• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕ

Vishwa Samvada Kendra by Vishwa Samvada Kendra
January 31, 2021
in Articles
250
2
ಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕ
491
SHARES
1.4k
VIEWS
Share on FacebookShare on Twitter

ಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕ
ಲೇಖನ: ರಾಹುಲ್ ಅಶೋಕ ಹಜಾರೆ


(ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ)

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಮಾತೃಗರ್ಭದಿಂದ ಕೂಸೊಂದು ಕರುಳಬಳ್ಳಿ ಹರಿದು ಬರುವಾಗ ತಾಯ ಸತ್ವವ ಹೀರಿ ಬಂದಂತೆ ಬರವಣಿಗೆ ಅನ್ನುವುದೂ ಕೂಡಾ ಪ್ರಸವ ಕ್ರಿಯೆಯಂತೆ ಅದು ಬರಹಗಾರನ ಪರಿಸರ ಕೊಡುವ ಜೀವನಾನುಭವವನ್ನು ಹೀರಿ ಹುಟ್ಟುತ್ತದೆ.


ಬೇಂದ್ರೆಯವರ ಪದ್ಯದ ಜಾಡನ್ನು ಹಿಡಿದು ಅವರ ಬದುಕಿನ ಘಟನೆಗಳೊಂದಿಗೆ ತುಲನೆ ಮಾಡುತ್ತಾ ಅವರ ಸಾಹಿತ್ಯದ ಹುಟ್ಟಿಗೆ ಕಾರಣೀಭೂತವಾದ ಘಟನೆಗಳು, ವ್ಯಕ್ತಿಗಳು, ಪರಿಸರವನ್ನು ನೋಡುತ್ತಾ ಹೋಗೋಣ. ಬೇಂದ್ರೆಯವರು ಕನ್ನಡವಷ್ಟೇ ಅಲ್ಲದೇ ಮರಾಠಿ ಸಾಹಿತ್ಯದಲ್ಲೂ ಛಾಪು ಮೂಡಿಸಿದ್ದರು. ಹಾಗಾದರೆ ಬೇಂದ್ರೆಯವರಿಗೆ ಮರಾಠಿಯ ಒಡನಾಟ ಆದದ್ದು ಹೇಗೆ? ಬೇಂದ್ರೆಯವರ ಪೂರ್ವಜರು ಮೂಲತಃ ಮಹಾರಾಷ್ಟ್ರದ ರತ್ನಾಗಿರಿಯ ಹತ್ತಿರದ ಕಳಸಿಯವರು. ವೇಂದ್ರೆಯೆಂಬುದು ಮೂಲ ನಾಮ ದೇವಸ್ಥಾನದಲ್ಲಿ ಮಂತ್ರ ಹೇಳುವ ಪರಂಪರೆಯವರು.


ಅವರ ಮನೆ ದೇವರು ಗಣಪತಿ. ಗಣಪತಿ ಕನಸಲ್ಲಿ ಬಂದು ಕನ್ನಡ ಮಾತಾಡುವ ಜಾಗಕ್ಕೆ ಹೋಗಿ ನೆಲೆಸಲು ಆದೇಶ ನೀಡಿದ ಅನ್ನುತ್ತಾರೆ. ಆ ಮಾತಿಗನುಗುಣವಾಗಿ ಅಲ್ಲಿಂದ ಸಾಂಗ್ಲಿ ಹತ್ತಿರದ ತಾಜಗಾಂವ್‌ಗೆ ಬಂದು ತಂಗಿದರು. ಅಲ್ಲಿಗೆ ಗದಗಿನ ಬಳಿಯ ಶಿರಹಟ್ಟಿಯ ಇನಾಮದಾರರು ಬಂದು ಕನ್ನಡ ಮಾತಾಡುವ ಜನ ನಮ್ಮೂರಲ್ಲೇ ಜಾಸ್ತಿ ಇದ್ದಾರೆ ಅಲ್ಲಿಗೆ ಬರಬಹುದಲ್ಲಾ ಅಂದಾಗ ಶಿರಹಟ್ಟಿಗೆ ಬಂದು ನೆಲೆಸಿದರು ಇವರ ಮತ್ತಾತ ರಾಮಭಟ್ಟ. ಅವರ ಮಗ ತ್ರಿಯಂಬಕ(ವಿದ್ವಾಂಸರು ಬಹುಶಃ ಬೇಂದ್ರೆಯವರ ಸಾಹಿತ್ಯ ವಂಶವಾಹಿಯಾಗಿ ಇವರಿಂದ ಬಂತೇನೋ) ಮೊಮ್ಮಕ್ಕಳು ರಾಮಚಂದ್ರ ಪಂಥ ಬಂಡೋಪಂಥರು. ರಾಮಚಂದ್ರ ಭಟ್ಟರ ಮಗನೇ ದತ್ತಾತ್ತೆಯ ಬೇಂದ್ರೆ. ಇಷ್ಟೇ ಅಲ್ಲದೇ ಬದುಕಿನುದ್ದಕ್ಕೂ ಜಂಜಾಟಗಳ ಕೈಗೆ ಸಿಕ್ಕು ಮಹಾರಾಷ್ಟ್ರ ಮತ್ತು ಕರ್ನಾಟಕಗಳ ಮಧ್ಯೆ ಇತ್ತಿಂದತ್ತ ಅತ್ತಿಂದಿತ್ತ ಪ್ರಭಾತಪೇರಿ ಮಾಡಿದರು.

ಕಷ್ಟಗಳೆಂದರೆ ಕೆಲವರಿಗೆ ವೈರಾಗ್ಯ ಇನ್ನೂ ಕೆಲವರಿಗೆ ಜೀವನಪ್ರೀತಿಯನ್ನು ಕೊಟ್ಟರೇ ಬೇಂದ್ರೆಯವರಿಗೆ ಇವೆರಡನ್ನೂ ಸಮ ಸಮವಾಗಿ ಹಂಚಿಹೋಯಿತು. ಸಾವು ಬದುಕಿನ ನಿರರ್ಥಕತೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುವ ಘಟನೆ. ಅದು ಘಟಿಸಿದಾಗ ಬದುಕಿನಲ್ಲಿ ಏನೂ ಇಲ್ಲ ಎಂಬ ಸತ್ಯವನ್ನು ತಿಳಿದುಕೊಳ್ಳುತ್ತಲೇ ಇದ್ದಷ್ಟು ದಿನ ಸ್ವಚ್ಛಂದವಾಗಿ ಬದುಕಿ ಹೋಗುವ ಜೀವನ ಪ್ರೀತಿಯನ್ನೂ ಹುಟ್ಟಿಸಿಬಿಡುತ್ತೆ. ಹಲವಾರು ಸಾವುಗಳನ್ನು ಕಂಡ ಬೇಂದ್ರೆಯವರ ಹಲವು ಕವನಗಳಲ್ಲಿ ಬದುಕಿನ ಪ್ರೀತಿಯನ್ನು ತೋರಿಸುತ್ತಲೇ ಥಟ್ಟನೇ ಅಧ್ಯಾತದ ಎತ್ತರಕ್ಕೆ ಜಿಗಿದು ಬಿಡುತ್ತವೆ.

ಬೇಂದ್ರೆಯವರ ಬದುಕಿನುದ್ದಕ್ಕೂ ಅವರನ್ನು ಪ್ರಭಾವಿಸಿ ಅವರಲ್ಲಿ ಅಂಬಿಕಾ ತನಯ ದತ್ತ ಅವತರಿಸುವಂತೆ ಮಾಡಿದ್ದು ಆ ಮನೆಯ ಮೂರು ಸ್ತ್ರೀಯರು. ಒಬ್ಬಳು ಅಜ್ಜಿ(ತಾಯಿಯ ತಾಯಿ) ಗೋದೂಬಾಯಿ, ತಾಯಿ ಅಂಬಿಕೆ, ಹೆಂಡತಿ ಲಕ್ಷ್ಮೀಬಾಯಿ. ಅಜ್ಜಿ ಗೋದೂಬಾಯಿಯಿಂದಲೇ ಬೇಂದ್ರೆಯವರಿಗೆ ಅಂತ ಕಷ್ಟ ಸಹಿಷ್ಣುತೆ ಬಂತೇನೋ. ಹದಿನೇಳು ಮಕ್ಕಳಿಗೆ ಜನ್ಮವಿತ್ತ ಒಡಲದು ಆದರೆ ಮಡಿಲಿನಲ್ಲಿ ಉಳಿದದ್ದು ಅಂಬಿಕೆಯೊಬ್ಬಳೇ. ಮುಂದೆ ಬೇಂದ್ರೆಯವರಿಗೆ ಹುಟ್ಟಿದ ಒಂಬತ್ತರಲ್ಲಿ ಮೂರೇ ಉಳಿದಾಗ “ಇಂಥಾ ಬಡತನದಾಗ ನನಗ ಒಂಭತ್ತು ಮಕ್ಕಳ್ನ ಸಾಕೂದಾಗೂದಿಲ್ಲಾ ಅಂತ ಆ ದತ್ತ ಈ ದತ್ತನ ಆರು ಮಕ್ಕಳ್ನ ದತ್ತಕ ತೊಗೊಂಡಾನ, ಮೂರು ಇರಲಿ ಅಂತ ನನಗ ಬಿಟ್ಟಾನ” ಅನ್ನುವ ಕಷ್ಟವನ್ನು ಬಗ್ಗುಬಡಿದು ನಿಲ್ಲುವ ಸ್ಥೈರ್ಯ ಅಜ್ಜಿಯ ಕೊಡುಗೆಯೇನೋ. ಆ ಅಜ್ಜಿಯ ಕುರಿತು ಬೇಂದ್ರೆ ಬರೆಯುವ ಕವನವೊಂದಿದೆ. “ಹದಿನೇಳು ಹಡೆದರು, ಹೆಣ್ಣೊಂದೆ ಉಳಿದರು, ಜಗ್ಗದ ಕುಗ್ಗದ ಎದೆಯವಳು. ಹುಲಿಹಾಲ ಕುಡಿಸಿದಳು, ತಂತಿಯಲಿ ನಡೆಸಿದಳು, ವೃದ್ಧೆಯಾದರೂ ಅವಳು, ಶೃದ್ಧೆ ಎಂಥಹುದಿತ್ತು. ಕರ್ತವ್ಯ ಬದ್ಧಳು ಕೊನೆವರೆಗೂ..” ಹೀಗೆ ಅಜ್ಜಿಯ ದಿಟ್ಟತನ, ಇವರನ್ನು ಬೆಳೆಸಿದ ರೀತಿ ಎಲ್ಲವನ್ನೂ ದಾಟಿಸುತ್ತಾ ಹೋಗುತ್ತಾರೆ. ಅವಳಿಗುಳಿದಿದ್ದು ಅಂಬಿಕೆಯೊಬ್ಬಳೇ ಅಂಬಿಕೆ ಮೂರು ಹೆತ್ತರೂ ಉಳಿದಿದ್ದು ದತ್ತನೊಬ್ಬನೇ. ಹೀಗಾಗಿ ಬಡತನದ ಮಧ್ಯೆಯೂ ಮುದ್ದಿಗೇನೂ ಕೊರತೆ ಇರಲಿಲ್ಲ‌. ಅವರ ಬಾಲ್ಯದ ಮನೋರಂಜನೆಯ ಸರಕನ್ನೊಮ್ಮೆ ನಾವುಗಳು ಗಮನಿಸಿದರೆ ಅವರ ಕಾವ್ಯದಲ್ಲಿ ಅದರ ಪ್ರಭಾವವನ್ನೂ ಅರಿಯಬಹುದು. ದೊಡ್ಡಾಟವನ್ನು ನೋಡುವುದು. ಆಲೂರು ವೆಂಕಟರಾಯರು ಇವರಿಗೆ ಶಿಕ್ಷಕರಾಗಿ ಬಂದ ಕಾರಣ ನಾಟಕಗಳನ್ನು ಮಾಡಿಸುತ್ತಿದ್ದರು. ಪಾಠದ ಮಧ್ಯ ಷೇಕ್ಸ್‌ಪಿಯರ್ ಬರಹಗಳನ್ನು ಉಲ್ಲೇಖಿಸುತ್ತಿದ್ದರಿಂದ ಆತನ ಬಗ್ಗೆ ಓದಬೇಕು ಎಂಬ ಕುತೂಹಲವನ್ನೂ ಬಿತ್ತಿದವರು. ತಾಯಿಯ ಬಾಯಿಂದ ಬರುತ್ತಿದ್ದ ಉದಯ ರಾಗದ ಭಕ್ತಿ ಗೀತೆಗಳು, ಪಾರಂಪರಿಕ ಹಾಡುಗಳು, ದಾಸರ ಕೀರ್ತನೆಗಳು, ಮರಾಠಿ ಸಂತರ ಅಭಂಗಗಳು, ಶ್ರಾವಣ ಮಾಸದ ಸಂಭ್ರಮಗಳು(ಶ್ರಾವಣದ ಕವಿಯೆಂದು ಬೇಂದ್ರೆಯವರನ್ನು ಕರೆಯತ್ತಾರೆ) ಬಾಲ್ಯದ ಈ ಎಲ್ಲಾ ಅಂಶಗಳು ಅಧ್ಯಾತ್ಮ ಮತ್ತು ಸಾಹಿತ್ಯದ ಒಲವನ್ನು ಬೇಂದ್ರೆಯಲ್ಲಿ ಹುಟ್ಟಿಸಿದವು. ಮುಂದೆ ಇವರಿಗೆ ಸಾಕಷ್ಟು ಖ್ಯಾತಿಯನ್ನು ಕೊಟ್ಟ ಸಖಿಗೀತದ ಕೇಂದ್ರಬಿಂದು ಪತ್ನಿ ಲಕ್ಷ್ಮೀಬಾಯಿ.

ಇವರು ಮೆಟ್ರಿಕ್ ಪಾಸಾದಾಗ ಅಜ್ಜಿ ಇಹಲೋಕ ತ್ಯಜಿಸಿದಳು. ಬೇಂದ್ರೆಯವರೇ ಬರೆಯುವಂತೆ ತನ್ನ ಬದುಕನ್ನು “ಯಜ್ಞದಂತೆ ಕಳೆದು ಪರರಿಗೆ ಸ್ವಾಹಾ ಸ್ವಾಹಾ” ಎಂದು ಅರ್ಪಿಸಿದ ಅಜ್ಜಿ ಹೋದ ಮೇಲೆ ಬೇಂದ್ರೆ ಅಕ್ಷರಶಃ ಅನಾಥರಾದರು. ಆಗ ಮುರಿದು ಬಿದ್ದ ಬದುಕಿಗೆ ಆಸರೆಯಾಗಿದ್ದು ಅವರ ಚಿಕ್ಕಪ್ಪ ಬಂಡೋಪಂಥರು. ಈ ಅನಾಥ ಭಾವವನ್ನು ಬೇಂದ್ರೆ “ನಾನು ಎತ್ತಿಕೊಂಡವರ ಕೈಯಾಗಿನ ಕೂಸಾದಂಗ ಆಗಿದ್ದ” ಅಂತ ಹೇಳುತ್ತಿದ್ದರು. ಬಂಡೋಪಂಥರು ಕರೆದಾಗ ಪುಣೆಗೆ ಹೋಗಿ ಫರ್ಗುಸನ್ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸ ಮುಂದುವರೆಯಿತು. ಆಗ ಇವರ ಮರಾಠಿ ಕಲಿಕೆ ಶುರುವಾಯಿತು. ತದನಂತರ ಭಾಷೆಯ ಮೇಲೆ ಅವರ ಪ್ರಭುತ್ವ ಯಾವ ಮಟ್ಟಿಗಾಯ್ತು ಅಂದರೆ ಕವನ ಬರೆಯಲು ಶುರು ಮಾಡಿದರು. ಬಹುಶಃ ಬೇಂದ್ರೆ ಬರವಣಿಗೆ ರೂಢಿಸಿಕೊಂಡ ಕಾಲವದು. ಪುಣೆಯ ಲೈಬ್ರರಿಯಲ್ಲೇ ಹಗಲು ರಾತ್ರಿ ಕಳೆಯುತ್ತಿದ್ದ ಬೇಂದ್ರೆ ಮರಾಠಿ, ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡರು. ಮುಂದೆ ಅಲ್ಲಿಯೇ ಅವರಿಗೆ ಶ್ರೀಧರ ಖಾನೋಳ್ಕರ್ ಎಂಬ ಗೆಳೆಯ ಸಿಕ್ಕ ಆತ ಅರವಿಂದರ ಬಗ್ಗೆ ಹೇಳುತ್ತಾ ಅವರ ಪುಸ್ತಕಗಳನ್ನು ಕೊಟ್ಟ‌. ಅರವಿಂದರು ಇವರ ಆರಾಧ್ಯ ದೈವ, ಅಧ್ಯಾತ್ಮ ಗುರುಗಳೇ ಆಗಿಹೋದರು. ತಮ್ಮ ಮನೆಯ ಹೆಸರನ್ನೇ ಶ್ರೀಮಾತಾ ಎಂದಿಟ್ಟರು. ಮಹಾರಾಷ್ಟ್ರದ ಪ್ರತಿಷ್ಟಿತ ಕೇಳ್ಕರ್ ಪ್ರಶಸ್ತಿಗೆ ಭಾಜನರಾಗುವಂತೆ ಮಾಡುವ ಅವರ ಸಾಹಿತ್ಯಿಕ ಸಾಧನೆಯ ಮೂಲ ಇಲ್ಲಿಂದಲೇ ಶುರುವಾದದ್ದು.

ಬಿ.ಎ ಪದವಿ ಬರುವ ಮುನ್ನವೇ ವಿಕ್ಟೋರಿಯಾ ಶಾಲೆಯಲ್ಲಿ ಮಾಸ್ತರರಾದರು. ಅದಾದ ನಂತರ ಮತ್ತೆ ಧಾರವಾಡದ ಕಾಮನಕಟ್ಟೆಯಲ್ಲಿ ಮನೆ ಮಾಡಿದರು. ಬೇಂದ್ರೆಯವರಿಗೆ ನರಗುಂದದ ಹುಡುಗಿಯಾದ ರಂಗೂಬಾಯಿ( ಮದುವೆಯ ನಂತರ ಲಕ್ಷ್ಮಿ)ಜೊತೆ ಮದುವೆಯಾಯಿತು. ಮುಂದೆ ನಲವತ್ತೇಳು ವರ್ಷದ ಸುದೀರ್ಘ ದಾಂಪತ್ಯ ಅವರದ್ದಾಗಿತ್ತು.

ಬೇಂದ್ರೆ ತಾನೊಬ್ಬನೇ ಬೆಳೆಯದೇ ಹತ್ತು ಜನರನ್ನು ಬೆಳೆಸಲೋಸುಗ ಗೆಳೆಯರ ಬಳಗವನ್ನು ಕಟ್ಟಿಕೊಂಡರು. ಹಲವಾರು ಜನರ ಬಳಗದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿದ್ದವು. ದೊಡ್ಡ ಮಟ್ಟದ ಕನಸನ್ನು ಆ ಬಳಗ ಕಂಡಿತ್ತು.ನವೋದಯ ಸಾಹಿತ್ಯಕ್ಕೆ ಅದರ ಕೊಡುಗೆ ಅಪಾರ. ಈ ಸಂಘದ ಕೊನೆಗಾಲಕ್ಕೆ ಬೇಂದ್ರೆಯವರ ಬದುಕಿನಲ್ಲಿ ಒಂದು ದುರ್ಘಟನೆಯೂ ಘಟಿಸಿತು. ಮಾಸ್ತರನ ನೌಕರಿ ಮಾಡುತ್ತಿದ್ದ ಬೇಂದ್ರೆಯವರಿಗೆ ಆಲೂರು ವೆಂಕಟರಾಯರು ನಡೆಸುತ್ತಿದ್ದ ಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆಯುವ ಅವಕಾಶ ಒದಗಿತು. ಆಗ ಸ್ವಾತಂತ್ರ್ಯ ಚಳುವಳಿಯ ಕಾವು ಜಾಸ್ತಿ ಇದ್ದ ಕಾಲ. ಬೇಂದ್ರೆಯವರು ಬರೆದ “ನರಬಲಿ” ಕವನಕ್ಕೆ ಬ್ರಿಟೀಷರು ದೇಶದ್ರೋಹದ ಕೆಲಸವೆಂದು ಹಣೆಪಟ್ಟಿ ಕಟ್ಟಿ ಮೂರು ತಿಂಗಳು ಕಾರಾಗೃಹ, ಒಂಬತ್ತು ತಿಂಗಳು ಗೃಹ ಬಂಧನದ ಶಿಕ್ಷೆ ವಿಧಿಸಿದರು. ಆಗ ಅವರು ತಮ್ಮ ಗೆಳೆಯರ ಬಳಗವನ್ನು ನೆನೆದು “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ…” ಎಂಬ ಹಾಡನ್ನು ಬರೆದರು. ಅದರ ಕೊನೆಯ ಕೆಲವು ಸಾಲುಗಳು ಇವತ್ತೂ ಜಿಜ್ಞಾಸುಗಳಿಗೆ ಚರ್ಚಾಹಾರವಾಗುತ್ತವೆ. “ಅರ್ಥವಿಲ್ಲ, ಸ್ವಾರ್ಥವಿಲ್ಲ ಬರೀಯ ಭಾವಗೀತ” ಎಂಬ ಸಾಲುಗಳು. ಭಾವಗೀತೆಯಂತೆ ಬರೀ ಕನಸನ್ನು ಕಟ್ಟಿಕೊಂಡಿತೆ ವಿನಾ ಅದಕ್ಕೆ ತನ್ನದೇ ಆದ ಅರ್ಥ(ಸ್ವ ಅರ್ಥ- ಸ್ವಾರ್ಥ) ಇರಲೇ ಇಲ್ಲ ಎಂದು ಬರೆಯುತ್ತಾರೆ. ವಾಸ್ತವದ ಆಧಾರಗಳಿಲ್ಲದೇ ಕಂಡ ಕನಸುಗಳು ಕಮರಿ ಹೋದ ದುಃಖ ಇದರಲ್ಲಿ ಛಾಪು ಒತ್ತುತ್ತದೆ‌.

ಇನ್ನೇನು ಒಂದು ವರ್ಷದ ಶಿಕ್ಷೆ ಕಳೆದೇ ಹೋಯಿತು ಅನ್ನುವಾಗ ಮತ್ತೆ ಬ್ರಿಟೀಷರು ಬೇಂದ್ರೆಯವರಿಗೆ ಹತ್ತು ವರ್ಷಗಳ ಕಾಲ ಯಾವುದೇ ಖಾಸಗಿ ಸಂಸ್ಥೆಯೂ ನೌಕರಿ ಕೊಡಕೂಡದು ಕೊಟ್ಟರೇ ಅದರ ರೆಜಿಸ್ಟರೇಷನ್ ಕ್ಯಾನ್ಸಲ್ ಮಾಡುವುದಾಗಿ ಆಜ್ಞೆ ಹೊರಡಿಸುತ್ತಾರೆ. ಅವರ ಚಿಕ್ಕಪ್ಪ ಅನುಕೂಲಸ್ಥ ಧಾರವಾಡದ ಸಾಧನಕೇರಿಯಲ್ಲಿ ಆತ ಕಟ್ಟಿದ ಮನೆಯನ್ನು ಬಿಟ್ಟುಕೊಡುತ್ತಾನೆ. ಆ ಮನೆಯ ಒಂದು ಕೋಣೆ ಉಳಿಸಿಕೊಂಡು ಹೆಂಡತಿಯನ್ನು ತವರು ಮನೆಯಲ್ಲಿ ಇರಲು ಹೇಳಿ ಮಿಕ್ಕ ಭಾಗವನ್ನು ಬಾಡಿಗೆಗೆ ಕೊಟ್ಟು ಅದರಲ್ಲಿ ಉಪಜೀವನ ನಡೆಸುತ್ತಿದ್ದರಂತೆ. ಅಡುಗೆ ಬಾರದ ಬೇಂದ್ರೆಯವರು ಪ್ರತಿದಿನ ಗೆಳೆಯರ ಮನೆಗೆ ಅತಿಥಿಯಂತೆ ಹೋಗಿ ಅಲ್ಲಿ ಊಟ ಉಪಹಾರಗಳನ್ನು ಮುಗಿಸಿ ಬರುತ್ತಿದ್ದರಂತೆ. ಯಾವುದೋ ಊರಲ್ಲಿ ಭಾಷಣಕ್ಕೆಂದು ಕರೆದರೆ ಒಂದು ದಿನದ ಬದಲಾಗಿ ಮೂರ್ನಾಲ್ಕು ದಿನ ತಂಗಿ ಉದರಾಗ್ನಿಯ ಶಮನಗೊಳಿಸುತ್ತಿದ್ದರಂತೆ. ಅಜ್ಜಿ, ಅಮ್ಮ, ಪತ್ನಿಯ ಜೊತೆ ಬಂಡೋಪಂಥರನ್ನು ನೆನೆಯದೇ ಹೋದರೆ ಅನ್ಯಾಯವಾದೀತು‌. ಜೊತೆಗಿದ್ದ ಮೂರು ಸ್ತ್ರೀಯರು ಆಸರೆಯಾದರೆ ಆಸರೆ ಕಳಚಿ ಬಿದ್ದಾಗ ಜೊತೆಗೆ ನಿಂತವರು ಬಂಡೋಪಂಥರು. ಪುಣೆಗೆ ಬಂದು M.A ಮುಗಿಸುವಂತೆ ಬಂಡೋಪಂಥರು ಕರೆಯಲಾಗಿ ಅಲ್ಲಿನ ಕಾಲೇಜೊಂದರಲ್ಲಿ M.A ಮುಗಿಸಿಕೊಂಡರು. M.A ಫಲಿತಾಂಶ ಬಂದ ದಿನವೇ ಅವರ ಚಿಕ್ಕಪ್ಪನೆಂಬ ಆಧಾರ ಸ್ತಂಭ ಕುಸಿದು ಬದುಕು ಮತ್ತೊಮ್ಮೆ ದಿಕ್ಕು ತೋಚದಂತಾಯ್ತು.‌ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕವನ ವಾಚನವನ್ನು ಮೆಚ್ಚಿದ ಮಾಸ್ತಿ ತಮ್ಮ “ಜೀವನ” ಎಂಬ ಪತ್ರಿಕೆಗೆ ಐದು ವರ್ಷಗಳ ಕಾಲ ಇವರನ್ನು ಸಂಪಾದಕರನ್ನಾಗಿಸಿಕೊಂಡದ್ದನ್ನು ಬೇಂದ್ರೆ ಕೃತಜ್ಞತಾಪೂರ್ವಕವಾಗಿ ನೆನೆಯುತ್ತಾರೆ. ಬ್ರಿಟೀಷರ ಶಿಕ್ಷೆಯ ಕಾಲ ಒಂಬತ್ತು ವರ್ಷವಾಗುತ್ತಿದ್ದಂತೆ ಒಂದು ವರ್ಷದ ರಿಯಾಯಿತಿ ಸಿಕ್ಕಿತು. ಗದಗಿನ ಸಮೀತಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸವೂ ಸಿಕ್ಕಿತು. ಆಶಾವಾದಿಯಾದ ಕವಿಯು ಇಷ್ಟು ದಿನದ ಕಷ್ಟದ ಮುಂದೆ ಇನ್ನೇನು ಕಷ್ಟ ಬಂದೀತು? ಬದುಕಿಗೊಂದು ನೆಲೆ ಸಿಕ್ಕಿತು‌. ನಿವೃತ್ತನಾಗುವವರೆಗೆ ಗದಗಿನಲ್ಲಿ ಉಳಿದರಾಯ್ತು ಅಂತ ಧಾರವಾಡದಿಂದ ಗದಗಿಗೆ ಹೊರಟರು. ಅವರ ಆ ದಿನದ ಹುಮ್ಮಸ್ಸನ್ನು “ಧಾರವಾಡ ತಾಯಿ…” ಎಂದು ಶುರುವಾಗುವ ಕವನದಲ್ಲಿ ನೋಡಬಹುದು. ಆದರೆ ಭಗವಂತ ಇವರ ಸನ್ನಡತೆಗೆ ಮೆಚ್ಚಿ ಕಷ್ಟದಲ್ಲಿ ರಿಯಾಯಿತಿಯೇನೂ ಕೊಡಲಿಲ್ಲ. ಕೆಲವೇ ತಿಂಗಳುಗಳ ನಂತರ ಶಾಲೆಯನ್ನು ಇವರು ಸರಿಯಾಗಿ ನಡೆಸರು ಎಂಬ ಕಾರಣಕೊಟ್ಟು ಮತ್ತೆ ಶಾಲೆಯಿಂದ ತೆಗೆದು ಹಾಕಿದರು. ಆಗ ಮರಳಿ ಧಾರವಾಡಕ್ಕೆ ಬಂದು “ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ..” ಹಾಡನ್ನು ಬರೆಯುತ್ತಾರೆ. ಬೇಂದ್ರೆ ಮತ್ತು ಬದುಕಿನ ಅಭದ್ರತೆಗಳು ಅವಳಿಗಳೇನೋ ಎಂಬಂತೆ ಪ್ರತಿ ಹಂತದಲ್ಲೂ ಮೇಲೆದ್ದರೇನೋ ಅನ್ನುವಷ್ಟರಲ್ಲಿ ಮತ್ತೆ ಪ್ರಪಾತಕ್ಕೆ ಬೀಳೊದು ಆವರ್ತನವಾಗುತ್ತಿತ್ತು. ಈ ಕ್ಷಣಕ್ಕೆ ಬೇಂದ್ರೆಯವರ ಶಿಷ್ಯರಂತಿದ್ದ ಗೋಕಾಕರು ಸೋಲಾಪುರದ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮುಂದುವರೆಯಲು ಬೇಂದ್ರೆಯವರಿಗೆ ಆಹ್ವಾನವಿತ್ತರು. ಸೋಲಾಪುರದಲ್ಲಿ ಸುದೀರ್ಘ ಹನ್ನೆರಡು ವರ್ಷಗಳ ಕಾಲ ನೆಲೆ ನಿಂತರು. ಅಲ್ಲಿಯೂ ಬಡತನವೇನು ಬೆನ್ನು ಬಿಡಲಿಲ್ಲ‌. ಕೆಲವೊಮ್ಮೆ ವಿದ್ಯಾರ್ಥಿಗಳು ಇವರಿಗೆ ಮತ್ತು ಇವರ ಕುಟುಂಬಕ್ಕೆ ಊಟದ ಡಬ್ಬಗಳನ್ನು ತಂದುಕೊಟ್ಟದ್ದನ್ನು ನೆನೆಯುತ್ತಾರೆ. ಮತ್ತೆ ಅಲ್ಲಿಂದ ನಿವೃತ್ತರಾಗಿ ಬಂದ ಮೇಲೆ ಧಾರವಾಡದ ಆಕಾಶವಾಣಿಯಲ್ಲಿ ಸಲಹಾ ಸಮೀತಿಯಲ್ಲಿ ಹತ್ತು ವರ್ಷದ ಕೆಲಸವು ಮತ್ತೆ ಗೋಕಾಕರ ಮುಖೇನ ದಕ್ಕಿತು. ಬೇಂದ್ರೆ ಬಾಲ್ಯದಷ್ಟೇ ಅಲ್ಲ ಬದುಕಿನುದ್ದಕ್ಕೂ ಎತ್ತಿಕೊಂಡವರ ಕೈಯಾಗಿನ ಕೂಸಂತೆ ಇದ್ದರು. ಅದೇ ಮುಗ್ದತೆ ಅದೇ ಅಭದ್ರತೆ ಅದದೇ ಅಪರಿಚಿತರ ಆಸರೆಗಳು.‌

ಇದೆಲ್ಲ ಅವರ ಬದುಕಿನ ಜಂಜಾಟಗಳ ಕುರಿತಾದರೆ ಸಾಹಿತ್ಯದ ಕುರಿತು ಬರೆಯದೇ ಹೋದರೆ ಅನ್ಯಾಯವಾದೀತು. ಮದುವೆಯಾಗಿ ಹನ್ನೆರಡು ವರ್ಷದ ನಂತರ ಒಂದು ಕವನವನ್ನು ಬರೆಯುತ್ತಾರೆ. “ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ ಏನೋಂದ ನಗಿಯಿತ್ತ ಏಸೋಂದ ನಗಿಯಿತ್ತ..” ಹನ್ನೆರಡು ವರ್ಷದ ಕಷ್ಟ ಕಾರ್ಪಣ್ಯಗಳ ನಂತರ ಈ ಹಾಡು ಅಂತ್ಯವಾಗೋದು‌ “ಬಡತನದ ಬಲಿಯಾಗ, ಕರುಳೀನ ಕೊಲಿಯಾಗ, ಬಾಳ್ವಿಯ ಒಲಿಮ್ಯಾಲ ಸುಟ್ಟು ಹಪ್ಪಳದಂಗ ಸೊರಗೀದಿ” ಎಂದು ಮುಗಿಸುತ್ತಾರೆ. “ಕರುಳಿನ ಕೊಲಿಯಾಗ” ಎಂಬ ಮಾತು ಆರು ಮಕ್ಕಳು ಸತ್ತದ್ದನ್ನು ಸೂಚಿಸುತ್ತದೆ. ಕವಿ ಅವಡುಗಚ್ಚಿ ಅಳಲಿರುವ ಭುಜದ ಆಸರೆ ಅಂದರೆ ಅದು ಕವನವೊಂದೆ.

ಅವರ ಮೊದಲ ಮಗುವಿಗೆ ಕ್ಷೇಮೇಂದ್ರ ಎಂದು ಹೆಸರಿಟ್ಟರು. ಬೇಂದ್ರೆ ಬದುಕಿನುದ್ದಕ್ಕೂ ಕಂಡ ಅಲ್ಪಾಯುಗಳಲ್ಲಿ ಈತನೂ ಒಬ್ಬ. ಕ್ಷೇಮೆಂದ್ರನನ್ನು ಅತಿಥಿಯಾಗಿ ಬಂದು ಹೋದೆ ಎಂದು ಹಾಡಿನಲ್ಲಿ ಬರೆಯುತ್ತಾರೆ. “ಕೊಳಲಾಗಬಹುದಿತ್ತು. ಕಳಲಿದ್ದಾಗಲೇ ಕಡಿದ ಕಾಳ”. ಇನ್ನೂ ಪೂರ್ತಿಯಾಗಿ ಬೆಳೆದು ನಿಲ್ಲುವ ಮೊದಲೇ ಕಡಿದು ಹೋಯ್ತು ಅಂತ ಬರೆಯುತ್ತಾರೆ. ಎರಡನೇಯವನಾದ ರಾಮ ಆಗಿನ ಮಟ್ಟಕ್ಕೆ ಉಳಿದು ಮತ್ತೆ ಮೂರನೇಯ ಮಗ ಭಾಸ್ಕರ ತೀರಿಹೋಗುತ್ತಾನೆ. ಹೀಗೆ ಒಟ್ಟು ಆರು ಮಕ್ಕಳು ತೀರಿಹೋಗುತ್ತಾರೆ. ಆದರೆ ಇವರನ್ನು ಸಾಕಷ್ಟು ಕಾಡಿದ ಸಾವುಗಳು ಮೂರು. ಒಂದು ಮಗಳು ಲಲಿತಾ, ಮಗ ಆನಂದ ಮತ್ತು ಇನ್ನೊಬ್ಬ ಮಗ ರಾಮ. ಲಲಿತಾಳ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ಪುಣೆಯಿಂದ ರಾಣೆಬೆನ್ನೂರಿನತ್ತ ಬರುವಾಗ ಹಾದಿಯಲ್ಲಿ ಬರೆದ ಹಾಡೇ ” ನೀ ಹಿಂಗ ನೋಡಬ್ಯಾಡ ನನ್ನ..” ಈ ಹಾಡನ್ನು ಹಲವರು ಪ್ರೇಮ ಗೀತೆಯಂತೆ ಪರಿಗಣಿಸುತ್ತಾರೆ. ಆದರೆ ವಾಸ್ತವದಲ್ಲಿ ಹಲವು ಮಕ್ಕಳ ಕಳೆದುಕೊಂಡ ಹೆಂಡತಿ ಈ ಮಗಳು ತೀರಿದಾಗ ಗಂಡ ಬಂದರೆ ಹೇಗೆ ನೋಡಬಹುದು ಎಂಬುದರ ಕುರಿತಿದೆ.ಹಲವು ಸಾವುಗಳನ್ನು ಕಂಡ ನಂತರವೂ ಗಂಡ ಬಂದಾಗ ಅಳದೇ ದುಃಖವನ್ನು ತಡೆಹಿಡಿದ ಬಗೆಯನ್ನು ಈ ಪದ್ಯ ತುಂಬಾ ಮನಮುಟ್ಟುವಂತೆ ಹೇಳುತ್ತದೆ. “ನಿನ್ನ ಕಣ್ಣಿನಾಗ ಕಾಲೂರಿ ಮಳೆಯು ನಡನಡಕ ಹುಚ್ಚು ನಗಿಯಾಕ? ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡೆದಾಂಗ ಗಾಳಿಯ ನೆವಕ, ಅತ್ತಾರೆ ಅತ್ತು ಬಿಡು ಹೊನಲು ಬರಲಿ, ನಕ್ಕಾಕ ಮರೆಸತಿದಿ ದುಃಖ…” ಎಂದು ಸಾಲುಗಳು ಮುಂದುವರೆಯುತ್ತವೆ.

ರಾಮನ ಸಾವು ಇದಕ್ಕಿಂತ ಹೆಚ್ಚಾಗಿ ಕಾಡಿತು. ಅಲ್ಪಾಯುವಾಗಿ ಸತ್ತ ಮಕ್ಕಳೊಂದಿಗಿನ ಬಾಂಧವ್ಯ ಬಹಳ ಕಡಿಮೆ ಇತ್ತೇನೋ. ರಾಮ ಬದುಕಿದ್ದು ಇಪ್ಪತ್ತು ವರ್ಷ. ಅದಷ್ಟೇ ಅಲ್ಲದೇ ಆತನಿಗೂ ಸಾಹಿತ್ಯಾಸಕ್ತಿ ಇದ್ದು ಕೊಳಲು ನುಡಿಸುತ್ತಿದ್ದ. ಅದಲ್ಲದೇ ಇವನ ಸಾವಿಗೆ ಒಂದು ವಾರದ ಮುನ್ನವೇ ಅವರ ಇನ್ನೊಂದು ಮಗು (ಆನಂದ) ಸತ್ತು ಹೋಗಿದ್ದ. ಇದನ್ನು ರಾಮ ಸತ್ತಾಗ ಬರೆದ ಕವನದಲ್ಲಿ
“ಎಣ್ಣೆಗೈಯಲಿ ಕೆಂಡ ಹಿಡಿದೆನು ಭಗ್ಗನೆ ಹೊತ್ತುತ್ತಿದೆ” ಎಂದು ಒಂದು ಸಾಲು ಸೇರಿಸಿ ಇದು ಖಾಲಿ ಕೈಯಲ್ಲಿ ಕೆಂಡ ಹಿಡಿದ ನೋವಲ್ಲ ಆನಂದನ ಸಾವು ಎಣ್ಣೆ ಸವರಿ ಹೋಗಿದೆ ನಿನ್ನ ಸಾವು ಅದರ ಮೇಲೆ ಬೆಂಕಿ ಹಿಡಿದಂತೆ ಅಂತ ಬರೆಯುತ್ತಾರೆ. ಅವನು ಬದುಕಿದ್ದಾಗಲೇ ಅವನಿಗಾಗಿ ಒಂದು ಕವನ ಬರೆದಿದ್ದರು. “ಯಾರಿಗೂ ಹೇಳೂಣು ಬ್ಯಾಡ..” ಆ ಮಗು ಬೇಂದ್ರೆಗೆ ಅದೆಷ್ಟು ಆಪ್ತವಾಗಿತ್ತು ಅನ್ನೋದಕ್ಕೆ ಈ ಕವನವೇ ಸಾಕ್ಷಿ. ಇಪ್ಪತ್ತು ವರ್ಷದ ಒಡನಾಟ, ತಮ್ಮನೊಬ್ಬ ಸತ್ತ ಒಂದೇ ವಾರಕ್ಕೆ ಸತ್ತದ್ದು, ಸಾಹಿತ್ಯಿಕ ಆಸಕ್ತಿ ಇದ್ದ ಈತ ಅವರ ಆಶಾಕಿರಣವಾಗಿದ್ದನೋ ಏನೋ.‌ ಹೀಗಾಗಿ ಆತನ ಸಾವು ಬಹಳ ಕಾಡಿತ್ತು. ಆತ ತೀರಿದಾಗ “ಪಾಡು” ಎಂಬ ಕವನವೊಂದನ್ನು ಬರೆಯುತ್ತಾರೆ. ಅದರ ಕೊನೆಯ ಸಾಲುಗಳು ಹೀಗೆ ಬರುತ್ತವೆ. “ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ, ಸತ್ತ ರಾಮಗೆ ಅತ್ತೆ ಅಳುವನೋ ಇರುವ ದತ್ತನು ಇಂದಿಗೆ”. ಬಹುಶಃ ಈ ಪುತ್ರಶೋಕ ಅವರನ್ನು ಕೊನೆಯವರೆಗೂ ಕಾಡಿತ್ತು.

ಅವರು ಕಂಡ ಕೊನೆಯ ಸಾವು ಅವರ ಹೆಂಡತಿಯದ್ದು ಆಗ ಬರೆದ ಕವನ “ಹೋದ ಬುಧವಾರ ಬರಲಿಲ್ಲ” ಅಂತ. ಅವರ ಮದುವೆಯ ಹೊಸತರಲ್ಲಿ ಬರೆದ “ಘಮ ಘಮ‌..” ಹಾಡಿನ ಸಾಲುಗಳು ಈ ಪದ್ಯದಲ್ಲಿ ಮರುಕಳಿಸುತ್ತವೆ.

ಇಷ್ಟು ಉನ್ನತ ಸಾಹಿತ್ಯ ರಚಿಸಿದರೂ ಬೇಂದ್ರೆಯವರಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗಲಿಲ್ಲ. ಹೆಚ್ಚಾಗಿ ಅವರನ್ನು ಗುರುತಿಸಲಿಲ್ಲ. ಕೆಲವರ ಉಡಾಫೆಯ ಮಾತುಗಳನ್ನು ಕೇಳುತ್ತಲೇ ಹೋದರು. ಅವರ ಸಾಹಿತ್ಯ ಅರ್ಥವಾಗದು ಎಂದಿದ್ದಕ್ಕೆ ರಾಜರತ್ನಂ ಸಿಟ್ಟಾಗಿ ಅದನ್ನು ಅರಿಯುವ ಸಾಮರ್ಥ್ಯ ನಿನ್ನಲಿಲ್ಲ ಎಂದು ಸಾಹಿತಿಯೊಬ್ಬರಿಗೆ ಉತ್ತರಿಸಿದ್ದರು. ಜ್ಞಾನಪೀಠ ಬಂದಾಗ ನಾಕುತಂತಿಗೆ ಅರ್ಥವೇ ಇಲ್ಲವೆಂದು ಆಡಿಕೊಂಡವರಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯರು ಪ್ರತಿ ಊರಿಗೂ ತಿರುಗಾಡಿ ಇದರ ಭಾವಾರ್ಥ ತಿಳಿಸುವ ಶ್ರೇಷ್ಟ ಕೆಲಸವನ್ನು ಮಾಡಿದರು. ಅದೇನೆ ಇರಲಿ ಅವರ ಬದುಕು ಯಾರೊಂದಿಗೂ ಹೋಲಿಸಲಾಗದ್ದು. ಅನುಪಮ ಆದರ್ಶದ ಬದುಕು.

ನೀರಿನಲ್ಲಿ ಎಣ್ಣೆ ಹಾಕುವುದಕ್ಕೂ ಸಕ್ಕರೇ ಹಾಕಿ ಕಲಿಸುವುದಕ್ಕೂ ಬಹಳ ವ್ಯತ್ಯಾಸ. ಬೇಂದ್ರೆಯವರ ಮಟ್ಟಿಗೆ ಬದುಕೆಂಬುದು ನೀರಾದರೆ ಬರಹ ಅದರಲ್ಲಿ ಬೆರೆತುಹೋದ ಸಕ್ಕರೆಯೇ ವಿನಾ ಎಂದಿಗೂ ಬೆರೆಯದ ಎಣ್ಣೆಯಾಗದು. ಬದುಕು, ಬರಹವೆಂದು ಬೇರ್ಪಡಿಸುವ ಅವಶ್ಯಕತೆಯೇ ಇಲ್ಲ. ಬರಹ ಬೇರೆ ಬದುಕು ಬೇರೆ ಅನ್ನುವಂಥ ಅದೆಷ್ಟೋ ಸಾಹಿತಿಗಳ ಮಧ್ಯೆ ಬರೆದಂತೆ ಬದುಕಿದವರು ಬಹಳ ಅಪರೂಪವಾದರೆ ಬದುಕಿಗೆ ಕನ್ನಡಿ ಹಿಡಿದಂತೆ ಬರೆದವರೂ ಅದಕ್ಕಿಂತಲೂ ಅಪರೂಪ. ಬದುಕಲ್ಲಿ ಏನೇ ಘಟಿಸಿದರೂ ಅದನ್ನು ಬರಹಕ್ಕಿಳಿಸಿ ಬಿಡುತ್ತಿದ್ದವರು ಬೇಂದ್ರೆ ಅಜ್ಜ. ಅದೆಷ್ಟೋ ಸಾಹಿತಿಗಳು ತಮ್ಮ ಬದುಕಿನ ಕುರಿತು ಬರೆಯುವಾಗ ಕೆಲವನ್ನು ಮರೆಮಾಚುತ್ತಾರೆ ಮತ್ತೆ ಕೆಲವನ್ನು ವೈಭವೀಕರಿಸುತ್ತಾರೆ. ಬೇಂದ್ರೆಯವರ ರೀತಿ ಸ್ಫಟಿಕ ಸ್ಪಷ್ಟತೆಯ ಪ್ರಾಮಾಣಿಕತೆ ಬಹಳ ದುರ್ಲಭ. ಹಾಗೆಂದು ಮತ್ತೊಬ್ಬರ ಅನುಕಂಪ ಗಿಟ್ಟಿಸಿಕೊಳ್ಳಲೋ ಓದುಗನಿಗೆ ಗೋಳು ತೋರಿಸಲೋ ಬರಹವನ್ನು ಅವರು ಮಧ್ಯವರ್ತಿಯಾಗಿಸಲಿಲ್ಲ. ಎದೆಯಾಗಿನ ನೋವನ್ನು ಪದಕ್ಕೆ ದಾಟಿಸಿದರಷ್ಟೆ. ಒಮ್ಮೆ ಅವರದನ್ನು ಹೇಳಿಯೂ ಬಿಟ್ಟರು ವೈಯಕ್ತಿಕ ಅನುಭವಗಳು ಸಾರ್ವತ್ರಿಕವೂ ಹೌದು. ಕಾಲ ಬದಲಾದರೂ ಮನುಷ್ಯನ ಮೂಲ ಆಕಾಂಕ್ಷೆಗಳು ಬದಲಾಗವು. ನನ್ನ ಮಗ ಸತ್ತಾಗ ನಾನು ಬರೆದರೆ ಇನ್ನೊಬ್ಬನ ಪುತ್ರಶೋಕವನ್ನೇ ಧ್ವನಿಸುವುದು ಅಂತ. ಒಂದೇ ಮಾತಿನಲ್ಲಿ ಹೇಳೋದಾದರೆ ಬದುಕನ್ನೇ ಬರಹಕ್ಕಿಳಿಸಿ, ಬರಹವನ್ನೇ ಬದುಕಾಗಿಸಿಕೊಂಡು, ಬರೆದಂತೆ ಬದುಕಿದ ಸರಳ ವಿರಳ ಬರಹಗಾರ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕಡುಕಷ್ಟದ ನಡುವೆಯೂ ಅವರ ಜೀವನೋತ್ಸಾಹ ಬತ್ತಲಿಲ್ಲ. ಕಷ್ಟ ಅಂದರೆ ನೀವು ಯಾವುದಕ್ಕೆ ಕರೆಯುತ್ತೀರೋ ಹೇಳಿ ಅದರ ಪ್ರಪಾತವನ್ನೇ ಕಂಡು ಬಂದವರು ಬೇಂದ್ರೆ. ಬಡತನವನ್ನು ಕಷ್ಟವೆಂದರೆ ಅದನ್ನೇ ಹಾಸಿಹೊದ್ದವರು. ನಿರುದ್ಯೋಗವನ್ನೇ ಕಷ್ಟವೆಂದರೆ ಅವರ ಬದುಕಲ್ಲಿ ನೌಕರಿಗಳೆಂಬುವವು ಅಕಾಲಿಕ ಮಳೆಯಂತೆ ಕ್ಷಣಿಕ ಸಂತಸವಿತ್ತು ಹೋದಂತಿದ್ದವು. ಸಾವೆಂಬುದಕ್ಕಿಂತ ಕಷ್ಟ ಮತ್ತೊಂದಿಲ್ಲ ಎಂದು ನೀವು ತಿಳಿದರೆ ಬೇಂದ್ರೆಯವರಷ್ಟು ಸಾವುಗಳನ್ನು ನಾವು ನೀವು ಕಂಡಿಲ್ಲ. ಇಷ್ಟಾದರೂ ಅವರು ಹೇಳಿದ್ದಿಷ್ಟೆ

"ಎನ್ನ ಪಾಡೆನಗಿರಲಿ,
ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು
ಕರಗಿದರೆ ಆ ಸವಿಯ ಹಣಿಸು ನನಗೆ"

ಬಡನೂರು ವರುಷಾನ ಹರುಷಾದಿ ಕಳೆದು, ಒಲವೆಂಬ ಹೊತ್ತಿಗೆಯನು ವೆಚ್ಚವಿಲ್ಲದೇ ಓದಿಸಿ ಹೋದ ಪ್ರೇಮಮೂರ್ತಿಯ ಬೇಂದ್ರೆಯವರಿದ್ದರೇ 125ನೇ ವರ್ಷದ ಹುಟ್ಟುಹಬ್ಬಕ್ಕೆ ಕುಣಿಯೋಣು ಬಾರಾ ಅಂದಿರೋರು.

ರಾಹುಲ್ ಅಶೋಕ ಹಜಾರೆ
  • email
  • facebook
  • twitter
  • google+
  • WhatsApp
Tags: AmbikatanayadattaDa ra bendredr bendre

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಸಂಘಂ ಶರಣಂ ಗಚ್ಛಾಮಿ – ಸ್ವಯಂಸೇವಕರಿಗೆ ಮಾತ್ರವಲ್ಲ, ಸಂಘವನ್ನು ತಿಳಿಯಬಯಸುವವರಿಗೆ ಸಂಘ ಮತ್ತು ಅದರ ವ್ಯವಸ್ಥೆಯನ್ನು ತಿಳಿಯಲು ಓದಲೇಬೇಕಾದ ಪುಸ್ತಕ

ಸಂಘಂ ಶರಣಂ ಗಚ್ಛಾಮಿ - ಸ್ವಯಂಸೇವಕರಿಗೆ ಮಾತ್ರವಲ್ಲ, ಸಂಘವನ್ನು ತಿಳಿಯಬಯಸುವವರಿಗೆ ಸಂಘ ಮತ್ತು ಅದರ ವ್ಯವಸ್ಥೆಯನ್ನು ತಿಳಿಯಲು ಓದಲೇಬೇಕಾದ ಪುಸ್ತಕ

Comments 2

  1. Phaniraj says:
    1 year ago

    Excellent article.

  2. Chandrashekar j says:
    1 year ago

    ಅಣ್ಣ ಓದುವಾಗ ಕೂತಲ್ಲಿಯೆ ಭಾವನೆಗಳು ವ್ಯಕ್ತವಾಗುವಂತೆ ಬಹಳ ಚನ್ನಾಗಿ ಬರೆದಿದ್ದೀರಿ ಇಷ್ಟವಾಯಿತು

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Vishvesha Theertha Swamiji visits Dalit families in Chennai

Vishvesha Theertha Swamiji visits Dalit families in Chennai

September 3, 2012
Assam Violence: Seva Bharati’s relief activity Update

Assam Violence: Seva Bharati’s relief activity Update

July 28, 2012

RSS protest against anti-Hindu propaganda of UPA govt 10.11.2010

December 23, 2010
RSS 3-day Annual meet Akhil Bharatiya Pratinidhi Sabha (ABPS) to be held on March 19, 20 and 21, 2017 at Coimbatore, Tamilnadu

RSS 3-day Annual meet Akhil Bharatiya Pratinidhi Sabha (ABPS) to be held on March 19, 20 and 21, 2017 at Coimbatore, Tamilnadu

March 16, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In