು ಹೊಟ್ಟೆಪಾಡಿಗಾಗಿ ಅನ್ಯಪ್ರಾಣಿಗಳನ್ನು ಕೊಂದು ತಿನ್ನುವುದು, ಯಾರದೋ ಹೊಲದಲ್ಲಿ (ಯಾರದೇ ಹೊಲವಾದರೂ ಅದು ಯಾವುದೇ ಪ್ರಾಣಿಗಳದ್ದಲ್ಲ ಎಂಬುದು ನಮ್ಮೆಲ್ಲರ ಖಚಿತ ನಿಲುವಷ್ಟೆ!) ಬೆಳೆದ ದವಸಧಾನ್ಯಾದಿಗಳನ್ನು ತಿನ್ನುವುದು ತಪ್ಪೆಂದು ಗೊತ್ತಿದ್ದಲ್ಲ ಅಥವಾ ತಾನಿದನ್ನೆಲ್ಲ ಮಾಡುತ್ತಿರುವುದು ಸರಿಯಾಗಿಯೇ ಇದೆ ಎಂಬ ಭಾವವೂ ಅವುಗಳಲ್ಲಿಲ್ಲ. ಸರಿ-ತಪ್ಪುಗಳ ಗೊಡವೆಯೇ ಇಲ್ಲದೆ ಅವು ಸಹಜಭಾವದಲ್ಲಿವೆ. ಪ್ರಾಣಿಪ್ರವೃತ್ತಿ ಸಹಜವಾದುದು. ಆದರೆ ಮನುಷ್ಯಪ್ರವೃತ್ತಿ ಹಾಗಲ್ಲ. ಆತನಿಗೆ ತಾನು ಗೈವ ಕೃತ್ಯಗಳ ಸರಿ-ತಪ್ಪು ವಿವೇಚನೆ ಇದೆ. ಕಳ್ಳನಿಗೆ ತಾನು ಕೈಗೊಂಡ ವೃತ್ತಿ  ಅದನ್ನು ವೃತ್ತಿ ಎನ್ನುವುದಾದರೆ  ಅನ್ಯಾಯದ್ದು, ಸರಿಯಲ್ಲ ಎಂದು ಖಚಿತ ಗೊತ್ತಿದೆ. ಆದರೂ ತನ್ನ ಬಯಕೆಗಳ ಈಡೇರಿಕೆಗಾಗಿ ಅದನ್ನಾತ ಕೈಗೊಂಡಿದ್ದಾನೆ. ’ಧರ್ಮ ಗೊತ್ತಿದೆ, ಆದರೆ ನನಗದರಲ್ಲಿ ಪ್ರವೃತ್ತಿಯಿಲ್ಲ; ಅಧರ್ಮ ಯಾವುದೆಂದೂ ಗೊತ್ತಿದೆ, ಆದರೆ ನನಗದರಿಂದ ನಿವೃತ್ತಿ ಆಗಲಸಾಧ್ಯ’ ಎಂಬ ದುರ್ಯೋಧನನ ಮಾತು ಮನುಷ್ಯಪ್ರವೃತ್ತಿಯನ್ನು ಚೆನ್ನಾಗಿ ಕಡೆದಿಟ್ಟಿದೆ. ಗೊತ್ತಿದ್ದೂ ಅಧರ್ಮ-ಅನ್ಯಾಯಗಳ ಹಾದಿ ತುಳಿಯುವುದಿದೆಯಲ್ಲ, ಅದು ಅಸಹಜ. ಇದು ಮನುಷ್ಯಪ್ರವೃತ್ತಿಯ ಒಂದು ಧ್ರುವ. ಗೊತ್ತಿದ್ದೇ ಧರ್ಮನ್ಯಾಯಗಳನ್ನನುಸರಿಸುವುದೂ ಅಸಹಜವೇ. ಅದು ಮನುಷ್ಯಪ್ರವೃತ್ತಿಯ ಇನ್ನೊಂದು ಧ್ರುವ. ಮನುಷ್ಯ ಬುದ್ಧಿಪೂರ್ವಕವಾಗಿ ಪರೋಪಕಾರ ಮಾಡಲು ಶಕ್ತ. ಮರ ಹಣ್ಣು ನೆರಳು ಕೊಡುತ್ತದೆ. ಆದರದು ಪರೋಪಕಾರಬುದ್ಧಿಯಿಂದಲೇ? ಅದು ಸಹಜವಾಗಿ ಕೊಡುತ್ತಿದೆ, ಅಷ್ಟೆ. ಕೊಡದಿರಲು ಅದಕ್ಕೆ ಅಸಾಧ್ಯ. ಯೋಗ್ಯನಿಗೆ ದಾನಗೈವ ಸಾಮರ್ಥ್ಯ ಮನುಷ್ಯನಿಗಷ್ಟೆ ಇದೆ. ಮನುಷ್ಯನ ಈ ಪ್ರವೃತ್ತಿ ಅಸಹಜ ಹೌದು. ಆದರಿದು ಧರ್ಮಧ್ರುವದಲ್ಲಿರುವ ಅಸಹಜತೆ. ಇದನ್ನು ಸಂಸ್ಕೃತಿ ಎನ್ನಬಹುದು. ಆಗ ಅಧರ್ಮಧ್ರುವದಲ್ಲಿರುವ ಮನುಷ್ಯಪ್ರವೃತ್ತಿ ವಿಕೃತಿಯಾಗುತ್ತದೆ.

ಸಹಜ-ಅಸಹಜಗಳ ತಾಕಲಾಟ

ವಿಕೃತವಾಗುಳ್ಳದ್ದು ಹೇಗೆ ಮನುಷ್ಯ ಪ್ರವೃತ್ತಿಯೋ ಹಾಗೇ ಸಂಸ್ಕೃತವಾಗುಳ್ಳದ್ದೂ ಮನುಷ್ಯಪ್ರವೃತ್ತಿಯೇ. ವ್ಯವಹಾರದಲ್ಲಿ ವಿಕೃತ ವಾಗುಳ್ಳದ್ದಕ್ಕೇ ಮನುಷ್ಯಪ್ರವೃತ್ತಿಯೆಂಬ ವಿಶೇಷಣ ಸಲ್ಲುತ್ತಿದೆ. ಮನುಷ್ಯ ಪ್ರಪಂಚವನ್ನು ಈಗ ಆಳುತ್ತಿರುವುದೇ ಅದು. ‘ಬಲವಾನ್ ಇಂದ್ರಿಯಗ್ರಾಮಃ’ ಹೇಳಿಲ್ಲವೆ ವ್ಯಾಸರು? ವ್ಯಾಸರಂಥ ವ್ಯಾಸರು! ‘ವಿದ್ವಾಂಸಮಪಿ ಕರ್ಷತಿ’ ಎಂಬ ಅವರ ಮಾತನ್ನು ‘ವಿದ್ವಾಂಸ ಮಪಕರ್ಷತಿ’  ವಿದ್ವಾಂಸರನ್ನು ಆಕರ್ಷಿಸುವುದಿಲ್ಲ ಎಂದು ತಿದ್ದಹೊರಟ ತಮ್ಮ ಶಿಷ್ಯನನ್ನೇ ಅದು ಹೇಗೆ ಆಕರ್ಷಿಸುತ್ತದೆ ಎಂದು ತೋರಿಸಿ ಆತನ ಜಿತೇಂದ್ರಿಯತ್ವದ ಅಹಂಕಾರವನ್ನು ನೀಗಿಸಬೇಕಾಯಿತು. ಇಂದ್ರಿಯಗಳು ಮನುಷ್ಯನನ್ನು ಪ್ರಾಣಿಗಳಂತೆ ಸಹಜವಾಗಿ ಇರಲು ಬಿಡುವುದಿಲ್ಲ. ವಿಕಾರಕ್ಕೆಳಸುತ್ತವೆ. ಈ ನೆಲೆಯಲ್ಲೂ, ಹಾಗಾಗಿ ಮನುಷ್ಯಬದುಕು ಸಹಜವಲ್ಲ. ಅಸಹಜವೇ ಹೌದೆಂದಾದಲ್ಲಿ, ಅಸಹಜತೆ ನಾನಾ ಪ್ರಕಾರವಾಗಿ, ಮುಖ್ಯವಾಗಿ ಎರಡು ಭಿನ್ನ ಪ್ರಕಾರವಾಗಿ ಇರುತ್ತದೆಂದಾದಲ್ಲಿ, ಯಾವ ಅಸಹಜತೆಯನ್ನು ಆಯ್ಕೆ ಮಾಡಬೇಕೆಂಬುದು ಅವನ ಕೈಯಲ್ಲೇ ಇದೆ. ತೊಡಕಿರುವುದೇ ಇಲ್ಲಿ. ಈ ಆಯ್ಕೆ ಅಷ್ಟು ಸುಲಭವಿಲ್ಲ. ಸಂಸ್ಕೃತ ಅಸಹಜತೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ವಿಕೃತ ಅಸಹಜತೆಯನ್ನು ಬಿಡಲಾಗುವುದಿಲ್ಲ. ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ’ ಭಾವ.

ವಿಕೃತಪ್ರವೃತ್ತಿ ತನ್ನ ಸ್ವಭಾವಕ್ಕೆ ತಕ್ಕಂತೆ ಮನುಷ್ಯನಲ್ಲಿ ಬದುಕಿನ ಕುರಿತ ಸ್ಥಿರತೆಯನ್ನು ಭೌತಿಕ ನೆಲೆಯಲ್ಲಿ ಹುಟ್ಟುಹಾಕುತ್ತದೆ. ಸುಖ, ಸಂಪತ್ತು, ಸ್ಥಾನ, ಅಧಿಕಾರ ಇತ್ಯಾದಿ ಭೌತಿಕ ಆಯಾಮದಲ್ಲಿ ಬದುಕಿನ ಸ್ಥಿರತೆಯನ್ನು ಕಂಡುಕೊಂಡು ಅದನ್ನು ಗಳಿಸುವುದಕ್ಕೆ ಇಡಿಯ ಬದುಕಿನ ಅವಧಿ ವ್ಯಯವಾಗುತ್ತದೆ. ಎಲ್ಲರೂ ಭೌತಿಕ ಆಯಾಮದಲ್ಲೇ ಬದುಕಿನ ಸ್ಥಿರತೆಯನ್ನು ಸಾಧಿಸಹೊರಟರೆ ಅಲ್ಲಿ ಸ್ಪರ್ಧೆ ಏರ್ಪಡುವುದು ಸಹಜ. ಈ ರೀತಿ ಸ್ಥಿರತೆಯನ್ನು ಕಾಣಹೊರಡುವುದು ಷಡ್ವೈರಿಗಳಿಗೆ ತುಂಬಾ ಆಪ್ಯಾಯಮಾನ ಸಂಗತಿ. ಇದು ಅವುಗಳದೇ ಕ್ಷೇತ್ರದಲ್ಲಿ ಕಾಲಿಟ್ಟಂತೆ. ಎಲ್ಲರೂ ಇದೇ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಏರ್ಪಟ್ಟಾಗಂತೂ ಅವುಗಳಿಗೆ ಸ್ವಲ್ಪವೂ ವಿಶ್ರಾಂತಿಯೇ ಇಲ್ಲದಂತೆ ಪೂರ್ಣ ಕೆಲಸ. ಎಂದರೆ, ಭೌತಿಕವಾಗಿ ಇದಕ್ಕಿಂತ ಸ್ಥಿರತೆಯನ್ನು ಸಾಧಿಸಹೊರಡುವುದೆಂದರೆ ಬದುಕನ್ನು ಸಂಘರ್ಷಮಯಗೊಳಿಸುವುದೆಂದೇ ಅರ್ಥ. ಈ ನೆಲೆಯಲ್ಲಿ ಬದುಕು ಸಂಘರ್ಷಮಯ ಎಂದಿದ್ದು ಸರಿಯೇ ಇದೆ. ಈ ನೆಲೆಯನ್ನು ಬಿಟ್ಟು ಇನ್ನಾವ ನೆಲೆಯೂ ಬದುಕಿಗಿಲ್ಲ ಎಂದು ಅಂದುಕೊಂಡದ್ದು ಮಾತ್ರ ಆಕ್ಷೇಪಾರ್ಹವಾಗಿದೆ.

ವ್ಯವಸ್ಥೆಯಲ್ಲಿನ ವಿಪರ್ಯಾಸ

ಭೌತಿಕ ಕ್ಷೇತ್ರದಲ್ಲಿ ಪರಿಶ್ರಮಹಾಕುತ್ತ ಒಬ್ಬ ಉತ್ತಮ ಸಶಕ್ತ ಸ್ಪರ್ಧಾಳು ತಯಾರಾಗಬೇಕು. ಇದು ಸರಿ ಇರಲಿ, ತಪ್ಪೇ ಇರಲಿ, ತಯಾರಾಗಬೇಕಾದುದಂತೂ ಹೌದೇ ಹೌದು. ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಶಿಕ್ಷಣವನ್ನು ಕೊಡುತ್ತೇವೆಂದು ಘೋಷಿಸುವ ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಅದರ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿ ಆ ವ್ಯವಸ್ಥೆಯ ಸುಪರ್ದಿಗೆ ತಮ್ಮ ಮಕ್ಕಳನ್ನು ನೆಮ್ಮದಿಯಿಂದ ಒಪ್ಪಿಸಿಬಿಡುವ ಪಾಲಕರು  ಇವರಿಂದಾಗಿ ಭೌತಿಕ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧಾಳುಗಳಾಗಿ, ಅದರಲ್ಲೂ ಬೌದ್ಧಿಕವಾಗಿ ಕಟ್ಟುಮಸ್ತಾದ ಸ್ಪರ್ಧಾಳುಗಳಾಗಿ ರೂಪುಗೊಳ್ಳುವುದರ ಬದಲಾಗಿ ರಣಹೇಡಿಗಳಂಥ ಸ್ಪರ್ಧೆಗಂಜಿ ಕೆಲವೊಮ್ಮೆ ಸೋತು ಆತ್ಮಹತ್ಯೆಗೆಳಸುವಂಥ ವ್ಯಕ್ತಿತ್ವಗಳೇ ಹೆಚ್ಚುಹೆಚ್ಚಾಗಿ ರೂಪುಗೊಳ್ಳುತ್ತಿದೆಯಲ್ಲ! ಇದು ವ್ಯವಸ್ಥೆಯಲ್ಲಿನ ವಿರೋಧಾಭಾಸವೂ ಹೌದು, ವಿಪರ್ಯಾಸವೂ ಹೌದು. ಸಾಮಾಜಿಕವಾಗಿ ಇದೊಂದು ಅಪಾಯಕಾರಿ ಕೇಡೂ ಹೌದೇ ಹೌದು.

ಇದು ಬದುಕನ್ನು ಭೌತಿಕವಾಗಿ ಬೆಳೆಸಬೇಕೆಂದು ಲಭ್ಯವಾಗುತ್ತಿರುವ ಫಲಿತಾಂಶದ ಒಂದು ಸನ್ನಿವೇಶ. ಬದುಕನ್ನು ಅಧಿಕತಮವಾಗಿ ಉಪಭೋಗಗೊಳಿಸಿ ಕೊಂಡದ್ದರ ಒಂದು ಪರಿಣಾಮ ಇದು. ಭೌತಿಕ ಸುಖದ ಬೆನ್ನುಹತ್ತಿ ಬದುಕನ್ನು ಮತೀಯ ಉನ್ಮಾದದಿಂದ ಭಯೋತ್ಪಾದಕಗೊಳಿಸಿ ಇತರರ ವಿನಾಶವನ್ನು ಸಾಧಿಸುತ್ತ ತನ್ನ ವಿನಾಶವನ್ನೂ ಮಾಡಿಕೊಳ್ಳುವ ಪರಿ ಇದೀಗ ವಿಶ್ವಜನಿತವೇ ಆಗಿದೆ. ಇಲ್ಲಿ ಪ್ರಾಚೀನದಲ್ಲಿ ಕೆಲವರು ನಿರೀಶ್ವರವಾದದ ನೆಲೆಯಲ್ಲೋ, ಚಾರ್ವಾಕ ವಾದದ ನೆಲೆಯಲ್ಲೋ ಭೌತಿಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾವುದೇ ರೀತಿ ಅನ್ಯ ಉಪದ್ರವವನ್ನಾಗಲೀ, ಸ್ವ-ಹಾನಿಯನ್ನಾಗಲೀ ಮಾಡದೆ ಉತ್ತಮವಾಗಿಯೇ ಬದುಕಿ ದವರಿದ್ದಾರೆ. ಆದರೆ ಸರ್ವಾದರ್ಶವಾಗಿ ಬೆಳೆಯಲಿಲ್ಲ ಅಷ್ಟೆ. ಅಂದರೆ ಆದರ್ಶವಾಗದೇ ಇದ್ದಾಗ್ಯೂ ಒಂದು ಉತ್ತಮ ಭೌತಿಕ ಬದುಕನ್ನು, ತಮ್ಮ ಮಟ್ಟಿಗೆ ಸುಸ್ಥಿರವೆನ್ನಬಹುದಾದ ಬದುಕನ್ನು ಸಂಘರ್ಷರಹಿತವಾಗಿ ಕಟ್ಟಿಕೊಂಡ ದೃಷ್ಟಾಂತಗಳೂ ಇಲ್ಲೇ ಇವೆ.

ಹಾಗೆ ನೋಡಹೋದರೆ ಬದುಕಿನ ಸ್ವರೂಪ, ಮುಖ್ಯವಾಗಿ ಅದರ ಬಾಹ್ಯಸ್ವರೂಪ ಭೌತಿಕವಾಗಿ ಇರಲಿಕ್ಕೇ ಬೇಕು. ಅದರ ಧ್ಯೇಯ ಪಾರಮಾರ್ಥಿಕವಿದ್ದರೂ ಅದನ್ನು ಸಾಧಿಸಲು ಬೇಕಾದ ಸಾಧನಗಳೆಲ್ಲ ಭೌತಿಕ ಸ್ವರೂಪದವುಗಳೇ.

ಭೌತಿಕ ಸಂಪತ್ತು ಬದುಕಿಗವಶ್ಯವೆ, ಬದುಕಿನ ಸ್ಥಿರತೆಗವಶ್ಯವೆ?

ಅಗಾಧ ಭೌತಿಕ ಸಂಪತ್ತಿನ ಒಡೆಯನಾಗಿದ್ದ ರಾಜಾ ರಂತಿದೇವ ಇದ್ದೆಲ್ಲ ಸಂಪತ್ತನ್ನು ಬಡವರಿಗೆ ದಾನ ಮಾಡುತ್ತ ಮಾಡುತ್ತ ತಾನೇ ಬಡವನಾದ. ಕ್ಷಾಮದಿಂದಾಗಿ ಒಮ್ಮೆ ಆತ ಸಂಸಾರಸಮೇತ ೪೮ ದಿನಗಳ ಕಾಲ ಉಪವಾಸವೇ ಇರಬೇಕಾಯಿತು. ಕೊನೆಗೊಮ್ಮೆ ಕುಡಿವ ನೀರಿನೊಂದಿಗೆ ಅಲ್ಪಸ್ವಲ್ಪ ಆಹಾರ ಸಿಕ್ಕಿದಾಗ ಕ್ರಮವಾಗಿ ಭಿಕ್ಷೆ ಬೇಡುತ್ತ ಬಂದ ಬ್ರಾಹ್ಮಣ, ಶೂದ್ರ, ಚಂಡಾಲ ಮತ್ತವನ ನಾಯಿ ಹಾಗೂ ಕೊನೆಗೆ ಹೊಲೆಯ – ಹೀಗೆ ಎಲ್ಲರಿಗೂ ನೀರೂ ಸಹಿತ ಇದ್ದೆಲ್ಲ ಆಹಾರವನ್ನೂ ದಾನಗೈದು ಉಪವಾಸವನ್ನು ಹಾಗೆಯೇ ಮುಂದುವರಿಸಬೇಕಾಯಿತು. ಭಿಕ್ಷೆ ಬೇಡಬಂದವರೆಲ್ಲ ದೇವತೆಗಳೇ ಆಗಿದ್ದು ಅವರೊಡ್ಡಿದ ಪರೀಕ್ಷೆಯಲ್ಲಿ ಆತ ಚೆನ್ನಾಗಿಯೇ ಉತ್ತೀರ್ಣನಾಗಿ ಉತ್ತಮ ಲೋಕವನ್ನು ಪಡೆದ ಎಂದು ಕಥೆ ಮುಂದುವರಿಯುತ್ತದೆ.

ರಂತಿದೇವ ಅಗಾಧ ಭೌತಿಕ ಸಂಪತ್ತನ್ನು ಹೊಂದಿಯೂ ಅದನ್ನು ತಾನು ಅನುಭವಿಸದೆ ಬಡವರಿಗೆ ದಾನಗೈದನೇಕೆ? ಆಹಾರವಿಲ್ಲದೆ ೪೮ ದಿನಗಳ ದೀರ್ಘಕಾಲ ಉಪವಾಸವಿದ್ದೂ ಸಿಕ್ಕ ಅಲ್ಪ ಆಹಾರವನ್ನು ಉಣ್ಣಹೊರಟವನು ಭಿಕ್ಷಬೇಡಬಂದವರಿಗೆ ಕೊಟ್ಟದ್ದೇಕೆ? ಅಗಾಧ ಭೌತಿಕ ಸಂಪತ್ತಿದ್ದಾಗ ಆತನ ಬದುಕು ಸ್ಥಿರವಾಗಿತ್ತೆನಿಸುತ್ತದೆ. ಅದನ್ನಾತ ದಾನಗೈಯುತ್ತ ಹೋದಂತೆಲ್ಲ ಅಸ್ಥಿರನಾಗುತ್ತ ಹೋದ ಹಾಗೂ ಕೊನೆಗೆ ಉಪವಾಸದಲ್ಲಿ ಅಸ್ಥಿರ ಬದುಕನ್ನೇ ಬದುಕಿದ ಎಂದೆನಿಸುತ್ತದೆ. ಬಳಿಕ ಸಿಕ್ಕ ಅಲ್ಪ ಆಹಾರದಲ್ಲೂ ಬದುಕಿನ ಭರವಸೆ ತೋಚಿದಂತಾಗಿ ಅದನ್ನು ದಾನಮಾಡುತ್ತಲೇ ಇದ್ದ ಅಲ್ಪ ಸ್ಥಿರಬದುಕನ್ನು ಕಳಕೊಂಡ ಅಂತನಿಸುತ್ತದೆ.

ಭ್ರಮಾಲೋಕ

ಇದೇನಿದ್ದರೂ ಮೇಲುನೋಟದ ಕಾಣ್ಕೆ. ಶ್ರೀಮಂತಸ್ಥಿತಿಯಲ್ಲಿ ಮನಸ್ಸು ಸುಖವಿರಬಲ್ಲುದು ಎಂಬುದು ಬರಿಯ ಭ್ರಮೆ ಎಂದು ಈಗ ಮನಃಶಾಸ್ತ್ರಜ್ಞರೇ ಹೇಳುತ್ತಿದ್ದಾರೆ. ಶ್ರೀಮಂತಿಕೆ ಇದ್ದಷ್ಟೂ ಮನಸ್ಸಿನ ತಳಮಳವೂ ಹೆಚ್ಚು. ಬಡತನದಲ್ಲಿ ಮನಸ್ಸು ನಿರಾಳ. ಪಡೆಯಬೇಕೆಂಬ ತಹತಹಿಕೆ ಇಲ್ಲದಿದ್ದಾಗ ಲಂತೂ ಅದು ಇನ್ನಷ್ಟು ನಿರಾಳ. ಯಾಕೆಂದರೆ ಅಲ್ಲಿ ಕಳೆದುಕೊಳ್ಳಲು ಏನೂ ಇರುವುದಿಲ್ಲ. ಈ ನಿರಾಳತೆಯೇ ಒಂದು ಬಗೆಯ ಮಾನಸಿಕ ಸುಖವನ್ನು ತಂದುಕೊಡುತ್ತದೆ. ಮಾನಸಿಕ ಸುಖವೇನೋ ನಿರಾಳತೆಯಿಂದ ಸಿಕ್ಕೀತು. ಇದು ಸಿಗುತ್ತ ಹೋದಂತೆ ಇದಕ್ಕಿಂತ ಹೆಚ್ಚಿನದರ ಕಡೆಗೆ ಮನಸ್ಸೇ ಧಾವಿಸತೊಡಗುತ್ತದೆ. ಹೆಚ್ಚಿನದು ಇರುವುದರಿಂದಲೇ ಧಾವಿಸುವುದು ಮತ್ತು ಸಿಕ್ಕಿದ್ದು ಸಾಕಾಗಲಿಲ್ಲ ಎನ್ನುವುದೂ ಜತೆಗೇ ಇದೆ.

ಶ್ರೀಮಂತಿಕೆಯಿಂದ ದೇಹಕ್ಕೆ ಒಂದಷ್ಟು ಸುಖ ಸಿಕ್ಕಿತು. ಮನಸ್ಸು ತಳಮಳಗೊಂಡಿತು. ಬಡತನದಿಂದ ಮನಸ್ಸು ತಳಮಳ ರಹಿತವಾಯಿತು. ಆದರೆ ಹೆಚ್ಚಿನದರ ಹುಡುಕಾಟಕ್ಕೆ ತೊಡಗಿತು. ಕಳೆದುಕೊಂಡು ನಿರಾಳವಾದಾಗ ಕೇವಲ ಮಾನಸಿಕ ಸುಖದ ಭ್ರಮೆ. ಯೋಗ್ಯರಿಗೆ ಕೊಟ್ಟು ಕಳೆದುಕೊಂಡಾಗ ನಿಜಸುಖ. ರಂತಿದೇವನಿಗಾದುದು ಈ ನಿಜಸುಖ. ಇದು ಆನಂದವನ್ನು ಹೊಂದುವ ದಾರಿ.

ಭೌತಿಕ ಸುಖ ಎಂದರೆ ದೇಹ ಅಪೇಕ್ಷಿಸುವ ಸುಖ ಹೊಂದಲು ಅಲ್ಲೊಂದು ಲಕ್ಷ್ಯ ಇದೆ. ಆ ಲಕ್ಷ್ಯ ಸಾಧನೆಗೆ ದಾರಿಗಳಿವೆ. ಆ ದಾರಿಯಲ್ಲಿ ಸಾಗಿದಾಗ, ನಿರ್ದೇಶಿತ ಸಾಧನಗಳಿಂದ ಆ ಲಕ್ಷ್ಯವನ್ನು ತಲಪಲು ಸಾಧ್ಯ. ಭೌತಿಕ ಸುಖ ಹಾಗಾಗಿ ಲಭ್ಯ. ಭೌತಿಕ ಜಗತ್ತು ಸ್ಥಿರಬದುಕನ್ನು ಕಂಡುಕೊಳ್ಳುವ ರೀತಿ ಇದು.

ಆದರೆ ನಿಜಸುಖದ ಸ್ವರೂಪವೇ ಬೇರೆ ರೀತಿ. ಅಲ್ಲಿ ಲಕ್ಷ್ಯಕ್ಕಿಂತ ದಾರಿ ಮುಖ್ಯ. ಲಕ್ಷ್ಯಕ್ಕೂ ದಾರಿಗೂ ಎಣ್ಣೆಸೀಗೆಕಾಯಿ ಸಂಬಂಧ ಇದ್ದಂತೆ. ಲಕ್ಷ್ಯವೂ ಇದೆ, ದಾರಿಯೂ ಇದೆ. ದಾರಿ ಮುಖ್ಯವಾದಾಗ ಮಾತ್ರ ಲಕ್ಷ್ಯ ತಲಪಲು ಸಾಧ್ಯ. ಲಕ್ಷ್ಯವೇ ಮುಖ್ಯವಾದವರಿಗೆ ದಾರಿಯೂ ಕಷ್ಟಸಾಧ್ಯ. ಹಾಗಾಗಿ ಲಕ್ಷ್ಯ ತಲಪುವುದೂ ಕಷ್ಟ. ಅಂದರೆ ನಿಜಸುಖ ಪಡೆಯಬೇಕೆಂದು ದಾನಾದಿಗಳನ್ನು ಗೈದರೆ ಅದು ಸಿಗಲಾರದು. ಯಾವ ಅಪೇಕ್ಷೆ-ಲಕ್ಷ್ಯಗಳನ್ನೂ ನಿಜಕ್ಕೂ ಇಟ್ಟುಕೊಳ್ಳದೆ ದಾನಾದಿಗಳನ್ನು ಗೈದರೆ ನಿಜಸುಖ ಸಿಗಲು ಸಾಧ್ಯ.

ಇಲ್ಲಿ ಲಕ್ಷ್ಯವನ್ನು ಬಿಡುವುದೂ ಕಷ್ಟ, ದಾರಿಯನ್ನಷ್ಟೆ ಹಿಡಿದುಕೊಳ್ಳುವುದೂ ಕಷ್ಟ. ಈ ಕಾರಣಕ್ಕಾಗೇ ರಂತಿದೇವ ಮುಖ್ಯವಾಗುತ್ತಾನೆ, ಪ್ರತ್ಯೇಕವಾಗಿ ತೋರುತ್ತಾನೆ. ಅಗಾಧ ಸಂಪತ್ತನ್ನೇ ದಾನಗೈವ, ಪೂರ್ಣದಾನಗೈವ ದಾರಿ ದುರ್ಗಮವಾದುದು. ಸಂಪತ್ತಿನ ಸ್ವಭಾವವೇ ಹಾಗೆ, ಅದು ಹೆಚ್ಚಿದಷ್ಟು ದಾನ ಪ್ರಮಾಣ  ದಾನ ಪ್ರವೃತ್ತಿ ಕಡಮೆ ಆಗುತ್ತ ಹೋಗುತ್ತದೆ. ಇಂಥ ದುರ್ಗಮ ದಾರಿಯೂ ರಂತಿದೇವನಿಗೆ ಅತ್ಯಂತ ಸುಗಮವಾಯಿತು.

ನಿಜಸುಖದ ವ್ಯಾಖ್ಯೆ

ಹಾಗೇ ಏನೂ ಇಲ್ಲದ ಸ್ಥಿತಿಯಲ್ಲಿ ಸಿಕ್ಕ ಏನನ್ನೋ ದಾನಗೈವುದು ಪ್ರಾಣವೇ ಸಹಜವಾಗಿ ಮುಖ್ಯವಾದ ಬದುಕಿಗೆ ಕಷ್ಟ. ಪ್ರಾಣವಿದ್ದರೆ ತಾನೆ ಉಳಿದೆಲ್ಲ. ೪೮ ದಿನಗಳ ಉಪವಾಸದಲ್ಲಿ; ಸ್ವೇಚ್ಛಾ ಉಪವಾಸವಲ್ಲ, ಅನಿವಾರ್ಯ ಉಪವಾಸದಲ್ಲಿ, ಪ್ರಾಣವುಳಿದರೆ ಸಾಕೆಂಬ ಕಠಿಣಸ್ಥಿತಿಯಲ್ಲಿದ್ದ ಜೀವವೊಂದು ಒದಗಿದ ಅಲ್ಪ ಆಹಾರವನ್ನು ದಾನ ಮಾಡುತ್ತಿದೆ ಎಂದಾದರೆ ಅದು ತನ್ನ ಕುರಿತ ಚಿಂತೆಯನ್ನು ಪೂರ್ಣ ಕೈಬಿಟ್ಟ ಜೀವ. ತನ್ನ ಚಿಂತೆಯನ್ನು ಕೈಬಿಟ್ಟವರಿಗೆ ಮಾತ್ರ ಉಳಿದವರ ಚಿಂತೆಗೆ ಹೆಗಲು ಕೊಡಲು ಸಾಧ್ಯ. ತನ್ನ ಚಿಂತೆಯನ್ನು ಪೂರ್ಣ ಕೈಬಿಟ್ಟವರಿಗೆ ಮತ್ತೆ ಗಳಿಸಬೇಕಾದುದೇನೂ ಇರುವುದಿಲ್ಲ. ಗಳಿಕೆ ಬಯಕೆ ನಿಂತಾಗ ಕಳೆದುಕೊಳ್ಳಲಾಗದ್ದು ಬರುತ್ತದೆ. ೪೮ ದಿನಗಳ ಉಪವಾಸಿ ರಂತಿದೇವ ದಾನಗೈದಾಗ ಅವನಿಗೆ ಅನಪೇಕ್ಷಿತವಾಗಿ ಸಿಕ್ಕಿದ್ದು ಇಂಥ ಕಳೆದು ಕೊಳ್ಳಲಾಗದ ನಿಜಸುಖ.

ರಂತಿದೇವನದು ಪುರಾಣಕಥೆಯಾಯಿತು ಎಂದಾದರೆ ಇತಿಹಾಸದಲ್ಲಿ ಅಂಥವನಿದ್ದ, ರಾಜಾ ಹರ್ಷವರ್ಧನ. ಹನ್ನೆರಡು ವರ್ಷಗಳಿಗೊಮ್ಮೆ ಆತ ಮಾಡುತ್ತಿದ್ದ ಯಜ್ಞದಲ್ಲಿ ಕೊನೆಗೆ ಅಷ್ಟು ವರ್ಷಗಳಲ್ಲಿ ಸಂಗ್ರಹಿಸಿದ್ದನ್ನೆಲ್ಲ ದಾನಗೈದು, ಬೊಕ್ಕಸ ಬರಿದಾಗಿಸಿ, ಉಟ್ಟ ಬಟ್ಟೆಯನ್ನು ಯಥೋಚಿತವಾಗಿ ನೀಡಿ ತಂಗಿಯಿಂದ ನಾರುಮಡಿ ಸ್ವೀಕರಿಸಿ ಮುಂದಿನ ಹನ್ನೆರಡು ವರ್ಷಗಳಲ್ಲಿ ಇಂಥದ್ದೇ ಯಜ್ಞಸಿದ್ಧತೆಗೆ ತೊಡಗುತ್ತಿದ್ದ ಎಂದು ಅವನ ಬಗೆಗೆ ಇತಿಹಾಸ ದಾಖಲಿಸಿದೆ. ರಾಜ್ಯನಿರ್ವಹಣೆ – ಪ್ರಜಾರಕ್ಷಣೆ ದೃಷ್ಟಿಯಿಂದಲೂ ಇತಿಹಾಸ ಕಂಡ ಉತ್ತಮ ರಾಜನೀತ.

ರಾಮಕೃಷ್ಣ ಪರಮಹಂಸರು ಪೂಜಿಸುತ್ತಿದ್ದ ದಕ್ಷಿಣೇಶ್ವರದ ಕಾಳಿಮಂದಿರವನ್ನು ಕಟ್ಟಿಸಿದಾಕೆ ರಾಣಿ ರಾಸಮಣಿ. ಭಾರೀ ಶ್ರೀಮಂತೆ. ೧೮೪೭ರಲ್ಲಿ ಕಾಶಿ ವಿಶ್ವೇಶ್ವರನ ದರ್ಶನಮಾಡಲೆಂದು ಆರು ತಿಂಗಳಿಗಾಗುವಷ್ಟು ಆಹಾರ ಶೇಖರಿಸಿ ರಕ್ಷಕ-ಸೇವಕ-ಬಂಧು ಬಳಗದ ಜತೆ ೨೫ ದೋಣಿಗಳಲ್ಲಿ ಯಾತ್ರೆ ಕೈಗೊಂಡವಳು. ಈ ಯಾತ್ರೆ ಮಧ್ಯೆಯೂ ಆಕೆ ಕಾಳಿಮಂದಿರ ನಿರ್ಮಾಣದ ಕನಸು ಕಂಡಿದ್ದಳು. ಆಗಿನ ಆಂಗ್ಲ ಸರಕಾರ ಮೊಗವೀರರ ಮೇಲೆ ತೆರಿಗೆ ವಿಧಿಸಿದಾಗ ಆ ಬಡಮೀನುಗಾರರ ಸಂಕಟಕ್ಕೆ ಮರುಗಿ ಗಂಗಾತಟದಲ್ಲಿ ಹತ್ತು ಸಾವಿರ ರೂಪಾಯಿಗಳ ವಿಶಾಲ ಜಾಗ ಖರೀದಿಸಿ ನದಿ ಮಧ್ಯೆ ಸರಪಳಿ ಬೇಲಿ ನಿರ್ಮಿಸಿ, ಮೀನುಗಾರರು ಅಲ್ಲಿ ತಮ್ಮ ಖಾಸಗಿ ಜಾಗವೆಂಬಂತೆ ಮೀನುಗಾರಿಕೆಗೆ ತೊಡಗಲು ಅವಕಾಶ ಮಾಡಿಕೊಟ್ಟಾಕೆ. ಪುರಿ ಜಗನ್ನಾಥ ಮಂದಿರಕ್ಕೆ ಹೋಗುವ ಹಾಳುಗೆಡವಿದ್ದ ರಸ್ತೆಯನ್ನು ತನ್ನ ಸ್ವಂತ ಖರ್ಚಲ್ಲಿ ರಿಪೇರಿ ಮಾಡಿಸಿದಾಕೆ. ಕೊನೆಗೆ ಇದ್ದದ್ದೆಲ್ಲವನ್ನು ದಾನಗೈದು ತಾಯಿ ಕರೆಯುತ್ತಿದ್ದಾಳೆಂದು ಹೇಳುತ್ತ ಗಂಗೆ ತಟದಲ್ಲಿ ಪ್ರಾಣಬಿಟ್ಟಳು.

ಇಲ್ಲಿ ಈ ವಾರಸುದಾರಿಕೆ ಇಂದಿಗೂ ಮುಂದುವರಿದಿದೆ.

ತನ್ನ ಚಿಂತೆಯನ್ನು ಪೂರ್ತಿ ಕೈಬಿಟ್ಟವರಿಗೆ ಜಗತ್ತಿನ ಚಿಂತೆ. ಜಗತ್ತಿನ ಚಿಂತೆ ಹಚ್ಚಿಕೊಳ್ಳದೆ ತನ್ನ ಚಿಂತೆ ಕೈಬಿಟ್ಟರೂ ಅದರಲ್ಲಿ ಅರ್ಥ ಕಾಣದು. ಜಗತ್ತಿನ ಚಿಂತೆ ಹಚ್ಚಿಕೊಂಡವರ ಚಿಂತೆಯನ್ನು ಜಗತ್ತೇ ಹಚ್ಚಿಕೊಳ್ಳುತ್ತದೆ. ಹಾಗೆಂದು ಈ ವಿಶ್ವಾಸವನ್ನು ಇಟ್ಟುಕೊಂಡಲ್ಲಿ ತನ್ನ ಚಿಂತೆ ಹಚ್ಚಿಕೊಂಡಂತೆ. ಈ ವಿಶ್ವಾಸವನ್ನು ಇಟ್ಟುಕೊಳ್ಳದೆ ಜಗತ್ತನ್ನು ಹಚ್ಚಿಕೊಳ್ಳಬೇಕು. ಕಾಲರಾ-ಪ್ಲೇಗಿನಂಥ ಮಾರಿ ರೋಗಗಳು ಊರೂರನ್ನೇ ಮಸಣವನ್ನಾಗಿಸಿದಾಗ ತಮಗೇನಾದೀತೆಂದು ಯೋಚಿಸದೆ ರೋಗಿಗಳ ಆರೈಕೆಗೆ ತೊಡಗಿದ ಸೇವಾಕರ್ತರ ಮಾನಸಿಕತೆಯಂತೆ ಇದು.

ಅಂದರೆ, ತನ್ನ ಬದುಕಿನ ಸ್ಥಿರತೆಯನ್ನು ಕುರಿತು ಯೋಚಿಸದವನಿಗೆ ಮಾತ್ರ ಸುಸ್ಥಿರ ಬದುಕಿನ ಕುರಿತು ಯೋಚಿಸಲು ಸಾಧ್ಯ. ಯೋಚಿಸಿದಂತೆ ತೊಡಗಲೂ ಸಾಧ್ಯ.

ಆದರ್ಶಲಕ್ಷ್ಯ

ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಎಂಬ ಗ್ರಾಮದ ಸಾವಯವ ಕೃಷಿಕ ದೇವರಾಯರು ಸಾವಯವ ಕೃಷಿಗೆ ತೊಡಗಿದ್ದು ನಲ್ವತ್ತು ವರ್ಷಗಳಷ್ಟು ಹಿಂದೆಯೇ, ಸಾವಯವ ಕೃಷಿಯ ಅಗತ್ಯ-ಅನಿವಾರ್ಯತೆಗಳ ಧ್ವನಿ ಉಂಟಾಗುವುದಕ್ಕಿಂತ ಎಷ್ಟೋ ಹಿಂದೆ. ಭತ್ತದ ಪೈರಿಗೆ ಸಿಂಪಡಿಸಿದ್ದ ಕ್ರಿಮಿನಾಶಕದಿಂದಾಗಿ ವಿಷದ ಹಾವೊಂದು ತಮ್ಮ ಗದ್ದೆಯಲ್ಲಿ ಸತ್ತುಬಿದ್ದುದನ್ನು ನೋಡಿ ಅವರು ಆ ಕ್ಷಣವೇ ಸಾವಯವ ಕೃಷಿಯಲ್ಲೇ ತೊಡಗುವ ನಿರ್ಧಾರಕ್ಕೆ ಬಂದರು. ಅಪಾರ ಆರ್ಥಿಕಲಾಭ ಇರುವ ಅಡಿಕೆಯಂಥ ವಾಣಿಜ್ಯ ಕೃಷಿಗೆ ತೊಡಗಬಹುದಾಗಿದ್ದರೂ ಅದಕ್ಕವರು ಗಮನವನ್ನೇ ಕೊಡಲಿಲ್ಲ, ಯಾಕೆಂದರೆ ಅದರಿಂದ ಹೊಟ್ಟೆ ತುಂಬದು, ಯಾರ ಹೊಟ್ಟೆಯನ್ನು ತುಂಬಲಾರದು ಅಂತ. ವರ್ಷಕ್ಕೆರಡು ಬೆಳೆ ಭತ್ತದ ಕೃಷಿಗೈವ ಅವರು ತಮ್ಮ ಸೀಮಿತ ಹೊಲದ ವ್ಯಾಪ್ತಿಯಲ್ಲಿ ೮೪ ತಳಿಗಳನ್ನು ಪ್ರತಿವರ್ಷ ಬೆಳೆದು ಸಂರಕ್ಷಿಸುತ್ತಿದ್ದಾರೆ. ಈ ಅಪರೂಪದ ತಳಿಗಳು ಮುಂಪೀಳಿಗೆಗೆ ದಕ್ಕುವಂತಾಗಬೇಕೆಂಬ ಲಕ್ಷ್ಯವಷ್ಟೆ ಇವರ ಹಿಂದಿರುವುದು. ಅವರು ಬೆಳೆದ ಸಾವಯವ ಅಕ್ಕಿಯೇ ಬೇಕೆಂದು ಮನೆಗೆ ಬಂದವರಿಗೆ ತಾವು ಬೆಳೆದುದನ್ನು ಮಾರಾಟಮಾಡುವ ಅವರು, ’ನಾನು ಉಣ್ಣುವುದರಲ್ಲೇ ಸ್ವಲ್ಪ, ಅದರ ಖರ್ಚಿನ ಬಾಬ್ತು ತಗೊಂಡು ಕೊಡುತ್ತಿದ್ದೇನೆ’ ಎನ್ನುತ್ತಾರೆ.

’ಇxಠಿoಡಿಣ quಚಿಟiಣಥಿ’ – ರಫ್ತು ಗುಣಮಟ್ಟದ ಬಗ್ಗೆ ಕೇಳಿದ್ದೇವೆ. ವಿದೇಶೀಯರಿಗೆ ಉತ್ತಮ ಗುಣಮಟ್ಟದ್ದನ್ನು ನೀಡಬೇಕೆಂಬ ಆಗ್ರಹ, ಇದರಲ್ಲಿರುವುದು ಆತಿಥ್ಯಭಾವವೂ ಅಲ್ಲ, ದೇಶದ ಪ್ರತಿಷ್ಠೆ ಹೆಚ್ಚಿಸುವ ಯತ್ನವೂ ಅಲ್ಲ, ಕೇವಲ ಸ್ವಾರ್ಥಲಾಭೈಕ ದೃಷ್ಟಿ. ಸ್ವಕೀಯರಿಗೆ ಕಡಮೆ ಗುಣಮಟ್ಟದ್ದು ಸಾಕಾದೀತು ಎಂಬಲ್ಲೂ ಅದೇ ಸ್ವಾರ್ಥಲಾಭೈಕ ದೃಷ್ಟಿ. ವಿದೇಶೀಯರಿಗೆ ಗುಣಮಟ್ಟದ್ದನ್ನೇ ನೀಡೋಣ, ಅದನ್ನು ಯಾರಿಗೇ ಆಗಲಿ, ಉತ್ತಮವಾದುದನ್ನೇ ನೀಡಬೇಕು ಎಂಬ ನೆಲೆಯಲ್ಲಿ ನೀಡೋಣ. ಅದನ್ನೇ ಸ್ವಕೀಯರಿಗೂ ನೀಡೋಣ.

ತಾನು ಕನಿಷ್ಠ ಗುಣಮಟ್ಟದ್ದನ್ನು ಬಳಸಿ ಉಳಿದೆಲ್ಲರಿಗೆ ಗರಿಷ್ಠ ಗುಣಮಟ್ಟದ್ದನ್ನು ನೀಡುವ ಆತಿಥ್ಯಭಾವವು ಬದುಕಿನ ಶ್ರೇಷ್ಠದೃಷ್ಟಿಯೇ. ನಿಷ್ಫಲಾಪೇಕ್ಷೆಯಿಂದ ಇದನ್ನು ಗೈದಾಗ ಶ್ರೇಷ್ಠದೃಷ್ಟಿಯಾಗುತ್ತದೆ. ಲಾಭೈಕದೃಷ್ಟಿಯಿಂದ ಇದನ್ನು ಸಾಧಿಸುವಾಗ ಇದೇ ಕ್ರಿಯೆ ಅತಿಕನಿಷ್ಠವಾಗುತ್ತದೆ.

ದೇವರಾಯರ ಉಂಡು ಉಣಿಸುವ ಭಾವಕ್ರಿಯೆಯಲ್ಲಿ ಸುಸ್ಥಿರ ಬದುಕಿನ ಹೊಳಹು ಕಾಣಿಸುತ್ತದೆ. ಅವರ ಈ ಭಾವವೇ, ಈ ಗಟ್ಟಿ ಭಾವವೇ ಅವರಿಂದ ಅಚಲವಾಗಿ ಭತ್ತದ ಕೃಷಿಯನ್ನು ಮಾಡಿಸುತ್ತದೆ. ’ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ, ಬಿತ್ತುವುದನು ಅವ ಬಿಡುವುದೇ ಇಲ್ಲ’ ಎಂಬ ಕವಿ ಕುವೆಂಪುರವರ ನೇಗಿಲಯೋಗಿ ನಮಗಿಲ್ಲಿ ಕಾಣಸಿಗುತ್ತಾನೆ. ಇದರರ್ಥ ಇಷ್ಟೇ. ರಾಜ್ಯ ಸ್ಥಿತಿ ಏನೇ ಆಗಲಿ, ಮಾರುಕಟ್ಟೆ ಏರುಪೇರು ಎಷ್ಟುಬೇಕಾದರೂ ಏನುಬೇಕಾದರೂ ಆಗಲಿ, ಉಣ್ಣುವ, ಉಣಿಸುವ ಸಾಮರ್ಥ್ಯವನ್ನು ಈ ನೇಗಿಲಯೋಗಿ ಸದಾ ಹೊಂದಿರುತ್ತಾನೆ.

ಪರಿಸ್ಥಿತಿ ನಿರಪೇಕ್ಷವಾಗಿ ಇದ್ದಾಗಷ್ಟೆ ಅದು ಸುಸ್ಥಿರ ಬದುಕು, ಇಲ್ಲದಿದ್ದಾಗ ಅದು ಅಸ್ಥಿರವೇ.

ಬದುಕು-ಬದುಕಿಸು

ಇಲ್ಲಿರುವುದು ಬದುಕು ಮತ್ತು ಬದುಕಬಿಡು ಎಂದು ಪಾಶ್ಚಾತ್ಯವಾದ ಅಲ್ಲ; ಬದುಕು ಮತ್ತು ಬದುಕಿಸು ಎಂಬ ಅದಕ್ಕಿಂತ ಎಷ್ಟೋ ಉದಾತ್ತವಾದ ವಿಚಾರ. ‘ಬದುಕುವ ಚಿಂತೆ ಬಿಟ್ಟು ಬದುಕಿಸು’ ಎಂಬ ತತ್ತ್ವ ರಂತಿದೇವನಂತವರಿಗಾದೀತಷ್ಟೆ ಎನ್ನುವಿರಾದರೆ ‘ಬದುಕು ಮತ್ತು ಬದುಕಿಸು’ ಎಂಬ ವಿಚಾರವನ್ನು ಅನುಸರಿಸಿ ಎಂಥ ಸಾಮಾನ್ಯನೂ ಬದುಕಬಹುದಷ್ಟೆ. ಇಂಥ ವಿಚಾರದ ಬದುಕಿನಿಂದಲೇ ಸುಸ್ಥಿರ ಬದುಕು.

ಇಂಥ ಬದುಕು ಹಳ್ಳಿಗಳಲ್ಲಿ ಜೀವಂತವಾಗಿದೆ ಎನ್ನಬಹುದೇನೋ. ಪೇಟೆ-ನಗರಗಳಲ್ಲಿ ಎಲ್ಲವೂ ವಾಣಿಜ್ಯೀಕರಣಗೊಂಡಿದೆ. ನಗರವೆಂದರೇನು? ಅಲ್ಲಿ ಒಂದೆಡೆ ದೊಡ್ಡ ಪ್ರಮಾಣದ ವಸತಿ ವ್ಯವಸ್ಥೆಯಿರುತ್ತದೆ. ಜನರ ಭೌತಿಕ ಸುಖದ ಸಕಲ ಸಾಧನ-ಸೌಕರ‍್ಯಗಳಿರುತ್ತವೆ. ಇದನ್ನು ಹೆಚ್ಚೆಚ್ಚು ಹೊಂದಲು ಜನರ ನಡುವೆ ಸ್ಪರ್ಧೆಯಿರುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಕಲಯತ್ನಗಳಲ್ಲಿ ಜನ ಒತ್ತಡದಿಂದಿರುತ್ತಾರೆ. ಶಿಕ್ಷಣದ ಹೆಸರಲ್ಲಿ ಮುಂಪೀಳಿಗೆಯೂ ಇದೇ ನಿಟ್ಟಿನಲ್ಲಿ ಸದಾ ಒತ್ತಡದಿಂದಿರುತ್ತದೆ. ಇದರ ಮುಖ್ಯಫಲವೋ ಪಾಶ್ವಫಲವೋ ಎಂಬಂತೆ ಒದಗುವ ಸಕಲಹಾನಿಗಳನ್ನು ನಿವಾರಿಸಲು ವೈದ್ಯಾದಿ ಸಕಲ ವ್ಯವಸ್ಥೆಗಳೂ ಇರುತ್ತವೆ.

ಇದೇ ಧಾಟಿಯಲ್ಲಿ ಈ ವ್ಯಾಖ್ಯೆಯನ್ನು ಮುಂದುವರಿಸಬಹುದು. ಇದಕ್ಕಿಂತ ಭಿನ್ನವಾದ ವ್ಯಾಖ್ಯೆಯಿಂದ ನಗರದ ಸ್ವರೂಪವನ್ನು ಮೆಚ್ಚಿಕೊಳ್ಳಲು ಸಾಧ್ಯವೆ? ಹೆಚ್ಚು ಮಂದಿ ಒಂದೆಡೆ ವಸತಿ ಹೂಡುವುದೇ ಅಸಹಜ, ಅಪ್ರಾಕೃತಿಕ. ಪ್ರಕೃತಿ ಮುನಿಸಿಗೆ ಇದಕ್ಕಿಂತ ಭಿನ್ನ ದಾರಿಯೇ ಬೇಕಿಲ್ಲ. ಪ್ರಕೃತಿಯನ್ನು ಕೆಡಿಸಿದ ಸನ್ನಿವೇಶವೊಂದು ಸುಸ್ಥಿರ ಬದುಕಿನ ಅವಕಾಶವಾಗಲು ಅಸಾಧ್ಯ. ಹೆಚ್ಚು ಜನ ಒಂದೆಡೆ ಇದ್ದಾಗ ಷಡ್ವೈರಿಗಳಂಥ ಮನುಷ್ಯ ಸಹಜ ಪ್ರವೃತ್ತಿಗಳ ಉದ್ದೀಪನಕ್ಕೂ ಅವಕಾಶ ಅಧಿಕ. ಇವುಗಳ ಮುಂದೆ ಸಾತ್ತ್ವಿಕ ಪ್ರವೃತ್ತಿಗಳು ಮೂಲೆಸೇರುವುದೇ. ಸ್ಪರ್ಧೆ-ಈರ್ಷ್ಯಾದಿಗಳು ಮುನ್ನೆಲೆಗೆ ಬರುತ್ತವೆ. ಇವು ಬದುಕುವ, ಸ್ವಾರ್ಥೈಕದೃಷ್ಟಿಯಿಂದ ಬದುಕುವ ಕಲೆಯನ್ನು ಕಲಿಸುತ್ತವೆಯೇ ವಿನಾ ಬದುಕಿಸುವ ಕಲೆಯನ್ನಲ್ಲ. ಬದುಕಿಸುವುದರಿಂದ ಸ್ವಾರ್ಥ ಸಾಧನೆಯಾದೀತೆಂದರೆ ಮಾತ್ರ ಅದಕ್ಕೆ ಉತ್ತೇಜನ ನೀಡಿಯಾವು.

ಭ್ರಾಮಕ ಚಿತ್ರಣ

ಜನ ಒಂದೆಡೆ ವಸತಿ ಹೂಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಕಾರ್ಖಾನೆ ಗಳು. ಪ್ರಕೃತಿಗರ್ಭಕ್ಕೇ ಕನ್ನ ಕೊರೆದು ಪಡೆದ ಕಚ್ಚಾವಸ್ತುಗಳಿಂದ ಭೌತಿಕ ಸಂಖ್ಯೈಕದೃಷ್ಟಿಯ ಉತ್ಪನ್ನಗಳನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸ ಹೊರಟ ಕಾರ್ಖಾನೆಗಳಿಗೆ ಕಾರ್ಮಿಕರು ಒದಗಿದ್ದು ಹಳ್ಳಿಯ ಗುಡಿಕೈಗಾರಿಕೆಗಳಿಂದ, ಕೃಷಿ ಕುಟುಂಬದಿಂದ. ಹಳ್ಳಿ ಬರಿದಾದ ಮತ್ತು ನಗರ ಬೆಳೆದ ದುರಂತ ಚಿತ್ರಣ ಇದು. ಕೃಷಿಯಂತೆ ಗುಡಿಕೈಗಾರಿಕೆಗಳೂ ಸುಸ್ಥಿರ ಬದುಕಿನಿಂದ ಅಸ್ಥಿರತೆಯೆಡೆಗೆ ಏನೋ ಹೆಚ್ಚಿನದಿದೆಯೆಂಬ ಭ್ರಮೆಯಿಂದ ಧಾವಿಸುವ ಚಿತ್ರಣದಂತೆ ಕಾಣುತ್ತಿದೆ.

ರಾಷ್ಟ್ರೀಯವಾಗಿಯೂ ನಮ್ಮ ಬದುಕು ಸುಸ್ಥಿರವೆ ಎಂಬುದು ಅವಲೋಕನದ ಪ್ರಶ್ನೆಯೇ.

ನೋಡಿ, ಇಸ್ರೇಲಿಗಳು ಸಾವಿರದೈನೂರು ವರ್ಷಗಳ ಕಾಲ ಪರಕೀಯ ನೆಲದಲ್ಲಿ ಸ್ವಕೀಯ ನೆಲದ ಭರವಸೆ ಹೊತ್ತು ಬದುಕಿದರು. ಕೊನೆಗೂ ಸ್ವಕೀಯ ನೆಲವನ್ನು ಸಾಧಿಸಿ ಪಡೆದರು. ಪರಕೀಯ ನೆಲದಲ್ಲಿ ಅವರ ರಾಷ್ಟ್ರಬದುಕು ಸುಸ್ಥಿರವಿರಲಿಲ್ಲ. ಆದರೆ ಭರವಸೆಪಟ್ಟ ಸಾಧನೆಗೈದು ಬದುಕಿದ್ದರಿಂದ ಸುಸ್ಥಿರ ರಾಷ್ಟ್ರ ಬದುಕು ಅವರದಾಯಿತು. ಭರವಸೆಯಿಂದ ಆದರೆ ಅಸ್ಥಿರವಾಗಿ ಬದುಕಿದ ಪೀಳಿಗೆಗಳೆಷ್ಟೋ, ಅದರಿಂದಾಗಿ ಇಂದಿನ ಪೀಳಿಗೆಯ ರಾಷ್ಟ್ರಬದುಕು ಸುಸ್ಥಿರವಾಯಿತು.

ನಮ್ಮ ಸುಸ್ಥಿರ ರಾಷ್ಟ್ರಬದುಕಿನ ಮೇಲೆ ಇತಿಹಾಸದಲ್ಲಿ ಹಲವು ಗಾಯಗಳಾದುದನ್ನು ಗುರುತಿಸಬಹುದು. ಸೆಮೆಟಿಕ್ ಮತೀಯರ ಧಾಳಿಯಾದಂತೆಲ್ಲ ನಮ್ಮ ರಾಷ್ಟ್ರಸಮಾಜದ ಕೆಲಮಂದಿ ಬಲಾತ್ಕಾರಕ್ಕಾಗೇ ಆದರೂ ಮತಾಂತರಗೊಂಡು ರಾಷ್ಟ್ರನೆಲದ ಬಹುಭಾಗ ಕಳೆದುಕೊಂಡೆವು. ಈಗಿರುವ ನಮ್ಮ ರಾಷ್ಟ್ರದ ಭೌಗೋಳಿಕ ವ್ಯಾಪ್ತಿ ಮೂಲದಲ್ಲಿದ್ದುದರ ಮೂರನೇ ಒಂದರಷ್ಟು. ಈಗ ನಾವು ಕಳೆದುಕೊಂಡ ಭೂಭಾಗದ ಜನ ಬಹುತೇಕ ನಮ್ಮ ಮೂಲ ರಾಷ್ಟ್ರಸಮಾಜದ ಅಂದರೆ ಹಿಂದೂ ಸಮಾಜದ ಮತಾಂತರಿತ ಬಂಧುಗಳೇ. ರಾಷ್ಟ್ರೀಯವಾಗೂ, ಸಾಮಾಜಿಕ ವಾಗೂ ಅಷ್ಟೇ ಏಕೆ, ಮತೀಯವಾಗೂ ಅವರ ಬದುಕು ಅತ್ಯಂತ ಅಸ್ಥಿರವಾಗಿದೆ ಎಂಬುದು ಅಲ್ಲಿಯ ವಿದ್ಯಮಾನಗಳಿಂದ ವೇದ್ಯ.

ಆತಂಕದಲ್ಲಿ ರಾಷ್ಟ್ರಜೀವನ

ರಾಷ್ಟ್ರದ ಮೂಲಸಮಾಜ ಇದ್ದರಷ್ಟೇ ಆ ರಾಷ್ಟ್ರದ ಬದುಕು. ಈಗ ಅಳಿದುಳಿದ ನಮ್ಮೀ ನೆಲದಲ್ಲೂ ಮೂಲಸಮಾಜ ಕರಗುತ್ತಲೇ ಇದೆ. ಅದೇ ವೇಳೆ ಆಕ್ರಮಕ ಸೆಮೆಟಿಕ್ ಮತೀಯರ ಸಂಖ್ಯೆ ಆಕ್ರಮಕ ರೀತಿಯಲ್ಲಿ ಏರುತ್ತಿದೆ. ಇದು ನಮ್ಮ ರಾಷ್ಟ್ರಜೀವನ ಆತಂಕದಲ್ಲಿರುವುದನ್ನು ಸೂಚಿಸುತ್ತದೆ. ಜಾಗೃತ ರಾಷ್ಟ್ರಸಮಾಜ ಹಾಗೂ ಅದರಿಂದ ಪ್ರತಿಷ್ಠಾಪಿಸಲ್ಪಟ್ಟ ರಾಷ್ಟ್ರೀಯ ದೃಷ್ಟಿಯ ಸರಕಾರದಿಂದ ಈ ಆತಂಕವನ್ನು ನಿವಾರಿಸಲು ಸಾಧ್ಯ.

ಸರಕಾರ ಎಂತೇ ಇರಲಿ, ಜಾಗೃತ ವಿವೇಕಯುಕ್ತ ರಾಷ್ಟ್ರಸಮಾಜದಿಂದ ಮಾತ್ರ ಸುಸ್ಥಿರ ರಾಷ್ಟ್ರಬದುಕನ್ನು ಪುನಃಸ್ಥಾಪಿಸಲು ಸಾಧ್ಯ.

ವಿಶ್ವಮಾನವ ಖ್ಯಾತಿಯ ಸ್ವಾಮಿ ವಿವೇಕಾನಂದರು ಇಡಿಯ ವಿಶ್ವವನ್ನೇ ಪ್ರೀತಿಸಿದವರು. ಹಾಗೆಂದು ಅವರು ಯಾವುದೇ ದೇಶವನ್ನು ತುಷ್ಟೀಕರಿಸಲು ಹೋಗಲಿಲ್ಲ. ಅಷ್ಟೇ ಏಕೆ, ಹೋದೆಡೆಯಲ್ಲೆಲ್ಲ ಅವರು ಅಲ್ಲಿಲ್ಲಿನ ದೇಶಬಂಧುಗಳನ್ನು ಮತೀಯ ಬಂಧುಗಳನ್ನು ನಿರ್ದಿಷ್ಟ ದೋಷ-ಕೊರತೆಗಳಿಗಾಗಿ ತರಾಟೆಗೆ ತಗೊಂಡಿದ್ದೇ ಹೆಚ್ಚು. ಭಾರತವೂ, ಹಿಂದೂ ಸಮಾಜವೂ ಇದಕ್ಕೆ ಹೊರತಾಗಲಿಲ್ಲ. ‘ನಿಮಗಾಗಿ ನಾನೇನು ಮಾಡಲಿ?’ ಎಂದು ಅಮೆರಿಕದ ಎಮಿಲಿ ಎಂಬ ಮಹಿಳೆ ಹೇಳಿದಾಗ ಸ್ವಾಮಿಜೀ ಉತ್ತರಿಸಿದ್ದು ‘ಭಾರತವನ್ನು ಪ್ರೀತಿಸು’ ಎಂದು. ಭಾರತದ ಸೇವೆಗೆ ಅವರು ಅನೇಕ ವಿದೇಶೀಯರನ್ನು ತೊಡಗಿಸಿದರೂ ಕೂಡಾ. ವಿಶ್ವಪ್ರೀತಿಯ ವಿವೇಕಾನಂದರಿಗೆ ಭಾರತದ ಬಗೆಗೆ ಭಾರೀ ಕಳಕಳಿ ಇತ್ತು. ಅದು ಕೇವಲ ತಾವು ಹುಟ್ಟಿದ ದೇಶ ಎಂದು ಇದ್ದಿರಲಾರದು. ಅವರು ಒಮ್ಮೆ ಹೇಳಿದ್ದಿದೆ  ‘ವಿಶ್ವ ಭೂಪಟದಲ್ಲಿ ಭಾರತವು ಅಳಿದರೆ ಮತ್ತೆ ಉಳಿಯುವುದು ಸ್ಪರ್ಧೆ, ವಿರೋಧ, ಯುದ್ಧ ಮಾತ್ರ.’ ವಿಶ್ವದ ಉಳಿವಿಗಾಗೇ ಅವರು ಭಾರತದ, ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಹಿಂದೂ ರಾಷ್ಟ್ರದ ಕುರಿತು ಕಳಕಳಿ ಹೊಂದಿದ್ದರು.

ನಮ್ಮ ರಾಷ್ಟ್ರೋದಯದ ಕುರಿತು ಅಥರ್ವವೇದ ವ್ಯಾಖ್ಯಾನಿಸುವುದು ಹೀಗೆ  ’ವಿಶ್ವದ ಹಿತವನ್ನು ಲಕ್ಷಿಸಿ ತಪಸ್ಸುಗೈದ ಋಷಿಗಳು ಕೊನೆಯಲ್ಲಿ ಓಜಸ್ಸುಳ್ಳದ್ದೂ ಬಲಶಾಲಿಯೂ ಆದ ರಾಷ್ಟ್ರವನ್ನು ಕಂಡುಕೊಂಡರು.’

ಇಂಥ ವಿಶ್ವಸಂಬಂಧಿತ ರಾಷ್ಟ್ರವ್ಯಾಖ್ಯೆ ಇನ್ನಾವ ರಾಷ್ಟ್ರಕ್ಕೂ ಇರಲಾರದು.

ಹಾಗಾಗಿ ನಮ್ಮ ರಾಷ್ಟ್ರಬದುಕಿನ ಸುಸ್ಥಿರತೆಯೆಂದರೆ ಅದು ವಿಶ್ವಬದುಕಿನ ಸುಸ್ಥಿರತೆಯನ್ನು ಬಿಟ್ಟುಕೊಟ್ಟಲ್ಲ. ಸ್ಪರ್ಧೆ, ಈರ್ಷ್ಯೆ, ಯುದ್ಧಗಳಿಲ್ಲದ ಸ್ಥಿತಿ ಸುಸ್ಥಿರ ಬದುಕಿನದು. ಒಂದೊಮ್ಮೆ ಸಂಘರ್ಷ ಎದುರಾದರೂ ಅದು ಕೆಡಕಿನ ವಿರುದ್ಧ ಮತ್ತು ಸಂಘರ್ಷರಹಿತ ಸ್ಥಿತಿ ಸ್ಥಾಪನೆಗಾಗಿ ಎಂಬ ಸ್ಪಷ್ಟತೆ ಇದ್ದರಾಯಿತು.

ಆತ್ಯಂತಿಕವಾಗಿ, ಸುದೃಢ ರಾಷ್ಟ್ರದಿಂದ ಸುಸ್ಥಿರ ಬದುಕು ಸಾಧ್ಯ.

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
RSS Chief Mohan Bhagwat at Amristar सुसंस्कारों से समाप्त होगी नशे की समस्या: मोहन भागवत

RSS Chief Mohan Bhagwat at Amristar सुसंस्कारों से समाप्त होगी नशे की समस्या: मोहन भागवत

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Samartha Bharata’s statewide Vivek Band youth Campaign to start on Jan 12 2018

Karnataka Statewide VIVEK BAND youth campaign to begin on January 12, 2019 #VivekBand

January 10, 2019

50 years of Hindu empowerment: wrties Dr Togadia on VHP’s 5Oth Anniversary Year

August 28, 2013
VIDEO: Mohanji Bhagwat’s speech Live from Karyakarta Shibir, Gujarat

VIDEO: Mohanji Bhagwat’s speech Live from Karyakarta Shibir, Gujarat

January 7, 2015
An analysis on FDI: ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳ (FDI) ಅನಿವಾರ್ಯವೇ? : ಒಂದು ವಿಶ್ಲೇಷಣೆ

An analysis on FDI: ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳ (FDI) ಅನಿವಾರ್ಯವೇ? : ಒಂದು ವಿಶ್ಲೇಷಣೆ

December 9, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In