ಇಂದು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಭ್ರಮ ಪಡುತ್ತಿದ್ದಾರೆ. ನಮ್ಮ ದೇಶವು ಈ 75 ವರ್ಷಗಳ ಪಯಣವನ್ನು ಎಲ್ಲಾ ಅಡೆತಡೆಗಳು ಮತ್ತು ಬಿಕ್ಕಟ್ಟುಗಳನ್ನು ದಾಟಿ ಮುಂದೆ ಸಾಗಿದೆ. ಈ ಪ್ರಯಾಣವು ಸ್ವತಃ ರೋಮಾಂಚನಗೊಳಿಸುತ್ತದೆ. ಇಂದು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸುತ್ತಿರುವಾಗ, ದೇಶದ ಎಲ್ಲಾ ಸಾಧನೆಗಳು ಮತ್ತು ಸವಾಲುಗಳು ನಮ್ಮ ಮುಂದೆ ಇವೆ. ಒಂದು ರಾಷ್ಟ್ರವು ಸ್ವತಂತ್ರವಾದ ತಕ್ಷಣ ವಿಭಜನೆಯ ದುರಂತವನ್ನು ಹೇಗೆ ಎದುರಿಸಿತು ಮತ್ತು ವಿಭಜನೆಯಿಂದ ಉಂಟಾದ ಹಿಂಸಾಚಾರದ ತೀವ್ರತೆಯನ್ನು ಹೇಗೆಲ್ಲ ಅನುಭವಿಸಿತು ಎಂಬುದು ಕಣ್ಣೆದುರೇ ಇದೆ. ನಂತರದಲ್ಲಿ ಎದುರಿಸಲಾದ ಗಡಿಯ ಸವಾಲುಗಳೂ ಬೆಟ್ಟದಷ್ಟು. ಆದರೆ ಈ ಸವಾಲುಗಳು ನಮ್ಮ ರಾಷ್ಟ್ರದ ಶಕ್ತಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಈ ಸವಾಲುಗಳನ್ನು ಎದುರಿಸಲು ನಮ್ಮ ರಾಷ್ಟ್ರವು ತನ್ನ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವುದನ್ನು ಮುಂದುವರೆಸುತ್ತಾ ಬಂದಿದೆ. ವಿಭಜನೆ ಮತ್ತು ಆಕ್ರಮಣದ ನಂತರ ನಮ್ಮ ದೇಶದ ನಾಗರಿಕರು 1952 ರಲ್ಲಿ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವನ್ನು ಆಚರಿಸಿದರು ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಸರ್ಕಾರವನ್ನು ಸ್ಥಾಪಿಸಲಾಯಿತು.
ಇದು ಭಾರತದ ಜನಮಾನಸದ ಶಕ್ತಿ ಮತ್ತು ಇಚ್ಛೆಯಾಗಿತ್ತು. ಭಾರತವು 1947 ರ ನಂತರ, ಭಾರತದ ಉಳಿದ ಭಾಗಗಳಾದ ಗೋವಾ, ದಾದ್ರಾ ಮತ್ತು ನಾಗರ ಹವೇಲಿ, ಹೈದರಾಬಾದ್ ಮತ್ತು ಪುದುಚೇರಿಯನ್ನು ಮತ್ತೆ ಭಾರತದ ನೆಲದಲ್ಲಿ ಮತ್ತೆ ಒಂದುಗೂಡಿಸುವ ಪ್ರಯತ್ನವನ್ನು ಮುಂದುವರೆಸಿತು ಮತ್ತು ಅಂತಿಮವಾಗಿ ನಾಗರಿಕರ ಮೂಲಕವೇ ಈ ಗುರಿಯನ್ನು ಸಾಧಿಸಿತು. ಕೆಲವೇ ವರ್ಷಗಳ ಹಿಂದೆ ರಾಜಕೀಯ ಸ್ವಾತಂತ್ರ್ಯ ಪಡೆದ ರಾಷ್ಟ್ರ ಇಷ್ಟು ಬೇಗ ಸ್ವರಾಜ್ಯವನ್ನು ಹೇಗೆ ಸಾಧಿಸುತ್ತದೆ ಎಂಬ ಪ್ರಶ್ನೆ ಹಲವು ಬಾರಿ ಉದ್ಭವಿಸುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು, ನಾವು ಭಾರತದ ಸಮಾಜವನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲಾ ರೀತಿಯ ದಾಳಿಗಳು ಮತ್ತು ಬಿಕ್ಕಟ್ಟುಗಳ ನಡುವೆಯೂ ಭಾರತದ ಸಮಾಜವು ತನ್ನ ಏಕತೆಯ ಸೂತ್ರವನ್ನು ಮರೆಯಲಿಲ್ಲ.ನಾವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಹೋರಾಟದ ಹೆಜ್ಜೆಗುರುತುಗಳು ನಗರಗಳು, ಹಳ್ಳಿಗಳು, ಕಾಡುಗಳು, ಪರ್ವತಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಎಲ್ಲೆಡೆ ಕಂಡುಬರುತ್ತವೆ. ಸಂತಾಲರ ಬಂಡಾಯವೇ ಆಗಿರಲಿ, ದಕ್ಷಿಣದ ವೀರರ ಸಶಸ್ತ್ರ ಹೋರಾಟವೇ ಆಗಿರಲಿ, ಎಲ್ಲ ಸಂಘರ್ಷಗಳಲ್ಲೂ ಇದೇ ಭಾವವನ್ನು ಕಾಣಬಹುದು. ಎಲ್ಲಾ ಜನರು ಯಾವುದೇ ತ್ಯಾಗದಲ್ಲಿಯೂ ಕೂಡ ಸ್ವಾತಂತ್ರ್ಯವನ್ನೇ ಬಯಸಿದರು ಮತ್ತು ಅವರು ಈ ಸ್ವಾತಂತ್ರ್ಯವನ್ನು ತಮಗಾಗಿ ಮಾತ್ರವಲ್ಲ, ತಮ್ಮ ಸಮಾಜ ಮತ್ತು ಇಡೀ ರಾಷ್ಟ್ರಕ್ಕೆ ಬಯಸಿದರು.
ಭಾರತೀಯ ಸಮಾಜವು ಸ್ವಾತಂತ್ರ್ಯಕ್ಕಾಗಿ ಎಷ್ಟು ತುಡಿತವನ್ನು ಹೊಂದಿತ್ತು ಎಂದರೆ, ಎಲ್ಲಾ ರೀತಿಯ ತ್ಯಾಗ ಮಾಡಲು ಮತ್ತು ಅದಕ್ಕಾಗಿ ಎಲ್ಲಾ ರೀತಿಯ ಮಾರ್ಗಗಳನ್ನು ಅನುಸರಿಸಲು ಸಿದ್ಧವಾಗಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ಲಂಡನ್, ಯುಎಸ್, ಜಪಾನ್ ಎಲ್ಲೆಡೆ ಪ್ರಯತ್ನಗಳು ನಡೆಯಲು ಕೂಡ ಇದು ಕಾರಣವಾಯಿತು. ಲಂಡನ್‌ನಲ್ಲಿರುವ ಇಂಡಿಯಾ ಹೌಸ್ ಭಾರತದ ಸ್ವಾತಂತ್ರ್ಯದ ಪ್ರಮುಖ ಕೇಂದ್ರವಾಯಿತು.
ಭಾರತದ ಸ್ವಾತಂತ್ರ್ಯ ಚಳುವಳಿ ಅದೆಷ್ಟು ವ್ಯಾಪಕವಾಗಿತ್ತೆಂದರೆ ಅದು ಎಲ್ಲಾ ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ಎಲ್ಲೆಗಳನ್ನು ಮೀರಿ ಭಾರತದ ಜನರನ್ನು ಒಂದುಗೂಡಿಸಿತು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕಾರಣ ಇದಕ್ಕೆ ಯಾರದನ್ನಾದರೂ ಮುನ್ನೆಲೆಗೆ ಹೆಸರಿಸುವುದು ಅನಗತ್ಯವಾಗಿ ತೋರುತ್ತದೆ. ಈ ಹೋರಾಟಗಳಲ್ಲಿ ಕೆಲವರ ಹೆಸರು ನಮಗೆ ಗೊತ್ತಿದೆ ಮತ್ತು ಕೆಲವರ ಹೆಸರು ಗೊತ್ತಿಲ್ಲ. ಈ ಚಳುವಳಿ ಅಸಂಖ್ಯಾತ ವೀರರನ್ನು ಹೊಂದಿದ್ದ ಚಳವಳಿಯಾಗಿತ್ತು.ಆದರೆ ಪ್ರತಿಯೊಬ್ಬ ನಾಯಕನ,ಹೋರಾಟಗಾರನ ಉದ್ದೇಶವೂ ಒಂದೇ ಆಗಿತ್ತು.ಅದೇ ಸ್ವಾತಂತ್ರ್ಯ!!
ಸ್ವಾತಂತ್ರ್ಯಾನಂತರ ದೇಶವನ್ನು ಪರಮ ವೈಭವದೆಡೆಗೆ ಕೊಂಡೊಯ್ಯುವ ಚಿಂತನೆ ದೇಶದ ಜನರ ಮನದಲ್ಲಿತ್ತು ಮತ್ತು ಇದಕ್ಕಾಗಿ ಸಮಾಜ ರಾಜಕೀಯ ನಾಯಕತ್ವದ ಮೇಲೇನಝ ಅವಲಂಬಿತವಾಗಿರಲಿಲ್ಲ. ಈ ಕಾರಣಕ್ಕಾಗಿಯೇ ತುರ್ತು ಪರಿಸ್ಥಿತಿಯ ರೂಪದಲ್ಲಿ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆದಾಗ ದೇಶದ ಜನತೆ ಅದನ್ನು ತಾವೇ ಜವಾಬ್ದಾರಿಯುತವಾಗಿ ನಿಭಾಯಿಸಿ ಹೋರಾಟ ನಡೆಸಿದರು.
ಇಂದು ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿರುವಾಗ, ಸ್ವಾತಂತ್ರ್ಯದ ಶತಮಾನೋತ್ಸವ ವರ್ಷದವರೆಗೆ ನಮ್ಮ ಗುರಿಗಳೇನು ಎಂದು ನಾವು ಯೋಚಿಸಬೇಕಾಗಿದೆ. ಇಂದು ಇಡೀ ಜಗತ್ತು ಕರೋನಾ ಸಾಂಕ್ರಾಮಿಕ ಮತ್ತು ಜಾಗತಿಕ ಅಸ್ಥಿರತೆಯ ಕಡೆಗೆ ಹೋಗುತ್ತಿರುವಾಗ, ರಾಷ್ಟ್ರವಾಗಿ ನಮ್ಮ ಗುರಿಗಳು ಏನಾಗಿರಬೇಕು? ಕಳೆದ ದಶಕದಲ್ಲಿ ಭಾರತ ಹಲವಾರು ಸಾಧನೆಗಳನ್ನು ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತದ ನಾಗರಿಕರಿಗೆ ಆರೋಗ್ಯ, ವಸತಿ ಮತ್ತು ಆರ್ಥಿಕ ಒಳಗೊಳ್ಳುವಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಷಯವೇ ಆಗಿರಲಿ, ಎಲ್ಲವೂ ಭಾರತದ ಸಮಾಜ ಮತ್ತು ನಾಗರಿಕರು ಸಬಲೀಕರಣಗೊಳ್ಳುತ್ತಿರುವುದನ್ನು ಪ್ರತಿಬಿಂಬಿಸುತ್ತಲೇ ಇದೆ. ಕರೋನಾ ಸಮಯದಲ್ಲಂತೂ ಅತ್ಯಂತ ಕಡಿಮೆ ಸಮಯದಲ್ಲಿ ಅಗ್ಗದ ಮತ್ತು ಸುರಕ್ಷಿತ ಲಸಿಕೆ ತಯಾರಿಸಿದ ಭಾರತದ ಬುದ್ಧಿಶಕ್ತಿ, ಇಡೀ ಜಗತ್ತಿಗೆ ಸಹಾಯ ಮಾಡಿದ ಉದಾರತನ ಮತ್ತು ಕೋಟಿ ಜೀವಗಳನ್ನು ಉಳಿಸಿದ ಹೆಗ್ಗಳಿಕೆ ಭಾರತದ್ದು. ಈ ಎಲ್ಲಾ ವಿಷಯಗಳ ಹೊರತಾಗಿಯೂ, ಭಾರತೀಯ ಸಮಾಜ ಮತ್ತು ಒಂದು ರಾಷ್ಟ್ರವಾಗಿ, ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಬೇಕಾಗಿರುವುದು ಮಾತ್ರವಲ್ಲ, ಅವುಗಳಿಗೆ ಪರಿಹಾರಗಳನ್ನು ಸಹ ಹುಡುಕಬೇಕಾಗಿದೆ. ಭಾರತವು ಸಾಮರಸ್ಯವನ್ನು ಸಾಧಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ. ಏಕೆಂದರೆ ಸಮಾಜವು ಹೆಚ್ಚು ಸಾಮರಸ್ಯದಿಂದ ಕೂಡಿದಾಗ ಮಾತ್ರ ಬಲಶಾಲಿಯಾಗಲು ಸಾಧ್ಯ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಕೆಲಸ ಮಾಡಬೇಕಾದ ಅಗತ್ಯವಿದೆ. ಇಂದು ಭಾರತೀಯ ಆರ್ಥಿಕತೆಯು ಎಲ್ಲಾ ಅಡೆತಡೆಗಳ ನಂತರವೂ ಪ್ರಗತಿಯಲ್ಲಿದೆ, ಆದರೆ ಅದರ ಜೊತೆಜೊತೆಗೆ ಭಾರತದ ಬೆಳೆಯುತ್ತಿರುವ ಜನಸಂಖ್ಯೆಯ ಆಕಾಂಕ್ಷೆಗಳನ್ನು ಪೂರೈಸಲು ಅದು ಹೆಚ್ಚು ವೇಗವಾಗಿ ಪ್ರಗತಿ ಹೊಂದಬೇಕಾಗ ಅನಿವಾರ್ಯತೆಯಿದೆ. ಇದಕ್ಕಾಗಿ ನಾವು ಭಾರತೀಯ ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಉತ್ತೇಜಿಸುವುದು ಅವಶ್ಯಕ. ಇದು ಇಲ್ಲದೆ ನಾವು ಭಾರತದಲ್ಲಿನ ನಿರುದ್ಯೋಗದ ಸಮಸ್ಯೆಯನ್ನು,ಉದ್ಯೋಗದ ನಿರೀಕ್ಷೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಭಾರತವು ಸ್ವಾವಲಂಬಿಯಾಗಿದ್ದಾಗ ಮಾತ್ರವೇ ಭಾರತವು ನಿಜವಾಗಿಯೂ ಬಲಿಷ್ಠವಾಗುತ್ತದೆ.
ಇಂದು ಭಾರತವು ಸ್ವಾತಂತ್ರ್ಯಗೊಂಡು 75 ವರ್ಷಗಳು ಪೂರ್ಣಗೊಳ್ಳುತ್ತಿರುವಾಗ, ಭಾರತದಲ್ಲಿನ ನೀತಿ ನಿರೂಪಣೆಗಳು ಇಂದಿನ ಭಾರತದ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿದೆಯೇ ಇದೆಯೇ ಎಂದು ನಾವು ಪರೀಕ್ಷಿಸಬೇಕಾಗಿದೆ. ಅದು ಹಾಗೆ ಭಾರತೀಯತೆಗೆ ಅನುಗುಣವಾಗಿಲ್ಲದಿದ್ದರೆ ಅದನ್ನು ಹೇಗೆ ಬದಲಾಯಿಸಬಹುದು,ಎಂಬುದನ್ನು ಸಹ ಪರಿಗಣಿಸಬೇಕು.ಇಂದಿನ ನ್ಯಾಯಾಂಗ ವ್ಯವಸ್ಥೆಯಾಗಲಿ ಅಥವಾ ರಾಜಕೀಯ ವ್ಯವಸ್ಥೆಯಾಗಲಿ ಸಾಮಾನ್ಯ ಮನುಷ್ಯನೊಬ್ಬನನ್ನು ಅನಾನುಕೂಲತೆಗೆ ಒಳಗೊಳ್ಳುವ ಮತ್ತು ಅಸಮರ್ಥನಾಗಿಸುವ ಅನೇಕ ವ್ಯವಸ್ಥೆಗಳ ಲೋಪವನ್ನು ಇಂದು ನಾವು ನೋಡುತ್ತೇವೆ. ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ಮತ್ತು ಸರಳವಾಗಿ ಇವುಗಳನ್ನು ತಲುಪುವ ಬಗೆ ಹೇಗೆ,ಎಂಬುದರ ಬಗ್ಗೆ ಯೋಚಿಸುವ ಅವಶ್ಯಕತೆಯಿದೆ.
ಭಾರತ ತನ್ನ ಆಂತರಿಕ ವ್ಯವಸ್ಥೆಯು ಪ್ರಬಲವಾಗಿಸಿದಾಗ ಮಾತ್ರ ಜಾಗತಿಕ ಸವಾಲುಗಳನ್ನು ಎದುರಿಸಬಹುದು ಮತ್ತು ಆಂತರಿಕ ವ್ಯವಸ್ಥೆಯು ಕೇವಲ ಆರ್ಥಿಕ ಅಥವಾ ಸಾಮಾಜಿಕ ಸಬಲೀಕರಣದ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಭಾರತದ ಆಂತರಿಕ ವ್ಯವಸ್ಥೆಯ ಸಮಾಧಾನದ ಮೇಲೆ ಆರ್ಥಿಕ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯೆರಡಕ್ಕೂ ಉತ್ತರ ದೊರೆಯುತ್ತದೆ.
ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹರು,ರಾಷ್ಟ್ರೀಯ ಸ್ವಯಂಸೇವಕ ಸಂಘ